ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಳಿವಿನ ಬಿತ್ತುಗಳ ತಿಳಿಯದವರು

ನಮ್ಮ ಶತ್ರುಗಳಿಗಾಗಿ ನಿರ್ಮಿಸಿದ ಸಾವಿನ ಮನೆಗೆ ನಮ್ಮ ಮಕ್ಕಳೇ ಪ್ರವೇಶಿಸಿಯಾರು 
Last Updated 25 ಮೇ 2020, 20:15 IST
ಅಕ್ಷರ ಗಾತ್ರ
ADVERTISEMENT
""

ಪ್ರತೀ ವರ್ತಮಾನದಲ್ಲಿ ಹುಟ್ಟುವ ಕಲಾಕೃತಿಗಳು, ಸಾಹಿತ್ಯಗಳು ಭವಿಷ್ಯವನ್ನೂ ಒಳಗೊಂಡಿರುತ್ತವೆ. ಅವುಗಳ ಅಭಿವ್ಯಕ್ತಿ ಮತ್ತು ಆಶಯಗಳ ಕಾರಣಕ್ಕೆ ಅವು ಕಾಲಾತೀತವೂ ಆಗುತ್ತವೆ. ಆ ಮೂಲಕ ಅವು ಇತಿಹಾಸದ ತಪ್ಪುಗಳನ್ನು ಕಾಣಿಸುವ ಮತ್ತು ಎಚ್ಚರಿಸುವ ಗಂಟೆಯೂ ಆಗಿರುತ್ತವೆ. ಆದರೆ ಈ ಎಚ್ಚರಿಕೆಗಳು ನಮಗೇಕೆ ತಟ್ಟುವುದಿಲ್ಲ? ನಮ್ಮ ಕಿವಿಗಳೇಕೆ ತಿಳಿವಿಗೆ ಕಿವುಡಾಗಿರು
ತ್ತವೆ? ಕಲಾಕೃತಿಗಳೆಂದರೆ ಆನಂದದ ಸಾಧನಗಳೆಂಬ ಸೀಮಿತ ನಿಲುವುಗಳಿಂದಾದ ನಿರ್ಲಕ್ಷ್ಯವೇ ಇದಕ್ಕೆ ಕಾರಣವೇ? ಅಥವಾ ಉತ್ಕೃಷ್ಟ ಮಟ್ಟದ ಕಲೆ ಮತ್ತು ಬುದ್ಧಿಜೀವಿಗಳು ಬಹಳ ಮೊದಲೇ ಮುಂಗಾಣುವುದರಿಂದ ಹಾಗೂ ಅದು ಕಹಿಯಾಗಿರುವುದರಿಂದ ತತ್ಕಾಲದಲ್ಲಿ ಜನ ಮತ್ತು ಆಡಳಿತ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೇ? ಮುಂಗಾಣ್ಕೆ ಹೋಗಲಿ, ಹಿಂದೆ ಆಗಿಹೋದದ್ದರ ಕುರಿತು ಮಂಥನ ನಡೆಸುವ ಎಷ್ಟೊಂದು ಚಿಂತನೆಗಳನ್ನೂ ನಾವೇಕೆ ನಿರ್ಲಕ್ಷಿಸುತ್ತೇವೆ?

ಸಬಿತಾ ಬನ್ನಾಡಿ

ದುರಂತಗಳು ಘಟಿಸುತ್ತಲೇ ಇರುತ್ತವೆ. ನಾವು ಮರೆಯುತ್ತಲೇ ಇರುತ್ತೇವೆ. ನಮ್ಮ ಮರೆವು, ದುರಂತದ ಕಾರಣಗಳನ್ನು ಮತ್ತು ಹಲವೊಮ್ಮೆ ದುರಂತಕ್ಕೆ ಕಾರಣರಾದವರನ್ನು ಕಾಪಾಡುತ್ತಲೇ ಇರುತ್ತದೆ. ಇತಿಹಾಸದಲ್ಲಿ ಲೆಕ್ಕವಿಲ್ಲದಷ್ಟು ಪ್ರಾಕೃತಿಕ ವಿಕೋಪಗಳು ಆಗಿಹೋಗಿವೆ. ಕೋಟ್ಯಂತರ ಜೀವಹಾನಿಗಳಾಗಿವೆ. ಕೆಲವು ಪ್ರಾಕೃತಿಕ ದುರಂತಗಳಲ್ಲಿ ಮನುಷ್ಯರ ಕೈವಾಡವಿದೆ. ಅವುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ತಪ್ಪುಗಳು ಮರುಕಳಿಸದಂತೆ ಮಾಡುವುದು ಸಾಧ್ಯ. ಇನ್ನು ಕೆಲವು ಸಲ ಪೂರ್ತಿಯಾಗಿ ಮಾನವನಿರ್ಮಿತ ದುರಂತಗಳಿರುತ್ತವೆ. ಅವಂತೂ ಪುನರಾವರ್ತನೆ ಆಗಲೇಬಾರದು. ಅದಕ್ಕಾಗಿ ನಾವು ಅವುಗಳೆಡೆಗೆ ಮರುಭೇಟಿ ಕೊಡುತ್ತಲೇ ಇರಬೇಕಾಗುತ್ತದೆ. ಹೊಸ ತಲೆಮಾರುಗಳಿಗೆ ಅದರ ಅರಿವು ದಾಟಿಸಬೇಕಾಗುತ್ತದೆ. ಇತಿಹಾಸದಲ್ಲಿ ಆಗಿಹೋದ ಯಹೂದಿಗಳ ಮಾರಣಹೋಮದ ಕಥನಗಳು ನೂರಾರು ಕಲಾಕೃತಿಗಳ ಭಿತ್ತಿಯಾಗಿ ಮರುನಿರ್ಮಾಣಗೊಂಡಿವೆ. ಇವುಗಳನ್ನು ವರ್ತಮಾನದ, ಹೊಸನಾಡು ಕಟ್ಟಿಕೊಂಡು ಇತಿಹಾಸ ಮರೆತಿರುವ ಯಹೂದಿಗಳನ್ನೂ ಸೇರಿಸಿಕೊಂಡು ನಾವೆಲ್ಲರೂ ಮರಳಿ ಮರಳಿ ನೋಡಬೇಕಾಗುತ್ತದೆ. ಯಾಕೆಂದರೆ, ವರ್ತಮಾನದ ಹಲವು ಬೆಳವಣಿಗೆಗಳು ಇತಿಹಾಸದ ಆ ಚಲನೆಗಳೊಂದಿಗೆ ಅತ್ಯಂತ ಸಮೀಪದಲ್ಲಿ ಹೆಜ್ಜೆ ಹಾಕುತ್ತಿರುವುದು ಆಗ ನಮಗೆ ಗೋಚರಿಸುತ್ತದೆ. ನಮ್ಮೊಳಗಿನ ವಿಕೃತಿಯನ್ನು ಉದ್ದೀಪಿಸುವ ಪ್ರಯತ್ನಗಳ ನಡುವೆ ನಾವು ನಮ್ಮೊಳಗಿನ ಕರುಣೆ, ಮೈತ್ರಿಗಳನ್ನು ಉದ್ದೀಪಿಸಿಕೊಳ್ಳಲು ಅವು ನೆರವಾಗಬಹುದು.

ಲಾಕ್‍ಡೌನ್ ಸಮಯದಲ್ಲಿ ಓದಿದ ಹಲವು ಓದುಗಳು ಮತ್ತು ನೋಡುಗಳಲ್ಲಿ ನನ್ನನ್ನು ಕಾಡಿದ್ದು ಈ ಮಾನವ ನಿರ್ಮಿತ ವಿಕೃತಿಗಳ ಆಳಗಳನ್ನು ಕೃತಿಗಳಾಗಿಸಿದವರ ಕಾಳಜಿಗಳು ಮತ್ತು ಅವನ್ನು ಕಲಾಕೃತಿಗಳಾಗಿಸಿ ನಮ್ಮೊಳಗನ್ನು ತಟ್ಟಿದ ಅದರ ಪರಿಗಳು. ಅಕಿರಾ ಕುರೊಸಾವಾನ ‘ಡ್ರೀಮ್ಸ್’ ಸಿನಿಮಾ, ಪ್ರಕೃತಿ ಮತ್ತು ಮನುಷ್ಯ ಒಬ್ಬರಿಗೊಬ್ಬರು ಕೊಟ್ಟುಕೊಳ್ಳಬೇಕಾದ ಅವಕಾಶ ಮತ್ತು ಇಟ್ಟುಕೊಳ್ಳಬೇಕಾದ ಹಸ್ತಕ್ಷೇಪ ರಹಿತ ಸಂಬಂಧದ ಸ್ವರೂಪಗಳೆರಡನ್ನೂ ಸೌಂದರ್ಯದ ಪಾಕದೊಳಗದ್ದಿ ನೇರ ಹೃದಯಕ್ಕೇ ಮುಟ್ಟಿಸುತ್ತದೆ. ಅಷ್ಟಕ್ಕೇ ವಿರಮಿಸದೆ ಮೆದುಳು ಆ ಬಗ್ಗೆ ನಿರಂತರ ಯೋಚಿಸುವಂತೆ ಮಾಡುತ್ತದೆ. ಈ ಸಿನಿಮಾದ ಎಲ್ಲ ಹತ್ತು ಕತೆಗಳಲ್ಲೂ ಮನುಷ್ಯ ನಿಸರ್ಗದತ್ತವಾಗಿ ಬದುಕುವುದು ಸಾಧ್ಯ ಎಂಬುದನ್ನೂ, ಆದರೆ ಮನುಷ್ಯ ಹಾಗೆ ಮಾಡುತ್ತಿಲ್ಲ ಎಂಬುದನ್ನೂ, ಅದರ ಪರಿಣಾಮವೆಂದರೆ ಕೊಟ್ಟಕೊನೆಗೆ ಮನುಷ್ಯ ತನ್ನನ್ನೂ ತನ್ನ ಸಂತತಿಯನ್ನೂ ಉಳಿಸಿಕೊಳ್ಳಲು ಭೂಮಿಯ ಕೊನೆಯ ತನಕ ಓಡಿದರೂ ಅದು ಸಾಧ್ಯವಿಲ್ಲ ಎಂಬುದನ್ನೂ ಹೇಳುತ್ತದೆ. ಇದು ಬರೀ ಪ್ರಕೃತಿಗೆ ಹೇಳುತ್ತಿರುವುದಲ್ಲ. ದುರ್ಬಲರ ಮೇಲೆ ಪ್ರಬಲರ, ಅಧಿಕಾರಹೀನರ ಮೇಲೆ ಅಧಿಕಾರಶಾಹಿಯ, ದೇಶವನ್ನೇ, ಜಗತ್ತನ್ನೇ ಕೈವಶ ಮಾಡಿಕೊಳ್ಳಲು ಎಲ್ಲ ಎಲ್ಲೆ ಮೀರಿ ವರ್ತಿಸುವ ವ್ಯಕ್ತಿ– ಶಕ್ತಿಗಳಾಗಿರುವ ಮನುಷ್ಯ ಮನುಷ್ಯರ ನಡುವಿನ ಮೇಲಾಟಗಳಿಗೂ ಹೇಳುತ್ತಿರುವುದು.

ಇದರಲ್ಲಿ ತೋರಿಸುವ ಸಮೃದ್ಧ ಹಸಿರು, ತಿಳಿನೀರು, ಬಣ್ಣ ಬಣ್ಣದ ಹೂವುಗಳ ಸುಂದರ ವಸುಂಧರೆಯಂತಹುದೇ ತಾಣ ನಮ್ಮ ಕನ್ನಡಿಗರ ಆವಾಸತಾಣವಾದ ಕಾಸರಗೋಡು ಸೀಮೆಸುತ್ತಣ ಹಳ್ಳಿಗಳಲ್ಲೂ ಇದೆ. ಆದರೆ ಅಲ್ಲಿನ ಗುಡ್ಡಗಳಲ್ಲಿ ಬೆಳೆಯುವ ಗೇರುಬೀಜ ಗೋಡಂಬಿಯಾಗಿ ಮಾರುಕಟ್ಟೆಯಲ್ಲಿ ಬೆಲೆಬಾಳುವ ಸರಕಾದ ಕೂಡಲೇ ಸರ್ಕಾರದ ಹಸ್ತಕ್ಷೇಪ ಶುರುವಾಗುತ್ತದೆ. ಮರದ ಒಂದು ಹೂವೂ ಉದುರದಂತೆ ಎಂಡೊಸಲ್ಫಾನ್ ಸಿಂಪಡಣೆಯು ಜನ ಬೆರಗಿನಿಂದ ಕಣ್ಣರಳಿಸುವಂತೆ ಹೆಲಿಕಾಪ್ಟರ್ ಮೂಲಕ ಆಗುತ್ತದೆ. ಆಧುನಿಕರು ತಮ್ಮೂರು ಅಭಿವೃದ್ಧಿಯಾಗುತ್ತಿರುವುದನ್ನು ಸಂತಸದಿಂದ ಅನುಭವಿಸತೊಡಗುತ್ತಾರೆ. ಒಂದೆರಡು ದಶಕಗಳಲ್ಲಿ ಊರಿನ ಚಿತ್ರಣವೇ ಬದಲಾಗುತ್ತದೆ. ಆದರೆ ಸದ್ದಿಲ್ಲದೆ ಬಂದು ಸೇರಿದ ಎಂಡೊಸಲ್ಫಾನ್ ರಾಕ್ಷಸ ನೆಲದ ಗರ್ಭವನ್ನಷ್ಟೇ ಅಲ್ಲ ತಲೆಮಾರುಗಳ ಮನುಷ್ಯಗರ್ಭವನ್ನೇ ಸೇರಿಕೊಂಡು ಚಿತ್ರ ವಿಚಿತ್ರ ಕಾಯಿಲೆಗಳನ್ನು ಹುಟ್ಟಿಸುತ್ತಾನೆ. ಹುಟ್ಟುವ ಮಕ್ಕಳು, ಇರುವವರು ಎಲ್ಲರನ್ನೂ ವಿಕಾರತೆ ಆವರಿಸಿಕೊಳ್ಳುತ್ತದೆ. ಆದರೆ ಇದಕ್ಕೆ ಎಂಡೊಸಲ್ಫಾನ್ ಕಾರಣ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಮತ್ತು ನಿರೂಪಿಸುವುದಕ್ಕೆ ಎಷ್ಟೆಲ್ಲಾ ಹೋರಾಡಬೇಕಾಗುತ್ತದೆ. ಅನುಪಮಾ ಪ್ರಸಾದ್ ಅವರ ‘ಪಕ್ಕಿಹಳ್ಳದ ಹಾದಿಗುಂಟ’ ಎಂಬ ಕಾದಂಬರಿಯಲ್ಲಿ ಇದನ್ನು ತಾಳ್ಮೆಯಿಂದ ಕಥಿಸಿದ್ದಾರೆ. ಸಂಪೂರ್ಣ ಮಾನವನಿರ್ಮಿತವಾದ ಈ ದುರಂತ ಅಲ್ಲಿನ ನಿಷ್ಪಾಪಿಗಳನ್ನು, ಅಲ್ಲಿನ ಉಸಿರ್ತಾಣಗಳನ್ನು, ಅಲ್ಲಿನ ಹೆಂಗಳೆಯರ ವೈವಾಹಿಕ ಬದುಕನ್ನು ಆಪೋಶನ ತೆಗೆದುಕೊಂಡಿದ್ದನ್ನು ಹಿಂದೂಸ್ತಾನಿ ಸಂಗೀತದ ಲಯದಲ್ಲಿ ಮೀಟುತ್ತಾರೆ. ಆದರೆ ಹೀಗೆಲ್ಲಾ ಆಯಿತಲ್ಲಾ, ಇದರ ಹೊಣೆ ಹೊರುವವರು ಯಾರು? ಹೋಗಲಿ ಇಂತಹ ಕೃತಿಗಳ ಮೂಲಕ, ಮುಂದಾಗುವುದನ್ನಾದರೂ ಗೊಡವೆಗೆ ತರೋಣವೆಂದರೆ ಓದುವವರು ಯಾರು?

ನಿಜ, ಒಮ್ಮೊಮ್ಮೆ ಹತಾಶೆ ಮುತ್ತಿಕೊಳ್ಳುತ್ತದೆ. ಆದರೆ ಭರವಸೆ ಇಟ್ಟುಕೊಳ್ಳದೆ ಏನೂ ಸಾಗುವುದಿಲ್ಲ. ಅಂತಹ ನಿದರ್ಶನಗಳೂ ನಮ್ಮ ನಡುವೆ ಇರುತ್ತವೆ. ಪೋಲೆಂಡ್, ಹಿಟ್ಲರನ ಕೈವಶವಾಗುತ್ತಿದ್ದಂತೆಯೇ ಕಣ್ಣಮುಂದೆ ನಡೆಯತೊಡಗಿದ ವಿಪ್ಲವಗಳನ್ನು ನೋಡಿ ತಲ್ಲಣಿಸಿ ಹೋದ ಇರೇನಾ ಸೆಂಡ್ಲರ್, ಇನ್ನಿದು ಹೀಗೇ ಎಂದು ಮನಸ್ಸಿಗೆ ನಾಟಿದ ಕೂಡಲೇ, ತಾನೇನು ಮಾಡಬಹುದು ಎಂದು ಯೋಚಿಸುತ್ತಾಳೆ. ಗಂಡ ಸೈನ್ಯದಲ್ಲಿ ದೂರದಲ್ಲಿದ್ದಾನೆ. ಮಕ್ಕಳಿನ್ನೂ ಇಲ್ಲ. ವೃದ್ಧ ತಾಯಿಯ ಹೊಣೆ ಇದೆ. ವಾರ್ಸಾದಲ್ಲಿದ್ದ ಯಹೂದಿಗಳಿಗೆ ತಡೆಗೋಡೆ ನಿರ್ಮಿಸಿ, ಅವರಿಗೆ ನೀರು, ವಿದ್ಯುತ್ ಹಾಗೂ ಆಹಾರ ಸಿಗದಂತೆ ಮಾಡಿ, ಚಳಿ ಮತ್ತು ಹಸಿವೆಯಿಂದ ಅವರು ಸಾಯುವುದನ್ನು ಯಹೂದಿಯಲ್ಲದ ಅವಳು ಕಣ್ಣಾರೆ ನೋಡಬೇಕಾಯಿತು. ಅದುವರೆಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಆಕೆ ಆರೋಗ್ಯ ಕಾರ್ಯಕರ್ತೆಯಾಗಿ ರೂಪು ಧರಿಸಿ, ತಡೆಗೋಡೆಯಾಚೆಯ ಸೇವೆಗೆ ಅನುಮತಿ ದೊರಕಿಸಿಕೊಳ್ಳುತ್ತಾಳೆ. ಅಪಾಯಕಾರಿ ಬಿಗಿ ಭದ್ರತೆಯ ನಡುವೆಯೂ ಒಳಗಿನ ಜನಕ್ಕೆ ಆಹಾರ, ಹಣ ಕೊಡುತ್ತಿದ್ದವಳು, ನಾಜಿಗಳು ಅವರ ಹತ್ಯೆಗೂ ತೊಡಗಿದ ನಂತರ ಯಹೂದಿಗಳ ಹಸುಗೂಸುಗಳನ್ನು ಹೆಣದ ಗಾಡಿ, ಬುಟ್ಟಿ, ಆಸ್ಪತ್ರೆಯ ವಾಹನ ಹೀಗೆ ಕಂಡ ಕಂಡಿದ್ದರಲ್ಲಿ ಹೊರಗೆ ಸಾಗಿಸಿ, ಯಹೂದಿಯೇತರರ ಮನವೊಲಿಸಿ ಅವರು ಮಕ್ಕಳನ್ನು ದತ್ತು ತೆಗೆದುಕೊಳ್ಳುವಂತೆ ಮಾಡಿ ಬದುಕಿಸುತ್ತಾಳೆ. ಹೀಗೆ ಆಕೆ ಬದುಕಿಸಿದ್ದು ಎರಡೂವರೆ ಸಾವಿರ ಮಕ್ಕಳನ್ನು. ಅದಕ್ಕಾಗಿ ಮರಣದಂಡನೆಗೂ ಗುರಿಯಾದ ಆಕೆ, ಅಲ್ಲಿನ ತೀವ್ರ ಹಿಂಸೆಯ ಶಿಕ್ಷೆಯ ನಂತರವೂ ಪವಾಡಸದೃಶವಾಗಿ ಬದುಕಿದಳು. ಜಗತ್ತಿಗೆ 2000ನೇ ಇಸವಿಯ ತನಕವೂ ಅಪರಿಚಿತಳಾಗಿದ್ದ ಇವಳ ಜೀವನಕಥನವನ್ನು ಪಲ್ಲವಿ ಇಡೂರು ‘ಜೊಲಾಂಟಾ’ ಹೆಸರಿನಲ್ಲಿ ಕನ್ನಡಕ್ಕೆ ಪರಿಚಯಿಸಿದ್ದು, ಇದರ ಓದು ನಮ್ಮನ್ನು ಅಚ್ಚರಿಯಲ್ಲಿ ಮುಳುಗಿಸುತ್ತದೆ.

‘ದ ಬಾಯ್ ಇನ್‌ ದ ಸ್ಟ್ರೈಪ್ಡ್‌ ಪೈಜಾಮಾಸ್‌’ ಎಂಬ ಸಿನಿಮಾ ಧ್ವನಿಸುವಂತೆ, ನಮ್ಮ ಶತ್ರುಗಳಿಗಾಗಿ ನಿರ್ಮಿಸಿದ ಸಾವಿನ ಮನೆಗೆ ನಮ್ಮ ಮಕ್ಕಳೇ ಪ್ರವೇಶಿಸಿಯಾರು ಎಂಬ ಎಚ್ಚರಿಕೆಯಿಲ್ಲದ ಲೋಕದೊಳಗೆ ಇಂತಹ ಪ್ರಯತ್ನಗಳನ್ನು ನಿರಂತರವಾಗಿ ಮಾಡುವುದೊಂದೇ ದಾರಿಯೇನೋ. ಯಾಕೆಂದರೆ, ಕೊರೊನಾ ಕೂಡ ಯಾವ ರೀತಿಯಲ್ಲೂ ಬುದ್ಧಿ ಕಲಿಸಿದ್ದು ಕಾಣಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT