ಗುರುವಾರ , ಜುಲೈ 16, 2020
22 °C
ಮುಖ್ಯಮಂತ್ರಿ ಲೇಖನ

ನರೇಂದ್ರ ಮೋದಿ 2.0 ಸರ್ಕಾರಕ್ಕೆ ಒಂದು ವರ್ಷ: ಹೀಗಂತಾರೆ ಸಿಎಂ ಬಿ.ಎಸ್.ಯಡಿಯೂರಪ್ಪ

ಬಿ.ಎಸ್.ಯಡಿಯೂರಪ್ಪ Updated:

ಅಕ್ಷರ ಗಾತ್ರ : | |

BS Yediyurappa and Narendra Modi

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೇರಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬರೆದ ಲೇಖನ

2014ರ ಲೋಕಸಭಾ ಚುನಾವಣೆ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿಯವರ ಕನಸನ್ನು ನನಸು ಮಾಡಿದ ಚುನಾವಣೆ. ಹಿಂದೂ ಧರ್ಮ-ಸಂಸ್ಕೃತಿ ಸಂರಕ್ಷಣೆ ಮಾಡುವ, ಭಾರತದ ಬಹುಸಂಖ್ಯಾತ ಹಿಂದೂಗಳ ಆಶಯಗಳಿಗೆ ದನಿಯಾಗಬಲ್ಲ ರಾಜಕೀಯ ಶಕ್ತಿಯೊಂದು ಭಾರತದ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಅನ್ನುವುದು ಈ ದೇಶದ ಕೋಟ್ಯಾನುಕೋಟಿ ಭಾರತೀಯರ ಅಂತರಂಗದ ಇಂಗಿತವಾಗಿತ್ತು. ಪಂಡಿತ್ ಜವಹರಲಾಲ್ ನೆಹರು ಅವರು ಭಾರತಕ್ಕೆ ಸ್ವಾತಂತ್ರ್ಯ ದೊರೆತ ತಕ್ಷಣ ರಚಿಸಿದ ಜವಾಬ್ದಾರಿ ಸರ್ಕಾರದಲ್ಲಿ ಮೂರು ವರ್ಷಗಳ ಕಾಲ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿ, 1950ರಲ್ಲಿ ಸಚಿವ ಪದವಿಗೆ ಗುಡ್ ಬೈ ಹೇಳಿದ್ದರು. 1943ರಿಂದ 1946ರವರೆಗೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಅಧ್ಯಕ್ಷರಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿಯವರಿಗೆ, ಪಂಡಿತ್ ನೆಹರು ಅವರ ಸರ್ಕಾರದಿಂದ ಭಾರತದ ಹಿತಾಸಕ್ತಿ ರಕ್ಷಿಸಲು ಸಾಧ್ಯವಿದೆ ಎನ್ನುವ ನಂಬಿಕೆ ಮೂಡಿರಲಿಲ್ಲ. ಅಖಂಡ ಭಾರತದ ಸಂಸ್ಕೃತಿ, ಪರಂಪರೆಯನ್ನು ರಕ್ಷಣೆ ಮಾಡುವ ರಾಜಕೀಯ ಸಂಘಟನೆಯೊಂದರ ಅಗತ್ಯವಿದೆ ಅನ್ನುವುದು ಶ್ಯಾಮ ಪ್ರಸಾದ್ ಮುಖರ್ಜಿಯವರ ಮನಸ್ಸಿನ ಇಂಗಿತವಾಗಿತ್ತು. ಈ ದಿಸೆಯಲ್ಲಿ ಅವರು ಸ್ಥಾಪನೆ ಮಾಡಿದ್ದೇ ಭಾರತೀಯ ಜನಸಂಘ. ಸಂವಿಧಾನ ರಚನೆಯ ನಂತರ 1951-52ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನಸಂಘ ಚುನಾವಣಾ ಅಖಾಡ ಪ್ರವೇಶಿಸಿತ್ತು. ಆದರೆ ಕಾಂಗ್ರೆಸ್ಸಿನ ಪ್ರಭಾವಳಿ ಎದುರು ಭಾರತೀಯ ಜನಸಂಘ ತನ್ನ ಅಸ್ತಿತ್ವದ ಛಾಪು ಮೂಡಿಸುವುದು ಸಾಧ್ಯವಿರಲಿಲ್ಲ. ಇಂತಹ ಪರಿಸ್ಥಿತಿಯ ನಡುವೆಯೂ ಚುನಾವಣೆಯಿಂದ ಚುನಾವಣೆಗೆ ಭಾರತೀಯ ಜನಸಂಘ ನಿಧಾನವಾಗಿ ಭಾರತದ ಉದ್ದಗಲಕ್ಕೂ ತನ್ನ ಇರುವಿಕೆಯನ್ನು ಪ್ರದರ್ಶಿಸಲಾರಂಭಿಸಿತ್ತು.      
 
ಪ್ರಸಕ್ತ ಹಿನ್ನೆಲೆಯಲ್ಲಿ ಭಾರತೀಯ ಜನಸಂಘದ ರೂಪಾಂತರ ಭಾರತೀಯ ಜನತಾಪಕ್ಷ 1988 ಮತ್ತು 1999 ರಲ್ಲಿ ಭಾರತದ ಅಧಿಕಾರ ಚುಕ್ಕಾಣಿ ಹಿಡಿದಾಗ ಸಮಗ್ರ ಭಾರತೀಯರ ಕನಸು ಭಾಗಶಃ ನನಸಾಗಿತ್ತು. ಭಾರತೀಯ ಜನತಾಪಕ್ಷ ಸ್ವಂತಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗದಿದ್ದರೂ, ಹತ್ತು ಹಲವು ಆಸಕ್ತ ರಾಜಕೀಯ ಪಕ್ಷಗಳ ಜೊತೆಗೂಡಿ ನಮ್ಮ ನೆಚ್ಚಿನ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟ ಎನ್ನುವ ಹೆಸರಿನ ಸರ್ಕಾರ ರಚಿಸಿತ್ತು. ಇದರಿಂದ ಭಾರತೀಯ ಜನತಾಪಕ್ಷದ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತೇ ಹೊರತು, ನಮ್ಮ ಪಕ್ಷದ ಆಶಯಗಳನ್ನು ಈಡೇರಿಸಿಕೊಳ್ಳುವುದು ಸಾಧ್ಯವಾಗಿರಲಿಲ್ಲ. ಒಂದು ರೀತಿಯಲ್ಲಿ ಭಾವನಾತ್ಮಕವಾಗಿ ಭಾರತೀಯ ಜನತಾಪಕ್ಷದ ಭಾವನಾತ್ಮಕ ಆಶಯಗಳ ಮೊತ್ತಮೊದಲ ಹೆಜ್ಜೆ ಸಾಕಾರಗೊಂಡಿತ್ತು. ಅದೇನೇ ಇರಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಭಾರತೀಯ ಜನತಾಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ದಿನದಿಂದಲೇ ಭಾಜಪ ಖದರ್ ಸಂಪೂರ್ಣ ಬದಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ತಮ್ಮ ಬದುಕನ್ನು ಸಂಪೂರ್ಣವಾಗಿ ರಾಷ್ಟಹಿತಕ್ಕೆ ಸಮರ್ಪಿಸಿಕೊಂಡಿದ್ದ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿ ಇಡೀ ದೇಶ ಮೆಚ್ಚುವ ಆಡಳಿತ ನೀಡಿದ್ದರು. ಭಾರತದ ಪ್ರಧಾನಿಯಾಗಿ ಆಯ್ಕೆಗೊಂಡರೆ ಗುಜರಾತಿನಲ್ಲಿ ಅನಾವರಣಗೊಳಿಸಿದ ಅಭಿವೃದ್ಧಿ ಪರ್ವವನ್ನು ಅಖಂಡ ಭಾರತದಲ್ಲಿ ಸಾಕಾರಗೊಳಿಸಬಹುದು ಅನ್ನುವುದು ನರೇಂದ್ರಮೋದಿಯವರ ಆಶಯವಾಗಿತ್ತು. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು ಎನ್ನುವ ಪಕ್ಷದ ಘೋಷಣಾ ಪತ್ರಕ್ಕೆ ಸಹಿ ಹಾಕಿದವರಲ್ಲಿ ಮೊದಲಿಗ ನಾನೆ. ಈ ಅಂಶ ನನಗೆ ನಿಜಕ್ಕೂ ಹೆಮ್ಮೆಯಾಗುತ್ತದೆ. ನಮ್ಮೆಲ್ಲರ ಆಶಯ ಮತ್ತು ನಿರೀಕ್ಷೆಯಂತೆ 2014 ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಯೋಜಿತ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ನಮ್ಮೆಲ್ಲರ ನೆಚ್ಚಿನ ನಾಯಕ ನರೇಂದ್ರ ಮೋದಿಯವರು, ಭಾರತೀಯ ಜನತಾಪಕ್ಷಕ್ಕೆ ಚೊಚ್ಚಲ ಗೆಲುವನ್ನು ತಂದುಕೊಟ್ಟಿದ್ದರು. ಭಾರತೀಯ ಜನತಾಪಕ್ಷ 282 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ವಂತ ಬಲದ ಮೇಲೆ ಭಾರತದ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಇಂಥ ಯಶಸ್ಸಿನ ನಡುವೆಯೂ ಚುನಾವಣೆಗೆ ಪೂರ್ವಭಾವಿಯಾಗಿ ಆಸಕ್ತ ಪಕ್ಷಗಳ ಜೊತೆ ಮೈತ್ರಿಯನ್ನು ಮಾಡಿಕೊಂಡು ಸರ್ಕಾರ ರಚಿಸುವ ಮೂಲಕ ಮೈತ್ರಿ ರಾಜಕಾರಣಕ್ಕೆ ಪೂರಕ ಬದ್ಧತೆಯನ್ನು ನರೇಂದ್ರ ಮೋದಿಯವರು ಪ್ರದರ್ಶಿಸಿದ್ದರು.

ತಮ್ಮ ಆಡಳಿತಾವಧಿಯ ಮೊದಲ ಐದು ವರ್ಷಗಳಲ್ಲಿ ಕಪ್ಪು ಹಣದ ಮೇಲೆ ಸಮರ ಸಾರುವ ಹಿನ್ನೆಲೆಯಲ್ಲಿ ಘೋಷಿಸಿದ ರೂಪಾಯಿ ಅಪಮೌಲ್ಯೀಕರಣ, ಭಾರತದ ಉದ್ದಗಲಕ್ಕೂ ಉತ್ತಮ ಪರಿಸರ ನಿರ್ಮಾಣ ಮಾಡುವ ದೃಷ್ಟಿಯಿಂದ 2014ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನ, ಶ್ರೀಸಾಮನ್ಯನೂ ಬ್ಯಾಂಕ್‌ಗಳಲ್ಲಿ ತನ್ನ ಖಾತೆ ತೆರೆಯುವುದಕ್ಕೆ ಅನುಕೂಲ ಆಗುವ ಹಾಗೆ ಆರಂಭಿಸಿದ ಜನಧನ ಯೋಜನೆ. ಈ ಯೋಜನೆಯ ಪರಿಣಾಮ 28.23ಕೋಟಿ ಶ್ರೀಸಾಮನ್ಯರು ಬ್ಯಾಂಕ್‌ಗಳಲ್ಲಿ ತಮ್ಮ ಖಾತೆ ತೆರೆಯುವುದಕ್ಕೆ ಸಾಧ್ಯವಾಯಿತು. ಇನ್ನು ಸ್ವಾತಂತ್ರ್ಯಾನಂತರದಲ್ಲಿಯೇ ಅತ್ಯಂತ ಐತಿಹಾಸಿಕ ತೆರಿಗೆ ಸುಧಾರಣೆ ಕ್ರಮ ಎಂದು ಭಾವಿಸಲಾದ ಜಿಎಸ್‌ಟಿ ತೆರಿಗೆ ಪದ್ಧತಿ ಜಾರಿ, ಮೊದಲಿದ್ದ ಪ್ರತ್ಯೇಕ ರೈಲ್ವೇ ಬಜೆಟ್ ಮಂಡನೆಯನ್ನು ಪ್ರಧಾನ ಬಜೆಟ್ ಮಂಡನೆಯ ಜೊತೆ ವಿಲೀನಗೊಳಿಸಿದ್ದು, ಬಡತನದ ರೇಖೆಗಿಂತ ಕೆಳಗಿರುವ ಐದು ಕೋಟಿ ಜನರಿಗೆ ಎಂಟು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಉಜ್ವಲಾ ಕಾರ್ಯಕ್ರಮದಡಿಯಲ್ಲಿ ಉಚಿತ ಗ್ಯಾಸ್ ಪೂರೈಕೆಯ ಕ್ರಮ, ರಕ್ಷಣಾ ಉಪಕರಣಗಳೂ ಸೇರಿದಂತೆ ಎಲ್ಲಾ ರೀತಿಯ ಉತ್ಪನ್ನಗಳನ್ನು ಭಾರತದಲ್ಲಿಯೇ ಉತ್ಪಾದಿಸುವುದಕ್ಕೆ ಪೂರಕವಾಗಿ ಜಾರಿಗೊಳಿಸಿದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ, ರಾಷ್ಟ್ರದ ಪ್ರಮುಖ ನಗರಗಳನ್ನು ಸಂಪರ್ಕಿಸುವ ದೃಷ್ಟಿಯಿಂದ ಸುಧಾರಿತ ರೈಲ್ವೇ ವ್ಯವಸ್ಥೆಗೆ ನೀಡಿದ ಆದ್ಯತೆ, ಈ ದಿಸೆಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ಟ್ರೇನ್ ಕಾಮಗಾರಿ ಪ್ರಾರಂಭ. ಡಿಜಿಟಲ್ ಇಂಡಿಯಾ ಮತ್ತು ಸ್ಮಾರ್ಟ್ ಸಿಟಿ ಪರಿಕಲ್ಪನೆಗೆ ಚಾಲನೆ,  ಭಾರತ ಪಾಕಿಸ್ತಾನ ಗಡಿ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಪಾಕಿಸ್ತಾನ ಸೇನಾಪಡೆ ಪ್ರಾಯೋಜಿತ ಉಗ್ರಗಾಮಿಗಳ ಉಪಟಳ ತಡೆಯುವಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಮಿಲಿಟರಿ ಕಾರ್ಯಾಚರಣೆ ಹೀಗೆ ಹತ್ತು ಹಲವು ಜನಹಿತ ಕಾರ್ಯಕ್ರಮಗಳ ಮೂಲಕ ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಜನಮನ ಗೆಲ್ಲುವಲ್ಲಿ ಯಶಸ್ವಿ ಆಗಿದ್ದರು. ಒಂದು ರೀತಿಯಲ್ಲಿ ಅವರು ಭಾರತದ ರಾಜಕಾರಣದ ಯುಗ ಪ್ರವರ್ತಕರಾಗಿ ಹೊರಹೊಮ್ಮಿದ್ದರು ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ.  

ಇದರ ಪರಿಣಾಮವಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷ ತನ್ನ ಶಕ್ತಿಯನ್ನು ಮತ್ತಷ್ಟು ವೃದ್ಧಿಸಿಕೊಳ್ಳುವುದು ಸಾಧ್ಯವಾಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷ 282 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದ್ದರೆ, 2019ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 302 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಇಂತಹ ಐತಿಹಾಸಿಕ ಗೆಲುವಿಗೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪರ ಕಾರ್ಯಕ್ರಮಗಳೇ ಪ್ರಧಾನವಾಗಿ ಕಾರಣ. ನೋಡಿ, ಮೊದಲ ವರ್ಷದ ಆಡಳಿತಾವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಗಡಿ ಭಾಗದ ಕಿರಿಕಿರಿಯನ್ನು ಸಮರ್ಥವಾಗಿ ನಿಭಾಯಿಸಿದ ಪ್ರಧಾನಿ ನರೇಂದ್ರ ಮೋದಿಯವರು, ತಮ್ಮ ಎರಡನೇ ಆಡಳಿತಾವಧಿಯ ಕೇವಲ ಒಂದೇ ಒಂದು ವರ್ಷದಲ್ಲಿ ಭಾರತವನ್ನು ದಶಕದಶಕಗಳಿಂದ ಕಾಡುತ್ತಿದ್ದ ಅನೇಕ ಗಂಭೀರ ಸಮಸ್ಯೆಗಳಿಗೆ ಯಶಸ್ವಿ ಹಾಗೂ ದಿಟ್ಟತನದ ಪರಿಹಾರಗಳನ್ನು ಕಂಡುಕೊಳ್ಳುವ ರಾಜಕೀಯ ನೈಪುಣ್ಯವನ್ನು ಪ್ರದರ್ಶಿಸಿದರು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಹಾಗೂ 35ನೇ ವಿಧಿ ರದ್ದುಗೊಳಿಸುವ ಬಗ್ಗೆ ಕೈಗೊಂಡ ನಿರ್ಧಾರ ಭಾರತದ ಅಖಂಡತೆ ಮತ್ತು ಏಕತೆಯನ್ನು ರಕ್ಷಿಸುವ ಹಾದಿಯಲ್ಲಿ ಒಂದು ಐತಿಹಾಸಿಕ ನಿರ್ಧಾರ. ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿಯವನ್ನು ಐವತ್ತರ ದಶಕದ ಆರಂಭದಲ್ಲಿಯೇ 370ನೇ ವಿಧಿಯ ಮೂಲಕ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದನ್ನು ವಿರೋಧಿಸಿದ್ದರು. ಈ ಕಾರಣಕ್ಕಾಗಿಯೇ ಅವರು ಪ್ರಾಣಾರ್ಪಣೆ ಮಾಡಿಕೊಂಡಿದ್ದರು. ಈ ದಿಸೆಯಲ್ಲಿ ಶ್ಯಾಮಪ್ರಸಾದ್ ಮುಖರ್ಜಿಯವರ ಕನಸನ್ನು ನರೇಂದ್ರಮೋದಿಯವರು ನನಸು ಮಾಡಿದರು. ಜೊತೆಗೆ ಜಮ್ಮು- ಕಾಶ್ಮೀರ ಪುನರ್ವಿಂಗಡಣಾ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಿ ಅದಕ್ಕೆ ಅನುಮೋದನೆ ಪಡೆದುಕೊಂಡರು. ಈ ಯೋಜನೆ ಅನ್ವಯ ಜಮ್ಮು- ಕಾಶ್ಮೀರ ಮತ್ತು ಲಡಾಕ್ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರೂಪಗೊಂಡವು. ಈ ಮೂಲಕ ಜಮ್ಮು- ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿ ರೂಪಾಂತರ ಹೊಂದಿತು. ಇದರಿಂದಾಗಿ ಸಾವಿರ ವರ್ಷಗಳಿಗೂ ಹಳೆಯದಾದ, ಮತ್ತು ಭಾರತದ ಅಖಂಡತೆ ಮತ್ತು ಏಕತೆಗೆ ಧಕ್ಕೆಯಾಗಿದ್ದ ಸಮಸ್ಯೆಯೊಂದು ಯಾರೂ ನಿರೀಕ್ಷಿಸದ ರೀತಿಯಲ್ಲಿ ಬಗೆಹರಿಯಿತು. ಇದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಅತಿದೊಡ್ಡ ಸಾಧನೆ.

ಮುಸ್ಲಿಮ್ ಧಾರ್ಮಿಕ ಕಾಯಿದೆಯ ರಕ್ಷಣೆಯನ್ನು ಪಡೆದುಕೊಂಡು ತಮ್ಮ ಪತ್ನಿಗೆ ನಿರ್ದಾಕ್ಷಿಣ್ಯವಾಗಿ ನೀಡುತ್ತಿದ್ದ ತ್ರಿವಳಿ ತಲಾಖ್ ರದ್ದತಿ ಮೋದಿ ಸರ್ಕಾರದ ಅತ್ಯಂತ ದಿಟ್ಟ ನಿರ್ಧಾರ. ಇಂಥ ನಿರ್ಧಾರದ ಪರಿಣಾಮವಾಗಿ ಮೂಕವೇದನೆ ಅನುಭವಿಸುತ್ತಿದ್ದ ಕೋಟ್ಯಂತರ ಮುಸ್ಲಿಂ ಸೋದರಿಯವರು ವೈವಾಹಿಕ ಜೀವನದ ಅಭದ್ರತೆಯಿಂದ ಮುಕ್ತರಾಗುವ ಪರಿಸ್ಥಿತಿ ನಿರ್ಮಾಣಗೊಂಡಿತು. ಇನ್ನು ಭಾರತವನ್ನು ಅತ್ಯಂತ ಗಂಭೀರವಾಗಿ ಕಾಡುತ್ತಿದ್ದ ಉಗ್ರಗಾಮಿ ವಿರುದ್ಧದ ಕಾಯ್ದೆ Unlawful Activities (Prevention) Amendment Bill, 2019  ಒಂದು ಮಹತ್ವದ ಕಾಯಿದೆ. ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನ, ಪೌರತ್ವ ತಿದ್ದುಪಡಿ ಕಾಯಿದೆಯ ಮೂಲಕ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ರಾಷ್ಟ್ರಗಳಲ್ಲಿ ಧಾರ್ಮಿಕ ಹಿಂಸೆಗೆ ಗುರಿಯಾಗಿದ್ದು, ಭಾರತಕ್ಕೆ ಮರಳಲು ಇಚ್ಛಿಸುತ್ತಿದ್ದ, ಹಿಂದುಗಳು, ಬೌದ್ಧರು, ಜೈನರು, ಸಿಕ್ಖರು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ನೀಡುವ ಮಹತ್ವದ ನಿರ್ಧಾರ ಮೋದಿ ಸರ್ಕಾರದ ಮತ್ತೊಂದು ಐತಿಹಾಸಿಕ ಕಾರ್ಯಕ್ರಮ. ಇದರ ಜೊತೆಗೆ ಸಾವಿರಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಮಜನ್ಮಭೂಮಿ ವಿವಾದಕ್ಕೆ ಸುಪ್ರೀಂಕೋರ್ಟ್ ತೀರ್ಪಿನಂತೆ ಸರ್ವ ಸಮ್ಮತ ನಿರ್ಧಾರ ಕೈಗೊಂಡದ್ದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ದೂರ ದೃಷ್ಟಿಯ ಫಲ.

ಇದೆಲ್ಲಕ್ಕೆ ಕಳಶವಿಟ್ಟ ಹಾಗೆ ಮಹಾಮಾರಿ ಕೊರೋನ ವೈರಸ್ ಜಗತ್ತಿನ ಉದ್ದಗಲಕ್ಕೂ ಸ್ಫೋಟಗೊಂಡ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ದಿಟ್ಟ ನಿರ್ಧಾರಗಳು ಇಡೀ ಜಗತ್ತಿಗೆ ಮಾದರಿ ಆಯಿತು. ಕೊರೋನಾ ಹೆಮ್ಮಾರಿ ಭಾರತವನ್ನು ಪ್ರವೇಶಿಸಿದ ಗಳಿಗೆಯಿಂದಲೇ ಕೊರೋನಾ ವ್ಯಾಪಿಸದಂತೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಪರಿಣಾಮವಾಗಿ ಭಾರತದ ಲಕ್ಷಾಂತರ ಜನರು ಜೀವ ಉಳಿಯಿತು. ತಮ್ಮ ದಿಟ್ಟ ನಿರ್ಧಾರ ರಾಜಕೀಯ ಇಚ್ಛಾಶಕ್ತಿಯ ಪರಿಣಾಮ ನರೇಂದ್ರ ಮೋದಿಯವರು ವಿಶ್ವದ ಅಗ್ರಗಣ್ಯ ನಾಯಕರಾಗಿ ಮೋದಿಯವರು ಹೊರಹೊಮ್ಮಿದ್ದಾರೆ. ಇಂಥ ದೂರದೃಷ್ಟಿಯ ಹಾಗೂ ರಾಜಕೀಯ ಇಚ್ಛಾಶಕ್ತಿಯ ಪ್ರಧಾನಿಯನ್ನು ಹೊಂದಿರುವುದು ನಿಜಕ್ಕೂ ಭಾರತಕ್ಕೆ ಮತ್ತು ಭಾರತೀಯರಿಗೆ ಹೆಮ್ಮೆಯ ವಿಷಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು