ಮಂಗಳವಾರ, ಸೆಪ್ಟೆಂಬರ್ 22, 2020
26 °C
ಕಲಾಪದ ನೇರ ಪ್ರಸಾರದಿಂದ ನ್ಯಾಯಾಂಗದಲ್ಲಿ ಅರ್ಥಪೂರ್ಣ ಸುಧಾರಣೆ ಸಾಧ್ಯ

ಸಮರ್ಥವಾಗಿ ಇವೆಯೇ ನ್ಯಾಯಾಲಯಗಳು?

ಕೆ.ವಿ.ಧನಂಜಯ Updated:

ಅಕ್ಷರ ಗಾತ್ರ : | |

1799ರಲ್ಲಿ ನಡೆದ ಎರಡು ಘಟನೆಗಳನ್ನು ಗಮನಿಸೋಣ. ಅಮೆರಿಕದ ಅಧ್ಯಕ್ಷ ಜಾರ್ಜ್‌ ವಾಷಿಂಗ್ಟನ್ ಅವರಿಗೆ ಉಸಿರಾಟದ ತೀವ್ರ ಸಮಸ್ಯೆ ಎದುರಾಯಿತು. ಅಮೆರಿಕದ ಅತ್ಯುತ್ತಮ ವೈದ್ಯರನ್ನು ಕರೆದು ಆಗ ಲಭ್ಯವಿದ್ದ ಅತ್ಯುತ್ತಮ ಚಿಕಿತ್ಸೆ ಒದಗಿಸಲಾಯಿತು– ಒಂದು ನರವನ್ನು ಕತ್ತರಿಸಿ, ರಕ್ತವನ್ನು ಹೊರಹೋಗುವಂತೆ ಮಾಡಲಾಯಿತು. ಆದರೂ ಅಧ್ಯಕ್ಷರನ್ನು ಉಳಿಸಲು ಆಗಲಿಲ್ಲ. ಈ ಮಾದರಿಯ ಚಿಕಿತ್ಸೆ ಅಲ್ಲಿಂದ ಒಂದೂವರೆ ಶತಮಾನದವರೆಗೆ ಉಳಿದುಕೊಂಡಿತು. ನಂತರ, ಅದು ಅವೈಜ್ಞಾನಿಕವೆಂದು ಕೈಬಿಡಲಾಯಿತು.

ಕಾನೂನು ಕೆಲಸ ಮಾಡುವುದು ವೈದ್ಯಕೀಯ ವಿಜ್ಞಾನದಂತೆ ಅಲ್ಲ. ಕಾನೂನಿನಲ್ಲಿ ನಾವು ಮೂಲ ತತ್ವಗಳನ್ನು ಅಥವಾ ವ್ಯವಸ್ಥೆಯನ್ನು ಕೈಬಿಡಬೇಕಿಲ್ಲ. 1799ರಲ್ಲಿ ಬ್ರಿಟಿಷರು ಟಿಪ್ಪು ಸುಲ್ತಾನನನ್ನು ಕೊಂದು ಮೈಸೂರು ರಾಜ್ಯವನ್ನು ತಮ್ಮ ಪರೋಕ್ಷ ನಿಯಂತ್ರಣಕ್ಕೆ ತೆಗೆದುಕೊಂಡರು. 10 ಜಿಲ್ಲೆಗಳು, 41.86 ಲಕ್ಷ ಜನಸಂಖ್ಯೆ ಹಾಗೂ ₹ 1 ಕೋಟಿ ಆದಾಯವಿದ್ದ ಮೈಸೂರು 1881ರ ವೇಳೆಗೆ ಅತ್ಯಂತ ಸಂಪದ್ಭರಿತ ರಾಜ್ಯವಾಗಿತ್ತು. ದಾಖಲೆಗಳನ್ನು ಇಡುವುದರಲ್ಲಿ ಬ್ರಿಟಿಷರು ಉತ್ತಮರು. ನ್ಯಾಯಾಂಗ ವ್ಯವಸ್ಥೆಯ ಅಂಕಿ–ಅಂಶಗಳು ‘ಮೈಸೂರು ಗೆಜೆಟಿಯರ್‌ನಲ್ಲಿ (1897)’ ಇವೆ. ಅದನ್ನೊಮ್ಮೆ ಗಮನಿಸೋಣ.

1880ರಲ್ಲಿ ಮೈಸೂರಿನಲ್ಲಿ ಒಟ್ಟು 17,203 ಸಿವಿಲ್‌ ಪ್ರಕರಣಗಳು ದಾಖಲಾಗಿದ್ದವು, ಈ ಎಲ್ಲ ಪ್ರಕರಣಗಳಲ್ಲಿ ಒಳಗೊಂಡಿದ್ದ ಒಟ್ಟು ಮೊತ್ತ ₹ 22,45,104 ಆಗಿತ್ತು. ಇವುಗಳಲ್ಲಿ ಬಹುತೇಕ ಪ್ರಕರಣಗಳು ದಾಖಲಾದ ಮೂರು ತಿಂಗಳೊಳಗೆ ಇತ್ಯರ್ಥಗೊಂಡವು. ಅಂದಿನ ಸಿವಿಲ್ ನ್ಯಾಯಾಲಯಗಳು 1877ರ ಸಿವಿಲ್ ಪ್ರಕ್ರಿಯಾ ಸಂಹಿತೆಯನ್ನು ಅನುಸರಿಸುತ್ತಿದ್ದವು. ಇಂದಿನ ನ್ಯಾಯಾಲಯಗಳು 1908ರ ಸಿವಿಲ್ ಪ್ರಕ್ರಿಯಾ ಸಂಹಿತೆಯನ್ನು ಅನುಸರಿಸುತ್ತಿವೆ. ಹೂರಣದಲ್ಲಿ ಈ ಎರಡೂ ಸಂಹಿತೆಗಳು ಒಂದೇ. 1880ರಲ್ಲಿ 11,656 ಅಪರಾಧ ಪ್ರಕರಣಗಳು ದಾಖಲಾಗಿದ್ದವು, 18,989 ಜನರನ್ನು ವಿಚಾರಣೆಗೆ ಗುರಿಪಡಿಸಲಾಯಿತು. ಅವರಲ್ಲಿ ಸರಿಸುಮಾರು ಅರ್ಧದಷ್ಟು (9,242) ಜನರಿಗೆ ಶಿಕ್ಷೆಯಾಯಿತು. ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಸರಾಸರಿ ಮೂರು ದಿನ ಹಿಡಿಯುತ್ತಿತ್ತು. ಅಂದು ಪಾಲಿಸಲಾಗುತ್ತಿದ್ದ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಹಾಗೂ ಇಂದಿನ ಸಂಹಿತೆಯಲ್ಲಿ ಮುಕ್ಕಾಲು ಭಾಗ ಒಂದೇ ರೀತಿ ಇದೆ.

2019ರಲ್ಲಿ ಸುದ್ದಿ ಮಾಡಿದ ಹಲವು ಕ್ರಿಮಿನಲ್ ವಿಚಾರಣಾ ಪ್ರಕರಣಗಳು ದಾಖಲಾಗಿದ್ದು ಮೂವತ್ತು ವರ್ಷಗಳ ಹಿಂದೆ! ಮೂವತ್ತು ವರ್ಷಗಳ ಹಿಂದೆ ದಾಖಲಾದ ಹಲವು ಸಿವಿಲ್ ದಾವೆಗಳು ಇನ್ನೂ ನ್ಯಾಯಾಲಯದಲ್ಲಿ ಇವೆ.

ಇಂದು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಅಂಕಿ–ಅಂಶ ಹೀಗಿದೆ: ಸರಿಸುಮಾರು 3.3 ಕೋಟಿ ಪ್ರಕರಣಗಳು ದೇಶದಾದ್ಯಂತನ್ಯಾಯಾಲಯಗಳಲ್ಲಿ ಬಾಕಿ ಇವೆ. ಈಗಿನ ವೇಗದಲ್ಲೇ ವಿಲೇವಾರಿ ನಡೆದರೆ, ಈ ಎಲ್ಲ ಪ್ರಕರಣಗಳು ಇತ್ಯರ್ಥಗೊಳ್ಳಲು ಇನ್ನು 100ರಿಂದ 400 ವರ್ಷಗಳು ಬೇಕು ಎಂಬ ಅಂದಾಜು ಇದೆ. ದೇಶದ ಜೈಲುಗಳಲ್ಲಿ ಇರುವ 4.3 ಲಕ್ಷ ಜನರಲ್ಲಿ 3 ಲಕ್ಷ ಜನ ಯಾವ
ಪ್ರಕರಣದಲ್ಲೂ ನ್ಯಾಯಾಲಯದಿಂದ ದೋಷಿ ಎಂದು ಕರೆಸಿಕೊಂಡಿಲ್ಲ. ಆದರೆ ಅವರೆಲ್ಲ ತಮ್ಮ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವುದನ್ನು ಕಾಯುತ್ತಿದ್ದಾರೆ. ಇಂದು ನಮ್ಮ ನ್ಯಾಯಾಂಗ ವ್ಯವಸ್ಥೆ ಭಗ್ನವಾಗಿದೆ; ಅದನ್ನು ಸುಧಾರಿಸಬಹುದು ಎಂದು ನ್ಯಾಯಾಧೀಶರು ಆಶಾಭಾವ ಹೊಂದಿದ್ದಾರೆ.

2014ರ ಅಂತ್ಯದ ವೇಳೆಗೆ ನಮ್ಮ ತಂಡವೊಂದು, ಆ ವರ್ಷ ಸುಪ್ರೀಂ ಕೋರ್ಟ್‌ ನೀಡಿದ ಎಲ್ಲ 884 ತೀರ್ಪುಗಳ ಪರಿಶೀಲನೆ ನಡೆಸಿತು. ಶೇಕಡ 93ರಷ್ಟು ತೀರ್ಪುಗಳು ಸಾಂವಿಧಾನಿಕ ಪ್ರಶ್ನೆಗೆ ಸಂಬಂಧಿಸಿರಲಿಲ್ಲ. ಬಹುಪಾಲು ತೀರ್ಪುಗಳು ಹೊಸದೇನನ್ನೂ ಹೇಳಿರಲಿಲ್ಲ, ಅದಾಗಲೇ ಹೇಳಿದ್ದನ್ನು ಪುನಃ ಹೇಳಿದ್ದವು. ಹಿಂದಿನ ತೀರ್ಪುಗಳು ಆಡಳಿತ ವ್ಯವಸ್ಥೆಯ ಸಿಬ್ಬಂದಿ ಹಾಗೂ ಕೆಳಹಂತದ ನ್ಯಾಯಾಲಯಗಳ ಮೇಲೆ ದೊಡ್ಡ ಪ್ರಭಾವ ಬೀರಿಲ್ಲ ಎಂಬುದು ಗೊತ್ತಾದರೆ, ಮೇಲಿನ ನ್ಯಾಯಾಲಯಗಳು ಮತ್ತಷ್ಟು ತೀರ್ಪು ಬರೆದು ನ್ಯಾಯಾಂಗ ವ್ಯವಸ್ಥೆ ಮೇಲೆ ಇನ್ನಷ್ಟು ಹೊರೆ ಹೇರುತ್ತವೆ. ಒಂದು ವಿಚಾರದ ಬಗ್ಗೆ ಹೆಚ್ಚೆಚ್ಚು ತೀರ್ಪುಗಳು ಇದ್ದಾಗ, ಅದೇ ವಿಷಯದ ಬಗ್ಗೆ ಹೊಸದಾಗಿ ತೀರ್ಪು ಬರೆಯುವ ನ್ಯಾಯಾಧೀಶ ಹಾಗೂ ಅದರ ಬಗ್ಗೆ ವಾದಿಸುವ ವಕೀಲ ಹಳೆಯ ಎಲ್ಲ ತೀರ್ಪುಗಳನ್ನು ಓದಿಕೊಳ್ಳಬೇಕಿರುವ ಕಾರಣ, ನ್ಯಾಯಾಂಗದ ಸಂಪನ್ಮೂಲ ಹಾಗೂ ಸಮಯ ವ್ಯರ್ಥವಾಗುತ್ತದೆ.

ಇಲ್ಲೊಂದು ಉದಾಹರಣೆ ಗಮನಿಸೋಣ. ಮುಖ್ಯಮಂತ್ರಿಯನ್ನು ಅಣಕಿಸಿ ಒಬ್ಬ ವ್ಯಂಗ್ಯಚಿತ್ರಕಾರ ಒಂದು ವ್ಯಂಗ್ಯಚಿತ್ರ ಪ್ರಕಟಿಸಿದ ಎಂದು ಭಾವಿಸಿ. ಅದರ ಬಗ್ಗೆ ಮುಖ್ಯಮಂತ್ರಿಯ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡುತ್ತಾನೆ, ಪೊಲೀಸರು ಎಫ್‌ಐಆರ್‌ ದಾಖಲಿಸಿ ವ್ಯಂಗ್ಯಚಿತ್ರಕಾರನನ್ನು ಬಂಧಿಸುತ್ತಾರೆ. ಆ ಪೊಲೀಸ್ ಅಧಿಕಾರಿಗೆ ಕಾನೂನು ಗೊತ್ತಿದ್ದಿದ್ದರೆ, ವ್ಯಂಗ್ಯಚಿತ್ರಗಳು ಕ್ರಿಮಿನಲ್ ಕಾನೂನಿನ ಅಡಿ ಬರುವುದಿಲ್ಲ ಎಂದು ಮೇಲಿನ ನ್ಯಾಯಾಲಯಗಳು ಹೇಳಿರುವ ಮಾತುಗಳು ಅವನಿಗೆ ತಿಳಿದಿದ್ದರೆ, ಆತ ಮೇಲಿನವರ ಒತ್ತಡವನ್ನು ಮೀರುತ್ತಿದ್ದ. ವ್ಯಂಗ್ಯಚಿತ್ರಕಾರನ ವಿರುದ್ಧ ಎಫ್‌ಐಆರ್‌ ದಾಖಲಿಸುತ್ತಿರಲಿಲ್ಲ. ಪೊಲೀಸರ ಕ್ರಿಯೆ ಹುಚ್ಚುತನದ್ದು ಎನ್ನುವುದನ್ನು ಹೇಳಲು ಪುನಃ ಉದ್ದದ ತೀರ್ಪು ಬರೆಯುವ ಬದಲು ಕೋರ್ಟ್‌, ಆ ಪೊಲೀಸ್ ಅಧಿಕಾರಿಯನ್ನು ಕರೆಸಿ, ತಾನು ಮಾಡಿದ್ದನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುವಂತೆ ಹೇಳಬಹುದು. ಅ ಅಧಿಕಾರಿಗೆ ಕಾನೂನಿನ ತಲೆ–ಬುಡ ಗೊತ್ತಿಲ್ಲ ಎಂದಾದರೆ, ಅವನಿಗೆ ಅರ್ಥ ಮಾಡಿಸಲು ಇನ್ನೊಂದು ತೀರ್ಪು ಬರೆಯುವುದು ವ್ಯರ್ಥ. ಆ ಅಧಿಕಾರಿಯನ್ನು ತರಬೇತಿ ಶಾಲೆಗೆ ಕಳುಹಿಸಿ, ಕಾನೂನಿನ ತಿಳಿವಳಿಕೆ ಪಡೆದಿದ್ದಾನೆ ಎಂಬುದು ಖಾತರಿಯಾದ ನಂತರವಷ್ಟೇ ಕರ್ತವ್ಯಕ್ಕೆ ಪುನಃ ಸೇರಿಸಿಕೊಳ್ಳಬಹುದು. ಇದೇ ಮಾದರಿಯನ್ನು ನಮ್ಮ ಆಡಳಿತ ವ್ಯವಸ್ಥೆಗೂ ಅನ್ವಯಿಸಬಹುದು. ಮೇಲೆ ಹೇಳಿದಂತಹ ಗೊಂದಲಗಳನ್ನು ಪರಿಹರಿಸುವ ಕೆಲಸಗಳೇ ಇಂದು ನಮ್ಮ ಮೇಲಿನ
ನ್ಯಾಯಾಲಯಗಳಿಗೆ ಹೆಚ್ಚಾಗಿ ಇರುವುದು.

ನ್ಯಾಯಾಂಗದಲ್ಲಿನ ವಿಳಂಬಗಳಿಗೆ ಇನ್ನೊಂದು ಆಯಾಮವೂ ಇದೆ. ಇದು ವಕೀಲನ ಪಾತ್ರಕ್ಕೆ ಸಂಬಂಧಿಸಿದ್ದು. ವಿಶೇಷ ಶಿಕ್ಷಣ, ತರಬೇತಿ ಹಾಗೂ ಮಾನ್ಯತೆ ಪಡೆದ ವ್ಯಕ್ತಿ ವಕೀಲ. ಒಬ್ಬ ವಕೀಲನಲ್ಲಿ ನಿರೀಕ್ಷಿತ ಮಟ್ಟದ ಕೌಶಲ ಹಾಗೂ ಜ್ಞಾನ ಇಲ್ಲ ಎಂಬುದನ್ನು ಕೋರ್ಟ್‌ಗಳು ಗಮನಿಸಿದರೆ, ಅವನಿಗೆ ಸಾರ್ವಜನಿಕವಾಗಿ ಎಚ್ಚರಿಕೆ ನೀಡಬೇಕು. ಆತ ಇನ್ನೊಂದು ಪ್ರಕರಣ ದಾಖಲಿಸುವ ಮೊದಲು ಇನ್ನಷ್ಟು ತರಬೇತಿ ಪಡೆಯಲು ಕಳುಹಿಸಬೇಕು. ಕಾನೂನಿನ ಜ್ಞಾನದ ಗಂಭೀರ ಕೊರತೆ ಇರುವ ವಕೀಲನನ್ನು ನ್ಯಾಯಾಂಗ ವ್ಯವಸ್ಥೆಯಲ್ಲಿ ಇರಿಸಿಕೊಳ್ಳುವುದು ತರಬೇತಿ ಇಲ್ಲದ ವೈದ್ಯನನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳುವುದಕ್ಕೆ ಸಮ. ಇಂತಹ ವೈದ್ಯರ ಕಾರಣದಿಂದಾಗಿ ರೋಗಿಗಳು ಸಾಯಬಹುದು ಅಥವಾ ತೀವ್ರವಾಗಿ ತೊಂದರೆಗೆ ಒಳಗಾಗಬಹುದು. ವಕೀಲನಿಗೆ ಕಾನೂನು ಜ್ಞಾನ ಇಲ್ಲದಿದ್ದರೆ ಕಕ್ಷಿದಾರರು ತಮ್ಮ ಆಸ್ತಿ, ವೃತ್ತಿ ಅಥವಾ ತಮ್ಮಲ್ಲಿನ ಸಂಪತ್ತನ್ನು ಕಳೆದುಕೊಳ್ಳ
ಬಹುದು.

ನ್ಯಾಯಾಲಯದ ಕಲಾಪಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ದಾಖಲಿಸಿಕೊಂಡರೆ, ಅದನ್ನು ಸಾರ್ವಜನಿಕ ವೀಕ್ಷಣೆಗೆ ನೇರ ಪ್ರಸಾರ ಮಾಡಿದರೆ ಅಥವಾ ಸಾರ್ವಜನಿಕ ಅವಗಾಹನೆಗೆ ಶೇಖರಿಸಿ ಇಟ್ಟರೆ ನಮ್ಮ ನ್ಯಾಯಾಲಯಗಳಲ್ಲಿ ಬಹಳಷ್ಟು ಬದಲಾವಣೆ ತರಬಹುದು. ಬಹುತೇಕ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಇದು ಈಗಾಗಲೇ ಇದೆ. ನಮ್ಮ ವಕೀಲರು ಮತ್ತು ನ್ಯಾಯಾಧೀಶರು ಕೆಲಸ ಮಾಡುವ ಬಗೆ ಸಾರ್ವಜನಿಕರ ಕಣ್ಣಿಗೆ ಬೀಳದಿದ್ದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಸುಧಾರಣೆ ಸಾಧ್ಯವಿಲ್ಲ.

ಲೇಖಕ: ಸುಪ್ರೀಂ ಕೋರ್ಟ್‌ ವಕೀಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು