ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಎಂಬ ಆಪದ್ಬಾಂಧವ: ಗ್ರಾಮೀಣ ಉದ್ಯೋಗ ಸೃಷ್ಟಿಯಿಂದ ಬಡತನ ನಿವಾರಣೆ

ಗ್ರಾಮೀಣ ಉದ್ಯೋಗ ಸೃಷ್ಟಿ ಮೂಲಕ ಬಡತನ ನಿವಾರಣೆ ಎಂಬ ವಾದಕ್ಕೆ ಈಗ ಹೆಚ್ಚು ಮನ್ನಣೆ
Last Updated 18 ಮೇ 2020, 1:45 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ನ ಹಾವಳಿ ರಾಷ್ಟ್ರದಾದ್ಯಂತ ಹೆಚ್ಚುತ್ತಿದೆ, ಹಬ್ಬುತ್ತಿದೆ. ಭಯಭೀತರಾದ ಅಸಂಘಟಿತ ವಲಯದ ಅಸಂಖ್ಯಾತ ಕಾರ್ಮಿಕರು ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದಿದ್ದಾರೆ, ಬರುತ್ತಿದ್ದಾರೆ. ಹೀಗೆ ಹೊರ ರಾಜ್ಯಗಳಿಂದ ಬಂದ ವಲಸಿಗರು ಇಲ್ಲಿಯ ಗ್ರಾಮೀಣ ಪ್ರದೇಶದತ್ತ ಮುಖ ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳ ನಗರ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿದ್ದ ಅಸಂಘಟಿತ ವಲಯದ ಕಾರ್ಮಿಕರು ಸಹ ಹಳ್ಳಿಗಳಿಗೆ ಧಾವಿಸುತ್ತಿರುವುದು ಈಗ ಸಾಮಾನ್ಯ.

ಗ್ರಾಮಗಳಿಗೆ ಬಂದ ವಲಸಿಗರಲ್ಲಿ ಹಲವರು ದುಡಿದು ಬದುಕಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯತ್ತ (ಮನರೇಗಾ) ಆಸೆಗಣ್ಣಿನಿಂದ ನೋಡುವಂತಾಗಿದೆ. ಕಷ್ಟದಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಸೂಕ್ತ ಮಾರ್ಗದರ್ಶನ, ನೆರವು ದೊರೆತರೆ, ನರೇಗಾ ಅವರ ಪಾಲಿಗೆ ಬೇಕಾದ ಆಸರೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಡವಾಗಿಯಾದರೂ ಗಮನಿಸಿರುವುದು ಸಮಾಧಾನದ ಸಂಗತಿ. ನರೇಗಾದ ಪ್ರಯೋಜನದ ಅಗತ್ಯವು ಮುಂದಿನ ಎರಡು–ಮೂರು ತಿಂಗಳಿಗಷ್ಟೇ ಅಲ್ಲದೆ, ಇನ್ನೂ ಹೆಚ್ಚಿನ ಅವಧಿಗೆ ಇರುವುದನ್ನು ಸರ್ಕಾರ ಮುಂದಾದರೂ ಪರಿಗಣಿಸಬೇಕು.

ಮಾನವ ಸಂಪನ್ಮೂಲ ನಿರ್ವಹಣೆ ಸಂಸ್ಥೆಗಳ ಪ್ರಕಾರ, ಈವರೆಗೂ ಸಾಮಾಜಿಕ ಸುರಕ್ಷಾ ಸೌಲಭ್ಯಗಳಿರದಿದ್ದ ಶೇ 10ರಷ್ಟು ಅಸಂಘಟಿತ ವಲಯದ ಕಾರ್ಮಿಕರು ಮುಂದಿನ 3ರಿಂದ 6 ತಿಂಗಳ ಅವಧಿಯಲ್ಲಿ ತಮ್ಮ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಅವರಲ್ಲಿ ಅನೇಕರು ಬದುಕು ನಡೆಸಲು ಈಗಾಗಲೇ ಗ್ರಾಮೀಣ ಪ್ರದೇಶದತ್ತ ಭಾರವಾದ ಮನಸ್ಸಿನಿಂದ ಹೆಜ್ಜೆ ಹಾಕಿದ್ದಾರೆ. ನರೇಗಾದಲ್ಲಿ ಪಳಗಿದವರ ಅನುಭವದ ಬೆಳಕಿನಲ್ಲಿ, ಗ್ರಾಮೀಣಾಭಿವೃದ್ಧಿ ಕೆಲಸಗಳನ್ನು ವಲಸಿಗರು ಕಲಿಯುವ ಅಗತ್ಯ ತಲೆದೋರಲಿದೆ. ಒಳಗೊಳ್ಳುವಿಕೆಯ ಗ್ರಾಮಾಭಿವೃದ್ಧಿಯ ಬಾಗಿಲನ್ನು ಹೊಂದಿದ ನರೇಗಾ, ಅವರಿಗೆ ಸ್ಪಷ್ಟವಾಗಿ ನೆರವಾಗಬೇಕಾದ ತುರ್ತು ಎದುರಾಗಿದೆ.

ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದ ದಿವಂಗತ ಅರುಣ್ ಜೇಟ್ಲಿ ತಾವು ಮಂಡಿಸಿದ ಆಯವ್ಯಯಗಳಲ್ಲಿ ನರೇಗಾಕ್ಕೆ ಹೆಚ್ಚು ಅನುದಾನ ನೀಡಿ ಅದರ ಮಹತ್ವವನ್ನು ಗುರುತಿಸಿದ್ದರು. ಅವರ ಉತ್ತರಾಧಿಕಾರಿ ನಿರ್ಮಲಾ, ನರೇಗಾದ ಮೇಲೆ ಅಷ್ಟೇನೂ ವಿಶ್ವಾಸ ಇಟ್ಟುಕೊಂಡವರಲ್ಲ. ಫೆ. 1ರಂದು ಅವರು ಮಂಡಿಸಿದ ಬಜೆಟ್‌ನಲ್ಲಿ ನರೇಗಾಕ್ಕೆ ಹಿಂದಿಗಿಂತ ಕಡಿಮೆ ಅನುದಾನ ನಿಗದಿಯಾಗಿತ್ತು. ಆಗಲೇ ಬೆಳೆದುನಿಂತಿದ್ದ ಆರ್ಥಿಕ ಸಂಕಷ್ಟಗಳ ತೀವ್ರತೆಯಿಂದಾಗಿಯೋ ಏನೋ ಅರ್ಥಶಾಸ್ತ್ರ ಬಲ್ಲವರಾದರೂ ನಿರ್ಮಲಾ ಅಂದು ಅದರ ಮಹತ್ವವನ್ನು ಮನಗಾಣದೇ ಹೋದರು! ಶೇ 3.8ರಷ್ಟು ವಿತ್ತೀಯ ಕೊರತೆಯ ಅಂದಾಜಿನ ಬಜೆಟ್ ಅವರಿಂದ ಸಮರ್ಪಣೆಯಾಯಿತು. ಆನಂತರ, ಕೊರೊನಾ ಸೋಂಕು ಹಬ್ಬಿದಂತೆ ಆರ್ಥಿಕ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ.

ರಿಸರ್ವ್ ಬ್ಯಾಂಕಿನ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಕೇಂದ್ರ ಸರ್ಕಾರದ ನೀತಿಗೆ ಬೆಂಬಲ ನೀಡಲು ರಿವರ್ಸ್ ರೆಪೊ ದರವನ್ನು ಕಡಿಮೆ ಮಾಡುವ ನಿರ್ಧಾರವನ್ನು ಏ.17ರಂದು ಪ್ರಕಟಿಸಿದ್ದು ಕೊರೊನಾದ ಹೊಡೆತಕ್ಕೆ ಮತ್ತೊಂದು ದೊಡ್ಡ ಸಾಕ್ಷಿ. ಹೀಗಾಗಿ ಹಣಕಾಸಿನ ವರ್ಷದಲ್ಲಿ ವಿತ್ತೀಯ ಕೊರತೆ ಶೇ 4.4ಕ್ಕೆ ಏರಿಕೆಯಾಗುವ ಸಾಧ್ಯತೆ ನಿಚ್ಚಳವಾಗುತ್ತಿದೆ ಎಂದು ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ (ಇಂಡ್-ರೇ) ಇತ್ತೀಚೆಗೆ ಅಂದಾಜಿಸಿದೆ. ಸರ್ಕಾರದ ಉತ್ತೇಜನಾ ಕೊಡುಗೆಗಳ ಮೊತ್ತ ಹೀಗೆ ಹೆಚ್ಚುತ್ತಲೇ ಹೋದರೆ, ವಿತ್ತೀಯ ಕೊರತೆಯ ಮೊತ್ತ ಜಿಡಿಪಿಯ ಶೇ 6ಕ್ಕೆ ಜಿಗಿಯುವ ಸಾಧ್ಯತೆಯನ್ನು ಕೂಡ ಅದು ಒಪ್ಪಿಕೊಂಡಿದೆ. ಈಗ ಗೋಚರಿಸುತ್ತಿರುವುದು, ಕೇಂದ್ರ ಮತ್ತು ರಾಜ್ಯಗಳು ದೊಡ್ಡ ವಿತ್ತೀಯ ಕೊರತೆಯ ಭಾರವನ್ನು ಹೊರಬೇಕಾದ ಅಗತ್ಯ. ಇನ್ನಷ್ಟು ತಲ್ಲಣಿಸಿಹೋದ ನಿರ್ಮಲಾ ‘ನಮ್ಮ ಮೊದಲ ಆದ್ಯತೆ ಎಂದರೆ, ಬಡವರಿಗೆ ಆಹಾರವನ್ನು ಒದಗಿಸುವುದು ಮತ್ತು ಅವರ ಕೈಗೆ ಹಣವನ್ನು ತಲುಪಿಸುವುದು’ ಎಂದು ಕೆಲವೇ ದಿನಗಳ ಹಿಂದೆ ಹೇಳಬೇಕಾಯಿತು. ನರೇಗಾದ ಅನುದಾನವನ್ನು ಈಗ ಹೆಚ್ಚಿಸುವ ಮೂಲಕ ಕೊನೆಗೂ ಈ ಯೋಜನೆಯ ಮಹತ್ವವನ್ನು ಮನಗಂಡಿರುವುದು ಸಮಾಧಾನಕರ ಸಂಗತಿ.

1970ರ ದಶಕ ಪ್ರಾರಂಭವಾಗುವ ಮೊದಲು, ಭೂಸುಧಾರಣಾ ಯೋಜನೆಗಳಿಂದ ಗ್ರಾಮೀಣ ಬಡತನ ನಿವಾರಣೆಯಾಗಬಹುದೆಂಬ ವಾದಕ್ಕೆ ಅಬ್ಬರವಿತ್ತು. ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್‌ನಲ್ಲಿ ಆರ್ಥಿಕ ತಜ್ಞರಾಗಿದ್ದ ವಿ.ಎಂ.ದಾಂಡೇಕರ್ ಮತ್ತು ನೀಲಕಂಠ ರತ್ ಬರೆದ ‘ಭಾರತದಲ್ಲಿ ಬಡತನ’ ಎಂಬ, ಸ್ವಂತಿಕೆಗೆ ಹೆಸರಾದ ಕೃತಿಯಲ್ಲಿ ಈ ವಾದವನ್ನು ಅಲ್ಲಗಳೆಯಲಾಗಿದೆ.

ತೀರ ಸೀಮಿತವಾದ ಪ್ರಭಾವವುಳ್ಳ ಭೂಮಿತಿ ಶಾಸನ ಮತ್ತು ದೋಷಪೂರಿತವಾದ ಗೇಣಿ ಕಾನೂನುಗಳಿಂದ ಗ್ರಾಮೀಣ ಭಾರತದ ಬಡತನದ ಸಮಸ್ಯೆಗೆ ಸೂಕ್ತ ಪರಿಹಾರ ಸಿಗುವುದಿಲ್ಲವೆನ್ನುವುದು ಅವರ ಬಲವಾದ ನಂಬಿಕೆಯಾಗಿತ್ತು. ಸರ್ಕಾರದ ಬೆಂಬಲವುಳ್ಳ ಗ್ರಾಮೀಣ ಉದ್ಯೋಗ ಸೃಷ್ಟಿ ಯೋಜನೆಯ ಮೂಲಕ ಬಡತನ ನಿವಾರಣೆಯಾಗಬೇಕೆಂಬ ವಾದವನ್ನು ಆಗಲೇ ಅವರು ಮಂಡಿಸಿದ್ದರು. ಅನೇಕ ರಾಜ್ಯಗಳಲ್ಲಿ ಅವರ ವಾದಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಮನ್ನಣೆ ಬಂದಿದೆ.

1972-73ನೇ ಸಾಲಿನಲ್ಲಿ ಮಹಾರಾಷ್ಟ್ರದಲ್ಲಿ ಶ್ರೀಕಾರ ಹಾಕಿದ ಉದ್ಯೋಗ ಖಾತರಿ ಯೋಜನೆಯು ದುಡಿಯುವ ಹಕ್ಕು ಮೂಲಭೂತವಾದದ್ದು ಎಂದು ಪ್ರತಿಪಾದಿಸುತ್ತಿತ್ತು. ಹೆಚ್ಚಿನ ಶ್ರಮದ ಸಾಂದ್ರತೆ ಅಪೇಕ್ಷಿಸುವ ಸಣ್ಣ ನೀರಾವರಿ, ಕಾಲುವೆ ನಿರ್ಮಾಣ, ನೀರು ಮತ್ತು ಮಣ್ಣಿನ ಸಂರಕ್ಷಣೆ, ಭೂಅಭಿವೃದ್ಧಿ, ಅರಣ್ಯೀಕರಣ- ಹೀಗೆ ಕೃಷಿಗೆ ಪೂರಕವಾದ ಕಾಮಗಾರಿಗಳಿಗೆ ಕಾರ್ಮಿಕರನ್ನು ಸರಿಯಾಗಿ ಬಳಸಿಕೊಳ್ಳುವ ಯೋಜನೆಗಳು ಮಹಾರಾಷ್ಟ್ರದ ಉದ್ಯೋಗ ಖಾತರಿ ಯೋಜನೆಯ ಅಂಗಗಳಾಗಿದ್ದವು. ಅದು, ಕೌಶಲರಹಿತ ಮಾನವಶ್ರಮಕ್ಕೆ ವೇತನ ನೀಡುವ ಉದ್ದೇಶದಿಂದಲೇ ಪ್ರಾರಂಭವಾದ ಯೋಜನೆಯಾಗಿತ್ತು. ಉದ್ಯೋಗ ಸೃಷ್ಟಿಯ ಮೂಲಕ ಗ್ರಾಮೀಣ ಬಡತನ ಹೋಗಲಾಡಿಸಬೇಕೆಂಬ ಉದ್ದೇಶದೊಂದಿಗೆ ಪ್ರಾರಂಭವಾದ ಈ ಸರ್ಕಾರಿ ಯೋಜನೆ ಕಾಲಕ್ಕೆ ಸರಿಯಾಗಿ ವಿಕಸನಗೊಳ್ಳುತ್ತ, ಮುಂದೆ ಹುಟ್ಟಿಬಂದ ನರೇಗಾಕ್ಕೆ ಮಾದರಿಯಾಯಿತು.

ಮಹಾರಾಷ್ಟ್ರದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಹಣ್ಣಿನ ವ್ಯವಸಾಯಕ್ಕೆ ಬಳಸಿಕೊಂಡಿದ್ದರಿಂದ, ಉತ್ಪಾದನೆ ಏರಿಕೆಯಾಗಿ ಕೃಷಿಕರಿಗೆ ಹೇರಳ ಲಾಭವಾಗಿದೆ. ಕೃಷಿಗೆ ಪೂರಕವಾಗುವ ರೀತಿಯಲ್ಲಿ ನರೇಗಾವನ್ನು ಬದಲಾಯಿಸಲು ಸಾಧ್ಯವೆನ್ನುವ ಮಹತ್ವದ ಸಂದೇಶವನ್ನು ಅಲ್ಲಿಯ ಯೋಜನೆಯು ದೇಶಕ್ಕೆ ನೀಡಿದೆ. ಕೊರೊನಾ ದಾಳಿಯಿಂದ ತತ್ತರಿಸಿ ಹೋಗುತ್ತಿರುವ ಮಹಾರಾಷ್ಟ್ರದಲ್ಲಿ ನಗರ ಪ್ರದೇಶ ಬಿಟ್ಟು ಹಳ್ಳಿಗಳತ್ತ ಗುಳೆ ಹೋಗುತ್ತಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಅಲ್ಲಿಯ ರಾಜ್ಯದ ಉದ್ಯೋಗ ಖಾತರಿ ಯೋಜನೆ ಆಸರೆಯಾಗಬೇಕಾಗಿದೆ.

ವೈಜ್ಞಾನಿಕ ಚಿಂತನೆ, ಸಾಮಾಜಿಕ ಕಳಕಳಿ, ವಾಸ್ತವಿಕ ದೃಷ್ಟಿಕೋನವುಳ್ಳ ನರೇಗಾದ ಮೌಲ್ಯಮಾಪನ ಆಗಾಗ ನಡೆದಿದೆ. ಸಾಮಾಜಿಕ ಲೆಕ್ಕಪರಿಶೋಧನೆಗೆಒಳಪಟ್ಟು ಸಾಕಷ್ಟು ಸುಧಾರಿಸಿದ, ಬಡತನ ನಿವಾರಣೆಗಾಗಿ ಉದ್ಯೋಗ ಸೃಷ್ಟಿಯ ಧ್ಯೇಯವುಳ್ಳ ಅದರ
ಅಗತ್ಯವನ್ನು ಒಪ್ಪಬೇಕಾಗಿದೆ. ಕರ್ನಾಟಕ ಜನಶಕ್ತಿ ಸಂಘಟನೆಯ ಸಾಮಾಜಿಕ ಅಧ್ಯಯನ ಸಮಿತಿಯು ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಇದನ್ನು ಗುರುತಿಸಿದೆ. ನರೇಗಾ ದಿನಗೂಲಿಯನ್ನು ₹375ಕ್ಕೆ ಹಾಗೂ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕೆಂದು ಹೇಳಿದ್ದಲ್ಲದೆ, ಒಡಿಶಾ ಮಾದರಿಯಂತೆ ನಗರ ಪ್ರದೇಶಕ್ಕೂ ಇದನ್ನು ವಿಸ್ತರಿಸಬೇಕೆಂಬುದು ಅದರ ಸಲಹೆ. ದುರ್ಬಲ ವರ್ಗಕ್ಕೆ ಸೇರಿದ ಅಸಂಘಟಿತ ವಲಯದ ಕಾರ್ಮಿಕರ ಹಿತದೃಷ್ಟಿಯಿಂದ ನೀಡಿದ ಇಂಥ ಸಲಹೆಗಳನ್ನು, ಈಗ ದೇಶದ ಪರಿಸ್ಥಿತಿ ಬಿಗಡಾಯಿಸಿರುವಾಗ ಕೇಂದ್ರ ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT