ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ| ಅಭಿವೃದ್ಧಿ: ತೋರುಂಬ ಲಾಭ

ಸಮರ್ಪಕ ಅಭಿವೃದ್ಧಿಯಾಗದೆ ನಿಜವಾದ ಅರ್ಥದಲ್ಲಿ ಕಲ್ಯಾಣ ಕರ್ನಾಟಕ ಎನಿಸಿಕೊಳ್ಳಲಾಗದು
Last Updated 24 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ರಾಜ್ಯ ಸರ್ಕಾರದಿಂದ ಅನುದಾನದ ರೂಪದಲ್ಲಿ ಇಲ್ಲಿಯವರೆಗೆ ಹತ್ತಾರು ಸಾವಿರ ಕೋಟಿ ರೂಪಾಯಿ ಬಂದಿದೆ. ಸ್ವಾತಂತ್ರ್ಯಪೂರ್ವದಲ್ಲಿ ನಿಜಾಮ ರಾಜ್ಯದ ಭಾಗವಾಗಿದ್ದ ಬೀದರ್‌, ಕಲಬುರ್ಗಿ, ರಾಯಚೂರು ಜಿಲ್ಲೆಗಳು ಚಾರಿತ್ರಿಕ ಕಾರಣಗಳಿಂದ ಹಿಂದುಳಿದಿದ್ದವು. ಈ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆಂದು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಗಿತ್ತು. ಆಯಾ ಕಾಲಕ್ಕೆ ಬಂದ ಸರ್ಕಾರಗಳು ಈ ಮಂಡಳಿಗೆ ಹೆಚ್ಚು ಹಣ ಬಿಡುಗಡೆ ಮಾಡಿದ್ದೇ ಸಾಧನೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಾ ಬಂದವು. ಮಂಡಳಿ ಅಸ್ತಿತ್ವಕ್ಕೆ ಬಂದು, ಅಭಿವೃದ್ಧಿಗೆಂದು ಕೋಟಿ ಕೋಟಿ ಹಣ ಖರ್ಚು ಮಾಡಿದ ಮೇಲೂ ಹೈದರಾಬಾದ್‌ ಕರ್ನಾಟಕ ಭಾಗ ಹಿಂದುಳಿದಿದೆ ಎಂಬ ಕೂಗು ಕೇಳಿಬರುತ್ತಲೇ ಇತ್ತು.

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ, ಪತ್ರಕರ್ತ ಪಾಟೀಲ ಪುಟ್ಟಪ್ಪ, ಹಿರಿಯ ರಾಜಕಾರಣಿ ವೈಜನಾಥ ಪಾಟೀಲರು ‘ಪ್ರಾದೇಶಿಕ ಅಸಮಾನತೆ’ ಹೆಚ್ಚುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸತೊಡಗಿದ್ದರು. ವೈಜನಾಥರಂತೂ ಒಂದು ಹೆಜ್ಜೆ ಮುಂದೆ ಹೋಗಿ ‘ಹೈದರಾಬಾದ್‌ ಕರ್ನಾಟಕ’ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಪಡಿಸಿದರು. ಮಾತ್ರವಲ್ಲ, ಪ್ರತ್ಯೇಕ ರಾಜ್ಯದ ನಕ್ಷೆ ಮತ್ತು ಧ್ವಜ ಬಿಡುಗಡೆ ಮಾಡಿ, ಹೋರಾಟಗಾರರೊಂದಿಗೆ ಬಂಧನಕ್ಕೆ ಒಳಗಾದರು. ಹೈದರಾಬಾದ್‌ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟ ತೀವ್ರಗೊಂಡಿದ್ದನ್ನು ಗಮನಿಸಿದ ಅಂದಿನ ಮುಖ್ಯಮಂತ್ರಿ ಕೃಷ್ಣ ಅವರು, ಅರ್ಥಶಾಸ್ತ್ರಜ್ಞ ಡಿ.ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣಾ ಅಧ್ಯಯನ ಸಮಿತಿಯೊಂದನ್ನು ರಚಿಸಿದರು. ಪ್ರೊ. ಬಿ. ಶೇಷಾದ್ರಿ ಅವರಂತಹ ಅನುಭವಿ ಅರ್ಥಶಾಸ್ತ್ರಜ್ಞರು ಆ ಸಮಿತಿಯಲ್ಲಿ ಇದ್ದರು. ಈ ಸಮಿತಿ ರಾಜ್ಯದ ಎಲ್ಲೆಡೆ ವ್ಯಾಪಕ ಪ್ರವಾಸ ಕೈಗೊಂಡು ತಲಸ್ಪರ್ಶಿ ಅಧ್ಯಯನ ನಡೆಸಿತು. ಅಧ್ಯಯನದ ಫಲಿತಾಂಶವನ್ನು ವರದಿಯ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಿತು. ನಂತರದ ದಿನಗಳಲ್ಲಿ ಆ ವರದಿಯು ‘ನಂಜುಂಡಪ್ಪ ವರದಿ’ ಎಂದೇ ಜನಜನಿತವಾಯಿತು.

ನಂಜುಂಡಪ್ಪ ವರದಿ ಸಮಿತಿಯು ನಲವತ್ತಕ್ಕೂ ಹೆಚ್ಚು ಮಾನದಂಡಗಳನ್ನು ಇಟ್ಟುಕೊಂಡು ಅಭಿವೃದ್ಧಿ ಸೂಚ್ಯಂಕ ಸಿದ್ಧಪಡಿಸಿತ್ತು. ಹಿಂದುಳಿದಿರುವಿಕೆಯ ಪ್ರಮಾಣವು ಹೈದರಾಬಾದ್‌ ಕರ್ನಾಟಕ ಪ್ರದೇಶದ ತಾಲ್ಲೂಕುಗಳಲ್ಲಿ ಹೆಚ್ಚಾಗಿರುವುದನ್ನು ವಿಶೇಷವಾಗಿ ಗಮನಿಸಿತು. ಹಾಗೆಂದು, ರಾಜ್ಯದ ಇತರ ತಾಲ್ಲೂಕುಗಳಲ್ಲಿನ ಹಿಂದುಳಿದಿರುವಿಕೆಯ ಬಗ್ಗೆ ಕುರುಡಾಗಲಿಲ್ಲ. ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ, ತುಮಕೂರು ಜಿಲ್ಲೆಯ ಪಾವಗಡ, ಬಾಗಲಕೋಟೆ ಜಿಲ್ಲೆಯ ಬೀಳಗಿ ಸೇರಿದಂತೆ ರಾಜ್ಯದ ಹಲವಾರು ತಾಲ್ಲೂಕುಗಳು ಹಿಂದುಳಿದಿರುವುದನ್ನು ಗುರುತಿಸಿತ್ತು. ಅತಿಹಿಂದುಳಿದ ತಾಲ್ಲೂಕುಗಳು ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಹೆಚ್ಚಿಗೆ ಇರುವುದರಿಂದ ‘ನಂಜುಂಡಪ್ಪ ವರದಿ’ ಈ ಭಾಗದ ಕನ್ನಡಿ ಎಂಬಂತಾಯಿತು.

ನಂಜುಂಡಪ್ಪ ವರದಿಯು ಹೈದರಾಬಾದ್‌ ಕರ್ನಾಟಕ ಭಾಗದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುತ್ತಲೇ ಸಾಂಸ್ಕೃತಿಕ ಕ್ಷೇತ್ರದಲ್ಲಾದ ಅನ್ಯಾಯಗಳನ್ನು ಸರಿಪಡಿಸಬೇಕೆಂದು ಶಿಫಾರಸು ಮಾಡಿತ್ತು. ಸ್ವಾತಂತ್ರ್ಯೋತ್ತರ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದ ಸವಲತ್ತುಗಳು ಪ್ರತಿಶತ 75ರಷ್ಟು ಹಳೆ ಮೈಸೂರು ಭಾಗದವರಿಗೆ ದೊರೆತಿದ್ದರೆ, ಹೈದರಾಬಾದ್‌ ಕರ್ನಾಟಕ ಭಾಗದವರಿಗೆ ಕೇವಲ ಶೇ 25ರಷ್ಟು ದೊರೆತಿವೆ. ಹೆಚ್ಚಿನ ಪ್ರಾತಿನಿಧ್ಯ ನೀಡುವ ಮೂಲಕ ಹೈದರಾಬಾದ್‌ ಕರ್ನಾಟಕ ಭಾಗಕ್ಕಾದ ಅನ್ಯಾಯವನ್ನು ಸರಿಪಡಿಸಬೇಕು, ಅಗತ್ಯ ಬಿದ್ದರೆ ಕಾನೂನು ತಿದ್ದುಪಡಿ ಮಾಡಿ ನ್ಯಾಯ ದೊರಕಿಸಬೇಕೆಂದು ನಂಜುಂಡಪ್ಪನವರು ತಮ್ಮ ವರದಿಯಲ್ಲಿ ಸ್ಪಷ್ಟವಾಗಿ ಶಿಫಾರಸು ಮಾಡಿದ್ದರು.

ಪ್ರಾದೇಶಿಕ ಅಸಮಾನತೆಯನ್ನು ಕಾಲಮಿತಿಯಲ್ಲಿ ನಿವಾರಿಸಬೇಕೆಂದು ಪ್ರಸ್ತಾಪಿಸಿದ್ದ ವರದಿಯು ಪ್ರತಿವರ್ಷ ₹ 2 ಸಾವಿರ ಕೋಟಿ ಹಣವನ್ನು ಎಂಟು ವರ್ಷಗಳ ಕಾಲ ಒದಗಿಸಿ ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿತ್ತು. ನಂತರ ಬಂದ ಸರ್ಕಾರಗಳು ನಂಜುಂಡಪ್ಪ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಂಡವೇ ಹೊರತು, ವರದಿಯ ಶಿಫಾರಸುಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಮುಂದಾಗಲಿಲ್ಲ. 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು ‘ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ’ ರಚಿಸಿದ್ದರು. ಆ ಸಮಿತಿಯ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದರು. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯ ಮೊದಲ ಅಧ್ಯಕ್ಷರಾಗಿ ಶಶೀಲ್ ನಮೋಶಿ ನೇಮಕಗೊಂಡಿದ್ದರು. ಉತ್ತಮ ಕೆಲಸಗಳನ್ನು ಮಾಡಿದರು. ನಂತರದ ವರ್ಷಗಳಲ್ಲಿ ‘ಅನುಷ್ಠಾನ ಸಮಿತಿ’ಯನ್ನು ನಿಷ್ಕ್ರಿಯಗೊಳಿಸಲಾಯಿತು. ನಂಜುಂಡಪ್ಪ ವರದಿಯ ಶಿಫಾರಸುಗಳು ಆ ಹೊತ್ತಿಗೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳ್ಳಲಿಲ್ಲ. ಹಣ ಮಾತ್ರ ನೀರಿನಂತೆ ವ್ಯಯವಾಗಿದೆ.

ವೈಜನಾಥ ಪಾಟೀಲ ನೇತೃತ್ವದ ‘ಹೋರಾಟ ಸಮಿತಿ’ ಮತ್ತೆ ಚಳವಳಿಯನ್ನು ತೀವ್ರಗೊಳಿಸಿತು. ಪ್ರಾದೇಶಿಕ ಅಸಮಾನತೆ ನಿವಾರಣೆಯಾಗಬೇಕೆಂದರೆ, ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ದೊರೆಯಬೇಕೆಂದು ಬಲವಾಗಿ ಪ್ರತಿಪಾದಿಸಿತು. ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಒತ್ತಾಯಿಸಲಾಯಿತು. ಯಡಿಯೂರಪ್ಪ ನೇತೃತ್ವದ ಅಂದಿನ ಸರ್ಕಾರ ‘ವಿಶೇಷ ಸ್ಥಾನಮಾನ’ದ ಬೇಡಿಕೆಯನ್ನು ಬೆಂಬಲಿಸಿ ಉಭಯ ಸದನಗಳಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿತು. ಸಂವಿಧಾನದ 371(ಜೆ) ಕಲಂ ಜಾರಿಗೆ ಬಂತು. ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಪ್ರಾಪ್ತವಾಯಿತು. ಬದಲಾದ ಸನ್ನಿವೇಶದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಪುನರ್‌ ರಚಿಸಲಾಗಿದೆ. ಇಷ್ಟಾಗಿಯೂ ‘ಅಭಿವೃದ್ಧಿ’ ಮರೀಚಿಕೆಯಾಗಿದೆ.

ಹತ್ತಾರು ಸಾವಿರ ಕೋಟಿ ಹಣವನ್ನು ಖರ್ಚು ಮಾಡಿದ ಮೇಲೂ ಹೈದರಾಬಾದ್‌ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿಲ್ಲವೆಂದರೆ ಅದಕ್ಕೆ ಯಾರು ಹೊಣೆ? ಅಭಿವೃದ್ಧಿ ಕುರಿತಾದ ಗ್ರಹೀತ ನಂಬಿಕೆಗಳು ಬದಲಾಗಬೇಕಿದೆ. ಚಾಲ್ತಿಯಲ್ಲಿರುವ ಅಭಿವೃದ್ಧಿ ಮೀಮಾಂಸೆಯು ‘ಹಿಂದುಳಿದ ಹಣೆಪಟ್ಟಿ’ಯನ್ನು ಕಾಯಂಗೊಳಿಸುವಂತಿದೆ. ಪ್ರತಿವರ್ಷ ಮಂಡಳಿಗೆ ಸರ್ಕಾರಗಳು ಹಣ ಬಿಡುಗಡೆ ಮಾಡುತ್ತಲೇ ಇವೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆಂದು ಕ್ರಿಯಾ ಯೋಜನೆ ಸಿದ್ಧಗೊಳ್ಳುತ್ತದೆ. ಬಿಡುಗಡೆಯಾದ ಅಷ್ಟೂ ಹಣ, ಆರ್ಥಿಕ ವರ್ಷ ಮುಗಿಯುವುದರೊಳಗೆ ಖರ್ಚಾಗಿ ಹೋಗಿರುತ್ತದೆ. ಮತ್ತೆ ಬೇಡಿಕೆ, ಮತ್ತೆ ಕ್ರಿಯಾ ಯೋಜನೆ. ಪುಢಾರಿಗಳು, ಗುತ್ತಿಗೆದಾರರು ಮತ್ತು ಅಧಿಕಾರಿಗಳು ದುಂಡಗಾಗುತ್ತಾ ಹೋಗುತ್ತಾರೆ. ಸರ್ವಾಂಗೀಣ ಅಭಿವೃದ್ಧಿಯ ಕನಸು ಹಾಗೇ ಉಳಿಯುತ್ತದೆ. ಯಾವ್ಯಾವ ಮಾನದಂಡಗಳನ್ನು ಬಳಸಿ ಒಂದು ಪ್ರದೇಶ ‘ಹಿಂದುಳಿದಿದೆ’ ಎಂಬ ನಿರ್ಧಾರಕ್ಕೆ ಬರಲಾಗಿದೆಯೋ ಅವೇ ಮಾನದಂಡಗಳನ್ನಿಟ್ಟುಕೊಂಡು ‘ಸರ್ವಾಂಗೀಣ ಅಭಿವೃದ್ಧಿ’ಯ ನೀಲನಕ್ಷೆ ಸಿದ್ಧಗೊಳ್ಳಬೇಕಲ್ಲವೇ?

ಹೈದರಾಬಾದ್‌ ಕರ್ನಾಟಕ ಭಾಗದ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಯ ವಸ್ತುನಿಷ್ಠ ಸಮೀಕ್ಷೆಯನ್ನು ಈಗ ನಡೆಸಿದರೂ ಆ ಭಾಗ ನಿಂತಲ್ಲೇ ನಿಂತಿರುವುದು ರುಜುವಾತಾಗುತ್ತದೆ. ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ಮಾಡಿ ‘ವಿಶೇಷ ಸ್ಥಾನಮಾನ’ ದೊರೆತರೂ ಸಮರ್ಪಕವಾಗಿ ಅನುಷ್ಠಾನಗೊಳ್ಳದೇ ಇರುವುದರಿಂದ ನಿರೀಕ್ಷಿತ ಫಲ ದೊರೆಯುತ್ತಿಲ್ಲ.

ಯಡಿಯೂರಪ್ಪನವರು ಹೈದರಾಬಾದ್‌ ಕರ್ನಾಟಕ ಭಾಗವನ್ನು ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿದ್ದಾರೆ. ನಿಜವಾದ ಅರ್ಥದಲ್ಲಿ ‘ಕಲ್ಯಾಣ ಕರ್ನಾಟಕ’ ಎನಿಸಿಕೊಳ್ಳಬೇಕೆಂದರೆ, ಬಿಡುಗಡೆಯಾದ ಅಷ್ಟೂ ಹಣ ಆ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಮರ್ಪಕವಾಗಿ ಬಳಕೆಯಾಗಬೇಕು. ಅದಕ್ಕಾಗಿ ದಕ್ಷ, ಪ್ರಾಮಾಣಿಕ ವ್ಯಕ್ತಿಯ ನೇತೃತ್ವದಲ್ಲಿ ಕಾವಲು ಸಮಿತಿ ಅಥವಾ ಅನುಷ್ಠಾನ ಸಮಿತಿ ರಚನೆಯಾಗಿ, ಕಾಲಮಿತಿಯಲ್ಲಿ ಅಭಿವೃದ್ಧಿ ಸಾಧಿಸುವಂತೆ ಇರಬೇಕು. ಇಲ್ಲದಿದ್ದರೆ ಅಭಿವೃದ್ಧಿ ಎಂಬುದು ತೋರುಂಬ ಲಾಭವಾಗಿಯೇ ಮುಂದುವರಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT