ಭಾನುವಾರ, ಜೂನ್ 26, 2022
28 °C
‘ಗಾಂಧಿ–150’ ವಿಶೇಷ

ಮಹಾತ್ಮನ ಮರೆತು ಭಾರತ ಬೆಳಗಬಹುದೆ?

ಡಾ. ರೋಹಿಣಾಕ್ಷ ಶಿರ್ಲಾಲು Updated:

ಅಕ್ಷರ ಗಾತ್ರ : | |

ಅಲ್ಬರ್ಟ್ ಐನ್‌ಸ್ಟೀನ್‌ನ ಒಂದು ಉದ್ಗಾರ ಹೀಗಿದೆ– ‘ರಕ್ತಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿಯೊಬ್ಬ ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ್ದ ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ’. ಅವರು ಹೀಗೆಂದುದು ಮಹಾತ್ಮ ಗಾಂಧೀಜಿ ಬಗ್ಗೆ. ಗಾಂಧಿಯ ಬದುಕನ್ನು ನೋಡಿದ, ಓದಿದ ಯಾರಿಗಾದರೂ ಕಾಡಬಹುದಾದ ಸಂದೇಹ ಇದು.

‘ಗಾಂಧಿ ಏನು’ ಎಂದು ನೋಡಿದರೆ ‘ಅವರು ಏನಲ್ಲ’ ಅನ್ನುವ ಪ್ರಶ್ನೆಯೂ ಜತೆಗೆ ಎದುರಾಗುತ್ತದೆ. ಹಿಂದೂ ಧರ್ಮದ ಕಳಂಕದಂತಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಿ ದಲಿತರಿಗೂ ಸಮಾನತೆಯ ಬದುಕು ಕೊಡಲು ಹೋರಾಡಿದ ಸಮಾಜ ಸುಧಾರಕ; ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕ; ಬ್ರಿಟಿಷರು ಭಾರತದ ಶಿಕ್ಷಣಪದ್ಧತಿಯನ್ನು ಹೇಗೆ ಬೇರು ಸಹಿತ ನಾಶಮಾಡಿದರು ಎಂಬ ಕುರಿತು ಬ್ರಿಟಿಷ್ ನೆಲದಲ್ಲೇ ವಾದಿಸಿದ, ಭಾರತೀಯ ಶಿಕ್ಷಣಪದ್ಧತಿಯ ಕುರಿತು ಅಪೂರ್ವ ಒಳನೋಟಗಳನ್ನು ಹೊಂದಿದ್ದ ಓರ್ವ ಶಿಕ್ಷಣತಜ್ಞ; ದಾರ್ಶನಿಕ; ಸ್ವದೇಶಿ ಜಾಗರಣದ ಮುಂದಾಳು; ರಾಜಕಾರಣಿ; ಜಿಜ್ಞಾಸು; ಲೇಖಕ; ಕೊನೆಗೆ ಶೌಚಾಲಯವನ್ನು ತೊಳೆದು ಸ್ವಚ್ಛಗೊಳಿಸಿದ ಭಂಗಿ... ಹೀಗೆ ಗಾಂಧಿ ಎಲ್ಲೆಲ್ಲೂ ಕಾಣುತ್ತಾರೆ. ಅವರಿಗಿದ್ದ ವ್ಯಕ್ತಿತ್ವದ ವ್ಯಾಪ್ತಿ ಹಿರಿದು.

ಹಾಗೆಂದು ಗಾಂಧಿ ಎಲ್ಲರಿಗೂ ಪ್ರಿಯರಾದವರಾಗಲಿಲ್ಲ. ಪ್ರಿಯರಾಗಲು ಪ್ರಯತ್ನಿಸಲೂ ಇಲ್ಲ. ನಡೆ ನುಡಿಗಳಿಂದ ಬೇರೆ ಆಗಿರಲಿಲ್ಲ. ಬದುಕನ್ನು ಪ್ರಯೋಗವೆಂದರಿತು ಸತ್ಯ ಮತ್ತು ಅಹಿಂಸೆಯ ಬಲದಿಂದ ವಿಶ್ವವನ್ನೇ ಗೆದ್ದ ಶಕ್ತ. ಗಾಂಧಿಗೆ ಎಲ್ಲರೂ ಬೇಕಾಗಿದ್ದರು. ಏಕೆಂದರೆ ಅವರೊಬ್ಬ ಮಾತೃ ಹೃದಯಿ. ಹಾಗೆಂದು ಕಠಿಣವಾಗಿ ನಡೆದುಕೊಂಡಿಲ್ಲವೆಂದಲ್ಲ. ಆದರೆ ಹಾಗೆ ನಡೆದುಕೊಂಡಾಗ ಅವರು ಪೂರ್ವಗ್ರಹಪೀಡಿತರಾಗಿರಲಿಲ್ಲ. ಸತ್ಯ, ತ್ಯಾಗ, ಸರಳತೆ, ಅಹಿಂಸೆಯಂಥ ಭಾರತೀಯ ವಿಶಿಷ್ಟ ಮೌಲ್ಯಗಳಿಗೆ ಅವರು ಧಾರಣಶಕ್ತಿಯಾಗಿದ್ದರು. ಗಾಂಧಿ ತನ್ನ ಬದುಕಿನ ಕಾಲಕ್ಕೂ, ಒಂದು ಶತಮಾನದ ನಂತರಕ್ಕೂ ಕಣ್ಮುಂದಿನ ಹಲವು ಪ್ರಶ್ನೆಗಳಿಗೆ ಉತ್ತರವಾದರೂ, ಅವರು  ಪ್ರಶ್ನೆಯಾದುದೇ ಹೆಚ್ಚು. ಗಾಂಧಿ ಅನುಯಾಯಿಗಳೆನ್ನಿಸಿ, ಗಾಂಧಿಮಾರ್ಗಿಗಳೆನ್ನಿಸಿಕೊಂಡ ಅರಾಧಕರಿದ್ದರು. ಗಾಂಧಿಯ ಬಡ, ಕೃಶ ಶರೀರದ ನಡೆಯಲ್ಲಿ ಧರ್ಮದ್ರೋಹವನ್ನು, ಪಾಷಂಡಿತನವನ್ನು ಕಂಡ ಕ್ಷುದ್ರಮನಸ್ಸಿನವರೂ ಇದ್ದರು.

ಗಾಂಧಿ ಭಾರತಕ್ಕೆ ಬಿಡುಗಡೆಯ ಬೆಳಕಾದವರು. ಅವರು ಭೌತಿಕವಾಗಿ ಇಲ್ಲವಾಗಿ ವರುಷ ಎಪ್ಪತ್ತಾದರೂ ಅವರು ಬದುಕಿ ತೋರಿದ ಹಾದಿ ಶತಮಾನಗಳ ಕಾಲ ಬೆಳಕನ್ನು ನೀಡಬಹುದಾದುದು. ಸ್ವತಂತ್ರ ಭಾರತ ಗಾಂಧಿಯನ್ನು ಪ್ರತಿಮೆ ಮಾಡಿ, ರಸ್ತೆ ಕಟ್ಟಡಗಳಿಗೆ ಹೆಸರಾಗಿಸಿದೆಯೇ ಹೊರತು, ಅವರ ಆಶಯದ ಬದುಕನ್ನು ಬದುಕಲಿಲ್ಲ. ಗಾಂಧಿ ಯಾವ ನೆಲದಲ್ಲಿ ಸರಳತೆಯಲ್ಲಿ ಸಂಭ್ರಮಿಸಿದರೋ, ಆ ಭಾರತವಿಂದು ಸರಕು ಉಪಭೋಗದಲ್ಲಿ, ಐಷಾರಾಮಿತನದಲ್ಲಿ ಕಳೆದುಹೋಗುತ್ತಿದೆ. ಸ್ವದೇಶಿ ಎಂಬ ನಿಜ ಭಾರತವನ್ನು ಕಾಣಿಸಿದ ಶ್ರೇಷ್ಠ ಕಾಣ್ಕೆ ಬಹುರಾಷ್ಟ್ರೀಯ ಕಂಪನಿಗಳಿಗೆ ಹಾಸಿದ ನೆಲಹಾಸಿನೊಳಗೆ ಮುಕ್ಕಾಗಿದೆ. ಸಪ್ತ ಪಾತಕಗಳಿಂದ ಯಾವ ದೇಶವನ್ನು, ದೇಶದ ನಾಗರಿಕರನ್ನು ಮೇಲೆತ್ತಲು ಶ್ರಮಿಸಿದರೋ, ಅದೇ ದೇಶವಿಂದು ಆ ಪಾತಕಗಳೊಳಗೆ ಬೆಂದು ಹೋಗುತ್ತಿದೆ. ಪ್ರಬಲನ ಅಸ್ತ್ರವೆಂದೇ ಪ್ರತಿಪಾದಿತವಾದ ಅಹಿಂಸೆ– ಸತ್ಯಾಗ್ರಹಗಳು, ಸೋಗಲಾಡಿತನದ ನಮ್ಮ ದೌರ್ಬಲ್ಯಗಳಿಗೆ ತೊಡಿಸಿದ ಮುಸುಕುಗಳಾಗುತ್ತಿವೆ. ರಾಷ್ಟ್ರೀಯನಾಗದೆ ಅಂತರಾಷ್ಟ್ರೀಯನಾಗಲಾರೆ ಎಂಬ ಗಾಂಧಿ ಮಾತು ಮರೆತು ಅಂತರಾಷ್ಟ್ರೀಯ ವ್ಯಕ್ತಿತ್ವವನ್ನು ಹೊಂದುವ ಭ್ರಮೆಯಲ್ಲಿ ರಾಷ್ಟ್ರೀಯ ಹಿತವನ್ನು ಬಲಿಕೊಡಲು ಸಿದ್ಧರಾಗಿ ನಿಂತಿದ್ದೇವೆ. ಈ ಹೊತ್ತು ಗಾಂಧಿ ಹುಟ್ಟಿ 150 ವರ್ಷಗಳಾಗುತ್ತಿದೆ.

 ಇಂದು ಇಡಿಯ ವಿಶ್ವವೇ ಹಿಂಸೆಯಿಂದ ತತ್ತರಿಸಿದೆ. ಹಿಂಸೆಯೇ ಎಲ್ಲಾ ಕ್ರಿಯೆ ಪ್ರತಿಕ್ರಿಯೆಗಳನ್ನು ನಿಯಂತ್ರಿಸುತ್ತಿದೆ. ಈ ಕಾರಣದಿಂದಾಗಿಯೇ ಜಗತ್ತು ಹೆಚ್ಚು ಅಶಾಂತವಾಗಿದೆ. ಇಂತಹ ಅಶಾಂತ ಜಗತ್ತಿಗೆ ಗಾಂಧಿ ಶಾಂತಿಯ ರೂಪವಾಗಿ, ಉತ್ತರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗಾಂಧಿ ಬದುಕಿದ್ದ ಕಾಲಕ್ಕೆ ಭೌತಿಕವಾಗಿ ಬ್ರಿಟಿಷರನ್ನು ಅನುಕರಿಸುವುದು, ಬೌದ್ಧಿಕವಾಗಿ ಇಂಗ್ಲಿಷ್ ನಾಗರಿಕತೆಯನ್ನು ಸ್ವೀಕಾರ ಮಾಡುವುದು ಬಹು ಪ್ರತಿಷ್ಠೆಯ– ಗೌರವದ ಸಂಗತಿಯಾಗಿತ್ತು. ಈ ಬಗೆಯ ಪ್ರವೃತ್ತಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಅನೇಕರಲ್ಲೂ ಸ್ಪಷ್ಟವಾಗಿ ಕಾಣುತ್ತಿತ್ತು. ಬ್ರಿಟಿಷರನ್ನು ಓಡಿಸುವುದನ್ನೇ, ಸ್ವಾತಂತ್ರ್ಯ ಹೋರಾಟವೆಂದು ಭಾವಿಸಿದ್ದ ಕಾಲಕ್ಕೆ ಗಾಂಧಿ ಬಹುಸೂಕ್ಷ್ಮವಾದ ಭಾರತೀಯ ಸಾಂಸ್ಕ್ರತಿಕ ಪ್ರಜ್ಞೆಯನ್ನು ಹೊಂದಿದ್ದ ವ್ಯಕ್ತಿಯಾಗಿ ಕಾಣುತ್ತಾರೆ. ಗಾಂಧಿ ಬಯಸಿದ ಸ್ವರಾಜ್ಯ, ಭಾರತಪ್ರಜ್ಞೆಯನ್ನು ಉಳಿಸಿಕೊಳ್ಳುವುದರಲ್ಲಿತ್ತು. ಭಾರತ ತನ್ನ ಬದುಕಿನ ಮೂಲ ಪ್ರಜ್ಞೆಯನ್ನು ಕಳೆದುಕೊಳ್ಳುವುದು ಭೌತಿಕವಾಗಿ ಭೂಭಾಗವನ್ನು ಕಳೆದುಕೊಳ್ಳುವುದಕ್ಕಿಂತಲೂ ನೋವಿನ– ಕಳವಳದ ಸಂಗತಿಯಾಗಿ ಗಾಂಧಿ ಕಾಣುತ್ತಾರೆ. ಅಂದರೆ ಸ್ವರಾಜ್ಯ ಎನ್ನುವುದು ಬ್ರಿಟಿಷರನ್ನು ಹೊರಹಾಕುವ ಕ್ರಿಯೆಯಲ್ಲಿ ವಿರಮಿಸದೆ, ಭಾರತೀಯವಾದುದನ್ನು ಮುನ್ನೆಲೆಗೆ ತರುವ ಒಂದು ಕ್ರಿಯೆಯಾಗಿತ್ತು.

ಸ್ವಾತಂತ್ರ್ಯ ಹೋರಾಟದ ಉದ್ದೇಶದಲ್ಲಿ ದ್ವಂದ್ವಗಳು ಕಾಣಿಸಿಕೊಂಡಾಗ ಗಾಂಧಿ ಬಹಳ ಸ್ಪಷ್ಟವಾಗಿ ‘ಹೋರಾಟದ ಗುರಿ ಏನು? ಕೇವಲ ಬ್ರಿಟಿಷರನ್ನು ಓಡಿಸುವುದೇ? ಹಾಗೇನಾದರೂ ಹೌದು ಎಂದಾದರೆ ಹೋದ ಮೇಲೆ ಏನು ಮಾಡುವುದು? ಓಡಿಸಬೇಕಾದುದು ಏತಕ್ಕಾಗಿ? ದೇಶದ ಸಂಪತ್ತನ್ನು ದೋಚುತ್ತಾರೆ ಎಂದೇ? ದೊಡ್ಡ ಉದ್ಯೋಗಗಳು ಕೇವಲ ಬ್ರಿಟಿಷರಿಗೆ ಕೊಡುತ್ತಾರೆ ಎಂಬ ಕಾರಣಕ್ಕಾಗಿಯೆ?’ ಎಂದು ಕೇಳುತ್ತಾರೆ. ಇಂಗ್ಲಿಷ್ ರಾಜ್ಯವಿರಲಿ; ಇಂಗ್ಲಿಷರು ಬೇಡ. ಹುಲಿಯ ಗುಣ ಬೇಕು; ಹುಲಿ ಮಾತ್ರ ಬೇಡ ಎಂಬ ದ್ವಂದ್ವ ನಿಲುವಿಗೆ ಗಾಂಧಿ ಬಹಳ ಸ್ಪಷ್ಟವಾಗಿ ‘ಅಂತಹ ಸ್ವರಾಜ್ಯ ನನಗೆ ಬೇಡ, ಏಕೆಂದರೆ ಅದು ಸ್ವರಾಜ್ಯವೇ ಅಲ್ಲ’ ಎನ್ನುತ್ತಾರೆ.

ಗಾಂಧಿಯ ಆತಂಕ ಇಂಗ್ಲಿಷ್ ನಾಗರಿಕತೆ ಭಾರತೀಯರಿಗೆ ಅಪಾಯ ಎಂಬ ಬಗೆಯದ್ದಾಗಿರಲಿಲ್ಲ. ಅದು ಸ್ವತಃ ಇಂಗ್ಲಿಷರಿಗೂ, ಆ ಮೂಲಕ ಜಗತ್ತಿಗೆ ಅಪಾಯಕಾರಿ ಎಂದೇ ಭಾವಿಸಿದ್ದರು. ಇಂಗ್ಲೆಂಡ್ ನಾಶವಾಗುವುದನ್ನು ಗಾಂಧಿ ಬಯಸಿರಲಿಲ್ಲ. ವಿಚಿತ್ರವೆಂದರೆ ಗಾಂಧಿಯೋತ್ತರ ಕಾಲದಲ್ಲಿ ಭಾರತವೇ ಇಂದು ನಾಶಗೊಳ್ಳುವ ಸರದಿಯಲ್ಲಿ ನಿಂತಿದೆ. ನಾವು ಭಾವಿಸಿಕೊಂಡಂತೆ ನಮ್ಮ ವೇಗದ ನಾಗರಿಕತೆಯ ಓಟ ನಮ್ಮನ್ನು ನಂದನವನದ ಕಡೆಗೆ ಕೊಂಡೊಯ್ಯುವ ಬದಲು ಸುಡುಗಾಡಿನ ಕಡೆಗೆ ಕರೆದುಕೊಂಡು ಹೋಗುತ್ತಿದೆ ಎನ್ನುವುದನ್ನು ಮರೆತಿದ್ದೇವೆ. ಗಾಂಧಿ ಚಿಂತನೆಗಳು ಮತ್ತೆ ಪ್ರಸ್ತುತವಾಗುತ್ತಿರುವುದು ಇಂತಹ ಸನ್ನಿವೇಶದಲ್ಲೇ. ಸ್ವರಾಜ್ಯದ ಆತ್ಮವೇ ಊನಗೊಂಡು ಕಣ್ಣೆದುರೇ ನಷ್ಟವಾಗುತ್ತಿದೆ.

ಜಗತ್ತಿಗೆ ಭಾರತ ಮಾತ್ರ ಕೊಡಬಹುದಾದ ವ್ಯಕ್ತಿತ್ವ ಗಾಂಧಿಯದು. ಜಗತ್ತಿನ ಇನ್ಯಾವುದೇ ನಾಗರಿಕತೆಗೆ, ಮತೀಯ ಪರಂಪರೆಗೆ ಗಾಂಧಿಯಂಥ ಆತ್ಮಸಾಕ್ಷಿಯುಳ್ಳ, ನೈತಿಕಶಕ್ತಿಯುಳ್ಳ ವ್ಯಕ್ತಿತ್ವವನ್ನು ಸೃಜಿಸಲಾರದು. ಜಡವಲ್ಲದ, ಕಟ್ಟುಪಾಡುಗಳಿಗೆ ಒಳಪಡದ ಬದುಕಿನ ಮಾದರಿಯುಳ್ಳ ನೆಲದಿಂದ ಗಾಂಧಿ ವಿಶ್ವವನ್ನು ಗ್ರಹಿಸುತ್ತಾರೆ. ಸ್ವದೇಶಿ, ಸ್ವರಾಜ್ಯ, ಸ್ವಧರ್ಮದ ಬಗ್ಗೆ ಗಾಂಧಿ ಪ್ರತಿಪಾದಿಸುವಾಗ ಅವರೊಳಗಿನ ಸಹಜವಾದ ವಿಶ್ವಪ್ರೇಮದ ಭಾವ ನಷ್ಟವಾಗಲಿಲ್ಲ. ಸ್ವದೇಶಿ ಸ್ವರಾಜ್ಯದ ವಿಚಾರಗಳನ್ನು ವಿಶ್ವಪ್ರೇಮದ ಜತೆಗೆ ಅವಿರೋಧವಾಗಿಯೇ ಕಾಣುತ್ತಾರೆ. ಈ ಕಾರಣದಿಂದ ಗಾಂಧಿಗೆ ಬೇರು ಬಿಡಲು ನೆಲವೂ ಇತ್ತು; ಮುಗಿಲೆತ್ತರಕ್ಕೆ ಬೆಳೆಯಲು ಆಕಾಶವೂ ಇತ್ತು.

ಸ್ವಾತಂತ್ರ್ಯೊತ್ತರ ಭಾರತ, ಗಾಂಧಿ ಚಿಂತನೆಯ ಪ್ರಯೋಗಕ್ಕೆ ಒಪ್ಪದೇ ಹೋದುದು ಅತೀ ದೊಡ್ಡ ದುರಂತ. ಸ್ವತಃ ಪ್ರಯೋಗ ನಡೆಸಲು ಅವರು ಬದುಕಿರಲಿಲ್ಲ. ಗಾಂಧಿಯವರಿಂದ ಉತ್ತರಾಧಿಕಾರಿಯಾಗಿ ಘೋಷಿಸಲ್ಪಟ್ಟ ನೆಹರೂ ಅವರಿಗೆ ಗಾಂಧಿಯವರ ಪ್ರಯೋಗಗಳು ಅವಾಸ್ತವವಾಗಿ ಕಾಣಿಸುತ್ತಿತ್ತು. ಸ್ವಾತಂತ್ರ್ಯ ಹೋರಾಟ ತೀವ್ರವಾಗಿ ನಡೆಯುತ್ತಿದ್ದ ಕಾಲಕ್ಕೂ ಗಾಂಧಿಯವರಲ್ಲಿ ಉದ್ವೇಗರಹಿತ ಸ್ಥಿತಪ್ರಜ್ಞತೆ ಕಾಣಬಹುದು. ನೆಲಮೂಲದ ಚರಕ, ಖಾದಿ, ಉಪ್ಪಿನ ಸಂಕೇತಗಳನ್ನು ಬಿಡುಗಡೆಯ ಕನಸಾಗಿ ಅವರು ನೋಡಿದರು. ಆದರೆ ನಾವಿಂದು ಗಾಂಧಿ ಪ್ರತಿಮೆಯನ್ನು ನೆಟ್ಟಿದ್ದೇವೆ. ಮತ್ತೆ ಮತ್ತೆ ಕಳೆದುಹೊಗುವ ಪ್ರತಿಮೆಯ ಗಾಂಧಿ ಕನ್ನಡಕವನ್ನು ಗಟ್ಟಿ ಮಾಡಿದ್ದೇವೆ. ಗಾಂಧಿಯ ಕನ್ನಡಕವನ್ನು ಪಡೆದ ನಾವು ಅವರ ದೃಷ್ಟಿಯನ್ನು ಕಳೆದುಕೊಂಡಿದ್ದೇವೆ. ಈ ದೃಷ್ಟಿಯನ್ನು ಮರಳಿ ಪಡೆಯುವುದೇ ಭಾರತ ಜಗತ್ತಿಗೆ ಕೊಡಬಹುದಾದ ಅತಿದೊಡ್ಡ ಕೊಡುಗೆಯೂ ಹೌದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು