ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿದ್ದುಪಡಿಯಾದ  ಗ್ರಾಹಕ ಸಂರಕ್ಷಣಾ ಕಾಯ್ದೆ: ಗ್ರಾಹಕರಿಗೆ ಈಗ ಇನ್ನಷ್ಟು ಭದ್ರತೆ

Last Updated 29 ಜುಲೈ 2020, 12:00 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು 2019ರ ಆಗಸ್ಟ್ 9ರಂದು ತಿದ್ದುಪಡಿ ಮಾಡಿ ರಾಜ್ಯ ಪತ್ರವನ್ನು ಹೊರಡಿಸಿದೆ.ಈ ಮೂಲಕ ದೇಶದ ಗ್ರಾಹಕರಿಗೆ ಹಕ್ಕನ್ನು ಚಲಾಯಿಸುವಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.

1986ರ ಗ್ರಾಹಕ ಸಂಕ್ಷರಣಾ ಕಾಯ್ದೆ ಜಾರಿಗೆ ಬಂದ ನಂತರ ಕೆಲವೊಂದು ಕಲಂಗಳನ್ನು ನಿಯಂತ್ರಣ, ಆರ್ಥಿಕ ಪರಿಮಿತಿ... ಹೀಗೆ ಮಾತ್ರ ತಿದ್ದುಪಡಿಗೆ ಆಗಾಗ ಕ್ರಮ ವಹಿಸಿತ್ತು. ಆಗಿನ ಗ್ರಾಹಕ ಸಂಬಂಧಿ ವ್ಯವಹಾರಗಳು ಸಹ ಇಷ್ಟೊಂದು ತಾಂತ್ರಿಕ ಮತ್ತು ಡಿಜಿಟಲ್ ಮಾಧ್ಯಮದ ಕ್ಷೇತ್ರದತ್ತ ಇನ್ನೂ ಜಾರಿಯಲ್ಲಿದ್ದಿರಲಿಲ್ಲ.

ಆದರೆ, ಕಾಲ ಬದಲಾದಂತೆ ಗ್ರಾಹಕರಅಗತ್ಯಗಳು, ಮಾರುಕಟ್ಟೆಗಳೂ ವಿಸ್ತಾರಗೊಳ್ಳುತ್ತಾ ಬಂದಿವೆ. ಪ್ರಸ್ತುತ ಗ್ರಾಹಕರು ನೀರಿಕ್ಷಿಸುವಂಥ ಸರಕು, ಸೇವೆ ಗುಣಮಟ್ಟ ತಾಂತ್ರಿಕತೆ ಎಲ್ಲದಕ್ಕೂ ಹೊಂದಿಕೆ ಆಗುವಂಥ ಮಾರುಕಟ್ಟೆಯೂ ಮತ್ತು ಅಂತರ್ಜಾಲ ವೇದಿಕೆಗಳು ಹುಟ್ಟಿಕೊಂಡಿವೆ. ಅದರಂತೆ ಗ್ರಾಹಕರಿಗೆ ತಮ್ಮ ಹಕ್ಕು, ಅಭಿರುಚಿ, ನಿರೀಕ್ಷೆಯ ಸೇವೆಗೆ ಧಕ್ಕೆ ಬಾರದಂತೆ ಅವರ ಹಕ್ಕುಗಳನ್ನೂ ಕಾಯ್ದುಕೊಳ್ಳುವುದು ಸದ್ಯದ ಅಗತ್ಯಗಳಲ್ಲಿ ಒಂದಾಗಿತ್ತು. ಅದೀಗ ಹೊಸ ತಿದ್ದುಪಡಿಯೊಂದಿಗೆ ಗ್ರಾಹಕ ಹಕ್ಕುಗಳನ್ನು ಇನ್ನಷ್ಟು ಭದ್ರಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಅದರಂತೆ ಗ್ರಾಹಕ ಸಂರಕ್ಷಣಾ ಕಾಯ್ದೆ-2019, ಆಗಸ್ಟ್-2019ರಲ್ಲೇ ತಿದ್ದುಪಡಿ ಆಗಿದ್ದರೂ ಕೇಂದ್ರ ಗ್ರಾಹಕ ಸಂರಕ್ಷಣಾ ನಿಯಮಗಳ ರಚನೆ ನಂತರವಷ್ಟೇ ತಿದ್ದುಪಡಿ ಕಾಯ್ದೆಯನ್ನು ಜುಲೈ 15, 2020ರಂದು ಅಂತಿಮಗೊಳಿಸಿ ಕೇಂದ್ರ ಸರ್ಕಾರವು ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿತು. ತಿದ್ದುಪಡಿಯಾದ ಗ್ರಾಹಕ ಸಂರಕ್ಷಣಾ ಕಾಯ್ದೆ-2019ರಲ್ಲಿ ಕೆಲವೊಂದು ಕಲಂಗಳನ್ನು ಹೊರತುಪಡಿಸಿ 20ನೇ ಜುಲೈ,2020ರಿಂದ ಇದು ದೇಶದಲ್ಲಿ ಜಾರಿಯಾಗಿದೆ.

ಬದಲಾದ ಹೆಸರು

ಅದರಂತೆ ಜಿಲ್ಲಾ ಮಟ್ಟದಲ್ಲಿದ್ದ ಜಿಲ್ಲಾ ಗ್ರಾಹಕರ ವೇದಿಕೆಗಳು ಇನ್ನು ಮುಂದೆ ‘ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ’ ವೆಂದು ಬದಲಾದ ಹೆಸರಿನಲ್ಲಿ ಕಾರ್ಯ ನಿರ್ವಹಿಸಲಿವೆ. ಜೊತೆಗೆ ಜಿಲ್ಲಾ ಆಯೋಗದ ಆರ್ಥಿಕ ಪರಿಮಿತಿ (pecuniary jurisdiction) ಯನ್ನು ₹ 20 ಲಕ್ಷಗಳಿಂದ ₹ 1 ಕೋಟಿವರೆಗೆ ಪರಿಹಾರ ಮೊತ್ತವನ್ನು ಕೋರಿ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದಿನಂತೆ ಎದುರುದಾರರ ವಾಸ ಅಥವಾ ವ್ಯವಹಾರ ವ್ಯಾಪ್ತಿ ಹಾಗೂ ವ್ಯಾಜ್ಯ ಕಾರಣ ಉಂಟಾದ ಜಿಲ್ಲಾ ವ್ಯಾಪ್ತಿಯಲ್ಲಿ ಗ್ರಾಹಕ ದೂರು ದಾಖಲಿಸಬಹುದು. ಹೊಸ ತಿದ್ದುಪಡಿಯಂತೆ ತಾನಿರುವ ವಾಸದ ಜಿಲ್ಲಾ ಆಯೋಗದ ವ್ಯಾಪ್ತಿಯಲ್ಲೇ ದೂರು ದಾಖಲಿಸಬಹುದು. ₹ 1 ಕೋಟಿಗೂ ಮೀರಿದ ಆದರೆ ಹತ್ತು ಕೋಟಿವರೆಗಿನ ಪರಿಹಾರ ಕೋರಿ ರಾಜ್ಯ ಗ್ರಾಹಕರ ಆಯೋಗದಲ್ಲಿ ಮತ್ತು ₹ 10 ಕೋಟಿಗೂ ಮೀರಿದ ಮೊತ್ತದ ಪರಿಹಾರ ಕೋರಿ ರಾಷ್ಟ್ರೀಯ ಆಯೋಗಕ್ಕೆ ದೂರು ಸಲ್ಲಿಸಬಹುದು.

ಮಧ್ಯಸ್ಥಿಕೆ ಘಟಕ

ಗ್ರಾಹಕ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಸಮಿತಿ ಶಿಫಾರಸ್ಸಿನ ಮೇರೆಗೆ ಮಧ್ಯಸ್ಥಿಕೆ ಘಟಕವು ಆಯೋಗಕ್ಕೆ ಹೊಂದಿಕೊಂಡಂತೆ ಕಾರ್ಯನಿರ್ವಹಿಸಲಿದೆ. ಈ ಮಧ್ಯಸ್ಥಿಕೆ ಘಟಕದ ವಕೀಲರು ಸಾಧ್ಯವಾದಷ್ಟು ಗ್ರಾಹಕರ ಹಿತ ಕಾಯ್ದು ಎದುರುದಾರ ಉತ್ಪಾದಕ, ಮಾರಾಟಗಾರ, ಸೇವೆ ಪೂರೈಕೆದಾರರಲ್ಲಿ ಮನವೊಲಿಸಿ ಪ್ರಕರಣಗಳನ್ನು ಗ್ರಾಹಕರಿಗೆ ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ಆಯೋಗಕ್ಕೆ ವರದಿ ನೀಡುತ್ತವೆ.

ಒಂದು ಮಧ್ಯಸ್ಥಿಕೆಯಲ್ಲಿ ಪ್ರಕರಣಗಳ ಪಕ್ಷಗಾರರಲ್ಲಿ ಭಾಗಶ: ಸಮ್ಮತಿ ಅಥವಾ ನಿಬಂಧನೆಗಳ ಮಟ್ಟಿಗೆ ಇತ್ಯರ್ಥವಾದಲ್ಲಿ ಉಳಿದ ವ್ಯಾಜ್ಯದ ಕಾರಣಕ್ಕಾಗಿ ಇತ್ಯರ್ಥಪಡಿಸಲು ವರದಿ ನೀಡಿದ ನಂತರ ಆಯೋಗವು ಪ್ರಕರಣಗಳನ್ನು ಕೈಗೆತ್ತಿಕೊಂಡು ವಿಲೇ ಮಾಡುತ್ತವೆ.

ಈ ಮೊದಲು ಜಿಲ್ಲಾ ಗ್ರಾಹಕ ಆಯೋಗದಲ್ಲಿ ಹೊರಡಿಸಿದ ಆದೇಶಗಳನ್ನು ಪುನರ್ ಪರಿಶೀಲನೆ ಮಾಡುವ ಅಧಿಕಾರ ಇದ್ದಿರಲಿಲ್ಲ. ತಿದ್ದುಪಡಿ ಕಾಯ್ದೆಯಂತೆ ಜಿಲ್ಲಾ ಆಯೋಗವು ತನ್ನ ಆದೇಶವವನ್ನು ಮಾರ್ಪಾಡು ಮಾಡಲು ಅಧಿಕಾರವನ್ನು ಹೊಂದಿದೆ.

ವ್ಯಾಜ್ಯಕಾರಣದಎರಡು ವರ್ಷಗಳ ಕಾಲಮಿತಿಯಲ್ಲಿ ದೂರು ಸಲ್ಲಿಸುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.ಜತೆಗೆ ಉತ್ಪಾದಕರ ಬಾಧ್ಯತೆಯನ್ನು (ಪ್ರೊಡಕ್ಷನ್ಲೈಯಬಲಿಟಿ) ಅಂದರೆ ಖರೀದಿಸಿದ ಸರಕಿನಿಂದ ಉಂಟಾದ ಜೀವಹಾನಿ ಅಥವಾ ಆಸ್ತಿ ಹಾನಿ ಉಂಟಾದಲ್ಲಿ ಸರಕಿನ ಉತ್ಪಾದಕರೆ ಪರಿಹಾರವನ್ನು ನೀಡಲು ಬಾಧ್ಯಸ್ಥರಾಗಿರುತ್ತಾರೆ.

ಆದೇಶ ಪಾಲಿಸದಿದ್ದರೆ?

ಒಂದುವೇಳೆ ಜಿಲ್ಲಾ ಗ್ರಾಹಕರ ಆಯೋಗದ ಆದೇಶವನ್ನು ಪಾಲಿಸದಿದ್ದಲ್ಲಿ,ಸಿವಿಲ್‌ ನ್ಯಾಯಾಲಯದ ನಿಯಮದಂತೆ ವಸೂಲಾತಿ ಕ್ರಮ ಹಾಗೂ ಕನಿಷ್ಠ ₹ 25 ಸಾವಿರ ಹಾಗೂ ಗರಿಷ್ಠ ₹ 1 ಲಕ್ಷವರೆಗಿನ ದಂಡ ಅಥವಾ ಕನಿಷ್ಠ ಒಂದು ತಿಂಗಳು ಹಾಗೂ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿದಿಸಲು ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದೆ.

ದೋಷಪೂರಿತ ವಸ್ತು ಅಥವಾ ಸರಕು ಸರಬರಾಜು ಮಾಡಿ ಅದರಿಂದ ಗ್ರಾಹಕರು ಗಾಯಗೊಂಡಲ್ಲಿ ಕನಿಷ್ಠ ಆರು ತಿಂಗಳು ಜೈಲು ಶಿಕ್ಷೆ ಮತ್ತು ₹ 1 ಲಕ್ಷದವರೆಗಿನ ದಂಡ ವಿಧಿಸಬಹುದಾಗಿದೆ.ಒಂದು ವೇಳೆ ಸರಕನ್ನು ಖರೀದಿಸಿದ ಗ್ರಾಹಕರು ತೀವ್ರವಾಗಿ ಗಾಯಗೊಂಡಲ್ಲಿ ₹ 5 ಲಕ್ಷ ರೂಪಾಯಿದಂಡಮತ್ತು ಏಳು ವರ್ಷದವರೆಗೆಜೈಲುಶಿಕ್ಷೆ ವಿಧಿಸಬಹುದು. ಹಾಗೂ ಒಂದು ವೇಳೆ ಗ್ರಾಹಕರಿಗೆ ಪ್ರಾಣ ಹಾನಿ ಉಂಟಾದಲ್ಲಿ ಕನಿಷ್ಠ ಏಳು ವರ್ಷಕ್ಕೆ ಕಡಿಮೆ ಇಲ್ಲದಂತೆ ಅಥವಾ ಜೀವಾವಧಿ ಜೈಲು ಶಿಕ್ಷೆ ಮತ್ತು ₹ 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದು.

ಟ್ರೇಡ್‌ ಲೈಸೆನ್ಸ್‌ ರದ್ದಿಗೂ ಅವಕಾಶ

ತಿದ್ದುಪಡಿ ಕಾಯ್ದೆಯನ್ವಯ ಸರಕು ಮತ್ತು ಸೇವೆಯಲ್ಲಿ ನಿರ್ಲಕ್ಷ್ಯ ತೋರಿದ್ದು ಸಾಬೀತಾದಲ್ಲಿ ಪ್ರತಿವಾದಿ ಉತ್ಪಾದಕರು, ಸೇವೆ ಪೂರೈಕೆದಾರರು, ಮಾರಾಟಗಾರರ ಪರವಾನಗಿಯನ್ನು ಅಮಾನತು ಮಾಡಲು ಗ್ರಾಹಕ ಆಯೋಗಗಳು ಆದೇಶಿಸಬಹುದು. ಒಂದು ವೇಳೆ ಅವರಿಂದಲೇ ಪುನರಾವರ್ತನೆ ಆದಲ್ಲಿ ಪರವಾನಗಿ ರದ್ದುಪಡಿಸಲು ಸಹ ಆಯೋಗಗಳು ಆದೇಶ ಮಾಡಬಹುದು. ಒಟ್ಟಾರೆಯಾಗಿ ಬಹುದಿನಗಳಿಂದ ಗ್ರಾಹಕರಿಗೆ ನಿರೀಕ್ಷೆಯಿದ್ದ ಕಾಯ್ದೆ ತಿದ್ದುಪಡಿ ಜಾರಿಗೆ ಬಂದಾಗಿದೆ. ಇನ್ನು ಗ್ರಾಹಕರು ಜಾಗೃತರಾಗಿ ತಮ್ಮ ಹಕ್ಕು ಮತ್ತು ನ್ಯೂನ್ಯತೆ ಕಂಡಬಂದಲ್ಲಿ ದೂರುಗಳನ್ನು ಕೊಂಡೊಯ್ಯುವುದಷ್ಟೇ ಬಾಕಿ.

[ಲೇಖಕರು:ಅಮರದೀಪ್‌ ಪಿ.ಎಸ್‌. ಕೊಪ್ಪಳ ಜಿಲ್ಲಾ ಗ್ರಾಹಕರ ವೇದಿಕೆಯ ಈಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್‌ ಮತ್ತು ಸಹಾಯಕ ಆಡಳಿತಾಧಿಕಾರಿ]

ತಿದ್ದುಪಡಿಯಾದ ಗ್ರಾಹಕ ಸಂರಕ್ಷಣಾ ಕಾಯ್ದೆ: ಕನ್ನಡ ಧ್ವನಿ ಪಾಡ್‌ಕಾಸ್ಟ್‌ ಕೇಳಲು ಪ್ಲೇ ಬಟನ್‌ ಕ್ಲಿಕ್‌ ಮಾಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT