ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಮೀಸಲಾತಿ ‘ಮತ’ ಮಂತ್ರ‘ದಂಡ’

Last Updated 2 ಸೆಪ್ಟೆಂಬರ್ 2020, 20:15 IST
ಅಕ್ಷರ ಗಾತ್ರ

ಬಿಜೆಪಿಯು ಪೂರ್ಣಬಲದಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದು, ರಾಜ್ಯಗಳನ್ನು ವ್ಯಾಪಿಸಿಕೊಳ್ಳತೊಡಗಿದ ಮೇಲೆ ಮೀಸಲಾತಿಯ ಅಸಲು ವ್ಯಾಖ್ಯಾನವೇ ಬದಲಾಗತೊಡಗಿದೆ. ಮಂಡಲ ವರದಿಗೆ ‘ಹಿಂದುತ್ವ ಕಮಂಡಲ’ದ ಪ್ರತ್ಯಸ್ತ್ರ ಬಳಸಿದ ಕಮಲ ಪಕ್ಷದ ನಾಯಕರು, ಬಾಯಿ ಮಾತಿನಲ್ಲಷ್ಟೇ ಮೀಸಲಾತಿಯ ಪರ ಇರುವುದು ರಹಸ್ಯವೇನಲ್ಲ. ತುಳಿತಕ್ಕೆ ಒಳಗಾದವರ ಬಾಳಿನಲ್ಲಿ ತಮಗೂ ಭವಿಷ್ಯವಿದೆ ಎಂಬ ಕೆಂಬೆಳಕು ಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್‌ ರೂಪಿಸಿದ ಸಂವಿಧಾನವನ್ನೇ ಬದಲಾಯಿಸುವ ಹೇಳಿಕೆ ನೀಡುತ್ತಿರುವ ‘ಮಹನೀಯ’ರಿಗೆ, ಸಾಮಾಜಿಕ ನ್ಯಾಯದ ಹೆದ್ದಾರಿಯಲ್ಲಿ ಅಂಬೆಗಾಲಿನಂತಿರುವ ಮೀಸಲಾತಿ ಎಷ್ಟು ಅಪಥ್ಯ ಎಂಬುದನ್ನು ಬಿಡಿಸಿ ಹೇಳಲು ಅದು ಒಗಟೇನಲ್ಲ.

ಮೀಸಲಾತಿಯನ್ನೇ ಅ‍ಪ್ರಸ್ತುತಗೊಳಿಸುತ್ತಿರುವ ನಡಾವಳಿಗಳು, ಸರ್ಕಾರಿ ನೌಕರಿಗಳ ಸಂಖ್ಯೆ ಕುಗ್ಗುತ್ತಿರುವ ಹೊತ್ತಿನೊಳಗೆ ಒಳ ಮೀಸಲಾತಿಯ ಪ್ರಶ್ನೆ ಮುನ್ನೆಲೆಗೆ ಬಂದಿದೆ. ದೇಶವನ್ನಾಳುತ್ತಿರುವ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ನೇತಾರರಿಗೆ ಮೀಸಲಾತಿ–ಒಳಮೀಸಲಾತಿ ಎಂಬುದು ಮತ ಗಿಟ್ಟಿಸಿ, ಅಧಿಕಾರದ ಮಜಲು–ಮಹಲುಗಳನ್ನೇರುವ ಮಂತ್ರ‘ದಂಡ’ ಮಾತ್ರ.

ಇನ್ನು ಮೀಸಲಾತಿಯ ಲಾಭ ಪಡೆದವರದ್ದು ಮತ್ತೊಂದು ಕತೆ. ಸಿಕ್ಕ ಏಣಿಯನ್ನು ಬಳಸಿ ಮರ ಏರಿದವರು ಕೆಳಗೆ ನಿಂತವರಿಗೆ ಹಣ್ಣು ಉದುರಿಸು ವುದು ಹೋಗಲಿ, ಮರದ ನೆರಳೂ ಸಿಗದಂತೆ ನೋಡಿಕೊಳ್ಳುತ್ತಾ ಬಂದಿರುವುದು ವಿಪರ್ಯಾಸ.

ಮತ ರಾಜಕೀಯ: ಮೀಸಲಾತಿ ಎಂಬುದು ಆಯಾ ಕಾಲದಲ್ಲಿ ಎದುರಾಗುವ ಚುನಾವಣೆಯಲ್ಲಿ ಸಮುದಾಯವೊಂದರ ಮತವನ್ನು ತನ್ನ ಕಡೆಗೆ ವಾಲಿಸಿಕೊಳ್ಳುವ ಅಸ್ತ್ರವನ್ನಾಗಿ ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿರುವುದು ಹೊಸತೇನಲ್ಲ. 2019ರ ಲೋಕಸಭೆ ಚುನಾವಣೆಗೆ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ (ಮುಖ್ಯವಾಗಿ ಬ್ರಾಹ್ಮಣರು) ಶೇ 10ರಷ್ಟು ಮೀಸಲಾತಿ ಕೊಡುವುದಾಗಿ ಘೋಷಿಸಿ, ಜಾರಿಗೆ ತಂದು ಬಿಟ್ಟರು.

ಒಳಮೀಸಲಾತಿ ವಿಷಯಕ್ಕೆ ಬಂದರೆ, 2005ರಲ್ಲಿ ನ್ಯಾಯಮೂರ್ತಿ ಸಂತೋಷ ಹೆಗ್ಡೆ ನೇತೃತ್ವದ ಐವರು ಸದಸ್ಯರ ನ್ಯಾಯಪೀಠವು, ಪರಿಶಿಷ್ಟ ಜಾತಿಯೊಳಗೆ ವರ್ಗೀಕರಣ ಮಾಡುವುದು ಸರಿಯಲ್ಲ ಎಂದು ತೀರ್ಪು ನೀಡಿತ್ತು. ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಹಾಗೂ ಕಿತ್ತುಹಾಕುವ ಅಥವಾ ಒಳವರ್ಗೀಕರಣ (ಒಳಮೀಸಲಾತಿ) ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದೂ ಆದೇಶಿಸಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಉಷಾ ಮೆಹ್ರಾ ಸಮಿತಿಯು 2008ರಲ್ಲಿ ವರದಿ ನೀಡಿತು. ಒಳಮೀಸಲಾತಿಯನ್ನು ಸಮರ್ಥಿಸಿದ್ದ ಸಮಿತಿ, ಸಂವಿಧಾನಕ್ಕೆ ತಿದ್ದುಪಡಿ ತಂದು ಒಳವರ್ಗೀಕರಣದ ಅಧಿಕಾರ ನೀಡಬಹುದು ಎಂದು ಶಿಫಾರಸು ಮಾಡಿತ್ತು. ಕಾಂಗ್ರೆಸ್‌ ಸರ್ಕಾರ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ; ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಕೂಡ ಈ ಕಡೆ ತಲೆ ಹಾಕಲಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಲು ಎರಡೇ ದಿನದಲ್ಲೇ ನಿರ್ಣಯ ಕೈಗೊಂಡು ಆದೇಶ ಹೊರಡಿಸಿದ ಬಿಜೆಪಿ ಸರ್ಕಾರ, ಉಷಾ ಮೆಹ್ರಾ ವರದಿಯ ಬಗ್ಗೆ ಮಾತ್ರ ಬಿಗುಮೌನ ತಾಳಿ ನಿಂತಿದೆ. ಕರ್ನಾಟಕ ಸರ್ಕಾರ ಶಿಫಾರಸು ಮಾಡಿದ ಬಳಿಕವೂ ತಳವಾರ, ಪರಿವಾರದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒಂದು ವರ್ಷಕ್ಕೂ ಹೆಚ್ಚುಕಾಲ ತೆಗೆದುಕೊಂಡಿತು.

ಕರ್ನಾಟಕದಲ್ಲಿ ಕೂಡ ಬಿಜೆಪಿಯ ಬೆನ್ನಿಗೆ ನಿಂತಿರುವುದು ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯಾತರಾಗಿರುವ ಎಡಗೈ ಮತ್ತು ಪರಿಶಿಷ್ಟ ಪಂಗಡದಲ್ಲಿ ರಾಜಕೀಯ ಪ್ರಾಬಲ್ಯ ಪಡೆದಿರುವ ವಾಲ್ಮೀಕಿ ನಾಯಕ ಸಮುದಾಯದವರು. ‘ಕಾಂಗ್ರೆಸ್‌ ನಾಯಕತ್ವವನ್ನು ಪ್ರಭಾವಿಸುತ್ತಿರುವ ಪರಿಶಿಷ್ಟ ಜಾತಿ ಬಲಗೈ ನಾಯಕರು ಎಡಗೈಯವರಿಗೆ ಅನ್ಯಾಯ ಮಾಡುತ್ತಿದ್ದಾರೆ; ತಾವೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆ’ ಎಂಬ ಸಿಟ್ಟು ಎಡಗೈ ಸಮುದಾಯಕ್ಕೆ ಇದೆ. ಈ ತರತಮದ ನೀತಿಯನ್ನು ಸರಿಪಡಿಸಿಕೊಳ್ಳುವ ಗೋಜಿಗೆ ಕಾಂಗ್ರೆಸ್ ನಾಯಕರು ಹೋಗಲಿಲ್ಲ. ಸಹಜವಾಗಿಯೇ ಎಡಗೈ ಸಮುದಾಯ ಬಿಜೆಪಿ ಜತೆಗೆ ನಿಂತಿತು.

ಬಿಜೆಪಿಯೇನಾದರೂ ಎಡಗೈಯವರಿಗೆ ನ್ಯಾಯ ಕೊಟ್ಟೀತೇ ಎಂದರೆ ಅಲ್ಲಿಯೂ ನಿರಾಸೆಯೇ. 2012ರಲ್ಲಿ ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ನೀಡಿತು. ಬಳಿಕ ಒಂದು ವರ್ಷ ಜಗದೀಶ ಶೆಟ್ಟರ್ ಅಧಿಕಾರದಲ್ಲಿದ್ದರು. ಈಗಲೂ ಬಿಜೆಪಿ ಅಧಿಕಾರಕ್ಕೆ ಬಂದು ವರ್ಷವಾಯಿತು. ಸದಾಶಿವ ಆಯೋಗದ ವರದಿಯನ್ನು ವಿಧಾನಮಂಡಲದದ ಅಧಿವೇಶನದಲ್ಲಿ ಮಂಡಿಸುವ ಕಾಳಜಿಯನ್ನೂ ತೋರಲಿಲ್ಲ. ಚುನಾವಣೆ ಬಂದಾಗಲಷ್ಟೇ ಒಳಮೀಸಲಾತಿ, ಸದಾಶಿವ ಆಯೋಗದ ವರದಿ ಬಿಜೆಪಿಯ ಮಂದಿಗೆ ನೆನಪಾಗುತ್ತದೆ.

ಸದಾಶಿವ ಆಯೋಗದ ವರದಿ ಸಲ್ಲಿಕೆಯಾದ ಬಳಿಕ, ಜಾರಿಗೆ ಆಗ್ರಹಿಸಿ ಎಡಗೈ ಸಮುದಾಯದವರು ಬೃಹತ್ ಸಮಾವೇಶ ನಡೆಸಿದರು. ‘ನಮ್ಮ ಸರ್ಕಾರ ಬಂದರೆ ಮೊದಲ ಅಧಿವೇಶನದಲ್ಲೇ ಸದಾಶಿವ ಆಯೋಗದ ವರದಿಯನ್ನು ಮಂಡಿಸಿ, ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ’ ಎಂದು ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ವಾಗ್ದಾನ ಮಾಡಿದ್ದರು. ಸದಾಶಿವ ಆಯೋಗದ ಹಣೆಬರಹ ಏನಾಯಿತು ಎಂಬುದನ್ನು ಅವರು ಜನರಿಗೆ ಹೇಳಲೇ ಇಲ್ಲ. 2016ರಲ್ಲಿ ಮಾದಿಗ ಸಮುದಾಯದವರು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಏರ್ಪಡಿಸಿದ್ದರು. ಆಗ, ಮತ್ತೆ ಒಳಮೀಸಲಾತಿಯ ಚರ್ಚೆ ಮುನ್ನೆಲೆಗೆ ಬಂದಿತ್ತು. ಸರ್ಕಾರದಲ್ಲಿ ಪ್ರಬಲರಾಗಿದ್ದ ಬಲಗೈ ಸಮುದಾಯದ ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿದರು. ಸಚಿವ ಸಂಪುಟದಲ್ಲಿ ಚರ್ಚೆ ನಡೆಯಿತಾದರೂ ಯಾವುದೇ ನಿರ್ಣಯಕ್ಕೆ ಬರಲೇ ಇಲ್ಲ.

ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲೂ ಪಕ್ಷದ ಒಳಗೆ ಹಾಗೂ ಹೊರಗೆ ಪರ–ವಿರೋಧ ಇತ್ತು. ಅದಕ್ಕಾಗಿ ಸಮಿತಿ ರಚಿಸಿದ ಸರ್ಕಾರ ತ್ವರಿತವಾಗಿ ವರದಿ ಪಡೆದು, ಪ್ರತ್ಯೇಕ ಧರ್ಮ ರಚನೆಯ ಶಿಫಾರಸನ್ನು ಕೇಂದ್ರಕ್ಕೆ ಮಾಡಿತು. ತಮಗೆ ಬೇಕಾಗಿರುವ ನೀತಿಗಳನ್ನು ಜಾರಿ ಮಾಡುವಲ್ಲಿ ತರಾತುರಿ ತೋರುವ ಸರ್ಕಾರ, ಪರಿಶಿಷ್ಟರಿಗೆ ಒಳಮೀಸಲಾತಿ ನೀಡುವ ಸಾಮಾಜಿಕ ನ್ಯಾಯದ ವಿಷಯದತ್ತ ಕಣ್ಣೆತ್ತಿ ಕೂಡ ನೋಡಲಿಲ್ಲ. ಜೆಡಿಎಸ್‌ ನಿಲುವು ಕೂಡ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಮೀಸಲು ನ್ಯಾಯ: ಕರ್ನಾಟಕದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳಿದ್ದರೂ ಅದರಲ್ಲಿ ಹೆಚ್ಚಿನ ಪಾಲನ್ನು ಸ್ಪೃಶ್ಯ ಸಮುದಾಯದವರೇ ಕಬಳಿಸಿದ್ದಾರೆ ಎಂಬ ಟೀಕೆ ಎಡಗೈ ಸಮುದಾಯದವರದ್ದಾಗಿದೆ. ಅದರಲ್ಲೂ ಲಂಬಾಣಿ, ಬೋವಿ ಸಮದಾಯದವರು ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ ಪಾಲು ಗಿಟ್ಟಿಸಿಕೊಂಡಿ ದ್ದಾರೆ. ಅಸ್ಪೃಶ್ಯತೆಯ ನೋವನ್ನೇ ಅನುಭವಿಸದವರಿಗೆ ಮೀಸಲಾತಿಯ ಸೌಲಭ್ಯ ಸಿಕ್ಕಿದೆ; ಸ್ವಾತಂತ್ರ್ಯೋತ್ತರದ 7 ದಶಕಗಳ ಬಳಿಕವೂ ಅಸ್ಪೃಶ್ಯತೆಯ ಕ್ರೌರ್ಯ ಅನುಭವಿಸುತ್ತಿರುವವರು ಪರಕೀಯರಾಗಿಯೇ ಇದ್ದೇವೆ ಎಂಬ ಕೊರಗು ಎಡಗೈನವರದ್ದು.

ಮೀಸಲಾತಿ ಪ್ರಮಾಣವನ್ನು ಶೇ 3ರಿಂದ ಶೇ 7ಕ್ಕೆ ಏರಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಪರಿಶಿಷ್ಟ ಪಂಗಡದವರು ಅಭಿಯಾನ ನಡೆಸುತ್ತಿದ್ದಾರೆ. ಇಲ್ಲಿಯೂ ವಾಲ್ಮೀಕಿ ನಾಯಕರೇ ಹೆಚ್ಚಿನ ಪಾಲು ಪಡೆದಿದ್ದಾರೆ ವಿನಃ ಇತರೆ ಉಪಜಾತಿಗಳಿವರಿಗೆ ನ್ಯಾಯ ಸಿಕ್ಕಿಲ್ಲ ಎಂಬ ಅಸಹನೆಯೂ ಇದೆ.

ಮೀಸಲಾತಿಯ ಪುನರ್ ರಚನೆ, ನ್ಯಾಯದ ಮರುಹಂಚಿಕೆ ಹಾಗೂ ಮೀಸಲಾತಿ ಪ್ರಮಾಣವನ್ನು ಶೇ 50ರಿಂದು ಶೇ 70ಕ್ಕೆ ಹೆಚ್ಚಿಸುವ ಉದ್ದೇಶದಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಡೆಸಿತ್ತು. ಅಷ್ಟರಲ್ಲಿ ಚುನಾವಣೆ ಬಂದಿತು. ಬಳಿಕ ಆಯೋಗವು, ವರದಿಯನ್ನು ಮುಖ್ಯಕಾರ್ಯದರ್ಶಿಗೆ ಸಲ್ಲಿಸಿದೆ. ಆದರೆ, ಅದನ್ನು ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಲು ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರ, ಈಗಿನ ಬಿಜೆಪಿ ಸರ್ಕಾರ ತಯಾರಿಲ್ಲ.

ಬಿಜೆಪಿ ಸರ್ಕಾರ ಈ ವರದಿಯ ಒಪ್ಪುತ್ತದೆಯೋ ಬಿಡುತ್ತದೆಯೋ ಬೇರೆ ವಿಷಯ. ಆದರೆ, ಸಾರ್ವಜನಿಕರ ₹158 ಕೋಟಿ ಇದಕ್ಕಾಗಿ ಖರ್ಚಾಗಿದ್ದು, ಅದರಲ್ಲಿರುವ ಮಾಹಿತಿ ಏನು ಎಂಬುದನ್ನು ಜನರಿಗೆ ಗೊತ್ತು ಮಾಡುವುದು ಸರ್ಕಾರದ ಕರ್ತವ್ಯ. ಮುಂದಿರುವ ಸವಾಲುಗಳನ್ನು ಹಿಮ್ಮೆಟ್ಟಿಸಿ, ಶತಮಾನಗಳಿಂದ ಅವಕಾಶದ ಆಚೆಯೇ ನಿಂತಿರುವ ವಂಚಿತ ಸಮುದಾಯಗಳಿಗೆ ನ್ಯಾಯ ಒದಗಿಸಲು ಇದು ಸಕಾಲ.

ಒಳಮೀಸಲು –ಗೋಜಲು

* ಪರಿಶಿಷ್ಟ ಜಾತಿ ಮೀಸಲಾತಿಯನ್ನು ಸ್ಪೃಶ್ಯ–ಅಸ್ಪೃಶ್ಯರಿಗೆ ಮರುವರ್ಗೀಕರಣ ಮಾಡಿ, ಒಳಮೀಸಲಾತಿ ನೀಡಬೇಕು ಹಾಗೂ ಕೆನೆಪದರ ಜಾರಿ ಮಾಡಬೇಕು ಎಂದು ಶಿಫಾರಸು ಮಾಡಿದೆ ಎನ್ನಲಾದ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ

* ಮೀಸಲಾತಿ ಪ್ರಮಾಣ ಹೆಚ್ಚಿಸಲು ಹಾಗೂ ಅಲಕ್ಷಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಉದ್ದೇಶಕ್ಕೆ ಪೂರಕವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಿದ್ಧಪಡಿಸಿರುವ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಸಮೀಕ್ಷೆಯ ವರದಿ

* ಕೋಲಿ, ಕಬ್ಬಲಿಗ, ತಳವಾರ ಹಾಗೂ ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಸರ್ಕಾರ ಹೊರಡಿಸಿರುವ ಆದೇಶ ಹಾಗೂ ಅದಕ್ಕೆ ಪರಿಶಿಷ್ಟ ಪಂಗಡದ ಪ್ರಬಲ ಉಪಜಾತಿಯ ವಿರೋಧ

* ಪರಿಶಿಷ್ಟ ಪಂಗಡಕ್ಕೆ ಶೇ 3ರಷ್ಟಿರುವ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆ ಆಧಾರದ ಮೇಲೆ ಹೆಚ್ಚಿಸಬಹುದು ಎಂದು ನ್ಯಾ. ಎಚ್.ಎನ್. ನಾಗಮೋಹನದಾಸ್ ಸಮಿತಿ ನೀಡಿದ ವರದಿ

* ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಪರಿಶಿಷ್ಟ ಪಂಗಡಕ್ಕೆ ವರ್ಗಾಯಿಸಬೇಕು ಎಂದು ಕೋರಿ ಕಲಬುರ್ಗಿಯ ಬಿಜೆಪಿ ಸಂಸದ ಉಮೇಶ ಜಾಧವ್ ಅವರು ಕೇಂದ್ರ ಸರ್ಕಾರ, ಲೋಕಸಭೆ ಸಭಾಧ್ಯಕ್ಷರಿಗೆ ಸಲ್ಲಿಸಿರುವ ಪತ್ರ. ಅದರ ಬೆನ್ನಲ್ಲೇ ನಡೆಯುತ್ತಿರುವ ಪತ್ರ ವ್ಯವಹಾರಗಳು

* ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ಆದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT