ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಗ್ರಾಹಕರ ಹಕ್ಕಿಗೆ ರಕ್ಷಾಕವಚ

ಗ್ರಾಹಕರ ಹಿತರಕ್ಷಣೆಯ ಹೊಣೆ ಹೊತ್ತವರು ಇನ್ನು ಮುಂದೆ ಸಕ್ರಿಯರಾಗಲೇಬೇಕು
Last Updated 24 ಜುಲೈ 2020, 19:32 IST
ಅಕ್ಷರ ಗಾತ್ರ

ಗ್ರಾಹಕರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ‘ಗ್ರಾಹಕರ ಹಿತರಕ್ಷಣಾ ಕಾಯ್ದೆ–2019’ ಒಂದು ದೃಢ ಹೆಜ್ಜೆಯಾಗಿದೆ. ಗ್ರಾಹಕರ ಹಕ್ಕುಗಳ ರಕ್ಷಣೆಗೆ ಈ ಕಾಯ್ದೆ ಹೆಚ್ಚಿನ ಬಲ ತುಂಬಲಿದೆ. ಈಗಿರುವ ವ್ಯಾಜ್ಯ ಪರಿಹಾರ ವೇದಿಕೆಗಳ ಜೊತೆಗೆ ಹೆಚ್ಚುವರಿಯಾಗಿ ಕೇಂದ್ರ, ರಾಜ್ಯ ಹಾಗೂ ಪ್ರಾಂತೀಯ ಮಟ್ಟದಲ್ಲಿ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಗಳನ್ನು ಸ್ಥಾಪಿಸುವುದಕ್ಕೆ ಇದು ಅವಕಾಶ ಮಾಡಿಕೊಡಲಿದೆ. ಈ ಅಧಿನಿಯಮದ ಕೆಲವು ಸೆಕ್ಷನ್‌ಗಳು ಇದೇ 20ರಂದು ಜಾರಿಗೆ ಬಂದಿವೆ. ಪ್ರಾಧಿಕಾರ ರಚನೆಗೆ ಸಂಬಂಧಿಸಿದ ಸೆಕ್ಷನ್‍ಗಳು ಸದ್ಯದಲ್ಲೇ ಜಾರಿಗೆ ಬರುವ ನಿರೀಕ್ಷೆ ಇದೆ. ಜಾರಿಗೆ ಬಂದಿರುವ ಮುಖ್ಯ ಸೆಕ್ಷನ್‌ಗಳಲ್ಲಿ ಕಲಬೆರಕೆ ತಡೆ, ಗ್ರಾಹಕ ಸಂರಕ್ಷಣಾ ಪರಿಷತ್ತು, ಜಿಲ್ಲಾ ಆಯೋಗ, ಸರಕು ಬಾಧ್ಯತೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಅಂಶಗಳು ಸೇರಿವೆ. ಗ್ರಾಹಕ ವೇದಿಕೆಯ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಯನ್ನು ಸಾರ್ವಜನಿಕ ಸೇವಕರು ಎಂದು ಪರಿಗಣಿಸಲಾಗಿದೆ.

ಗ್ರಾಹಕರ ಹಕ್ಕುಗಳ ಉಲ್ಲಂಘನೆ, ಅನುಚಿತ ವ್ಯಾಪಾರ ಪದ್ಧತಿ, ಹಾದಿ ತಪ್ಪಿಸುವ ಜಾಹೀರಾತುಗಳನ್ನು ನಿಯಂತ್ರಿಸುವುದು ಹಾಗೂ ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದು ಪ್ರಾಧಿಕಾರದ ಮುಖ್ಯ ಉದ್ದೇಶ. ಪ್ರಾಧಿಕಾರ ರಚನೆಯ ಉದ್ದೇಶಕ್ಕೆ ಅಮೆರಿಕದ ಕನ್‌ಸ್ಯೂಮರ್‌ ಪ್ರಾಡಕ್ಟ್ ಸೇಫ್ಟಿ ಕಮಿಷನ್‍ ಪ್ರೇರಣೆಯಾದಂತಿದೆ. ದೂರುಗಳ ಬಗ್ಗೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಇಲಾಖೆಯನ್ನು ಪ್ರಾಧಿಕಾರ ಹೊಂದಿರುತ್ತದೆ. ತನಿಖಾ ಅಧಿಕಾರಿಗಳು ತಮ್ಮ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಿದ ನಂತರ ವಿಚಾರಣೆ ಆರಂಭವಾಗುತ್ತದೆ.

ಇದುವರೆಗೆ ಗ್ರಾಹಕರ ಸಂರಕ್ಷಣೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇರಲಿಲ್ಲ ಅಥವಾ ಇದ್ದ ಅಧಿಕಾರವನ್ನು ಅವರು ಸಮರ್ಪಕವಾಗಿ ಬಳಸಲಿಲ್ಲ. ಗ್ರಾಹಕ ಸಂರಕ್ಷಣಾ ಕಾಯ್ದೆ– 1986ರ ಅನುಸಾರ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಗ್ರಾಹಕ ಸಂರಕ್ಷಣಾ ಪರಿಷತ್ತನ್ನು ರಚಿಸಬೇಕು. ಆದರೆ ಕರ್ನಾಟಕದಲ್ಲಿ ಇಂತಹ ಪರಿಷತ್ತುಗಳು ಎಲ್ಲ ಜಿಲ್ಲೆಗಳಲ್ಲಿ ರಚನೆಯಾಗಿಲ್ಲ. ನಾಲ್ಕಾರು ಜಿಲ್ಲೆಗಳಲ್ಲಷ್ಟೇ ಇವೆ. ಹೊಸ ಅಧಿನಿಯಮದ ಅನುಸಾರ, ದಾಖಲಾಗುವ ದೂರುಗಳ ಬಗ್ಗೆ ಅಥವಾ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಆದೇಶದ ಮೇರೆಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ಪ್ರಾಧಿಕಾರವು ಈ ವರದಿಯನ್ನಾಧರಿಸಿ ಅಥವಾ ಸ್ವಯಂ ಪ್ರೇರಣೆಯಿಂದ ಹಾಗೂ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಕ್ರಮ ಕೈಗೊಳ್ಳುತ್ತದೆ. ಜಿಲ್ಲಾ ವೇದಿಕೆ, ರಾಜ್ಯ ಆಯೋಗ ಹಾಗೂ ರಾಷ್ಟ್ರೀಯ ಆಯೋಗದಲ್ಲಿ ಪ್ರಾಧಿಕಾರವು ಗ್ರಾಹಕರ ಪರವಾಗಿ ದೂರು ಸಲ್ಲಿಸಬಹುದು. ಇದಲ್ಲದೆ, ಗ್ರಾಹಕರ ವಿಷಯಗಳ ಬಗ್ಗೆ ಅಧ್ಯಯನ, ಗ್ರಾಹಕ ಜಾಗೃತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು.

ಯಾವುದೇ ಸರಕು ಅಥವಾ ಸೇವೆಯಿಂದ ಗ್ರಾಹಕರ ಹಕ್ಕುಗಳಿಗೆ ಚ್ಯುತಿ ಉಂಟಾಗುತ್ತಿದೆ ಎಂಬುದು ತಿಳಿದುಬಂದಲ್ಲಿ, ಆ ಸರಕು ಅಥವಾ ಸೇವೆಯನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ನಿರ್ದೇಶನ ನೀಡಬಹುದು. ಜೊತೆಗೆ, ಅದನ್ನು ಖರೀದಿಸಿದ್ದ ಗ್ರಾಹಕರಿಗೆ ಹಣ ಹಿಂದಿರುಗಿಸುವಂತೆ ಸೂಚಿಸಬಹುದು. ಮುಖ್ಯವಾಗಿ ಆ ಸರಕನ್ನು ಮುಂದೆ ಉತ್ಪಾದಿಸಬಾರದು ಅಥವಾ ಸೇವೆಯಾಗಿದ್ದಲ್ಲಿ ಅದನ್ನು ನೀಡಬಾರದು ಎಂಬ ಆದೇಶವನ್ನೂ ನೀಡಬಹುದು.

ಆಧಾರರಹಿತ, ಹಾದಿ ತಪ್ಪಿಸುವ ಮತ್ತು ಅನುಚಿತ ಜಾಹೀರಾತುಗಳಿಂದ ಗ್ರಾಹಕರಿಗೆ ಆಗುತ್ತಿರುವ ಮೋಸ, ವಂಚನೆ ಹಾಗೂ ಅಪಾಯವನ್ನು ತಪ್ಪಿಸಲು ಪ್ರಾಧಿಕಾರವು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬಹುದು. ಆ ರೀತಿಯ ಜಾಹೀರಾತು ನೀಡುವ ಉತ್ಪಾದಕರು ಅಥವಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅನುಮೋದಕರು (ರೂಪದರ್ಶಿಗಳು) ಸಹ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅವರು ₹ 10 ಲಕ್ಷದವರೆಗೆ ದಂಡ ತೆರಬೇಕಾಗುತ್ತದೆ. ಇದೇ ಉಲ್ಲಂಘನೆಯನ್ನು ಎರಡನೇ ಬಾರಿ ಮಾಡಿದಲ್ಲಿ ದಂಡದ ಮೊತ್ತ ₹ 50 ಲಕ್ಷ. ಅಗತ್ಯವಿದ್ದಲ್ಲಿ, ಅನುಮೋದಕರು ಆ ವಸ್ತುವನ್ನು ಒಂದು ವರ್ಷ ಅನುಮೋದನೆ ಮಾಡದಂತೆ ಮಾಡಬಹುದು. ಅನುಮೋದಕರು ಮತ್ತೊಮ್ಮೆ ನಿಯಮ ಉಲ್ಲಂಘಿಸಿದಲ್ಲಿ ಈ ನಿಷೇಧವು ಮೂರು ವರ್ಷಗಳವರೆಗೆ ಮುಂದುವರಿಯಬಹುದು. ವಸ್ತುವನ್ನು ಅನುಮೋದಿಸುವ ಮುನ್ನ ಕನಿಷ್ಠ ಮಾಹಿತಿ ಸಂಗ್ರಹಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿರುವುದನ್ನು ಸಾಬೀತುಪಡಿಸಿದಲ್ಲಿ ಅನುಮೋದಕರು ದಂಡ ತೆರಬೇಕಿಲ್ಲ.

ಕಲಬೆರಕೆ ಮತ್ತು ನಕಲಿ ವಸ್ತುಗಳ ಮಾರಾಟವನ್ನು ತಡೆಗಟ್ಟಲು ಸಹ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ದೇಶದಾದ್ಯಂತ ಕಂಡುಬರುತ್ತಿರುವ ಕಲಬೆರಕೆ ಮತ್ತು ಅದರಿಂದ ಉಂಟಾಗುತ್ತಿರುವ ಸಾವು, ನೋವನ್ನು ಗಮನಿಸಿರುವ ಸರ್ಕಾರವು ಈ ಪೆಡಂಭೂತವನ್ನು ತಡೆಗಟ್ಟಲು ಹಲವಾರು ಅಂಶಗಳನ್ನು ಸೇರಿಸಿದೆ. ಕಲಬೆರಕೆಯಿಂದ ಕೂಡಿದ ಯಾವುದೇ ಪದಾರ್ಥದ ಆಮದು, ಉತ್ಪಾದನೆ, ದಾಸ್ತಾನು, ವಿತರಣೆ ಮತ್ತು ಮಾರಾಟ ಮಾಡುವ ಎಲ್ಲರಿಗೂ ದಂಡ ವಿಧಿಸಬಹುದಾಗಿದೆ. ಕಲಬೆರಕೆಯನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಿ,ಕಲಬೆರಕೆಯ ಸ್ವರೂಪವನ್ನು ಆಧರಿಸಿ ಶಿಕ್ಷೆಯ ಕಾಲಾವಧಿ ಮತ್ತು ದಂಡದ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಕಲಬೆರಕೆಯ ಪದಾರ್ಥ ಉಪಯೋಗಿಸಿದ ಕಾರಣ ಬಳಕೆದಾರರಿಗೆ ಯಾವುದೇ ಹಾನಿ ಉಂಟಾಗದಿದ್ದರೂ ಕಲಬೆರಕೆಗೆ ಕಾರಣರಾದ ಎಲ್ಲರನ್ನೂ ಆರು ತಿಂಗಳ ಜೈಲು ಶಿಕ್ಷೆಗೆ ಗುರಿಪಡಿಸಲು ಹಾಗೂ ₹ 1 ಲಕ್ಷ ದಂಡ ವಿಧಿಸಲು ಅವಕಾಶ ಇದೆ. ಕಲಬೆರಕೆಯಿಂದ ಗಂಭೀರ ಸ್ವರೂಪವಲ್ಲದ ಹಾನಿ ಉಂಟಾಗಿದ್ದಲ್ಲಿ ಒಂದು ವರ್ಷದ ಜೈಲು ಮತ್ತು ₹ 3 ಲಕ್ಷ ದಂಡ ನೀಡಬೇಕಾಗುತ್ತದೆ. ಬಳಕೆದಾರರಿಗೆ ಗಂಭೀರವಾದ ಹಾನಿ ಉಂಟಾದಲ್ಲಿ ಜೈಲುವಾಸದ ಅವಧಿ ಏಳು ವರ್ಷ ಮತ್ತು ₹ 5 ಲಕ್ಷ ದಂಡ, ಒಂದು ವೇಳೆ ಕಲಬೆರಕೆಯು ಬಳಕೆದಾರರ ಸಾವಿಗೆ ಕಾರಣವಾದಲ್ಲಿ ಅದಕ್ಕೆ ಕಾರಣ ರಾದವರು ಕನಿಷ್ಠ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯೂ ಇದೆ. ಇದರ ಜೊತೆಗೆ ಪ್ರಾಧಿಕಾರವು ತಪ್ಪಿತಸ್ಥರಿಗೆ ₹ 10 ಲಕ್ಷದವರೆಗೆ ದಂಡ ವಿಧಿಸಬಹುದು. ಕಲಬೆರಕೆಗೆ ಸಂಬಂಧಿಸಿದ ಶಿಕ್ಷೆ ಇಲ್ಲಿಗೇ ನಿಲ್ಲುವುದಿಲ್ಲ. ಕಲಬೆರಕೆ ಸ್ಥಿರಪಟ್ಟಲ್ಲಿ ಮೊದಲ ಬಾರಿ ಅವರಿಗೆ ಇತರ ಕಾನೂನಿನ ಅಡಿಯಲ್ಲಿ ನೀಡಿರುವ ಯಾವುದೇ ಪರವಾನಗಿಯನ್ನು ಎರಡು ವರ್ಷಗಳವರೆಗೆ ರದ್ದುಗೊಳಿಸಬಹುದು. ಅದೇ ಉಲ್ಲಂಘನೆಯನ್ನು ಮತ್ತೊಮ್ಮೆ ಮಾಡಿದಲ್ಲಿ ಅವರ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸಲು ಅವಕಾಶ ಇದೆ.

ಬಳಕೆದಾರರು ಎದುರಿಸುತ್ತಿರುವ ಮತ್ತೊಂದು ಸಮಸ್ಯೆ ನಕಲಿ ವಸ್ತುಗಳ ಮಾರಾಟ. ವಿಶೇಷವಾಗಿ ವಾಹನ ಬಿಡಿಭಾಗಗಳ ಮಾರಾಟದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಮೂಲ ವಸ್ತುಗಳ ತಯಾರಕರಿಗೆ ಮಾತ್ರವಲ್ಲದೆ ಸರ್ಕಾರಕ್ಕೂ ತೆರಿಗೆ ರೂಪದಲ್ಲಿ ನಷ್ಟವಾಗುತ್ತಿದೆ. ಮುಖ್ಯವಾಗಿ, ನಕಲಿ ವಸ್ತುಗಳಿಂದ ಗ್ರಾಹಕರಿಗೆ ಅಪಾಯ ಉಂಟಾಗುತ್ತಿದೆ. ಬೃಹದಾಕಾರವಾಗಿ ಬೆಳೆದಿರುವ ನಕಲಿ ವಸ್ತುಗಳ ಮಾರುಕಟ್ಟೆಯನ್ನು ಅಧಿನಿಯಮ ಗಂಭೀರವಾಗಿ ಪರಿಗಣಿಸಿದೆ. ಕಲಬೆರಕೆ ಅಪರಾಧಕ್ಕೆ ನಾಲ್ಕು ರೀತಿಯಲ್ಲಿ ಶಿಕ್ಷೆಯನ್ನು ವಿಂಗಡಿಸಿರುವಂತೆ, ನಕಲಿ ವಸ್ತುಗಳ ವಿಷಯದಲ್ಲೂ ಅದೇ ಮಾದರಿಯನ್ನು ಅನುಸರಿಸಲಾಗಿದೆ.

ಹೀಗೆ ಪ್ರಾಧಿಕಾರಕ್ಕೆ ಅಪಾರ ಅಧಿಕಾರವನ್ನು ನೀಡಲಾಗಿದೆ. ನಮ್ಮ ದೇಶದಲ್ಲಿ ಶಕ್ತಿಯುತ ಆಯೋಗ ಅಥವಾ ಪ್ರಾಧಿಕಾರಗಳಿಗೆ ಬರವಿಲ್ಲ. ಆದರೆ ಸಮಸ್ಯೆ ಇರುವುದು ಪ್ರಾಧಿಕಾರಗಳ ಅದಕ್ಷತೆ ಮತ್ತು ಸಾರ್ವಜನಿಕರ ಹಿತರಕ್ಷಣೆಗಾಗಿ ಅಧಿಕಾರವನ್ನು ಬಳಸಿಕೊಳ್ಳುವಲ್ಲಿ ಅವುಗಳಿಗೆ ಇರುವ ಹಿಂಜರಿಕೆಯಲ್ಲಿ ದೊರೆತಿರುವ ಅಧಿಕಾರವು ಎಷ್ಟು ಪರಿಣಾಮಕಾರಿಯಾಗಿ ಬಳಕೆ ಆಗಲಿದೆ ಎಂಬುದರ ಮೇಲೆ ಯಾವುದೇ ಆಯೋಗ ಅಥವಾ ಪ್ರಾಧಿಕಾರದ ಸಾರ್ಥಕ್ಯ ಅಡಗಿದೆ. ಉದ್ದೇಶಿತ ಈ ಪ್ರಾಧಿಕಾರಕ್ಕೂ ಈ ಮಾತು ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT