ಸೋಮವಾರ, ಮಾರ್ಚ್ 30, 2020
19 °C
ಗೇಣಿಯು ಶೋಷಣೆಯ ಸಾಧನವಾಗುವುದು ಅದರ ಷರತ್ತುಗಳಿಂದ

ವಿಶ್ಲೇಷಣೆ| ಕೃಷಿ ಜಮೀನು ಮತ್ತು ಗುತ್ತಿಗೆ ಕಾನೂನು

ಡಾ. ಜಿ.ವಿ.ಜೋಶಿ Updated:

ಅಕ್ಷರ ಗಾತ್ರ : | |

Prajavani

ಲೋಕಸಭೆಯಲ್ಲಿ ಇದೇ ತಿಂಗಳ ಒಂದರಂದು ಮಾಡಿದ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ರಂಗದ ಸುಧಾರಣೆಗೆ 16 ಅಂಶಗಳ ಕಾರ್ಯಕ್ರಮವನ್ನು ಘೋಷಿಸಿದರು. ಕೃಷಿ ಜಮೀನು ಮಾರುಕಟ್ಟೆಯನ್ನು ಉದಾರೀಕರಣಗೊಳಿಸಲು ತಮ್ಮ ಸರ್ಕಾರ ಆದ್ಯತೆ ನೀಡುವುದಾಗಿ ತಿಳಿಸಿದರು. 2016ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೂಪಿಸಿದ ಮಾದರಿ ಕೃಷಿ ಜಮೀನು ಗುತ್ತಿಗೆ ಕಾನೂನನ್ನು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಬೇಕಾದ ಅಗತ್ಯವನ್ನು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು. ಈ ಕಾನೂನನ್ನು ಜಾರಿಗೊಳಿಸುವ ರಾಜ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶ ಸರ್ಕಾರಕ್ಕೆ ಇರುವ ಇಂಗಿತ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸುಮಾರು ಶೇ 70ರಷ್ಟು ಜನರಿಗೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಬದುಕಲು ಅವಕಾಶ ನೀಡುತ್ತಿರುವ ಕೃಷಿರಂಗ ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಹವಾಮಾನ ಬದಲಾವಣೆ, ಅತ್ಯಂತ ಸಣ್ಣ ಹಿಡುವಳಿಗಳು, ಇಳಿಮುಖವಾಗುತ್ತಿರುವ ಮಣ್ಣಿನ ಫಲವತ್ತತೆ, ಮೂಲ ಸೌಕರ್ಯಗಳ ಅಭಾವ, ಕೃಷಿರಂಗದತ್ತ ಯುವಸಮೂಹದ ಉದಾಸೀನ ದೃಷ್ಟಿ, ಜಾಗತೀಕರಣಕ್ಕೆ ಒಮ್ಮೆಲೇ ತೆರೆದುಕೊಂಡಿದ್ದರಿಂದ ಕಡಿಮೆಯಾದ ಲಾಭದಾಯಕತೆ– ಹೀಗೆ, ದೇಶದ ಆರ್ಥಿಕತೆಯ ಬೆನ್ನೆಲುಬು ಎನಿಸಿಕೊಂಡಿರುವ ಕೃಷಿರಂಗ ಅನೇಕ ಸಮಸ್ಯೆಗಳಿಂದ ಕಮರಿಹೋಗುತ್ತಿದೆ.

ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರಗಳಾಗಲೀ ರಾಜಕೀಯ ಕಾರಣಕ್ಕೆ ಒಂದಿಷ್ಟು ಅನುದಾನ ನೀಡಿದ ಮಾತ್ರಕ್ಕೆ ಇಂತಹ ಮೂಲ ಸಮಸ್ಯೆಗಳಿಗೆ ಪರಿಹಾರ ಅಸಾಧ್ಯವೆಂಬ ವಾಸ್ತವ ಆಗಾಗ ಸ್ಪಷ್ಟವಾಗುತ್ತಲೇ ಇದೆ. ಆದರೂ ಅದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿರುವುದು ದುರದೃಷ್ಟಕರ. 2002- 2011ರ ಅವಧಿಯಲ್ಲಿ ಜಿಡಿಪಿಗೆ ಕೃಷಿ ಕ್ಷೇತ್ರದ ಕೊಡುಗೆ ಶೇ 4.4ರಷ್ಟಿದ್ದದ್ದು 2012-2019ರ ಅವಧಿಯಲ್ಲಿ ಶೇ 3.1ಕ್ಕೆ ಕುಸಿದಿದೆ. ಅಸಂಖ್ಯಾತ ರೈತರು ಹಲವಾರು ಕಾರಣಗಳಿಂದ ಕೃಷಿ ಜಮೀನು ಸಾಗುವಳಿ ಮಾಡುವುದನ್ನು ಬಿಟ್ಟು, ಪೇಟೆಯತ್ತ ವಲಸೆ ಹೋಗಿರುವುದು ತೀರಾ ಸಾಮಾನ್ಯವಾಗಿದೆ. ಅವರ ಜಮೀನು ಸಾಗುವಳಿಯಾಗದೇ ಉಳಿದಿರುವುದು ದೇಶಕ್ಕೆ ನಷ್ಟ ಎಂದು ತಿಳಿದಿದ್ದರೂ ಅದನ್ನು ಹೇಳುವ ಧೈರ್ಯ ರಾಜ್ಯ ಸರ್ಕಾರಗಳಿಗೆ ಇಲ್ಲವಾಗಿದೆ. ಹಾಗಾಗಿಯೇ ಈಗ ನಿರ್ಮಲಾ ತಮ್ಮ ದ್ವಿತೀಯ ಬಜೆಟ್ ಭಾಷಣದಲ್ಲಿ 2016ರ ಮಾದರಿ ಕಾನೂನನ್ನು ನೆನಪಿಸಬೇಕಾಯಿತು. ಮುಕ್ತ ಮಾರುಕಟ್ಟೆಯಲ್ಲಿ ಸಾಮಾನ್ಯ ಗ್ರಾಹಕರಿಗೆ ಹೆಚ್ಚಿನ ಕೃಷಿ ಹುಟ್ಟುವಳಿಗಳು ಕೃಷಿಯೇತರ ಕಾರಣಗಳಿಂದ ದುಬಾರಿಯಾಗುತ್ತಿರುವುದೂ ಆತಂಕಕಾರಿ ವಿದ್ಯಮಾನವೇ ಸರಿ.

ಕೃಷಿ ಜಮೀನಿನ ಅನೌಪಚಾರಿಕ ಭೋಗ್ಯದಾರರ (ವಾಸ್ತವದಲ್ಲಿ ಅವರು ಗೇಣಿದಾರರೇ) ಕಷ್ಟವನ್ನು ಅರುಣ್‌ ಜೇಟ್ಲಿ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಪರಿಗಣಿಸಿದ್ದರು. ಕೃಷಿ ಜಮೀನಿನ ಒಡೆತನ ತಮ್ಮ ಬಳಿ ಇಲ್ಲದ ಕಾರಣಕ್ಕೆ ಭೋಗ್ಯದಾರರು ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದು ಶೋಷಣೆಗೊಳಗಾಗುವುದನ್ನು ಗುರುತಿಸಿದ್ದರು. ಸರ್ಕಾರಿ ಅಥವಾ ಸಹಕಾರಿ ಸಂಸ್ಥೆಗಳಿಂದ ಸಾಲ ಸಿಗದೆ ಅವರು ಕೃಷಿಯಿಂದ ವಿಮುಖರಾಗುತ್ತಿದ್ದುದನ್ನು ಪರಿಗಣಿಸಿ, ಗೇಣಿದಾರರಿಗೆ ಬೆಳೆಸಾಲ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದ್ದರು. ಜೇಟ್ಲಿ ಈಗ ನಮ್ಮ ಜತೆಗಿಲ್ಲ. ಆದರೆ ಗೇಣಿತನವನ್ನು ಸಾಬೀತುಪಡಿಸುವ ಭೂ ದಾಖಲೆಗಳಿಂದ ವಂಚಿತರಾದ ಭೋಗ್ಯದಾರರ ಕಷ್ಟ ಮಾತ್ರ ಮುಂದುವರಿದಿದೆ. ಹೀಗಾಗಿಯೇ 2016ರ ಮಾದರಿ ಕಾನೂನು ಕರ್ನಾಟಕದಲ್ಲೂ ಸೋಲು ಕಾಣುತ್ತಿದೆ. ಇದನ್ನು ಪರಿಶೀಲಿಸಿದ ಎನ್.ಕೆ.ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗವು ರಾಜ್ಯದ ಕೃಷಿ ಬೆಳವಣಿಗೆ ನಿಂತ ನೀರು ಎಂದು, 2019ರ ಜೂನ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಹೇಳಿತ್ತು. ದೇಶದ ಅನೇಕ ಭಾಗಗಳಿಗೆ ಬಂದೊದಗಿರುವ ಈ ಸ್ಥಿತಿಯು ಕ್ರಾಂತಿಕಾರಿ ಭೂಸುಧಾರಣಾ ಕಾನೂನನ್ನು ಜಾರಿ ಮಾಡಿದ ಕರ್ನಾಟಕಕ್ಕೂ ಒದಗಿದೆ.

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶದಲ್ಲಿ ರೈತರ ಆತ್ಮಹತ್ಯೆಯ ಬಗ್ಗೆ ಅಧ್ಯಯನ ನಡೆಸಿದ ಹೈದರಾಬಾದ್‌ನ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ (ಎನ್.ಐ.ಆರ್.ಡಿ) ಸಂಶೋಧಕರ ತಂಡವು 2019ರ ಜೂನ್‌ನಲ್ಲಿ ವರದಿ ನೀಡಿತ್ತು. ಆ ವರದಿಯು 2018ರಲ್ಲಿ ಜೇಟ್ಲಿ ಅವರು ನೀಡಿದ್ದ ವಿವರಣೆಗೂ ನಂತರ 15ನೇ ಹಣಕಾಸು ಆಯೋಗ ಒದಗಿಸಿದ ಮಾಹಿತಿಗೂ ಪೂರಕವಾಗಿದೆ. ಅನೌಪಚಾರಿಕ ಗೇಣಿ ಒಪ್ಪಂದ ಮಾಡಿಕೊಂಡ ಎಷ್ಟೋ ಸಣ್ಣ ಮತ್ತು ಅತಿ ಸಣ್ಣ ರೈತರು ಅಧಿಕೃತವಾಗಿ ಸಹಕಾರಿ ಸಂಸ್ಥೆಯಿಂದಾಗಲೀ ಬ್ಯಾಂಕ್‌ನಿಂದಾಗಲೀ ಸಾಲ ಪಡೆಯಲಾರದೆ ಖಾಸಗಿ ಮೂಲದಿಂದ ದುಬಾರಿ ಸಾಲ ಪಡೆದು ಶೋಷಣೆಗೊಳಗಾಗಿ ಆತ್ಮಹತ್ಯೆಗೆ ಶರಣಾದ ದಾರುಣ ಸತ್ಯವನ್ನು ಅದು ಹೊರಹಾಕಿದೆ. ಗುತ್ತಿಗೆ ಅಥವಾ ಗೇಣಿ ನೀತಿಯು ನ್ಯಾಯದ ಆಧಾರದಲ್ಲಿ ಅಧಿಕೃತವಾದರೆ, ರೈತರ ಆತ್ಮಹತ್ಯೆಯನ್ನು ತಡೆಗಟ್ಟಬಹುದು ಎಂಬ ಸಂದೇಶವನ್ನೂ ಈ ಅಧ್ಯಯನವು ರವಾನಿಸಿದೆ.

ಕಡಿಮೆ ವೆಚ್ಚದಲ್ಲಿ ಶ್ರೀಪದ್ಧತಿ ಬೇಸಾಯದ ಮೂಲಕ ಹೆಚ್ಚು ಭತ್ತ ಬೆಳೆಯಬಹುದೆಂಬ ಭಾವನೆಯನ್ನು ಕರ್ನಾಟಕದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾಗೃತಗೊಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಹಳ್ಳಿಗಳಲ್ಲಿ 2012-13ನೇ ಸಾಲಿನಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ಅನಧಿಕೃತ ಗೇಣಿ ಪದ್ಧತಿಯಲ್ಲಿ ಶ್ರೀಪದ್ಧತಿ ಕೃಷಿ ಮಾಡಿದ್ದು ಸುದ್ದಿಯಾಗಿತ್ತು. ಭತ್ತದ ಬೆಳೆಯ ಕೇವಲ ಶೇ 30ರಷ್ಟು ಭಾಗ ಅಥವಾ ಅದಕ್ಕೆ ಸಮನಾದ ನಗದು ಹಣ ನೀಡಬೇಕೆನ್ನುವುದು ಗೇಣಿಗೆ ಭೂಮಿ ನೀಡಿದವರ ಷರತ್ತೂ ಆಗಿತ್ತು. ಈ ರೀತಿ ಶೋಷಣೆಯಿಲ್ಲದ, ಉತ್ಪಾದನೆಗೆ ಪೂರಕವಾದ ಭತ್ತದ ಗೇಣಿ ವ್ಯವಸ್ಥೆಯು ಒಂದು ಸಾಮಾಜಿಕ ಅವಶ್ಯಕತೆಯಾಗಿ ಮೂಡಿಬಂದಿದೆಯೆಂಬ ಸತ್ಯಕ್ಕೆ ಈಗಂತೂ ಸಹಜವಾಗಿ ರಾಷ್ಟ್ರೀಯ ಮಹತ್ವವಿದೆ.

2016ರ ಮಾದರಿ ಗುತ್ತಿಗೆ ಕಾನೂನಿನ ಅನ್ವಯ, ಕೃಷಿ ಜಮೀನುಗಳ ಮಾಲೀಕರು ತಮ್ಮ ಜಮೀನನ್ನು ಭೋಗ್ಯಕ್ಕೆ ಪಡೆಯಲು ಇಚ್ಛಿಸುವವರಿಗೆ ಕಾನೂನುಬದ್ಧವಾಗಿ ನಿಶ್ಚಿತ ಅವಧಿಗೆ ಅಧಿಕೃತವಾಗಿ ಪರಭಾರೆ ಮಾಡಬಹುದು. ಭೋಗ್ಯಕ್ಕೆ ಕೊಡುವವರ ಮತ್ತು ಪಡೆಯುವವರ ಕರಾರುಗಳ ಬಗ್ಗೆ ಚರ್ಚಿಸಿ ಒಪ್ಪಂದಕ್ಕೆ ಬರಲು ಅವಕಾಶವಿದೆ. ನಿಗದಿತ ಅವಧಿಯಲ್ಲಿ ಭೋಗ್ಯದಾರ ಅಥವಾ ಗೇಣಿದಾರ ನಿರಾತಂಕವಾಗಿ ಕೃಷಿ ಚಟುವಟಿಕೆ ನಡೆಸಬಹುದು, ಹಣ ಹೂಡಬಹುದು, ಕೃಷಿಗಾಗಿ ಸಾಲ ಪಡೆಯಬಹುದು. ಸರ್ಕಾರ ರೂಪಿಸಿದ ಬೆಳೆ ವಿಮೆಯ ಜತೆಗೆ ಇತರ ಸರ್ಕಾರಿ ಯೋಜನೆಗಳ ಲಾಭ ಪಡೆಯುವ ಅವಕಾಶವೂ ಅವನ ಪಾಲಿಗಿರುತ್ತದೆ. ನೂತನ ಕಾನೂನು ಮಾಡುವಾಗ ಅಥವಾ ಈಗಿರುವ ಗೇಣಿ ಕಾನೂನಿಗೆ ತಿದ್ದುಪಡಿ ಮಾಡುವಾಗ 2016ರ ಮಾದರಿ ಕಾನೂನಿನಲ್ಲಿರುವ ಮಿತಿಗಳನ್ನು ಹೋಗಲಾಡಿಸುವ ಅವಕಾಶ ರಾಜ್ಯಗಳಿಗೆ ಇದ್ದೇ ಇದೆ.

ಕೃಷಿ ಭೂಮಿಯ ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಮತೋಲನ ಸಾಧಿಸಲು ನ್ಯಾಯ-ನೀತಿಯುಳ್ಳ ಗೇಣಿ ಪದ್ಧತಿ ನೆರವಾಗುತ್ತದೆ. ಗೇಣಿಯು ಶೋಷಣೆಯ ಸಾಧನವಾಗಿ ರೂಪುಗೊಳ್ಳುವುದು ಅದರ ಷರತ್ತುಗಳಿಂದಾಗಿಯೇ ವಿನಾ ಗೇಣಿ ಅಥವಾ ಗುತ್ತಿಗೆಯೆಂಬ ನಾಮಧೇಯದಿಂದಲ್ಲ. ಸೂಕ್ತವಾದ ಕಾನೂನಿನ ಚೌಕಟ್ಟು ಇದ್ದರೆ ಗೇಣಿಯು ಶೋಷಣೆಯ ಬದಲು ಕೃಷಿಯ ಪೋಷಣೆಗೆ ದಾರಿಯಾಗಬಲ್ಲದು. ಇದು ಮುಂದುವರಿದ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್ ಮತ್ತು ಜಪಾನ್‌ ಜತೆಗೆ, ಅಭಿವೃದ್ಧಿಶೀಲ ರಾಷ್ಟ್ರವಾದ ಚೀನಾದ ಅನುಭವವೂ ಹೌದು. ಕೇಂದ್ರವು ಒಪ್ಪಿಕೊಂಡ ಮಾದರಿ ಮಸೂದೆಯ ಮಹತ್ವವನ್ನು ರಾಜ್ಯಗಳೂ ಒಪ್ಪಿಕೊಂಡರೆ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲವಾಗಲಿದೆ, ಕೃಷಿರಂಗ ಚೇತರಿಸಿಕೊಳ್ಳುವ ಸಾಧ್ಯತೆಯೂ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು