ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪಗೆ ಮತ್ತೆ ಎದುರಾಗುತ್ತಾ ದಶಕದ ಹಿಂದಿನ ಸವಾಲು?

Last Updated 26 ಜುಲೈ 2019, 9:26 IST
ಅಕ್ಷರ ಗಾತ್ರ

ಕೊನೆಗೂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಗಿದ್ದು, ಹೊಸ ಸರ್ಕಾರ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭ, ಹೊಸ ಸರ್ಕಾರ ರಚಿಸಲು ಹೊರಟಿರುವ ಬಿಜೆಪಿ ಮುಂದಿರುವ ಸವಾಲುಗಳ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಕಾಂಗ್ರೆಸ್–ಜೆಡಿಎಸ್ ಅತೃಪ್ತ ಶಾಸಕರು ರಾಜೀನಾಮೆ ನೀಡಿ ವಿಧಾನಸಭೆಯಲ್ಲಿ ಸಂಖ್ಯಾಬಲ ಕಡಿಮೆಯಾದ್ದರಿಂದ ಬಿಜೆಪಿಗೆ ಬಹುಮತವಿದೆಯೇ ವಿನಃ ಪೂರ್ಣ ಬಹುಮತಕ್ಕೆ ಇನ್ನೂ 8 ಸ್ಥಾನ ಅಗತ್ಯವಿದೆ. ಸದ್ಯ 105 ಶಾಸಕರಿರುವ ಕಮಲ ಪಾಳಯಕ್ಕೆ ಇಬ್ಬರು ಪಕ್ಷೇತರರ ಬೆಂಬಲವೂ ಇದೆ ಎನ್ನಲಾಗುತ್ತಿದೆ. ಆದರೆ ಇದು ದೃಢ ಪಟ್ಟಿಯಲ್ಲ. ಯಾಕೆಂದರೆ ಮಂಗಳವಾರ ನಡೆದ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಪಕ್ಷೇತರ ಶಾಸಕರು ಭಾಗಿಯಾಗಿಲ್ಲ. ಹೀಗಾಗಿ ಶಾಸಕರ ರಾಜೀನಾಮೆಯಿಂದ ತೆರವಾದ ಕ್ಷೇತ್ರಗಳ ಪೈಕಿ ಕನಿಷ್ಠ 8 ಸ್ಥಾನಗಳನ್ನು ಗೆಲ್ಲುವುದು ಬಿಜೆಪಿಗೆ ಅನಿವಾರ್ಯವಾಗಲಿದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ ಅತೃಪ್ತ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಅವರನ್ನೇ ಕಣಕ್ಕಿಳಿಸಿದರೂ ಎಲ್ಲ ಕ್ಷೇತ್ರಗಳಲ್ಲಿ ಜಯಗಳಿಸುವುದು ಸುಲಭದ ಮಾತಲ್ಲ. ಹೀಗಾಗಿ ಸರಳ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳನ್ನು ಗೆಲ್ಲಲಾಗದೇ ಹೋದಲ್ಲಿ ಮತ್ತೆ ಅನಿಶ್ಚಿತತೆ ಎದುರಾಗುವ ಆತಂಕ ತಪ್ಪಿದ್ದಲ್ಲ.

ಮತ್ತೊಂದೆಡೆ ಪಕ್ಷದ ಒಳಗಿನ ಬಣಗಳು, ಅವುಗಳ ನಡುವಣ ಸಂಘರ್ಷವೂ ಬಿಜೆಪಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದೊಳಗೆ ಸಾಕಷ್ಟು ಮಂದಿಯ ವಿರೋಧ ಎದುರಿಸುತ್ತಿರುವುದೂ ಈ ಹಿಂದೆ ಅನೇಕ ಬಾರಿ ಬಹಿರಂಗವಾಗಿದೆ. ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ನಡುವಣ ಬಹಿರಂಗ ಸಂಘರ್ಷ ಅನೇಕ ಬಾರಿ ಪಕ್ಷದ ವರ್ಚಸ್ಸಿಗೇ ಧಕ್ಕೆ ತರುವ ಮಟ್ಟಕ್ಕೆ ಬೆಳೆದದ್ದೂ ಸತ್ಯ.

ಜೆಡಿಎಸ್‌ ಜತೆಗಿನ 20:20 ಆಡಳಿತದ ಸಂದರ್ಭ ಕುಮಾರಸ್ವಾಮಿಯವರು ಅಧಿಕಾರ ಹಸ್ತಾಂತರ ಮಾಡದ್ದನ್ನೇ ಪ್ರಮುಖ ವಿಷಯವಾಗಿಟ್ಟುಕೊಂಡು 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅತಿ ಹೆಚ್ಚು ಸ್ಥಾನ ಗೆಲ್ಲುವಂತೆ ಮಾಡಿದ್ದರು ಯಡಿಯೂರಪ್ಪ. ಪರಿಣಾಮವಾಗಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯೂ ಆದರು. ಆಗ 110 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದ ಬಿಜೆಪಿಗೆ ಸರಳ ಬಹುಮತಕ್ಕೆ 3 ಸ್ಥಾನ ಕಡಿಮೆ ಇತ್ತು. ‘ಆಪರೇಷನ್ ಕಮಲ’ದ ಮೂಲಕ ಸರ್ಕಾರ ಸುಭದ್ರಪಡಿಸಲು ಹೊರಟಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಂತರ ಎದುರಾಗಿದ್ದ ಸವಾಲುಗಳು ಈಗ ಇತಿಹಾಸ. ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಮತ್ತೆ 2008ರ ನಂತರದ ಪರಿಸ್ಥಿತಿಯೇ ರಾಜ್ಯದಲ್ಲಿ ಸೃಷ್ಟಿಯಾಗಿದೆಯೇ? ಆಗ ಎದುರಿಸಿದ್ದ ಸವಾಲುಗಳನ್ನೇ ಮತ್ತೆ ಯಡಿಯೂರಪ್ಪ ಎದುರಿಸಬೇಕಾಗಬಹುದೇ ಎಂಬ ಅನುಮಾನ ಸೃಷ್ಟಿಯಾಗುವುದು ಸಹಜ.

ಬಿಎಸ್‌ವೈ ಅಂದು ಎದುರಿಸಿದ್ದ ಸವಾಲುಗಳು...

2009ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆಗ ರಾಜ್ಯದ ಇಂಧನ ಸಚಿವರಾಗಿದ್ದಈಶ್ವರಪ್ಪ ಜತೆ ಮುನಿಸಿಕೊಂಡಿದ್ದ ಯಡಿಯೂರಪ್ಪಗೆ ಅದು ದುಬಾರಿಯಾಗಿ ಪರಿಣಮಿಸಿತ್ತು. ನಂತರ2009ರ ಅಕ್ಟೋಬರ್‌ನಲ್ಲಿ, ‘ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಡಬೇಕು, ನಾವು ಹೇಳಿದ ಕೆಲ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರನ್ನು ಬದಲಾಯಿಸಬೇಕು, ಶಾಸಕರನ್ನು ನಿರ್ಲಕ್ಷ್ಯ ಮಾಡುವ ಮುಖ್ಯಮಂತ್ರಿಗಳ ಧೋರಣೆ ಬದಲಾಗಬೇಕು’ ಎಂದು ಪಟ್ಟು ಹಿಡಿದು ಸಚಿವ ಬಿ. ಜನಾರ್ದನ ರೆಡ್ಡಿ ಬಣದಿಂದ ಭಿನ್ನಮತ ಶುರುವಾಗಿತ್ತು.

ರೆಡ್ಡಿ ನೇತೃತ್ವದಲ್ಲಿ ಗೋವಾ, ಹೈದರಾಬಾದ್‌ಗೆ ತೆರಳಿದ 40ಕ್ಕೂ ಅಧಿಕ ಶಾಸಕರು ರೆಸಾರ್ಟ್‌ನಲ್ಲಿ ಬಿಡಾರ ಹೂಡಿ, ಯಡಿಯೂರಪ್ಪ ಪದಚ್ಯುತಿಗೆ ಒತ್ತಾಯಿಸಿದರು. ಎಂ.ಪಿ.ರೇಣುಕಾಚಾರ್ಯ ಆಗ ರೆಡ್ಡಿಗಳ ಬಣದಲ್ಲಿದ್ದರು.ಒತ್ತಡಕ್ಕೆ ಮಣಿದ ಯಡಿಯೂರಪ್ಪ ಆಗ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದರು. ಬಳಿಗಾರ್ ಎತ್ತಂಗಡಿ ಆಗಿದ್ದರು. ಸ್ಪೀಕರ್ ಆಗಿದ್ದ ಜಗದೀಶ ಶೆಟ್ಟರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕಾಗಿ ಬಂದಿತ್ತು. ಹೈಕಮಾಂಡ್ ಮಧ್ಯಪ್ರವೇಶದಿಂದಾಗಿ ಸಮನ್ವಯ ಸಮಿತಿ ರಚನೆಯಾಗಿತ್ತು. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗಬೇಕು ಎಂದು ಹೈಕಮಾಂಡ್ ಸೂಚನೆ ನೀಡಿತ್ತು. ಅಲ್ಲಿಗೆ ಮೊದಲ ಬಿಕ್ಕಟ್ಟು ಕೊನೆಗೊಂಡಿತ್ತು.

ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು

2010ರ ಅಕ್ಟೋಬರ್ 4ರಂದು ರೇಣುಕಾಚಾರ್ಯ ನೇತೃತ್ವದಲ್ಲಿ 17 ಶಾಸಕರು ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದು ಅವರ ಪದಚ್ಯುತಿಗೆ ಪಟ್ಟುಹಿಡಿದಿದ್ದರು. ಯಡಿಯೂರಪ್ಪ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಅವರಿಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿರುವುದಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಆಗಿನ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ವಿಶ್ವಾಸಮತ ಯಾಚಿಸುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದ್ದರು. ಬಹುಮತ ಸಾಬೀತುಪಡಿಸುವ ಮೊದಲೇ ಆಗಿನ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು, ಐವರು ಪಕ್ಷೇತರರು ಸೇರಿದಂತೆ 16 ಜನ ಶಾಸಕರನ್ನು ಅನರ್ಹಗೊಳಿಸಿದ್ದರು. ಇದರಿಂದ ಸಿಟ್ಟಿಗೆದ್ದ ಅನರ್ಹಗೊಂಡ ಐವರು ಪಕ್ಷೇತರ ಶಾಸಕರು ಸ್ಪೀಕರ್ ಕ್ರಮ ಕಾನೂನುಬಾಹಿರ ಎಂದು ಘೋಷಿಸಿ ಸದನದಲ್ಲಿ ಗದ್ದಲವನ್ನುಂಟು ಮಾಡಿದ್ದರು. ಇದರ ನಡುವೆಯೇ ಯಡಿಯೂರಪ್ಪ ಅಕ್ಟೋಬರ್ 11ರಂದು ಧ್ವನಿಮತದ ಮೂಲಕ ವಿಶ್ವಾಸಮತ ಪಡೆದಿದ್ದರು. ಆದರೆ, ಇದು ಕಾನೂನುಬಾಹಿರ ಎಂದು ಘೋಷಿಸಿದ ರಾಜ್ಯಪಾಲರು, ರಾಷ್ಟ್ರಪತಿ ಆಡಳಿತ ಜಾರಿಗೆ ಶಿಫಾರಸು ಮಾಡಿದ್ದರು.

ಇದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ರಾಷ್ಟ್ರಪತಿ ಆಡಳಿತ ಜಾರಿಗೆ ಹಿಂಜರಿದ ಕೇಂದ್ರ ಸರ್ಕಾರ, ಮತ್ತೊಮ್ಮೆ ವಿಶ್ವಾಸಮತ ಯಾಚಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿ ಎಂದು ರಾಜ್ಯಪಾಲರಿಗೆ ಸಲಹೆ ಮಾಡಿತು. ಅದರಂತೆ ಅಕ್ಟೋಬರ್ 14ರಂದು ಮತ್ತೊಮ್ಮೆ ವಿಶ್ವಾಸಮತ ಯಾಚಿಸುವ ಮೂಲಕ ಯಡಿಯೂರಪ್ಪ ಮತ್ತೊಂದು ಕಂಟಕದಿಂದ ಪಾರಾಗಿದ್ದರು.

ಸಿಎಂ ವಿರುದ್ಧ ಭ್ರಷ್ಟಾಚಾರ ಆರೋಪ

ಇದಾದ ಒಂದು ತಿಂಗಳಲ್ಲಿಯೇ ಅಂದರೆ ನವೆಂಬರ್‌ನಲ್ಲಿ ಮುಖ್ಯಮಂತ್ರಿ ವಿರುದ್ಧ ಭ್ರಷ್ಟಾಚಾರ, ಡಿನೋಟಿಫಿಕೇಷನ್, ಜಿ-ಪ್ರವರ್ಗದಡಿ ಕಾನೂನುಬಾಹಿರವಾಗಿ ಬಿಡಿಎ ನಿವೇಶನಗಳ ಹಂಚಿಕೆ, ಸ್ವಜನಪಕ್ಷಪಾತದ ಆರೋಪಗಳು ಪ್ರತಿಪಕ್ಷಗಳಿಂದ ಅಷ್ಟೇ ಅಲ್ಲದೆ, ಆಡಳಿತ ಪಕ್ಷದವರಿಂದಲೇ ಕೇಳಿಬಂದಿದ್ದವು. ಇದರ ಬೆನ್ನಲ್ಲೇ, ಬಿಜೆಪಿ ರಾಜ್ಯ ಘಟಕದ ಅಂದಿನ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಕೆಲ ಶಾಸಕರು ಯಡಿಯೂರಪ್ಪ ಅವರನ್ನು ಬದಲಿಸುವಂತೆ ಹೈಕಮಾಂಡ್‌ಗೆ ಮನವಿ ಮಾಡಿದರು.ರಾಜೀನಾಮೆ ನೀಡುವಂತೆ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ ಯಡಿಯೂರಪ್ಪ ಪರವಾಗಿ ರಾಜ್ಯದ ಸಂಸದರು, ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ದೆಹಲಿಯಲ್ಲಿ ಲಾಬಿ ಮಾಡಿದ್ದರಿಂದ ಒತ್ತಡಕ್ಕೆ ಮಣಿದ ಹೈಕಮಾಂಡ್, ಯಡಿಯೂರಪ್ಪ ಅವರನ್ನು ಮುಂದುವರಿಸಲು ಸಮ್ಮತಿ ಸೂಚಿಸಿತ್ತು.

ಈ ಮಧ್ಯೆ, 16 ಮಂದಿ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಹೊರಡಿಸಿದ್ದ ಆದೇಶವನ್ನು 2011ರ ಮೇ 13ರಂದು ಸುಪ್ರೀಂ ಕೋರ್ಟ್ ರದ್ದುಪಡಿಸಿತು. ಆಗ ಮತ್ತೊಮ್ಮೆ ತಮ್ಮ ಅಸ್ತ್ರ ಬಳಸಿದ ರಾಜ್ಯಪಾಲರು, ಸುಪ್ರೀಂಕೋರ್ಟ್ 16 ಶಾಸಕರ ಅನರ್ಹತೆಯನ್ನು ರದ್ದುಪಡಿಸಿದ್ದನ್ನೇ ಆಧಾರವಾಗಿಟ್ಟುಕೊಂಡು ರಾಷ್ಟ್ರಪತಿ ಆಡಳಿತ ಜಾರಿಗೆ ಎರಡನೇ ಬಾರಿಗೆ ಶಿಫಾರಸು ಮಾಡಿದರು. ಆದರೆ ಒಂದು ವಾರ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಸುಮ್ಮನಿದ್ದ ಕೇಂದ್ರ ಸರ್ಕಾರ ಕೊನೆಗೆ ರಾಷ್ಟ್ರಪತಿ ಆಡಳಿತ ಜಾರಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಇಷ್ಟೆಲ್ಲ ಆದ ಬಳಿಕ ಲೋಕಾಯುಕ್ತ ವರದಿಯಿಂದಾಗಿ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಬೇಕಾಗಿ ಬಂತು. ಬಳಿಕ ತಮ್ಮದೇ ಬಣದ ಡಿ.ವಿ. ಸದಾನಂದನ ಗೌಡರನ್ನು ಮುಖ್ಯಮಂತ್ರಿಯಾಗಿ ಮಾಡಿದರೂ ಅವರಿಂದಲೂ ವಿರೋಧ ಎದುರಿಸುವಂತಾಯಿತು.

ಯಡಿಯೂರಪ್ಪ ಹೇಳಿದ್ದೆಲ್ಲ ನಡೆಯುವುದಿಲ್ಲ...

ಹಾಗೆ ನೋಡಿದರೆ 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಇದ್ದುದಕ್ಕಿಂತ ತೀರಾ ಭಿನ್ನವಾಗಿಲ್ಲ ಈಗಿನ ಪರಿಸ್ಥಿತಿ. ಈಶ್ವರಪ್ಪ–ಯಡಿಯೂರಪ್ಪ ನಡುವಣ ಸಂಘರ್ಷ 2018ರ ವಿಧಾನಸಭೆ ಚುನಾವಣೆ ಘೋಷಣೆಯಾಗುವವರೆಗೂ ಬಹಿರಂಗವಾಗಿಯೇ ವರದಿಯಾಗಿತ್ತೆಂಬುದು ಗಮನಾರ್ಹ. ಕೊನೆಗೆ ಚುನಾವಣೆ ಸಿದ್ಧತೆ ಅನಿವಾರ್ಯತೆಯಿಂದ ಉಭಯ ನಾಯಕರನ್ನು ಸಮಾಧಾನಗೊಳಿಸುವಲ್ಲಿ ಹೈಕಮಾಂಡ್‌ ಯಶಸ್ವಿಯಾಗಿತ್ತು. ಹಾಗೆಯೇ,ಹೈಕಮಾಂಡ್ ಎದುರು ಯಡಿಯೂರಪ್ಪ ಹೇಳಿದ್ದೆಲ್ಲ ನಡೆಯುವುದಿಲ್ಲ ಎಂಬುದನ್ನೂ ಹಲವು ನಿದರ್ಶನಗಳು ದೃಢಪಡಿಸಿವೆ.

ಏಪ್ರಿಲ್–ಮೇನಲ್ಲಿ ನಡೆದ ಲೋಕಸಭೆ ಚುನಾವಣೆ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೇಂದ್ರದ ಮಾಜಿ ಸಚಿವ ದಿ. ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್ ನೀಡಲು ಯಡಿಯೂರಪ್ಪ ಬಯಸಿದ್ದರು. ಹೈಕಮಾಂಡ್‌ಗೆ ಶಿಫಾರಸನ್ನೂ ಮಾಡಿದ್ದರು.ತೇಜಸ್ವಿನಿ ಅನಂತಕುಮಾರ್‌ ಅವರು ಚುನಾವಣಾ ಪ್ರಚಾರ ಕಚೇರಿಯನ್ನೂ ಆರಂಭಿಸಿದ್ದರು. ಆದರೆ ಎಲ್ಲ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದ ಹೈಕಮಾಂಡ್ ಹೊಸ ಮುಖ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿತ್ತು.

ಈ ಮಧ್ಯೆ, ಆರ್‌ಎಸ್‌ಎಸ್‌ ಹಿನ್ನೆಲೆಯ ಪ್ರಭಾವಿ ನಾಯಕ ಬಿ.ಎಲ್. ಸಂತೋಷ್ ಅವರು ಇತ್ತೀಚೆಗಷ್ಟೇಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ನೇಮಕವಾಗಿದ್ದಾರೆ. ಇದು ಯಡಿಯೂರಪ್ಪ ಅವರಿಗೆ ಒಂದು ರೀತಿಯಲ್ಲಿ ಸಿಹಿ ಸುದ್ದಿಯಾದರೆ, ಮತ್ತೊಂದೆಡೆ ಆತಂಕವನ್ನೂ ತಂದೊಡ್ಡಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದೇ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು ಸಂತೋಷ್. ಇವರೀಗ ರಾಷ್ಟ್ರ ರಾಜಕಾರಣ ಪ್ರವೇಶಿಸಿರುವುದು ಒಂದು ರೀತಿಯಲ್ಲಿ ಯಡಿಯೂರಪ್ಪ ಅವರಿಗಿದ್ದ ಅಡ್ಡಿ ನಿವಾರಣೆಯಾದಂತೆಯೇ. ಆದರೆ, ರಾಷ್ಟ್ರ ರಾಜಕಾರಣ ಪ್ರವೇಸಿರುವ ಸಂತೋಷ್ ಅವರು ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಬಲ್ಲವರು. ಹೀಗಾಗಿ ಹೈಕಮಾಂಡ್ ಮುಂದೆ ಯಡಿಯೂರಪ್ಪ ಮಾತು ಹೆಚ್ಚು ನಡೆಯದು ಎಂಬ ವಿಶ್ಲೇಷಣೆಯೂ ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬರುತ್ತಿದೆ.

ಬಿಜೆಪಿ ಬೆಂಬಲಿಗರು ಹೇಳುವುದೇ ಬೇರೆ!

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭಿನ್ನಮತ ಎದುರಿಸಿದ್ದು ಮತ್ತು ಬಿಜೆಪಿಯಲ್ಲಿ ಬಣ ಜಗಳ ನಡೆದಿದ್ದು ಎಲ್ಲವೂ ನಿಜ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಆಗ ಬಿಜೆಪಿ ಹೈಕಮಾಂಡ್ ಈಗಿನಷ್ಟು ಪ್ರಬಲವಾಗಿರಲಿಲ್ಲ. ಹಾಗಾಗಿ ಇಲ್ಲಿನ ಬಿಕ್ಕಟ್ಟನ್ನು ನಿವಾರಿಸುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಹೈಕಮಾಂಡ್ ಎಲ್ಲ ನಿರ್ಧಾರ ತೆಗೆದುಕೊಳ್ಳುತ್ತಿದೆ. ಪಕ್ಷದ ಎಲ್ಲ ಆಗುಹೋಗುಗಳ ಬಗ್ಗೆಯೂ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ಎಲ್ಲವೂ ಹೈಕಮಾಂಡ್ ಸೂಚನೆಯಂತೆಯೇ ನಡೆಯುತ್ತಿದೆ. ರಾಜ್ಯ ನಾಯಕರ ಆಟ ಹೆಚ್ಚು ನಡೆಯದು. ಹೀಗಾಗಿ ಈ ಬಾರಿ ಬಿಎಸ್‌ವೈ ಸರ್ಕಾರ ಸುಗಮವಾಗಿ ಆಡಳಿತ ನಡೆಸಲಿದೆ ಎಂಬ ಮಾತು ಬಿಜೆಪಿ ಆಂತರಿಕ ವಲಯದಲ್ಲಿ ಕೇಳಿಬರುತ್ತಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT