ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ: ಸುಳ್ಳುಗಳನ್ನು ನಿರ್ಲಕ್ಷಿಸಿ

ಧರ್ಮದ ಹೆಸರಿನಲ್ಲಿ ಕಿರುಕುಳಕ್ಕೆ ಒಳಗಾದವರಿಗೆ ಪೌರತ್ವ ನೀಡುವುದಷ್ಟೇ ಕಾಯ್ದೆ ಉದ್ದೇಶ
Last Updated 2 ಜನವರಿ 2020, 22:19 IST
ಅಕ್ಷರ ಗಾತ್ರ
ADVERTISEMENT
""

ಎಲ್ಲರಿಗೂ ಮೂಲಭೂತ ಹಕ್ಕುಗಳುಳ್ಳ ಜಾತ್ಯತೀತ ದೇಶವಾಗಿ ಭಾರತ ಮತ್ತು ಮುಸ್ಲಿಂ ದೇಶವಾಗಿ ಪಾಕಿಸ್ತಾನ 1947ರಲ್ಲಿ ರಚನೆಯಾದವು. ಆಗಿನಿಂದಲೇ, ಪಾಕಿಸ್ತಾನದಲ್ಲಿ ಹಿಂದೂ, ಸಿಖ್‌, ಕ್ರೈಸ್ತ, ಬೌದ್ಧ ಮುಂತಾದ ಅಲ್ಪಸಂಖ್ಯಾತ ಸಮುದಾಯಗಳು ‍ಪ್ರತಿದಿನವೂ ಜನಾಂಗೀಯ ಕಿರುಕುಳಕ್ಕೆ ಒಳಗಾಗುತ್ತಿವೆ, ಸಾವು–ಬದುಕಿನ ನಡುವೆ ಸೆಣಸಾಟ ನಡೆಸುತ್ತಿವೆ. ಆದರೆ, ಭಾರತದಲ್ಲಿರುವ ಅಲ್ಪಸಂಖ್ಯಾತರ ಸ್ಥಿತಿ ಅದಕ್ಕೆ ವ್ಯತಿರಿಕ್ತ. ಕೆಲವು ಕೋಮು ಸಂಘರ್ಷಗಳನ್ನು ಬಿಟ್ಟರೆ ಅವರೆಲ್ಲ ಇಲ್ಲಿ ಬೆಳೆದಿದ್ದಾರೆ.

ಕಿರುಕುಳಕ್ಕೆ ಒಳಗಾದವರು,ಭಾರತ ಮಾತ್ರ ತಮಗೆ ಇರುವ ಏಕೈಕ ಸುರಕ್ಷಿತ ತಾಣ ಎಂದು ಭಾವಿಸಿ ವಲಸೆ ಬಂದಿದ್ದಾರೆ. ದಶಕಗಳ ಕಾಲ ಅವರು ಇಲ್ಲಿ ನಿರಾಶ್ರಿತರಾಗಿ, ಹತಾಶೆ ಮತ್ತು ಅನಿಶ್ಚಿತ ಸ್ಥಿತಿಯಲ್ಲಿ ಬದುಕಿದ್ದಾರೆ. ಅವರ ಭವಿಷ್ಯಕ್ಕೊಂದು ದಿಕ್ಕು ತೋರಿಸುವ ಮೂಲಕ ಪೌರತ್ವ (ತಿದ್ದುಪಡಿ) ಕಾಯ್ದೆಯು (ಸಿಎಎ) ಈ ಚಾರಿತ್ರಿಕ ತಪ್ಪನ್ನು ಸರಿಪಡಿಸುತ್ತದೆ.

*ಭಾರತದ ಮುಸ್ಲಿಮರನ್ನು ಸಿಎಎ ಗುರಿ ಆಗಿಸಿದೆಯೇ?
ಮುಸ್ಲಿಂ ಅಥವಾ ಇತರ ಯಾವುದೇ ಧರ್ಮಕ್ಕೆ ಸೇರಿದ ಭಾರತದ ಪ್ರಜೆಯ ಹಕ್ಕುಗಳ ಮೇಲೆ ಸಿಎಎ ಪರಿಣಾಮ ಉಂಟು ಮಾಡುವುದಿಲ್ಲ. ಮೂರು ಮುಸ್ಲಿಂ ದೇಶಗಳ ಎಲ್ಲ ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ಈ ಕಾಯ್ದೆ ರಚನೆಯಾಗಿರುವುದರಿಂದ ಇಲ್ಲಿ ತಾರತಮ್ಯವೂ ಇಲ್ಲ. ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್‌ ಮುಂತಾದ ದೇಶಗಳ ನಿರಾಶ್ರಿತರನ್ನು ಈ ಕಾಯ್ದೆಯ ಅಡಿಯಲ್ಲಿ ಯಾಕೆ ತಂದಿಲ್ಲ ಎಂಬ ಪ್ರಶ್ನೆಗೂ ಉತ್ತರ ಇದೆ. ಸಿಎಎ ಅನ್ವಯ ಆಗುವ ಮೂರು ದೇಶಗಳ ರೀತಿಯಲ್ಲಿ ಈ ಯಾವುದೇ ದೇಶಕ್ಕೆ ಘೋಷಿತ ಧರ್ಮ ಇಲ್ಲ.

ಈ ಕಾಯ್ದೆಯು ಮುಸ್ಲಿಂ ವಿರೋಧಿ ಮತ್ತು ತಾರತಮ್ಯದಿಂದ ಕೂಡಿದೆ ಎಂದು ವಿಶೇಷವಾಗಿ, ಕಾಂಗ್ರೆಸ್‌ ಪಕ್ಷವು ದುರುದ್ದೇಶಪೂರಿತ ಮತ್ತು ಅಪಾಯಕಾರಿಯಾದ ಅಪಪ್ರಚಾರ ನಡೆಸುತ್ತಿದೆ. ಮುಸ್ಲಿಮರ ಪರ ಎಂದು ತೋರಿಸಿಕೊಳ್ಳುವುದು, ರಾಜಕೀಯವಾಗಿ ಸಂಪೂರ್ಣ ಸುಳ್ಳುಗಳನ್ನೇ ಆಧರಿಸಿದ ಈ ವಾದದ ಉದ್ದೇಶ. ಸಿಎಎಯನ್ನು ಅರ್ಥ ಮಾಡಿಕೊಂಡರೆ ಈ ಆರೋಪಗಳು ಟೊಳ್ಳು ಎಂಬುದು ಅರಿವಾಗುತ್ತದೆ.

‘ಮುಸ್ಲಿಮೇತರ’ ನಿರಾಶ್ರಿತರಿಗೆ ಪೌರತ್ವ ನೀಡಬೇಕು ಎಂಬ 1943ರ ಬೇಡಿಕೆಗೆ ತದ್ವಿರುದ್ಧವಾದ ನಾಚಿಕೆಗೇಡಿನ ನಿಲುವನ್ನು ಕಾಂಗ್ರೆಸ್‌ ಹೊಂದಿರುವುದು ಆಶ್ಚರ್ಯಕರವೇನೂ ಅಲ್ಲ. ಅದಷ್ಟೇ ಅಲ್ಲ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದ ಧರ್ಮಾಧಾರಿತ ನಿರಾಶ್ರಿತರಿಗೆ ಪೌರತ್ವ ನೀಡಬೇಕು ಎಂದು ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರೂ ಹೇಳಿದ್ದರು. ಆದರೆ, ಸುಳ್ಳುಗಳು ಮತ್ತು ಭೀತಿ ಹರಡುವಿಕೆಯನ್ನು ಕಾಂಗ್ರೆಸ್ ಮುಂದುವರಿಸಿದೆ. ಈ ಪ್ರಯತ್ನವು ಸಾಮಾಜಿಕವಾಗಿ ಉಂಟು ಮಾಡಬಹುದಾದ ಆಳವಾದ ಬಿರುಕುಗಳ ಬಗ್ಗೆ ಆ ಪಕ್ಷವು ತಲೆಯೇ ಕೆಡಿಸಿಕೊಳ್ಳುತ್ತಿಲ್ಲ.

*ಮುಸ್ಲಿಂ ನಿರಾಶ್ರಿತರನ್ನು ಯಾಕೆ ಹೊರಗಿಡಲಾಗಿದೆ?
ಮುಸ್ಲಿಂ ನಿರಾಶ್ರಿತರ ವಿಚಾರದಲ್ಲಿ ಪ್ರಾಮಾಣಿಕವಾದ ಕಾಳಜಿ ಹೊಂದಿರುವ ಕೆಲವರಲ್ಲಿ ಕೆಲವು ಪ್ರಶ್ನೆಗಳು ಇವೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಈ ಕಾಯ್ದೆಯು ಯಾರನ್ನೂ ಹೊರಗೆ ಇರಿಸಿಲ್ಲ. ಪೌರತ್ವ ಕೋರುವವರಿಗೆ ಸಂಬಂಧಿಸಿದ ಕಾನೂನಿನಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಪೌರತ್ವ ಕಾಯ್ದೆ ಅಡಿಯಲ್ಲಿ ಪೌರತ್ವ ಪಡೆಯುವುದಕ್ಕೆ ಇರುವ ಅವಕಾಶಗಳನ್ನು ಅವರು ಬಳಸಿಕೊಳ್ಳಬಹುದು.

*ಎನ್‌ಆರ್‌ಸಿ ಅಥವಾ ಎನ್‌ಪಿಆರ್‌ ಜತೆಗೆ ಸಿಎಎಗೆ ಸಂಬಂಧ ಇದೆಯೇ?
ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಅಥವಾ ಎನ್‌ಪಿಆರ್‌ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಜತೆಗೆ ಸಿಎಎಗೆ ಯಾವ ಸಂಬಂಧವೂ ಇಲ್ಲ. ನೆರೆಯ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾದ ಅಲ್ಪಸಂಖ್ಯಾತ ಸಮುದಾಯದವರಿಗೆ ಪೌರತ್ವ ನೀಡಿಕೆಯನ್ನು ತ್ವರಿತಗೊಳಿಸುವುದಷ್ಟೇ ಸಿಎಎಯ ಉದ್ದೇಶ.

ಸುದೀರ್ಘ ಕಾಲ ಇಷ್ಟೊಂದು ನೋವು ಅನುಭವಿಸಿದ ಜನರಿಗೆ ತೋರಿದ ಮಾನವೀಯತೆಯನ್ನು ಯಾರಾದರೂ ಯಾಕೆ ವಿರೋಧಿಸಬೇಕು? ಅವರು ಭಾರತದಿಂದ ಬೇರೆಲ್ಲೂ ಹೋಗಲು ಸಾಧ್ಯವಿಲ್ಲ ಅಥವಾ ಅವರನ್ನು ವಾಪಸ್‌ ಕಳುಹಿಸಲೂ ಆಗದು. ಸರಿದಿಕ್ಕಿನಲ್ಲಿ ಯೋಚಿಸುವ ಯಾವುದೇ ವ್ಯಕ್ತಿ ಈ ಮಾನವೀಯ ನೆಲೆಯ ಕ್ರಮವನ್ನು ವಿರೋಧಿಸಲು ಸಾಧ್ಯವಿಲ್ಲ.

ಎನ್‌ಆರ್‌ಸಿ ವಿಚಾರದಲ್ಲಿ ಸೃಷ್ಟಿಸಲಾಗುತ್ತಿರುವ ಭೀತಿ ಮತ್ತು ಸಿಎಎಯ ಜತೆಗೆ ಅದಕ್ಕೆ ನಂಟು ಇದೆ ಎಂಬ ಸುಳ್ಳು
ಗಳೆರಡೂ ಉದ್ದೇಶಪೂರ್ವಕ. ಮುಸ್ಲಿಮರಲ್ಲಿ ಭೀತಿ ಮತ್ತು ಅಪನಂಬಿಕೆ ಸೃಷ್ಟಿ ಇದರ ಗುರಿ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದ ಎಲ್ಲ ಪೌರರ ರೀತಿಯಲ್ಲಿಯೇ ಮುಸ್ಲಿಮರಿಗೂ ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಅಕ್ರಮ ವಲಸೆಯ ವಿಚಾರವನ್ನು ಅದರ ಸಾಂಸ್ಕೃತಿಕ, ಆರ್ಥಿಕ ಹಾಗೂ ಭದ್ರತೆಗೆ ಸಂಬಂಧಿಸಿದ ಆಯಾಮಗಳನ್ನು ಮುಂದಿರಿಸಿ ಚರ್ಚಿಸುವ ಅಗತ್ಯ ಇದೆ; ಮಾನವೀಯ ನೆಲೆಯಲ್ಲಿ ಮಾತ್ರ ಇದನ್ನು ಪರಿಗಣಿಸಲು ಆಗದು.

ಕಳೆದ ಏಳು ದಶಕಗಳಲ್ಲಿ, ಅಕ್ರಮ ವಲಸೆಯು ಭಾರತದ ಬಹುದೊಡ್ಡ ಸಮಸ್ಯೆಯಾಗಿ ಬೆಳೆಯುವುದಕ್ಕೆ ಅವಕಾಶ ನೀಡಲಾಗಿದೆ. ಅದು ಭಾರತದ ವಿವಿಧ ವಿಚಾರಗಳ ಮೇಲೆ ಅಪಾಯಕಾರಿ ಪರಿಣಾಮ ಬೀರಿದೆ. ನಮ್ಮ ಗಡಿ ರಾಜ್ಯಗಳ ಬಹುದೊಡ್ಡ ಪ್ರದೇಶಗಳಲ್ಲಿನ ದೇಶಿ ಸಂಸ್ಕೃತಿ ಮತ್ತು ಸಮುದಾಯಗಳನ್ನು ಇದು ನಾಶ ಮಾಡಿದೆ. ಕಾಂಗ್ರೆಸ್‌ ನಾಯಕರು ತಮ್ಮ ಸಂಕುಚಿತ ಮತಬ್ಯಾಂಕ್‌ ರಾಜಕಾರಣಕ್ಕಾಗಿ ಈ ವಿಚಾರದಲ್ಲಿ ರಾಜಕೀಯ ಫುಟ್‌ಬಾಲ್‌ ಆಟ ಆಡಿದ್ದಾರೆ.

2010ರಲ್ಲಿ ಆಗಿನ ಗೃಹ ಸಚಿವ ಪಿ. ಚಿದಂಬರಂ ಅವರು ಎನ್‌ಆರ್‌ಸಿಯ ಪ್ರಸ್ತಾವ ಮುಂದಿಟ್ಟಿದ್ದರು. ಅಕ್ರಮ ವಲಸೆಯನ್ನು ನಿರ್ವಹಿಸುವುದು ಅದರ ಉದ್ದೇಶವಾಗಿತ್ತು. ಈ ವಿಚಾರದಲ್ಲಿ ತನ್ನ ಮತಬ್ಯಾಂಕ್‌ ರಾಜಕಾರಣಕ್ಕೆ ಕಾಂಗ್ರೆಸ್‌ ಶರಣಾಗಿದೆ. ಆದರೆ ಸಮಸ್ಯೆ ಈಗಲೂ ಅದೇ ರೀತಿಯಲ್ಲಿ ಇದೆ.

* ಹಾಗಿದ್ದರೆ, ಕೆಲವರು ಪ್ರತಿಭಟಿಸುತ್ತಿರುವುದೇಕೆ?
ಹಿರಿಯ ಪತ್ರಕರ್ತರೊಬ್ಬರು ನನಗೆ ಇತ್ತೀಚೆಗೆ ಹೇಳಿದಂತೆ ಪ್ರತಿಭಟನೆಗಳಿಗೂ ಸಿಎಎಗೂ ಅಂತಹ ಸಂಬಂಧವೇನೂ ಇಲ್ಲ. ಮೋದಿಯವರ ಬೆಳವಣಿಗೆಯಿಂದ ಭೀತಿಗೊಳಗಾಗಿರುವ, ಅವರನ್ನು ಮೂಢವಾಗಿ ವಿರೋಧಿಸುವ ಎಡಪಂಥೀಯ ಉದಾರವಾದಿಗಳು ಮತ್ತು ಮತಬ್ಯಾಂಕ್‌ ರಾಜಕಾರಣಕ್ಕೆ ಹೆಣಗುತ್ತಿರುವವರು ಹಿಂಸೆಗೆ ಕುಮ್ಮಕ್ಕು ನೀಡಿದ್ದಾರೆ.ಈಶಾನ್ಯ ರಾಜ್ಯಗಳ ಪ್ರತಿಭಟನೆಯು ಇದಕ್ಕೆ ವ್ಯತಿರಿಕ್ತವಾಗಿದೆ. ಭಾರಿ ಪ್ರಮಾಣದ ಅಕ್ರಮ ವಲಸೆಯು ಅಲ್ಲಿನ ಸ್ಥಳೀಯ ಸಂಸ್ಕೃತಿ ಮತ್ತು ಸಮುದಾಯ ವ್ಯವಸ್ಥೆಗೆ ದೊಡ್ಡ ಬೆದರಿಕೆ ಒಡ್ಡಿದೆ. ಅಲ್ಲಿ ನಡೆಯುತ್ತಿರುವುದು ಅದರ ವಿರುದ್ಧ ಪ್ರತಿಭಟನೆ. ಅಕ್ರಮ ವಲಸೆಯಿಂದ ಸಂಪೂರ್ಣ ರಕ್ಷಣೆ ಒದಗಿಸುವುದಾಗಿ ಗೃಹ ಸಚಿವರು ಮತ್ತು ಪ್ರಧಾನಿ ಭರವಸೆ ಕೊಟ್ಟಿದ್ದಾರೆ.

ಧಾರ್ಮಿಕ ಹಕ್ಕು ಸೇರಿದಂತೆ ಪ್ರತಿ ಪ್ರಜೆಗೆ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸಿರುವ ಸಂವಿಧಾನಕ್ಕೆ ಇರುವ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದ್ದಾರೆ. ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲಿ ಸಂವಿಧಾನವನ್ನು ರಕ್ಷಿಸಲು ಬಿಜೆಪಿ ನಾಯಕರು ಹೋರಾಡಿದ್ದರು. ಈಚೆಗೆ, ಸೆಕ್ಷನ್‌ 66ಎ ಮೂಲಕ ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಕಾಂಗ್ರೆಸ್ ನಡೆಸಿದ ಪ್ರಯತ್ನಗಳ ವಿರುದ್ಧ ನಾನು ಹೋರಾಡಿದ್ದೇನೆ. ‘ಪ್ರತೀ’ ಭಾರತೀಯನ ಮೂಲಭೂತ ಹಕ್ಕುಗಳಿಗೆ ಉಳಿದ ಎಲ್ಲರಿಗಿಂತಲೂ ನಾವು ಹೆಚ್ಚು ಮಾನ್ಯತೆ ನೀಡುತ್ತೇವೆ.

ಅಭಿವೃದ್ಧಿ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಧಾನಿ ನಡೆಸಿದ ಪ್ರಯತ್ನವು ಎಲ್ಲ ಭಾರತೀಯರಿಗೂ ಪ್ರಯೋಜನಕಾರಿ. ಅವರ ಸರ್ಕಾರವು ತಾರತಮ್ಯ ಇಲ್ಲದೆ ‘ಎಲ್ಲ’ ಭಾರತೀಯರಿಗಾಗಿ ಕೆಲಸ ಮಾಡಿದೆ. ಸ್ಥಾಪಿತ ಹಿತಾಸಕ್ತಿಗಳು ಸೃಷ್ಟಿಸಿದ ಭೀತಿ ಮತ್ತು ಅಪನಂಬಿಕೆಯನ್ನು ಭಾರತೀಯ ಮುಸ್ಲಿಮರು ತಿರಸ್ಕರಿಸುವ ಸಮಯ ಬಂದಿದೆ. ಎಲ್ಲ ಭಾರತೀಯರಂತೆಯೇ ಮುಸ್ಲಿಮರಿಗೂ ಮೋದಿ ನೇತೃತ್ವದ ಸರ್ಕಾರವು ಸಮೃದ್ಧಿ ಮತ್ತು ಸದೃಢ ಭವಿಷ್ಯವನ್ನು ರೂಪಿಸಿಕೊಡಲಿದೆ. ಸುಳ್ಳು ಮತ್ತು ಭೀತಿ ಹರಡುವವರನ್ನು ತಿರಸ್ಕರಿಸಿ ಅವರು ಅಪ್ರಸ್ತುತರಾಗುವಂತೆ ಮಾಡಿ ಎಂಬುದು ಪ್ರತಿಭಟನಕಾರರಿಗೆ ನನ್ನ ಮನವಿ. ‘ಎಲ್ಲ’ ಭಾರತೀಯರಿಗಾಗಿ ಪ್ರಬಲ, ಒಗ್ಗಟ್ಟಿನ, ಸಮೃದ್ಧ ಭಾರತ ನಿರ್ಮಿಸುವ ಮೋದಿ ಅವರ ಮುನ್ನೋಟಕ್ಕೆ ಎಲ್ಲ ಭಾರತೀಯರು ಬೆಂಬಲ ನೀಡಬೇಕು.

-ರಾಜೀವ್‌ ಚಂದ್ರಶೇಖರ್‌,ರಾಜ್ಯಸಭೆಯ ಬಿಜೆಪಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT