ಕಾವಲು ಪ್ರೀತಿ, ವಿಭಿನ್ನ ರೀತಿ!

ಗುರುವಾರ , ಏಪ್ರಿಲ್ 18, 2019
32 °C

ಕಾವಲು ಪ್ರೀತಿ, ವಿಭಿನ್ನ ರೀತಿ!

Published:
Updated:
Prajavani

ಆಫೀಸು ಗೇಟಲ್ಲಿ ಕಾವಲುಗಾರ ಎಂದಿನಂತೆ ಸೆಲ್ಯೂಟ್ ಹೊಡೆದು ಸುಮ್ಮನಾಗದೆ ಮಾತಿಗೆಳೆದ- ‘ಯಾಕ್ಸಾರ್ ನಮ್ಮ ಹುದ್ದೆ ಈಗ ಇಷ್ಟೊಂದು ಪ್ರಚಾರದಲ್ಲಿದೆ? ಪೇಪರಿನಲ್ಲೆಲ್ಲ ಕಾವಲುಗಾರರು- ಚೌಕೀದಾರರ ಸುದ್ದೀನೇ!’

‘ಹೌದಪ್ಪಾ ನಿರುದ್ಯೋಗ ಸಮಸ್ಯೆ. ಜವಾನ, ಕಾವಲುಗಾರ, ಸ್ವೀಪರ್ ಹುದ್ದೆಗಳಿಗೆ ಪದವೀಧರರೂ ಅರ್ಜಿ ಹಾಕಿದಾರೇಂತ ಪೇಪರಲ್ಲಿ ಬಂದಿರಲಿಲ್ವೆ? ನಮ್ಮ ಪ್ರಧಾನಿಯವರು ತಾನು ದೇಶದ ಕಾವಲುಗಾರ ಅಂತ ಹೆಮ್ಮೆಯಿಂದ ಹೇಳ್ಕೊಳ್ತಿರೋದ್ರಿಂದ ಮೀಡಿಯಾದಲ್ಲಿ ಬರ್ತಿದೆ. ಕಾವಲುಗಾರನ ಹುದ್ದೆ ಕೀಳಲ್ಲ, ತಿಳ್ಕೋ’ ಎಂದೆ.

‘ಹಾಗಾದ್ರೆ, ಎದುರಾಳಿಗಳು ಯಾಕೆ ಅವ್ರನ್ನ ಟೀಕಿಸ್ತಾರೆ?’

‘ಅವ್ರು ಎದುರಾಳಿಗಳಲ್ವೆ? ಮತ್ತೆ ಹೊಗಳೋಕಾಗುತ್ಯೇ...? ಈಗೀಗ್ಲಂತೂ ಎಲ್ಲೆಲ್ಲೂ ಇನ್ನೊಂದು ರೀತಿಯ ಕಾವಲುಗಾರರದೇ ದರ್ಬಾರು. ಮರೆತು ಮನೇಲಿ ಆಫೀಸ್ ಬ್ರೀಫ್‌ಕೇಸ್ ಬಿಟ್ಟುಬಂದಿದೀನಿ, ತಗೊಂಬಾ ಅಂತಾ ನಮ್ಮ ಸಾಹೇಬ್ರು ನಂಗೆ ಫೋನ್ ಮಾಡಿದ್ರು. ನಾನು ತರಬೇಕಾದರೆ ಚೆಕ್‍ಪೋಸ್ಟಲ್ಲಿ ಎರಡು ಕಡೆ ಓಪನ್ ಮಾಡಿ ನೋಡಿದ್ರಯ್ಯಾ! ಒಂದು ಕಡೆ ನನ್ನ ಅದೃಷ್ಟಕ್ಕೆ ನಮ್ಮ ಪಕ್ಕದ್ಮನೆ ಪರಮೇಶಿ ಇದ್ದ. ಅವನೇ ಕೇಳಿ ಕಾವಲು ಸ್ಕ್ವಾಡ್‍ಗೆ ಹಾಕಿಸ್ಕೊಂಡಿದಾನಂತೆ. ಈ ಎರಡು ತಿಂಗಳು ಭಾಳಾ ಬ್ಯುಸಿ ಅಂದ’.

‘ಮನೇಲಿದ್ರೆ ಹೆಂಡಿರ ಕಾಟಾಂತ, ನನ್ನ ಹಾಗೆ ಈ ಕೆಲ್ಸ ತಗೊಂಡಿರಬೇಕು’.

‘ಅಲ್ಲ ಕಣಯ್ಯಾ, ಈ ಕೆಲಸದಲ್ಲಿ ಒಮ್ಮೊಮ್ಮೆ ಜಾಕ್‍ಪಾಟ್ ಹೊಡೆಯುತ್ತಂತೆ!’

‘ಜಾಕ್‍ಪಾಟ್ ಹೊಡೆಯೋಕೆ ಇದೇನ್ ಕುದುರೆ ಜೂಜೇ ಸಾರ್‌?’

‘ಒಂಥರಾ ಹಂಗೇನೇ ಅಂದ್ಕೊ. ಚೆಕ್‍ಪೋಸ್ಟ್‌ನಲ್ಲಿ ತಪಾಸಣೆ ಮಾಡುವಾಗ ಯಾರ‍್ದಾದರೂ ಸೂಟ್‍ಕೇಸಲ್ಲಿ ಲೆಕ್ಕವಿಲ್ಲದ ಲಕ್ಷ್ಮಿ ಸಿಕ್ಕರೆ ಜಾಕ್‍ಪಾಟೇ! ಫಿಫ್ಟಿ ಫಿಫ್ಟಿ ಅಂತೆ. ಕಳೆದ ಚುನಾವಣೇಲಿ ಅವನಿಗೆ ಎರಡು ಬಾರಿ ಜಾಕ್‍ಪಾಟ್ ಹೊಡೆದಿತ್ತಂತೆ!’

‘ಓ ಈಗ ಅರ್ಥವಾಯ್ತು, ಕಾವಲುಗಾರನ ಹುದ್ದೆಗೆ ಏಕಿಷ್ಟು ಡಿಮ್ಯಾಂಡೂಂತಾ... ಸಾರ್ ನಂಗೆ ಒಂದು ಉಪಕಾರ ಮಾಡ್ತೀರಾ? ನಿಮ್ಮ ಫ್ರೆಂಡ್ ಪರಮೇಶಿ ಅವರನ್ನು ದಯವಿಟ್ಟು ಪರಿಚಯ ಮಾಡಿಕೊಡಿ, ಪ್ಲೀಸ್...’

ನಾನು ಸುಸ್ತಾಗಿ ನೆಲಕ್ಕೆ ಕುಸಿದೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !