ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿರಂಗ ಮತ್ತು ಆರ್ಥಿಕ ಬೆಳವಣಿಗೆ

ದ್ವಿತೀಯ ಹಸಿರು ಕ್ರಾಂತಿಯು ದೋಷಪೂರಿತ ಕೃಷಿ ವಿಧಾನಗಳಿಗೆ ದಾರಿ ಮಾಡದಂತೆ ಲಕ್ಷ್ಯ ವಹಿಸಬೇಕಿದೆ
Last Updated 21 ಜುಲೈ 2020, 19:31 IST
ಅಕ್ಷರ ಗಾತ್ರ

ಕೊರೊನಾ ಸೋಂಕು ದೇಶದ ಉದ್ದಗಲಕ್ಕೂ ವ್ಯಾಪಿಸುತ್ತಿದ್ದಂತೆ, ಯುವಕರು ದೊಡ್ಡ ಸಂಖ್ಯೆಯಲ್ಲಿ ನಗರಗಳಿಂದ ಗ್ರಾಮೀಣ ಪ್ರದೇಶದತ್ತ ಮುಖ ಮಾಡಿದರು. ಕೃಷಿಗೆ ಪೂರಕವಾದ ವಾತಾವರಣ ಈಗ ಸ್ವಲ್ಪಮಟ್ಟಿಗೆ ಸೃಷ್ಟಿಯಾಗಿದ್ದು ಹೌದಾದರೂ ಇಷ್ಟು ದೊಡ್ಡ ದೇಶಕ್ಕೆ ಬೇಕಾದ ದ್ವಿತೀಯ ಹಸಿರು ಕ್ರಾಂತಿಯು ಇದರಿಂದಲೇ ಆಗಲಿದೆಯೆಂದು ಭಾವಿಸಿಬಿಡುವುದು ಭದ್ರ ಬುನಾದಿಯೇ ಇಲ್ಲದ ಆಶಾವಾದವಾಗುತ್ತದೆ.

1960ರ ದಶಕದ ಉತ್ತರಾರ್ಧದಲ್ಲಿ ಜಾಗತಿಕ ಮಟ್ಟದಲ್ಲಿ ಆಹಾರ ಉತ್ಪಾದನೆಯ ಪ್ರಮಾಣದಲ್ಲಿ ಅಧಿಕ ಹೆಚ್ಚಳವಾಯಿತು. ಅದನ್ನು ಸೂಚಿಸುವ ‘ಹಸಿರು ಕ್ರಾಂತಿ’ ಎನ್ನುವ ಪದಪ್ರಯೋಗ ಪ್ರಾರಂಭವಾಗಿದ್ದು ಆಗಲೇ. 1968ರ ಮಾರ್ಚ್‌ 8ರಂದು ಅಮೆರಿಕದ ಅಭಿವೃದ್ಧಿ ಏಜೆನ್ಸಿಯ ಪ್ರಧಾನ ಆಡಳಿತಗಾರ ವಿಲಿಯಂ ಎಸ್. ಗಾಡ್ ದೊಡ್ಡ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದರು. ‘ಇದು ರಷ್ಯಾದಲ್ಲಾದ ಹಿಂಸಾತ್ಮಕ ಕೆಂಪು ಕ್ರಾಂತಿಯಲ್ಲ, ಇರಾನ್‌ನ ಶಾ ಸೃಷ್ಟಿಸಿದ ಶ್ವೇತ ಕ್ರಾಂತಿಯೂ ಅಲ್ಲ. ಇದನ್ನು ನಾನು ಹಸಿರು ಕ್ರಾಂತಿ ಎಂದು ಕರೆಯುತ್ತೇನೆ’ ಎಂದು ಘೋಷಿಸಿ ತಮ್ಮ ರಾಜಕೀಯ ಚತುರತೆ ಪ್ರದರ್ಶಿಸಿದರು.

ಹಸಿರು ಕ್ರಾಂತಿಯ ರಾಜಕೀಯದ ಜತೆಗೆ ಅದು ಹುಟ್ಟುಹಾಕಿದ ನೋವು-ನಲಿವುಗಳನ್ನು ದೊಡ್ಡ ಪ್ರಮಾಣದಲ್ಲಿ ಕಂಡ ದೇಶಗಳಲ್ಲಿ ಭಾರತವೂ ಒಂದು. ಈ ದೇಶದಲ್ಲಿ ದ್ವಿತೀಯ ಹಸಿರು ಕ್ರಾಂತಿಯಾಗಬೇಕೆಂದು ಆಗಾಗ ಹೇಳುವಾಗ, 1968ರ ಹೊತ್ತಿಗೆ ಕಾಣಿಸಿಕೊಂಡಿದ್ದು ಪ್ರಥಮ ಹಸಿರು ಕ್ರಾಂತಿ ಎಂದು ಭಾವಿಸುವುದು ಒಂದು ರೂಢಿ ಅಷ್ಟೆ.

ನರೇಂದ್ರ ಮೋದಿ ನೇತೃತ್ವದ ಪ್ರಥಮ ಎನ್‌ಡಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ, ಉತ್ಪಾದಕತೆಯನ್ನು ಹೆಚ್ಚಿಸಲು ತಂತ್ರಜ್ಞಾನ ಆಧಾರಿತ ದ್ವಿತೀಯ ಹಸಿರು ಕ್ರಾಂತಿಯ ಅಗತ್ಯವನ್ನು, ಶೇ 4ರಷ್ಟು ವಾರ್ಷಿಕ ಕೃಷಿ ಬೆಳವಣಿಗೆ ದರದ ಗುರಿಯನ್ನು ಹೊಂದಿದ ಪ್ರಥಮ ಬಜೆಟ್‌ನಲ್ಲಿ ಸಾರಿದ್ದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ನರೇಗಾ) ಕೃಷಿಗೆ ಪೂರಕವಾಗುವಂತೆ ಬದಲಾಯಿಸುವ ಅವಶ್ಯಕತೆಯನ್ನು ಪ್ರತಿಪಾದಿಸಿದ್ದು ಅವರ ದೂರದೃಷ್ಟಿಗೆ ಸಾಕ್ಷಿಯಾಗಿತ್ತು. ಅದು ಇಷ್ಟರಲ್ಲಿ ಸರಿಯಾಗಿ ಈಡೇರಿದ್ದರೆ, ದೊಡ್ಡ ಸಂಖ್ಯೆಯಲ್ಲಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಎಷ್ಟೋ ಅನುಕೂಲ
ವಾಗುತ್ತಿತ್ತು.

2019-20ರ ಕೇಂದ್ರ ಆರ್ಥಿಕ ಸಮೀಕ್ಷೆ ತಿಳಿಸುವಂತೆ, ದುರ್ಬಲ ವರ್ಗಕ್ಕೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರು ಒಟ್ಟು ರೈತರ ಸಂಖ್ಯೆಯ ಶೇ 87ರಷ್ಟಿರುವುದು ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಅಡ್ಡಿಯಾಗುತ್ತಿರುವ ಪ್ರಧಾನ ಕಾರಣಗಳಲ್ಲೊಂದು. ದ್ವಿತೀಯ ಹಸಿರು ಕ್ರಾಂತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಸಾಮರ್ಥ್ಯ ಅವರಿಗೆಲ್ಲ ಹೇಗೆ ಬರಬೇಕು?

ಪ್ರಥಮ ಹಸಿರು ಕ್ರಾಂತಿಯ ಪ್ರಗತಿಯಿಂದ 70ರ ದಶಕದ ಪೂರ್ವಾರ್ಧದಲ್ಲೇ ದೇಶವು ಆಹಾರ ಪೂರೈಕೆಯ ವಿಷಯದಲ್ಲಿ ಸ್ವಾವಲಂಬಿಯಾಗಿದ್ದು ಗಮನಾರ್ಹ ಸಾಧನೆ. ಸಾಧನೆಯ ಜತೆಗೆ ಸಮಸ್ಯೆಗಳೂ ಹುಟ್ಟಿ ಬೆಳೆದಿವೆ. ಹಸಿರು ಕ್ರಾಂತಿ ಪಸರಿಸಿದಂತೆ ಕಾಣಿಸಿಕೊಂಡ ಪ್ರಾದೇಶಿಕ ಅಸಮತೋಲನ, ಅಧಿಕಗೊಂಡ ಸಾಗುವಳಿ ವೆಚ್ಚ, ಮಿತಿಮೀರಿದ ಪರಿಸರ ಮಾಲಿನ್ಯ, ವೈಯಕ್ತಿಕ ಆದಾಯ-ಸಂಪತ್ತಿನ ವಿತರಣೆಯಲ್ಲಿ ತೀವ್ರವಾದ ಅಸಮಾನತೆ ಮತ್ತು ಸುಧಾರಿತ ಬಿತ್ತನೆ ಬೀಜಗಳ ಬಳಕೆಗೆ ಅಗತ್ಯವಾದ ಸಾಮಗ್ರಿಗಳನ್ನು ಪಡೆಯಲು ವಿದೇಶಗಳ ಮೇಲೆ ಅತಿಯಾದ ಅವಲಂಬನೆ ಕ್ಲಿಷ್ಟ ಸಮಸ್ಯೆಗಳೇ ಆಗಿದ್ದವು. ಈಗ ಕೆಲವು ಸುಧಾರಣೆಗಳಾಗಿದ್ದರೂ ದೇಶದಲ್ಲಿ ಅಗತ್ಯ ಸಾಮಗ್ರಿಗಳ ಉತ್ಪಾದನೆ ಹೆಚ್ಚಿದ್ದರೂ ದ್ವಿತೀಯ ಹಸಿರು ಕ್ರಾಂತಿಯ ದಾರಿ ತಿಳಿದಷ್ಟು ಸುಗಮವಾಗಿಲ್ಲ.

1985ರ ಡಿಸೆಂಬರ್‌ನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಅಖಿಲ ಭಾರತ ಅರ್ಥಶಾಸ್ತ್ರಜ್ಞರ ರಾಷ್ಟ್ರೀಯ ಸಮ್ಮೇಳನದಲ್ಲಿ ಆರ್ಥಿಕ ತಜ್ಞ ವಿ.ಕೆ.ಆರ್.ವಿ. ರಾವ್, ಮಣ್ಣು ಮತ್ತು ಜಲ ಮಾಲಿನ್ಯ, ತ್ಯಾಜ್ಯ ವಸ್ತುಗಳ ಸೇರ್ಪಡೆಯಿಂದ ದೇಶದಲ್ಲಿ ಕೃಷಿ ಭೂಮಿಯ ವಿಸ್ತಾರ ಗಣನೀಯವಾಗಿ ಕುಗ್ಗುತ್ತಿದೆ ಎಂದು ಎಚ್ಚರಿಸಿದ್ದರು. ನಂತರ ಇನ್ನಷ್ಟು ಉಲ್ಬಣಿಸಿದ ಈ ಸಮಸ್ಯೆಗೆ ಸರ್ಕಾರ ಮತ್ತು ಬ್ಯಾಂಕಿಂಗ್ ರಂಗ ಸೇರಿ ಪರಿಹಾರ ಒದಗಿಸಬೇಕೆಂದು 2004ರಲ್ಲಿ ರಿಸರ್ವ್ ಬ್ಯಾಂಕ್‌ ನೇಮಿಸಿದ ವ್ಯಾಸ ಸಮಿತಿ ಶಿಫಾರಸು ಮಾಡಿತ್ತು. ಈ ಶಿಫಾರಸು ಕಾಗದದ ಮೇಲೇ ಉಳಿದುಕೊಂಡಿದೆ. ಈಗಾಗಲೇ ಆದ ಹಸಿರು ಕ್ರಾಂತಿಗಿಂತ ಭಿನ್ನವಾಗಿ ದ್ವಿತೀಯ ಕ್ರಾಂತಿ ಪ್ರಾರಂಭಿಕ ಹಂತದಲ್ಲೇ ಆದಷ್ಟು ಹೆಚ್ಚು ಬೆಳೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಾಗಿದೆ.

ಜೇಟ್ಲಿ ಅವರು ಎಣಿಸಿದ ಪ್ರಮಾಣದಲ್ಲಿ ಕೃಷಿ ಅಭಿವೃದ್ಧಿಯಾಗಲೇ ಇಲ್ಲ. 2012-19ರ ಅವಧಿಯಲ್ಲಿ ವಾರ್ಷಿಕ ಕೃಷಿ ಅಭಿವೃದ್ಧಿ ದರ ಕೇವಲ ಶೇ 3.1ರಷ್ಟಿತ್ತು. ಅದು 2019-20ರಲ್ಲಿ ಶೇ 2.9ಕ್ಕೆ ಕುಸಿದಿತ್ತು. ಪರಿಣಾಮವಾಗಿ, ನಗರ ಪ್ರದೇಶದಲ್ಲಿ ಉತ್ಪತ್ತಿಯಾಗುತ್ತಿರುವ ಸರಕು-ಸೇವೆಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಬೇಕಾದ ಪ್ರಮಾಣದಲ್ಲಿ ಏರುತ್ತಿಲ್ಲ. ನೀರಿನ ಕೊರತೆ ಇರುವಲ್ಲಿ ಹೆಚ್ಚು ನೀರು ಬಳಸುವ, ನೀರಿನ ಕೊರತೆಯೇ ಇಲ್ಲದ ಪ್ರದೇಶದಲ್ಲಿ ಕಡಿಮೆ ನೀರು ಬಳಸುವ ಬೆಳೆಗಳನ್ನು ಬೆಳೆಯುತ್ತಿರುವುದು ಒಟ್ಟಾರೆ ಕೃಷಿರಂಗದ ದೊಡ್ಡ ನ್ಯೂನತೆ. ‌ ದೋಷಪೂರಿತ ಕೃಷಿ ವಿಧಾನಗಳಿಗೆ ದ್ವಿತೀಯ ಹಸಿರು ಕ್ರಾಂತಿ ದಾರಿ ಮಾಡದಂತೆ ರಾಜ್ಯ ಸರ್ಕಾರಗಳು ಹೆಚ್ಚು ಲಕ್ಷ್ಯ ವಹಿಸಬೇಕಾಗಿದೆ. ಏಕೆಂದರೆ ಕೃಷಿಗೆ ಸಂಬಂಧಿಸಿದ ಹೆಚ್ಚಿನ ವಿಷಯಗಳು ಸಂವಿಧಾನದ ರಾಜ್ಯ ಯಾದಿಯಲ್ಲಿವೆ.

ಬೆಳೆಗೆ ಉತ್ಪಾದನೆ ವೆಚ್ಚಕ್ಕಿಂತಲೂ ಹೆಚ್ಚಿನ ಬೆಲೆ ಕೃಷಿಕರಿಗೆ ಇನ್ನೂ ಸಿಗುತ್ತಿಲ್ಲ. ಸೂಕ್ತ ಸಾಲ ಸೌಲಭ್ಯವಾಗಲೀ ಹೊಸ ಆವಿಷ್ಕಾರಗಳ ಪ್ರಯೋಜನವಾಗಲೀ ಹೆಚ್ಚಿನ ರೈತರಿಗೆ ಇನ್ನೂ ಅಲಭ್ಯವಾಗಿರುವಾಗ, 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳುವಂತೆ
ಮಾಡಲಾಗುವುದು ಎನ್ನುವ ಸರ್ಕಾರದ ಭರವಸೆ ಹೇಗೆ ಈಡೇರಬಹುದು ಎನ್ನುವುದು ದ್ವಿತೀಯ ಹಸಿರು ಕ್ರಾಂತಿಗೆ ಕಾಯುತ್ತಿರುವ ದೇಶದಲ್ಲಿ ಇನ್ನೂ ಸರಿಯಾದ ಉತ್ತರ ಕಾಣದ ಪ್ರಶ್ನೆ.

ಆಧುನಿಕ ಬೇಸಾಯದ ವಿಧಾನಗಳನ್ನೇ ಪ್ರಸಾರ ಮಾಡಲು ಜನ್ಮತಾಳಿದ್ದ ಸಿಂಡಿಕೇಟ್ ಕೃಷಿ ಪ್ರತಿಷ್ಠಾನವನ್ನು ಉದ್ಘಾಟಿಸಲು 1966ರ ಏಪ್ರಿಲ್‌ನಲ್ಲಿ ಆಗಿನ ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಸಿ.ಸುಬ್ರಹ್ಮಣ್ಯಂ ಅವರು ಮಣಿಪಾಲಕ್ಕೆ ಬಂದಿದ್ದರು. ಭತ್ತದ ಅಧಿಕ ಇಳುವರಿಗೆಂದೇ ಆಗ ಹೆಸರಾಗಿದ್ದ ಹೊಸ ತಳಿಯ ಐಆರ್-8 ಬೀಜವನ್ನು ಜೊತೆಗೆ ತಂದಿದ್ದರು. ಆಗಲೇ ಕೃಷಿ-ಗ್ರಾಮಾಭಿವೃದ್ಧಿಗಾಗಿ ಶ್ರಮಿಸುತ್ತಿದ್ದ ಸಿಂಡಿಕೇಟ್ ಬ್ಯಾಂಕಿನ ಪ್ರೋತ್ಸಾಹ ಪಡೆದು ಅದನ್ನು ಜನಪ್ರಿಯಗೊಳಿಸುವುದು ಅವರ ಧ್ಯೇಯವಾಗಿತ್ತು. ಬ್ಯಾಂಕಿನ ಆಡಳಿತ ನಿರ್ದೇಶಕರಾಗಿದ್ದ ಟಿ.ಎ.ಪೈ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿದ್ದ ಕರಾವಳಿ ಪ್ರದೇಶದ ಅನೇಕ ರೈತರಿಗೆ ಐಆರ್-8 ಬೀಜವನ್ನು ಹಂಚಲಾಯಿತು. 60ರ ದಶಕದ ಕೊನೆಗೆ ಇಲ್ಲಿ ಗೋಚರವಾದ ವ್ಯಾಪಕ ಹಸಿರು ಕ್ರಾಂತಿಗೆ ಅಂದೇ ಶ್ರೀಕಾರ.

ಕರಾವಳಿ ಕರ್ನಾಟಕದ ಹೊಳೆಗಳಲ್ಲಿ ನಂತರ ಎಷ್ಟೋ ನೀರು ಹರಿದುಹೋಯಿತು! ಹಿಂದೆ ಭತ್ತದ ಕೃಷಿಕರನ್ನು ಪ್ರೋತ್ಸಾಹಿಸಿದ್ದ ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿಗೆ, ದ್ವಿತೀಯ ಹಸಿರು ಕ್ರಾಂತಿಯ ಬೇಡಿಕೆ ಪ್ರಬಲವಾಗಿರುವ ಕಾಲದಲ್ಲಿ ಸ್ವತಂತ್ರ ಅಸ್ತಿತ್ವ ಕೂಡ ಇಲ್ಲ! ಇಲ್ಲಿ ಬಹಳ ವರ್ಷಗಳಿಂದ ಸಾಗುವಳಿಯಾಗದೇ ರೂಪಾಂತರಗೊಂಡಿರುವ ಸಾವಿರಾರು ಎಕರೆ ಭತ್ತದ ಭೂಮಿಯನ್ನು ಪ್ರತಿದಿನ ನೋಡುತ್ತಿರುವ, 1974ರ ರಾಜ್ಯ ಭೂಸುಧಾರಣಾ ಕಾನೂನಿನ ಲಾಭ ಪಡೆದ ರೈತರ ಮಕ್ಕಳೂ ದ್ವಿತೀಯ ಹಸಿರು ಕ್ರಾಂತಿಯಾಗಬೇಕೆಂದು ಹೇಳುವುದರಲ್ಲಿ ಹಿಂದೆ ಬಿದ್ದಿಲ್ಲ. ದೇಶದ ಅನೇಕ ಹಳ್ಳಿಗಳಲ್ಲಿ ಹಲವಾರು ಕಾರಣಗಳಿಂದ ಭತ್ತದ ಕೃಷಿ ಕ್ಷೀಣಿಸುತ್ತಿದೆ. ಈಗಿನ ಸ್ಥಿತಿಗತಿಯು ಮುಂದೆ ದ್ವಿತೀಯ ಹಸಿರು ಕ್ರಾಂತಿ ಹೇಗಿರಬೇಕು ಎಂಬುದನ್ನು ಸೂಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT