ಗುರುವಾರ , ಜೂಲೈ 2, 2020
28 °C

ಫೀವರ್ ಕ್ಲಿನಿಕ್‌ಗಳ ಮಹತ್ವ

ಡಾ.ಸ್ಮಿತಾ ಜೆ.ಡಿ. Updated:

ಅಕ್ಷರ ಗಾತ್ರ : | |

ನೋವೆಲ್ ಕೊರೊನಾ ವೈರಾಣುವಿನ ಸೋಂಕನ್ನು ಹರಡದಂತೆ ತಡೆಗಟ್ಟಲು ಪ್ರಪಂಚಾದ್ಯಂತ ಹಲವು ದೇಶಗಳು ಹರಸಾಹಸ ಮಾಡುತ್ತಿವೆ. ಅಧ್ಯಯನಗಳ ಪ್ರಕಾರ ಕೊರೊನಾ ವೈರಾಣುವಿನ ಹತ್ತು ತಳಿಗಳನ್ನು ಕಂಡುಹಿಡಿಯಲಾಗಿದೆ. ಭಾರತದ ಶೇ 47.5 ಕೊರೊನಾ ಸೋಂಕಿತರಲ್ಲಿ ಕಂಡುಬಂದಿರುವ ತಳಿಯೆಂದರೆ 'A2a'.  

ಬೇರೆ ಎಲ್ಲಾ  ದೇಶಗಳಿಗೆ ಹೋಲಿಸಿದರೆ ಭಾರತವು ಈ ಸನ್ನಿವೇಶವನ್ನು ಬಹಳ ದಕ್ಷವಾಗಿ ನಿಭಾಯಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಆಸ್ಪತ್ರೆಗಳ ಹಾಗೂ ಆರೋಗ್ಯ ಸೇವೆಗಳ ದಕ್ಷ ಯೋಜನೆಗಳು ಹಾಗೂ ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ. ಹಳ್ಳಿಹಳ್ಳಿಗಳಲ್ಲಿ ನೆಲೆಯಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಗಳು. ವಿಶ್ವದ ಕೆಲವು ಮುಂದುವರಿದ ದೇಶಗಳಲ್ಲಿ ಲಭ್ಯವಿರುವ ಆಧುನಿಕ ಚಿಕಿತ್ಸಾ ಕ್ರಮಗಳು ನಮ್ಮಲ್ಲಿ ಕಡಿಮೆಯಿದ್ದರೂ ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸುವಲ್ಲಿ  ಯಶಸ್ವಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಸಾರ್ವಜನಿಕ ಆರೋಗ್ಯ ವ್ಯವಸ್ಥೆ.

ಫೀವರ್ ಕ್ಲಿನಿಕ್‌ನ ಮಹತ್ವ

ಕೋವಿಡ್-19 ಸಮುದಾಯದಲ್ಲಿ ಕಾಡ್ಗಿಚ್ಚಿನಂತೆ ಹರಡುವ ಸೊಂಕು ಎಂದು ಮನಗಂಡ ಸರ್ಕಾರವು ಸೋಂಕಿತ ವ್ಯಕ್ತಿಗಳನ್ನು ಆದಷ್ಟು ಬೇಗನೆ ಸಾಮಾನ್ಯ ಜನರಿಂದ ಬೇರ್ಪಡಿಸುವ ಮಾರ್ಗವಾಗಿ ಫೀವರ್ ಕ್ಲಿನಿಕ್‌ಗಳ ಮೊರೆ ಹೋಯಿತು. ಫೀವರ್ ಕ್ಲಿನಿಕ್‌ಗಳು ಪ್ರಾಮುಖ್ಯತೆಯನ್ನು ಹೀಗೆ ವಿವರಿಸಬಹುದು.

* ತುರ್ತು ಪರಿಸ್ಥಿತಿಗಳನ್ನು ಕಡಿಮೆ ಮಾಡಲು ಏಕೈಕ ಮಾರ್ಗ ಫೀವರ್ ಕ್ಲಿನಿಕ್‌ಗಳು.

* ತಕ್ಷಣವೇ ಕೋವಿಡ್-19 ಸೋಂಕಿತ ವ್ಯಕ್ತಿಗಳನ್ನು ಪ್ರತ್ಯೇಕಿಸಲು.

* ಚಿಕಿತ್ಸೆಯ ಸರದಿಯನ್ನು ನಿರ್ಧಾರ ಮಾಡಲು (Triage System).

* ಕೋವಿಡ್-19 ಶಂಕಿಸಲಾದ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲು.

* ಕೋವಿಡ್-19 ಸೋಂಕಿತ ವ್ಯಕ್ತಿಗಳ ಪ್ರಥಮ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕಗಳನ್ನು ಪ್ರತ್ಯೇಕಿಸಲು.

ಮಾರ್ಗಸೂಚಿಗಳು

ಫೀವರ್ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ...

* ಗಾಳಿ, ಬೆಳಕು ಹೇರಳವಾಗಿ ಇರುವ ಸ್ಥಳಗಳಲ್ಲಿ ಸ್ಥಾಪಿಸಬೇಕಿದೆ.

* ರೋಗಿಗಳು ನೇರವಾಗಿ ಫೀವರ್ ಕ್ಲಿನಿಕ್‌ಗಳನ್ನು ಸಂಪರ್ಕಿಸಬಹುದಾದ ಸ್ಥಳಗಳಲ್ಲಿ ಸ್ಥಾಪಿಸಬೇಕಾಗಿದೆ.

* ಫೀವರ್ ಕ್ಲಿನಿಕ್‌ಗೆ ಬರುವ ರೋಗಿಗಳನ್ನು ಸಾಮಾನ್ಯ ರೋಗಿಗಳೊಂದಿಗೆ ಬೆರೆಯದಂತೆ ನಿಗಾವಹಿಸಬೇಕಾಗಿದೆ.

ಫೀವರ್ ಕ್ಲಿನಿಕ್‌ನ ಪ್ರದೇಶಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಸ್ವಾಗತ ಕೇಂದ್ರ, ಕಾಯುವ ಪ್ರದೇಶ, ಸ್ಕ್ರೀನಿಂಗ್ ಪ್ರದೇಶ.

ಬಂದ ಎಲ್ಲಾ ರೋಗಿಗಳಿಗೆ ಕೈಗೆ ಸ್ಯಾನಿಟೈಸರ್, ಮಾಸ್ಕ್‌ಗಳನ್ನು ಹಾಗೂ ಕೋವಿಡ್-19ರ ಬಗ್ಗೆ ಮಾಹಿತಿ ಇರುವ ಕೈ ಚೀಟಿಯನ್ನು ಕೊಡಲಾಗುತ್ತದೆ. ರೋಗಿಗಳು ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಶಾರೀರಿಕ ತಾಪಮಾನವನ್ನು ಥರ್ಮಲ್ ಡಿಟೆಕ್ಟರ್‌ಗಳ ಮೂಲಕ ಕಂಡುಹಿಡಿಯಲಾಗುವುದು. ನಂತರ ವೈದ್ಯರಿಂದ ರೋಗಿಯ ಸಂಪರ್ಕರಹಿತ ತಪಾಸಣೆಯಾಗುತ್ತದೆ. ಅವಶ್ಯಕತೆ ಇದ್ದಲ್ಲಿ ಮಾತ್ರ ವೈಯಕ್ತಿಕ ರಕ್ಷಣಾ ಪರಿಕರಗಳೊಂದಿಗೆ ರೋಗಿಯ ತಪಾಸಣೆ ಮಾಡಲಾಗುತ್ತದೆ.

ಅನುಮಾನಾಸ್ಪದ ರೋಗಿಗಳಲ್ಲಿ ಗಂಟಲು ಅಥವಾ ಮೂಗಿನ ಸ್ವಾಬ್‌ಗಳನ್ನು ತೆಗೆದು ಕೋವಿಡ್ ಟೆಸ್ಟಿಂಗ್ ಮಾಡಲಾಗುತ್ತದೆ.

ಕೋವಿಡ್-19 ಸೋಂಕಿತ ವ್ಯಕ್ತಿಗಳನ್ನು ಕಂಡುಹಿಡಿದು ಲಕ್ಷಣಗಳ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆಯ ಸರದಿಯನ್ನು ನಿರ್ಧಾರ ಮಾಡುವುದು ಫೀವರ್ ಕ್ಲಿನಿಕ್‌ಗಳ ಮುಖ್ಯ ಉದ್ದೇಶವಾಗಿದೆ.

ಸ್ವಾಬ್‌ಗಳನ್ನು ಟೆಸ್ಟಿಂಗ್‌ಗಳಿಗೆ ಕಳುಹಿಸಿದ ವ್ಯಕ್ತಿಗಳನ್ನು ಪರೀಕ್ಷಾ ಫಲಿತಾಂಶಗಳು ಬರುವ ತನಕ ಸ್ವಯಂ ಪ್ರತ್ಯೇಕಿಸಿಕೊಳ್ಳಲು ಮನವಿ ಮಾಡಲಾಗುತ್ತದೆ.

ಕೋವಿಡ್-19 ಸೋಂಕು ಖಚಿತವಾದ ವ್ಯಕ್ತಿಗಳನ್ನು ಪ್ರತ್ಯೇಕಿಸಿ ಸೋಂಕಿನ ಲಕ್ಷಣಗಳ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆಯ ಆದ್ಯತೆ ನಿರ್ಧರಿಸಲಾಗುವುದು. ಲಕ್ಷಣಗಳು ಸೌಮ್ಯವಿದ್ದಲ್ಲಿ  ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಲಕ್ಷಣಗಳು ಮಧ್ಯಮ ಇದ್ದಲ್ಲಿ ಮೀಸಲಾದ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು.

ತೀವ್ರತರ ರೋಗಲಕ್ಷಣಗಳಿದ್ದರೆ ಮೀಸಲಾದ, ಐಸಿಯು ಹಾಗೂ ವೆಂಟಿಲೇಟರ್‌ಗಳ ವ್ಯವಸ್ಥೆ ಇರುವ ಮೀಸಲು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು.

ಸರ್ಕಾರವು ಕೆಲವು ಜಿಲ್ಲೆಗಳಲ್ಲಿ ಮೊಬೈಲ್ ಜ್ವರ ಕ್ಲಿನಿಕ್‌ಗಳು, ಟೆಲಿಮೆಡಿಸನ್ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಸಾರ್ವಜನಿಕರು ಇವುಗಳ ಸಂಪೂರ್ಣ ಉಪಯೋಗಗಳನ್ನು ಪಡೆಯಬೇಕಾಗಿದೆ. ಸರ್ಕಾರವು ವಿಧಿಸುವ ನಿಯಮಗಳನ್ನು ಅನುಸರಿಸುವುದು ಜನರ ಆದ್ಯ ಕರ್ತವ್ಯ. ಕೋವಿಡ್-19ರ ವಿರುದ್ಧದ ಯುದ್ಧವನ್ನು ಗೆಲ್ಲಲು ನಾವೆಲ್ಲರೂ ಸರ್ಕಾರದೊಂದಿಗೆ ಕೈ ಜೋಡಿಸಬೇಕಾಗಿದೆ.

ಲೇಖಕರು: ದಂತ ವೈದ್ಯಾಧಿಕಾರಿ, ಗುಂಡ್ಲುಪೇಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು