ಶನಿವಾರ, ಫೆಬ್ರವರಿ 27, 2021
27 °C
ಉನ್ನತ ಅಧಿಕಾರಿಯ ಅನಾಮಿಕ ಲೇಖನ ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್

‘ಟ್ರಂಪ್ ಆಡಳಿತದ ಒಳಗಿರುವ ಪ್ರತಿರೋಧದ ದನಿ ನಾನು’ ಅನಾಮಿಕ ಲೇಖನ, ಮೂಡಿಸಿತು ಸಂಚಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಲೇಖಕರ ಹೆಸರು ಇಲ್ಲದ ಲೇಖನವನ್ನು ‘ನ್ಯೂಯಾರ್ಕ್‌ ಟೈಮ್ಸ್‌’ ಈಚೆಗೆ ತನ್ನ ಒಪ್‌ಎಡ್ ಪುಟದಲ್ಲಿ (ಸಂಪಾದಕೀಯ ಪುಟಕ್ಕೆ ಎದುರು ಪುಟ) ಪ್ರಕಟಿಸಿತ್ತು. ‘ಲೇಖನ ಬರೆದವರ ಹೆಸರು ನಮಗೆ ಗೊತ್ತು. ಅವರು ಅಮೆರಿಕ ಅಧ್ಯಕ್ಷ ಟ್ರಂಪ್ ಆಡಳಿತದಲ್ಲಿ ಹಿರಿಯ ಅಧಿಕಾರಿ. ಲೇಖಕರ ವಿನಂತಿಯ ಮೇರೆಗೆ ಹೆಸರು ಪ್ರಕಟಿಸುತ್ತಿಲ್ಲ. ಹೆಸರು ಪ್ರಕಟಿಸುವುದರಿಂದ ಅವರ ಕೆಲಸಕ್ಕೆ ಸಂಚಕಾರ ಬರಬಹುದು. ಆಡಳಿತಯಂತ್ರದ ಭಾಗವಾಗಿರುವವರ ಮನಃಸ್ಥಿತಿಯ ಮತ್ತೊಂದು ಮುಖವನ್ನು ಜನರಿಗೆ ಪರಿಚಯಿಸಲು ಈ ಲೇಖನ ಪ್ರಕಟಿಸುವುದು ಅನಿವಾರ್ಯವಾಗಿತ್ತು’ ಎಂದು ನ್ಯೂರ್ಯಾರ್ಕ್‌ ಟೈಮ್ಸ್ ಹೇಳಿದೆ.

–––

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಇದೀಗ ಸತ್ವ ಪರೀಕ್ಷೆ ಎದುರಿಸುತ್ತಿದೆ. ಅಮೆರಿಕದ ಯಾವುದೇ ನಾಯಕ ಇಂಥ ಸವಾಲು ಎದುರಿಸಿರಲಿಲ್ಲ. ನಾನು ಈ ಮಾತು ಹೇಳಲು ಕಾನೂನು ಸಲಹಾ ಮಂಡಳಿಗಳು ವಿಪರೀತ ಎನಿಸುಷ್ಟು ಅಧಿಕಾರ ಪಡೆದುಕೊಂಡಿರುವುದು, ಅಥವಾ ಟ್ರಂಪ್ ನಾಯಕತ್ವ ಕುರಿತು ದೇಶವು ಕೆಟ್ಟದಾಗಿ ಒಡೆದುಹೋಗಿದೆ ಎಂಬುದು, ಅಥವಾ ಟ್ರಂಪ್ ಜೊತೆಗೆ ಅವರ ಪಕ್ಷವೂ ವಿರೋಧ ಪಕ್ಷಗಳಿಗೆ ಕಾಂಗ್ರೆಸ್ (ಕೆಳಮನೆ) ಒಪ್ಪಿಸಿಕೊಡಬಹುದು ಎಂಬ ಕೆಲವರ ಆತಂಕ ಖಂಡಿತ ಕಾರಣವಲ್ಲ.

ನಮ್ಮ ಅಧ್ಯಕ್ಷರಿಗೆ ಅಮೆರಿಕದ ಆಡಳಿತ ಸಾಗುತ್ತಿರುವ ಹಾದಿಯನ್ನು ಪೂರ್ಣಪ್ರಮಾಣದಲ್ಲಿ ಗ್ರಹಿಸಲು ಆಗುತ್ತಿಲ್ಲ. ಆಯಕಟ್ಟಿನ ಜಾಗದಲ್ಲಿರುವ ಅನೇಕ ಹಿರಿಯ ಅಧಿಕಾರಿಗಳು ಪ್ರಜ್ಞಾಪೂರ್ವಕವಾಗಿ ಟ್ರಂಪ್ ಅವರ ಘೋಷಿತ ಧ್ಯೇಯಗಳಿಂದ ದೂರ ಸರಿಯುತ್ತಿದ್ದಾರೆ. ಅಧ್ಯಕ್ಷರು ತೆಗೆದುಕೊಳ್ಳುವ ಅಪಕ್ವ ನಿರ್ಧಾರಗಳಿಂದ ಆಗುವ ಕೆಟ್ಟ ಪರಿಣಾಮಗಳನ್ನು ತಡೆಯಲು ತಮ್ಮದೇ ಆದ ರೀತಿಯಲ್ಲಿ ಯತ್ನಿಸುತ್ತಿದ್ದಾರೆ.

ನನಗೆ ಇದೆಲ್ಲವೂ ಚೆನ್ನಾಗಿ ಗೊತ್ತು. ಏಕೆಂದರೆ, ಹೀಗೆ ಶ್ರಮಿಸುತ್ತಿರುವವರಲ್ಲಿ ನಾನೂ ಒಬ್ಬ. ಒಂದು ವಿಷಯ ಸ್ಪಷ್ಟಪಡಿಸಿಬಿಡುತ್ತೇನೆ. ನಮ್ಮದು ಎಡ ಚಿಂತನೆಗಳ ಮಾದರಿಯಲ್ಲಿರುವ ಜನಪ್ರಿಯ ಪ್ರತಿರೋಧ ಅಲ್ಲ. ನಮ್ಮ ಅನೇಕ ನೀತಿಗಳು ಮತ್ತು ನಮ್ಮ ನಿರ್ಧಾರಗಳು ಅಮೆರಿಕವನ್ನು ಸುರಕ್ಷಿತ ಮತ್ತು ಸಮೃದ್ಧಗೊಳಿಸಿದೆ ಎನ್ನುವುದನ್ನು ಆಡಳಿತದ ಚುಕ್ಕಾಣಿ ಹಿಡಿದವರು ಅರಿತುಕೊಳ್ಳಬೇಕು ಎನ್ನುವುದಷ್ಟೇ ನಮ್ಮ ಆಶಯ.

ಈ ದೇಶದ ಹಿತ ಕಾಪಾಡುವುದು ಮೊದಲ ಕರ್ತವ್ಯ ಎಂದು ನಾವು, ಕೆಲ ಅಧಿಕಾರಿಗಳು ಭಾವಿಸಿದ್ದೇವೆ. ಆದರೆ, ನಮ್ಮ ಅಧ್ಯಕ್ಷರು ಮಾತ್ರ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆ ಬರುವಂತೆ ನಡೆದುಕೊಳ್ಳುವುನ್ನು ಮುಂದುವರಿಸಿದ್ದಾರೆ. ನಮ್ಮನ್ನು ಅಧಿಕಾರ ಸ್ಥಾನದಲ್ಲಿರಿಸಿರುವವರು ಟ್ರಂಪ್. ಆದರೂ ನಾವೆಲ್ಲರೂ ಅಮೆರಿಕದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಕಾಪಾಡಲು ಏನು ಮಾಡಬೇಕೋ ಅದನ್ನೇ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದೇವೆ. ಟ್ರಂಪ್ ಅವರು ಅಧ್ಯಕ್ಷರ ಕಚೇರಿಯಿಂದ ಹೊರಗೆ ಹೋಗುವವರೆಗೂ ಅವರ ತಪ್ಪು ನಡೆಯಿಂದ ಪ್ರಜಾಪ್ರಭುತ್ವ ಹಾಳಾಗದಂತೆ ಕಾಪಾಡಿಕೊಳ್ಳುವುದು ನಮ್ಮ ಧ್ಯೇಯವಾಗಿದೆ.

ನೈತಿಕತೆ ಇಲ್ಲದಿರುವುದು ನಮ್ಮ ಅಧ್ಯಕ್ಷರ ಮೂಲ ಸಮಸ್ಯೆ. ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರವು ತರ್ಕ ಅಥವಾ ನೀತಿಗಳಿಗೆ ಅನುಗುಣವಾಗಿ ಇರುವುದಿಲ್ಲ. ಇದ್ದಕ್ಕಿದ್ದಂತೆ, ಮನಸ್ಸಿಗೆ ಅನ್ನಿಸಿದಂತೆ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಓರ್ವ ರಿಪಬ್ಲಿಕನ್ ಆಗಿ ಆಯ್ಕೆಯಾಗಿದ್ದರೂ ಅವರು ಆ ಪಕ್ಷದ ಸಂಪ್ರದಾಯಸ್ಥರು (ಕನ್ಸರ್ವೇಟಿವ್ಸ್) ಬಹುಕಾಲದಿಂದ ಅನುಸರಿಸಿಕೊಂಡು ಬಂದಿರುವ ಸ್ವತಂತ್ರ ಚಿಂತನೆ, ಸ್ವತಂತ್ರ ಮಾರುಕಟ್ಟೆ ಮತ್ತು ಸ್ವತಂತ್ರ ಜನ ಎನ್ನುವ ಸಂಪ್ರದಾಯಸ್ಥರ ಆದರ್ಶಗಳಿಗೆ ಬೆಲೆ ಕೊಡುತ್ತಿಲ್ಲ. ಒಮ್ಮೊಮ್ಮೆ ಅವರು ಈ ಆದರ್ಶಗಳನ್ನು ಕೊಂಡಾಡುತ್ತಾರೆ. ಒಮ್ಮೊಮ್ಮೆ ಬೇಕಾಬಿಟ್ಟಿಯಾಗಿ ಬೈದಾಡುತ್ತಾರೆ.

‘ಮಾಧ್ಯಮಗಳು ಜನರ ಶತ್ರು’ ಎಂದು ಹೋದಲ್ಲಿ ಬಂದಲ್ಲಿ ಹೇಳುವ, ಹಾಗೆಂದು ನಂಬಿಸಲು ಯತ್ನಿಸುವ ಟ್ರಂಪ್ ಅವರ ಅಭಿಪ್ರಾಯಗಳು ಅಮೆರಿಕದ ವ್ಯಾಪಾರ ಹಿತಾಸಕ್ತಿ ಮತ್ತು ಸ್ವತಂತ್ರ ಪ್ರಜಾಪ್ರಭುತ್ವಕ್ಕೆ ಒಳಿತು ಮಾಡುವಂತಿಲ್ಲ. 

ನಾನು ಇನ್ನೂ ಒಂದು ಮಾತು ಹೇಳಬೇಕು. ನಾನು ಹೀಗೆ ಹೇಳಿದೆ ಎಂದು ನನ್ನನ್ನು ತಪ್ಪುತಿಳಿಯಬೇಡಿ. ಮಾಧ್ಯಮಗಳು ಟ್ರಂಪ್ ಆಡಳಿತದ ಮೇಲೆ ಮುಗಿಬಿದ್ದಿವೆ. ತಡೆಯಿಲ್ಲದ ಟೀಕೆಗಳ ನಡುವೆ ಟ್ರಂಪ್ ಆಡಳಿತದ ಎಷ್ಟೋ ಸಾಧನೆಗಳು ಗಣನೆಗೇ ಬರಲಿಲ್ಲ. ಆರ್ಥಿಕ ಉದಾರೀಕರಣ, ಐತಿಹಾಸಿಕ ತೆರಿಗೆ ಸುಧಾರಣೆಗಳು, ಬಲಶಾಲಿ ಮಿಲಿಟರಿಯ ಬಗ್ಗೆ ನಮ್ಮ ಮಾಧ್ಯಮಗಳು ಮಾತನಾಡುತ್ತಲೇ ಇಲ್ಲ. 

ಈ ಯಶಸ್ಸು ಸಾಧ್ಯವಾಗಲು ಟ್ರಂಪ್ ಅವರ ಅಪಕ್ವ ಪೆದ್ದು ನಿರ್ಧಾರಗಳನ್ನು ತೆಗೆದುಕೊಳ್ಳುವ ದುಡುಕು ನಾಯಕತ್ವಶೈಲಿ ಖಂಡಿತ ಕಾರಣವಲ್ಲ. ನನ್ನ ಈ ಮಾತನ್ನು ಶ್ವೇತಭವನದಿಂದ ಹಿಡಿದು ಅಮೆರಿಕದ ವಿವಿಧೆಡೆ ಇರುವ ಎಲ್ಲ ಇಲಾಖೆಗಳ ಅಧಿಕಾರಿಗಳು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ತಮ್ಮ ಮುಖ್ಯಸ್ಥನ ಹೇಳಿಕೆಗಳು ಮತ್ತು ಕಾರ್ಯದ ಬಗ್ಗೆ ಒಂದು ರೀತಿಯ ಅಪನಂಬಿಕೆ ಅವರಲ್ಲಿ ಬೆಳೆದಿದೆ. ಹೀಗಾಗಿಯೇ  ತಮ್ಮ ಕಾರ್ಯರ್ವಹಣೆಯಲ್ಲಿ ಟ್ರಂಪ್ ಅವರ ಹುಚ್ಚಾಟಗಳು ನುಸುಳದಂತೆ ಎಚ್ಚರವಹಿಸುತ್ತಿದ್ದಾರೆ.

ನಾನು ಏಕೆ ಹೀಗೆ ಹೇಳುತ್ತಿದ್ದೇನೆ ಎಂದು ಅರ್ಥವಾಗಬೇಕಾದರೆ ಟ್ರಂಪ್ ಅವರು ಸಭೆ ನಡೆಸುವ ವೈಖರಿಯನ್ನು ನಿಮಗೆ ಪರಿಚಯಿಸಬೇಕು. ವಿಷಯಕೇಂದ್ರಿತವಾಗಿ ಸಭೆಗಳನ್ನು ನಡೆಸುವುದೇ ಟ್ರಂಪ್ ಅವರಿಂದ ಸಾಧ್ಯವಿಲ್ಲ. ಮೀಟಿಂಗ್‌ಗಳು ವಿಷಯಾಂತರವಾಗಿ ಹಳಿತಪ್ಪುತ್ತವೆ. ತಮ್ಮ ಅಭಿಪ್ರಾಯವನ್ನು ನೆರವಾಗಿ ಮಂಡಿಸುವುದಿಲ್ಲ. ಉದ್ದುದ್ದ ಉಪನ್ಯಾಸಗಳನ್ನು ಮಾಡುತ್ತಾರೆ. ‘ನನ್ನ ಮನಸ್ಸಿಗೆ ಹೀಗೆ ಅನ್ನಿಸಿತು’ ಎಂದು ನಿರ್ಧಾರವೊಂದು ತೆಗೆದುಕೊಳ್ಳುತ್ತಾರೆ. ಹೀಗಾಗಿಯೇ ಅವರ ಮೀಟಿಂಗ್‌ಗಳಿಂದ ಅರೆಬೆಂದ, ಸೂಕ್ತ ಮಾಹಿತಿಯ ಆಧಾರವಿಲ್ಲದ ಹುಚ್ಚು ನಿರ್ಧಾರಗಳು ಹೊರಬೀಳುತ್ತವೆ. ಅನೇಕ ಬಾರಿ ಅವನ್ನು ಮತ್ತೆ ಹಿಂಪಡೆಯಬೇಕಾಗುತ್ತದೆ ಅಥವಾ ಬದಲಿಸಬೇಕಾಗುತ್ತದೆ.

‘ನಮ್ಮ ಅಧ್ಯಕ್ಷರ ಮನಸ್ಸು ಕ್ಷಣಚಿತ್ತ–ಕ್ಷಣಪಿತ್ತ. ಒಂದು ಕ್ಷಣ ಇದ್ದಂತೆ ಮತ್ತೊಂದು ಕ್ಷಣ ಇರುವುದಿಲ್ಲ’ ಎಂದು ಶ್ವೇತಭವನದಲ್ಲಿ ಈಚೆಗಷ್ಟೇ ಒಂದು ಮುಖ್ಯ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರು ನನ್ನೊಡನೆ ಅಭಿಪ್ರಾಯ ಹಂಚಿಕೊಂಡಿದ್ದರು. ನೀತಿಯೊಂದರ ಕುರಿತು ಕೇವಲ ಒಂದು ವಾರದ ಹಿಂದೆ ತಾವು ತೆಗೆದುಕೊಂಡಿದ್ದ ನಿರ್ಧಾರಕ್ಕೆ ಅಧ್ಯಕ್ಷರು ಆ ಮೀಟಿಂಗ್‌ನಲ್ಲಿ ಉಲ್ಟಾ ಹೊಡೆದಿದ್ದರು. ಹೀಗಾಗಿಯೇ ಆ ಅಧಿಕಾರಿ ‘ಕ್ಷಣಚಿತ್ತ–ಕ್ಷಣಪಿತ್ತ’ ಎಂದು ಉದ್ಗರಿಸಿದ್ದು.

ಶ್ವೇತಭವನದ ಹೊರಗೆ ಮತ್ತು ಒಳಗೆ ಕೆಲವರು ತಮ್ಮಪಾಡಿಗೆ ತಾವು ದೇಶದ ಹಿತಾಸಕ್ತಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಯಾರ ಕಣ್ಣಿಗೂ ಬೀಳದ ಇಂಥ ಹೀರೊಗಳು ಇರುವುದರಿಂದಲೇ ಅಧ್ಯಕ್ಷರ ತಿಕ್ಕಲುತನ ದೇವನ್ನು ಅಷ್ಟಾಗಿ ಬಾಧಿಸುತ್ತಿಲ್ಲ. ಅಧ್ಯಕ್ಷರ ಅಧೀನದಲ್ಲಿರುವ ಕೆಲ ಅಧಿಕಾರಿಗಳನ್ನು ಮಾಧ್ಯಮಗಳು ಖಳರಂತೆ ಬಿಂಬಿಸುತ್ತಿದೆ. ಆದರೆ ಖಾಸಗಿಯಾಗಿ ಅವರು ಅಧ್ಯಕ್ಷರ ಕೆಟ್ಟ ನಿರ್ಧಾರಗಳಿದ ದೇಶದ ಹಿತಕ್ಕೆ ಧಕ್ಕೆ ಬಾರದಂತೆ ಮಾಡಲು ಶ್ರಮಿಸುತ್ತಿದ್ದಾರೆ. ಎಲ್ಲ ಸಂದರ್ಭಗಳಲ್ಲಿಯೂ ಅವರ ಯತ್ನ ಸಫಲವಾಗುವುದಿಲ್ಲ ಎನ್ನುವುದು ಬೇರೆ ಮಾತು.

ಶ್ವೇತಭವನದ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಭೆಗಳಲ್ಲಿ ತಾರ್ಕಿವಾಗಿ ಯೋಚಿಸಬಲ್ಲ ಪ್ರೌಢರೂ ಇರುತ್ತಾರೆ. ಏನಾಗುತ್ತಿದೆ? ಯಾವುದು ಸರಿ? ಯಾವುದು ತಪ್ಪು? ಎನ್ನುವುದು ಡೊನಾಲ್ಡ್‌ ಟ್ರಂಪ್ ಅವರಿಗೆ ಅರ್ಥವಾಗದಿದ್ದರೂ ನಮಗೆ ಅರ್ಥವಾಗುತ್ತದೆ. ಗೋಜಲಾಗಿರುವ ಆಡಳಿತ ವ್ಯವಸ್ಥೆಯಲ್ಲಿ, ಸದ್ಯದ ಮಟ್ಟಿಗೆ ಅಮೆರಿಕನ್ನರಿಗೆ ಇದು ತುಸು ಸಮಾಧಾನ ನೀಡುವ ಸಂಗತಿ.

ಇದರ ಪರಿಣಾಮವಾಗಿ ಅಧ್ಯಕ್ಷರ ಅಧಿಕಾರ ಈಗ ಎರಡು ಹಳಿಗಳಲ್ಲಿ ಸಾಗುತ್ತಿದೆ. ಉದಾಹರಣೆಗೆ ವಿದೇಶಾಂಗ ನೀತಿಯನ್ನು ಗಮನಿಸಿ: ಹೊರ ಜಗತ್ತಿಗೆ ಕಾಣುವುದು ಒಂದು, ವಾಸ್ತವವಾಗಿ ಜಾರಿಯಲ್ಲಿರುವುದು ಮತ್ತೊಂದು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರಂಥ ನಿರಂಕುಶ ಅಧಿಕಾರಿಗಳು ಮತ್ತು ಸರ್ವಾಧಿಕಾರಿಗಳಿಗೆ ಅಧ್ಯಕ್ಷ ಟ್ರಂಪ್ ಮಣೆ ಹಾಕುತ್ತಾರೆ. ನಮ್ಮ ಸಮಾನ ಮನಸ್ಕ ದೇಶಗಳ ಜೊತೆಗೆ ಹೊಂದಿರುವ ಸಂಬಂಧದ ಬಗ್ಗೆ ಅತಿಕಡಿಮೆ ಮೆಚ್ಚುಗೆ ಮಾತುಗಳನ್ನು ಆಡುತ್ತಾರೆ.

ಆದರೆ ಅದೇ ಅಧ್ಯಕ್ಷರ ಅಧೀನದಲ್ಲಿರುವ ಆಡಳಿತ ಮಾಡುತ್ತಿರುವುದೇನು? ಬೇರೆ ದೇಶಗಳ ವಿದ್ಯಮಾನಗಳಲ್ಲಿ ಅನಗತ್ಯವಾಗಿ ಮೂಗುತೂರಿಸಿದ ಕಾರಣಕ್ಕೆ ರಷ್ಯಾದಂಥ ದೇಶಗಳನ್ನು ಪ್ರತ್ಯೇಕಿಸಿ ಶಿಕ್ಷಿಸಲಾಗುತ್ತಿದೆ. ವಿಶ್ವದ ವಿವಿಧೆಡೆ ಇರುವ ಮಿತ್ರರಾಷ್ಟ್ರಗಳನ್ನು ಸಮಾನವಾಗಿ ಕಾಣಲಾಗುತ್ತಿದೆ.

ಬ್ರಿಟನ್‌ನಲ್ಲಿ ಮಾಜಿ ಗೂಢಚಾರಿಯೊಬ್ಬನನ್ನು ವಿಷ ಹಾಕಿ ಕೊಂದಿದ್ದಕ್ಕೆ ಪ್ರತಿಯಾಗಿ ಅಮೆರಿಕದಲ್ಲಿದ್ದ ರಷ್ಯನ್ ಗೂಢಚರರನ್ನು ದೇಶದಿಂದ ಹೊರಗೆ ಹಾಕಲು ಟ್ರಂಪ್ ಹಿಂಜರಿದರು. ಹೀಗೆ ಮಾಡುವುದರಿಂದ ರಷ್ಯಾದ ಜೊತೆಗೆ ಮತ್ತಷ್ಟು ಸಂಘರ್ಷ ಉಂಟಾಗಬಹುದು ಎಂಬುದು ಅವರ ಹಿಂಜರಿಕೆಗೆ ಕಾರಣವಾಗಿತ್ತು. ಆದರೆ ಇನ್ನೊಂದೆಡೆ ‘ಇಷ್ಟು ಕೆಟ್ಟ ಮಾಡಿದ್ದಕ್ಕಾಗಿ ಆ ದೇಶದ ವಿರುದ್ಧ ನಿರ್ಬಂಧ ಹೇರುತ್ತೇನೆ’ ಎಂದು ಬಡಬಡಿಸಿದರು. ರಷ್ಯಾಕ್ಕೆ ತನ್ನ ತಪ್ಪು ಅರಿವಾಗುವಂತೆ ಮಾಡಲು ಇಂಥ ದಿಟ್ಟ ಕ್ರಮಗಳು ಅನಿವಾರ್ಯ ಎಂಬುದು ರಾಷ್ಟ್ರೀಯ ಭದ್ರತಾ ತಂಡಕ್ಕೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿಯೇ ಟ್ರಂಪ್ ಅವರ ತಾರಾಗಿಗಡಿ ಹೆಚ್ಚು ಪರಿಣಾಮ ಬೀರಲಿಲ್ಲ.

ಇದು ಆಡಳಿತ ವ್ಯವಸ್ಥೆಯಲ್ಲಿ ಬಹುಕಾಲದಿಂದ ಝಾಂಡಾ ಹೊಡೆದುಕೊಂಡಿರುವ ಪ್ರಭಾವಿ ಅಧಿಕಾರಿಗಳ ಗುಂಪು ಸ್ವಹಿತಾಸಕ್ತಿಗಾಗಿ ಮಾಡಿದ ಕೆಲಸವಲ್ಲ. ಇದು ಸರ್ಕಾರದಲ್ಲಿರುವ ಬದ್ಧ ಅಧಿಕಾರಿಗಳು ನಡೆದುಕೊಂಡ ರೀತಿ.

ದೇಶದಲ್ಲಿರುವ ಅಸ್ಥಿರತೆಯನ್ನು ಗಮನಿಸಿದ ಸಂಪುಟ ಸದಸ್ಯರು ಸಂವಿಧಾನದ 25ನೇ ತಿದ್ದುಪಡಿಯನ್ನು ಅನುಸರಿಸಿ, ಅಧ್ಯಕ್ಷರನ್ನು ಅಧಿಕಾರಚ್ಯುತರನ್ನಾಗಿಸುವ ಪ್ರಯತ್ನ ಆರಂಭಿಸಲಿದ್ದಾರೆ ಎನ್ನುವ ಗುಸುಗುಸು ಕೆಲ ಸಮಯದ ಹಿಂದೆ ಕೇಳಿ ಬರುತ್ತಿತ್ತು. ಆದರೆ ತಮ್ಮ ಅಪಕ್ವ ನಡೆಯಿಂದ ಸಾಂವಿಧಾನ್ಮಕ ಬಿಕ್ಕಟ್ಟು ಉಂಟಾಗುವುದು ಯಾರಿಗೂ ಇಷ್ಟವಿರಲಿಲ್ಲ. ಹೀಗಾಗಿಯೇ ನಾವು ಆಡಳಿತವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಲು ಒಂದಲ್ಲಾ ಒಂದು ದಾರಿಯಲ್ಲಿ ಶ್ರಮಿಸುತ್ತಿದ್ದೇವೆ. ನಮ್ಮ ಕೈಲಿ ಮಾಡಲು ಆಗುವುದು ಇದಿಷ್ಟೇ.

ಅಧ್ಯಕ್ಷರಾಗಿ ಟ್ರಂಪ್ ಅವರು ಈ ದೇಶಕ್ಕೆ ಎಷ್ಟು ಹಾನಿ ಮಾಡಿದರು ಎನ್ನುವುದಕ್ಕಿಂತ ನಾವು ಒಂದು ದೇಶವಾಗಿ ಅವರಿಗೆ ಹೀಗೆಲ್ಲಾ ಮಾಡಲು ಅವಕಾಶ ಕೊಟ್ಟೆವಲ್ಲಾ ಎಂಬ ಸಂಗತಿಯತ್ತ ಈಗ ಗಮನ ಕೊಡಬೇಕಿದೆ. ಈಗ ಟ್ರಂಪ್ ಅವರೊಬ್ಬರೇ ಮುಳುಗುತ್ತಿಲ್ಲ. ಅವರ ಜೊತೆಗೆ ನಾವೆಲ್ಲರೂ ಮುಳುಗುತ್ತಿದ್ದೇವೆ. ನಾಗರಿಕ ಪ್ರಜ್ಞೆಯಿಂದಲೂ ನಾವು ನಿಧನಿಧಾನವಾಗಿ ಕೆಳಕೆಳಗೆ ಹೋಗುತ್ತಿದ್ದೇವೆ.

ಸೆನೆಟರ್ ಜಾನ್ ಮೆಕ್‌ಕ್ಲೈನ್ ತಮ್ಮ ವಿದಾಯದ ಪತ್ರದಲ್ಲಿ ಈ ಮಾತನ್ನು ಅತ್ಯಂತ ಸ್ಪಷ್ಟವಾಗಿ ದಾಖಲಿಸಿದ್ದಾರೆ. ಎಲ್ಲ ಅಮೆರಿಕನ್ನರು ಅವರ ಮಾತುಗಳನ್ನು ಗಮನಕೊಟ್ಟು ಅರ್ಥಮಾಡಿಕೊಳ್ಳಬೇಕು. ಈ ಅರಣ್ಯರಾಜ್ಯದ ಮೋಹಕ ಬಲೆಯಿಂದ ತಪ್ಪಿಸಿಕೊಳ್ಳಬೇಕು. ನಮ್ಮನ್ನು ಒಗ್ಗೂಡಿಸಿದ ಮೌಲ್ಯಗಳು ಮತ್ತು ದೇಶಪ್ರೇಮವೇ ನಮ್ಮಲ್ಲಿ ಒಗ್ಗಟ್ಟು ಮೂಡಿಸುವ ಸಾಧನವಾಗಬೇಕು.

ಸೆನಟರ್ ಮೆಕ್‌ಕ್ಲೈನ್ ಅವರಂಥವರು ಇಂದು ಅಧಿಕಾರದಲ್ಲಿ ಇಲ್ಲದಿರಬಹುದು. ಆದರೆ ಅವರ ಉದಾಹರಣೆ ಮಾತ್ರ ಸದಾ ನಮ್ಮೆದುರು ಇರುತ್ತದೆ. ಸಾರ್ವಜನಿಕ ಬದುಕು ಮತ್ತು ರಾಷ್ಟ್ರೀಯ ಸಂವಾದವನ್ನು ಕಾಪಾಡಿಕೊಳ್ಳಲು ಅದೊಂದು ಪಥದರ್ಶಕ ನಕ್ಷತ್ರ (ಗೈಡಿಂಗ್ ಸ್ಟಾರ್). ಅವರಂಥ ಗಟ್ಟಿ ಮನುಷ್ಯನ ಬಗ್ಗೆ ಟ್ರಂಪ್‌ಗೆ ಭಯ ಇರಬಹುದು. ನಮಗೆ ಮಾತ್ರ ಗೌರವ ಮತ್ತು ಕಾಳಜಿ ಇರಬೇಕು.

ದೇಶಮೊದಲು ಎನ್ನುವ ಅನೇಕ ಜನರು ಆಡಳಿತ ಭಾಗವಾಗಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಟ್ರಂಪ್ ಅಧಿಕಾರದೊಂದಿಗೆ ನಿರಂತರ ಸಂಘರ್ಷ ನಡೆಸುತ್ತಿದ್ದಾರೆ. ಸಾಮಾನ್ಯ ಜನರು ಪ್ರತಿದಿನದ ರಾಜಕಾರಣದಿಂದ ಮೇಲೆದ್ದಾಗ, ಒಳಿತಿಗಾಗಿ ತುಡಿಯುವ ದಾರಿ ತುಳಿದಾಗ, ‘ನಾನು ಅಮೆರಿಕನ್, ನನಗೆ ಅಮೆರಿಕದ ಹಿಸಾಸಕ್ತಿ ಮುಖ್ಯ’ ಎಂದುಕೊಂಡಾಗ ನಿಜವಾದ ಬದಲಾವಣೆ ಖಂಡಿತ ಸಾಧ್ಯವಾಗುತ್ತದೆ.

(ಅನುವಾದ: ಡಿ.ಎಂ. ಘನಶ್ಯಾಮ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.