ಶುಕ್ರವಾರ, ಮಾರ್ಚ್ 5, 2021
17 °C
ಬಲ– ಎಡಪಂಥೀಯ ವಿಚಾರಗಳು ಪರಸ್ಪರ ಸಂವಾದಿಸದಿರುವಂತಹ ಸ್ಥಿತಿ ಏಕೆ?

ಮತಾಂಧತೆಯ ವಿರೋಧದಲ್ಲೂ ‘ಮತಾಂಧತೆ’

ರಾಜಾರಾಮ ತೋಳ್ಪಾಡಿ/ ನಿತ್ಯಾನಂದ ಬಿ. ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಮಧ್ಯಯುಗದ ಸಂದರ್ಭದಲ್ಲಿ ಶರಣರು ಕಂಡರಿಸಿದ ಲೋಕಜ್ಞಾನವನ್ನು ಈ ಕಾಲದಲ್ಲಿ ಮರುನೆನಪು ಮಾಡಿಕೊಳ್ಳಬೇಕು ಎಂಬ ಸಂಕಲ್ಪದಿಂದ ಹಾಗೂ ಸಾಮಾಜಿಕ ಕಾಳಜಿಯ ಸದುದ್ದೇಶದಿಂದ ‘ಮತ್ತೆ ಕಲ್ಯಾಣ’ ಎಂಬ ಅಭಿಯಾನವನ್ನು ಸಾಣೇಹಳ್ಳಿ ಮಠದ ಶ್ರೀಗಳು ಆರಂಭಿಸಿದ್ದಾರೆ. ಶರಣರು ತಮ್ಮ ಕಾಲದ ಜನರ ಜೊತೆ ನಡೆಸಿದ ‘ಸಂಭಾಷಣೆ’ಯಲ್ಲಿರುವ ಅರಿವನ್ನು ಈ ಕಾಲದ ಜನರ ಮುಂದಿಡುವ ಶ್ರೀಗಳ ಪ್ರಯತ್ನ ಸ್ತುತ್ಯರ್ಹ.

ಉದಾತ್ತ ಉದ್ದೇಶದ, ಜಂಗಮ ಸ್ವರೂಪದ ಈ ಕಾರ್ಯಕ್ರಮವನ್ನು ವಿವಾದಗೊಳಿಸುವ ಪ್ರಯತ್ನ ನಡೆದಿದೆ. ತಮ್ಮನ್ನು ಪ್ರಗತಿಪರರು ಎಂದು ಘೋಷಿಸಿಕೊಂಡ ಕೆಲವರು ‘ಬಲಪಂಥೀಯ ಸಿದ್ಧಾಂತಿಗಳು ಈ ಕಾರ್ಯಕ್ರಮದ ವೇದಿಕೆಯಲ್ಲಿದ್ದರೆ ನಾವು ಉಪನ್ಯಾಸ ನೀಡುವುದಿಲ್ಲ’ ಎಂಬ ನೆಪವೊಡ್ಡಿ ಅಭಿಯಾನದಿಂದ ಅಂತರ ಕಾಯ್ದುಕೊಂಡಿದ್ದಾರೆ.ಹಾಗೆ ನೋಡಿದರೆ ಈ ಸಂಚಾರಿ ಕಾರ್ಯಕ್ರಮದ ಉಪನ್ಯಾಸಕರಲ್ಲಿ ಎಡಪಂಥೀಯ ಒಲವಿನ ಚಿಂತಕರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಹೀಗಿದ್ದೂ ಮತ್ತೆ ಕಲ್ಯಾಣದ ಬಗ್ಗೆ ಕ್ಯಾತೆ ತೆಗೆದಿರುವ ನಡವಳಿಕೆ ವೈಯಕ್ತಿಕವಾಗಿರದೆ, ಒಂದು ವಿದ್ಯಮಾನವಾಗಿರುವುದರಿಂದ ಆ ಕುರಿತು ಚಿಂತನೆ ನಡೆಸುವುದು ಸೂಕ್ತ.

ಭಾರತದ ಸಂದರ್ಭದಲ್ಲಿ, ಇಲ್ಲಿನ ಕೆಲವು ಎಡ-ಬಲ ಸಿದ್ಧಾಂತಿಗಳಿಗೆ ವಿಚಿತ್ರವಾದ ಕಾಯಿಲೆಯೊಂದು ಅಮರಿ ಕೊಂಡಿದೆ. ಅದೇನೆಂದರೆ, ನಮ್ಮ ಚರಿತ್ರೆ- ಪರಂಪರೆಗಳಲ್ಲಿರುವ ಪೂರ್ವಸೂರಿಗಳನ್ನು- ಮಹನೀಯರನ್ನು ಆಸ್ತಿ ಪಾಲು ಮಾಡಿಕೊಳ್ಳುವಂತೆ ಹಿಸ್ಸೆ ಮಾಡಿಕೊಳ್ಳುವ ರೋಗ. ಈ ಪಾಲು-ಪಟ್ಟಿ ಎಷ್ಟು ವಿಚಿತ್ರವಾಗಿದೆಯೆಂದರೆ ರಾಮ, ಹನುಮ, ಕೃಷ್ಣ ಮೊದಲಾದವರನ್ನು ಬಲಪಂಥೀಯರೂ, ವಾಲಿ, ರಾವಣ, ಬಲಿ ಮೊದಲಾದವರನ್ನು ಎಡಪಂಥೀಯರೂ ತಮ್ಮವರನ್ನಾಗಿ ಮಾಡಿಕೊಂಡು, ಅವರ ಪರವಾಗಿ ವಕೀಲಿಕೆ ಮಾಡುತ್ತಿದ್ದಾರೆ. ಹಾಗೆಯೇ ಶಂಕರ- ಮಧ್ವ- ಪುರಂದರರನ್ನು ಬಲಪಂಥೀಯರೂ ಬುದ್ಧ- ಬಸವ- ಕನಕರನ್ನು ಎಡಪಂಥೀಯರೂ ತಮ್ಮ ತಂಡದವರೆಂದು ಭಾವಿಸಿಕೊಂಡಿದ್ದಾರೆ. ಶಿವಾಜಿಯನ್ನು ಬಲಪಂಥೀಯರೂ ಟಿಪ್ಪುವನ್ನು ಎಡಪಂಥೀಯರೂ ಸೆಳೆದುಕೊಂಡಿದ್ದಾರೆ. ಸದರಿ ಆಸ್ತಿ ಪಾಲು ಇಲ್ಲಿಗೇ ನಿಲ್ಲದೆ, ಕನ್ನಡದ ಉದ್ಧಾಮ ಸಾಹಿತಿಗಳನ್ನೂ ಇದೇ ರೀತಿ ವಿಭಜಿಸಿಕೊಳ್ಳಲಾಗಿದೆ. ಈ ಬಗೆಯಲ್ಲಿ ಹಿಸ್ಸೆ ಮಾಡಿಕೊಳ್ಳುವುದೇ ಒಂದು ಬಗೆಯ ಹಿಂಸೆಯಲ್ಲವೇ ಮತ್ತು ನಮ್ಮ ಹಿರೀಕರಿಗೆ ನಾವು ಮಾಡುತ್ತಿರುವ ಅಪಮಾನವಲ್ಲವೇ?

ಈಗಾಗಲೇ ಹೆಸರಿಸಿದ ಧೀಮಂತರನ್ನು ತಮ್ಮವರನ್ನಾಗಿಸಿಕೊಂಡವರು, ತಮ್ಮ ರಾಜಕೀಯ ನಿಲುವುಗಳಿಗೆ ಸರಿಹೊಂದದ ಕೆಲವು ವಿಚಾರಗಳನ್ನು ಈ ಮಹನೀಯರ ಚಿಂತನೆ- ಬರವಣಿಗೆಗಳಲ್ಲಿ ಗಮನಿಸಿದಾಗ ಜಾಣ ಮೌನ ವಹಿಸಿದ್ದೂ ಇದೆ. ಹಾಗೆಯೇ ತಮ್ಮ ರಾಜಕೀಯ ನಿಲುವುಗಳಿಗೆ ಪೂರಕರಲ್ಲದವರು ಮತ್ತು ನಿಜಕ್ಕೂ ಮಹಾತ್ಮರಾದವರು ತಮ್ಮ ಪರಂಪರೆಗಳಲ್ಲಿದ್ದರೂ
ಅವರನ್ನು ನೆನಪಿಸಿಕೊಳ್ಳಲೂ ಹಿಂದೇಟು ಹಾಕಿದ್ದಿದೆ. ಉದಾಹರಣೆಗೆ, ರಾಮಾಯಣದ ಭರತ- ವಿಭೀಷಣರನ್ನು, ಮಹಾಭಾರತದ ಧರ್ಮರಾಯ- ವಿದುರರನ್ನು, ಮಧ್ಯಯುಗದ ಅಲ್ಲಮ- ನಾಗಾರ್ಜುನರನ್ನು,ಆಧುನಿಕ ಕಾಲದ ಗಾಂಧಿ- ರಮಣರನ್ನು ಇವರಾರೂ ಕಣ್ಣೆತ್ತಿಯೂ ನೋಡುವುದಿಲ್ಲ.

ನಮ್ಮ ಸಮಾಜದ ಸು-ಸ್ಥಿತಿಗೆ ಯಾವುದನ್ನು ನಾವು ಆದರ್ಶಗಳು ಎಂದು ತಿಳಿಯುತ್ತೇವೋ, ಅಂತಹ ಆದರ್ಶಗಳ ಆಶೋತ್ತರಗಳನ್ನು ಪೂರೈಸುವುದಕ್ಕಾಗಿನಾವು ಏನೆಲ್ಲವನ್ನು ಮಾಡುತ್ತೇವೋ ಅವಾವುವೂ ಅ-ಸಮಸ್ಯಾತ್ಮಕವಾದುವಲ್ಲ, ಪ್ರಶ್ನಾತೀತವಾದುವಲ್ಲ. ನಾವು ‘ಸಮಾನತೆ’ ಎಂಬ ಮೌಲ್ಯದ, ‘ಸಾಮಾಜಿಕ ನ್ಯಾಯ’ ಎಂಬ ಆದರ್ಶದ, ‘ಧಾರ್ಮಿಕ ಸಹಬಾಳ್ವೆ’ ಎಂಬ ಆಶಯದ ಕಾರ್ಯಕ್ರಮಗಳನ್ನು ನಡೆಸುವುದು, ಕಾನೂನುಗಳನ್ನು ಜಾರಿಗೆ ತರುವುದು ಸರಿಯೇ ಆದರೂ ಅಲ್ಲೂ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಸಂವಾದದ ನಿಕಷ
ಕ್ಕೊಡ್ಡಬೇಕು. ಅನೇಕಾನೇಕ ಬಗೆಯ ಪರಸ್ಪರ ಭಿನ್ನ–ವಿಭಿನ್ನ ವಿಚಾರಗಳನ್ನು ಮಥಿಸಿದಾಗ ಮೂಡಿಬರುವ ಚಿಂತನೆಯಿಂದ ಲೋಕಕಲ್ಯಾಣವನ್ನು ಸಮಗ್ರವಾಗಿ ಸಾಧಿಸುವ ಪ್ರಯತ್ನ ನಡೆಸಬೇಕು. ಇದು ನಡೆಯದಿದ್ದರೆ ಯಾವ ಮೌಲ್ಯ- ಆದರ್ಶಗಳೂ ಲೋಕೋತ್ತರವಾಗಿ ನಿಲ್ಲಲಾರವು ಎಂಬ ತಿಳಿವಳಿಕೆ ನಮಗೆಲ್ಲರಿಗೂ ಇರಬೇಕು.

ಈ ಕಷ್ಟದ ದಾರಿಯನ್ನು ಬಿಟ್ಟು ‘ಸಾಮಾಜಿಕ ಸಮಾನತೆ’ಯ, ‘ಧಾರ್ಮಿಕ ಸಹಬಾಳ್ವೆ’ಯ ಕಾರ್ಯಕ್ರಮಗಳನ್ನು ಯಾರು ನಡೆಸುತ್ತಿದ್ದಾರೆ, ಅವರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚುವ ತನಿಖಾಧಿಕಾರಿಗಳ ಪಾತ್ರವನ್ನಷ್ಟೇ ನಿಭಾಯಿಸುವವರು ಯಾವ ಸಾಮಾಜಿಕ ವಾಸ್ತವವನ್ನೂ ಮೂಲ ಜಿಜ್ಞಾಸೆಗೊಳಪಡಿಸುವ ಚಿಂತಕರಾಗಲಾರರು. ಸಂಸ್ಕೃತಿ ಪ್ರತಿಪಾದನೆಗೂ, ಸಂಸ್ಕೃತಿ ಚಿಂತನೆಗೂ ಇರುವ ವ್ಯತ್ಯಾಸವನ್ನು ತಿಳಿಯಲಾರರು. ನಾವು ಯಾವುದನ್ನು ಪ್ರತಿನಿಧಿಸುತ್ತೇವೋ, ಅದನ್ನು ನಾವು ಮಾತ್ರ ಪ್ರತಿನಿಧಿಸುತ್ತಿದ್ದೇವೆ,
ಉಳಿದವರು ಅದರ ಉಸಾಬರಿಗೆ ಬರಬಾರದು ಎಂಬುದು ಪ್ರಗತಿಪರವಾದ ನಿಲುವೇ? ಹೀಗೆ ತಾಕೀತು ಮಾಡುವವರ ಠೇಂಕಾರದಲ್ಲಿರುವುದು ಪ್ರಜಾಸತ್ತಾತ್ಮಕಮೌಲ್ಯವೇ? ಯಾವುದು ಪ್ರಜಾಸತ್ತೆ, ಯಾವುದು ಬಹುತ್ವ, ಯಾವುದು ಪ್ರಗತಿಪರತೆ, ಯಾವುದು ಅಲ್ಲ ಎಂದು ವಿಚಾರಣೆ ನಡೆಸಿ ನ್ಯಾಯತೀರ್ಮಾನ ಮಾಡುತ್ತ, ತಮಗೆ ಸಹನೀಯವಲ್ಲದ ಜನರ ಬಗ್ಗೆ ಬಾಯಿಗೆ ಬಂದ ಆರೋಪಗಳನ್ನು ಮಾಡುತ್ತ, ಕನಿಷ್ಠಪಕ್ಷ ತಾವು ಮಾಡುವ ಆರೋಪಗಳ ಸತ್ಯಾಸತ್ಯತೆಯ ವಿಮರ್ಶೆಯನ್ನೂ ಮಾಡದಿರುವುದನ್ನು ಏನೆಂದು ಕರೆಯೋಣ?

ಇಂದು ನಮ್ಮ ನಾಡಿನಲ್ಲಿ ಎಡಪಂಥೀಯತೆ, ಪ್ರಗತಿಪರತೆ, ಸೆಕ್ಯುಲರ್‌ವಾದ ಇತ್ಯಾದಿ ಸಂಗತಿಗಳು ಗಂಭೀರವಾದ ಸವಾಲುಗಳನ್ನು ಎದುರಿಸುತ್ತಿವೆ. ಚುನಾವಣಾ ರಾಜಕೀಯವನ್ನು ಸೈದ್ಧಾಂತಿಕ ಹಣಾಹಣಿ ಎಂದೇ ಭಾವಿಸುವುದಾದಲ್ಲಿ (ಅದು ಅಷ್ಟೇ ಅಲ್ಲ) ಸೆಕ್ಯು ಲರ್‌
ವಾದ, ಎಡಪಂಥೀಯವಾದಗಳನ್ನು ಜನರು ಬದಿಗೆ ಸರಿಸಿದ ತೀರ್ಪು ನಮ್ಮ ಮುಂದಿದೆ. ಈ ಹಿನ್ನೆಲೆಯಲ್ಲಿ, ಪ್ರಗತಿಪರರಾದವರು ಎಲ್ಲವುಗಳಿಗಿಂತಲೂ ಮೊದಲು ಸ್ವ-ವಿಮರ್ಶೆ ಮಾಡಿಕೊಳ್ಳುವುದು ಸೂಕ್ತವಲ್ಲವೇ?

ನಮ್ಮದು ಎಂದು ನಾವು ತಿಳಿದುಕೊಳ್ಳುವ ಆಶೋತ್ತರಗಳನ್ನು ವಿಮರ್ಶಿಸದೆ ಅವುಗಳಿಗೆ ಸಾರ್ವಭೌಮತ್ವವನ್ನು ಕೊಡುವುದು ಇನ್ನೊಂದು ಬಗೆಯ ಮತಾಂಧತೆಯಾಗುತ್ತದೆ. ಯಾವ ಕಾಲದಲ್ಲೂ ಯಾವ ಸಿದ್ಧಾಂತವೂ ಸಾರ್ವಭೌಮವೆನಿಸಿಕೊಳ್ಳಲು ಸಾಧ್ಯವಿಲ್ಲ. ಅವುಗಳೆಲ್ಲವನ್ನೂ ನಾವು ನಮ್ಮನಮ್ಮ ಸಂದರ್ಭದಲ್ಲಿ ಮರುವಿಮರ್ಶೆ ಮಾಡಿ ಅದರ ಯಥಾರ್ಥತೆಯನ್ನು ಮನಗಾಣಬೇಕು. ಅಂತಹ ಒಂದು ಪ್ರಯತ್ನ ಮತ್ತೆ ಕಲ್ಯಾಣದಲ್ಲಿದೆ. ಅದು ಯಶಸ್ಸು ಪಡೆಯುತ್ತದೋ ಇಲ್ಲವೋ ಎಂಬುದು ಮುಖ್ಯವಲ್ಲ. ಅದರ ಫಲಿತಾಂಶ ನಾಳೆಯೇ ಸಿಗಲಿದೆ ಎಂಬ ಆಶಾವಾದವೂ ಇರಬೇಕಾಗಿಲ್ಲ. ‘ಐಡಿಯಾ ಆಫ್ ಇಂಡಿಯಾ’ ಇದ್ದಂತೆ ಮತ್ತೆ ಕಲ್ಯಾಣ ಒಂದು
ಬಗೆಯ ‘ಐಡಿಯಾ ಆಫ್‌ ಕರ್ನಾಟಕ’. ನಮ್ಮ ದೇಶದ ಜನ ಸಮುದಾಯಗಳು ನಾಳೆ ನೆಮ್ಮದಿಯ ಬದುಕನ್ನು ಕಂಡುಕೊಳ್ಳುವುದಕ್ಕಾಗಿ ತುಡಿಯುವ ಭಾವಶೀಲ ವಿಚಾರ.

ಗಮನಾರ್ಹ ಬಲಪಂಥೀಯ ವಿಚಾರಗಳು, ಅಷ್ಟೇ ಗಮನಾರ್ಹ ಎಡಪಂಥೀಯ ವಿಚಾರಗಳೊಂದಿಗೆ ಸಂವಾದಿಸದೇ ಇರುವಂತಹ ಮಡಿ-ಮೈಲಿಗೆಯ ಹೊಸ ಬಗೆಯ ಜಾತಿ ಪದ್ಧತಿಯನ್ನು ನಾವು ಯಾಕಾದರೂ ಸೃಷ್ಟಿಸುತ್ತಿದ್ದೇವೆ? ದೇಶದಲ್ಲಿ ಕಳೆದ 30 ವರ್ಷಗಳಿಂದ ಎಡ ಮತ್ತು ಬಲದವರ ನಡುವೆ ಗಂಭೀರ ಸಂವಾದವೇ ನಡೆದಿಲ್ಲ. ಇದು ನಡೆಯದಿದ್ದ ಪರಿಣಾಮವೆಂಬಂತೆ, ಬಲಪಂಥೀಯತೆ ತನ್ನ ವಿಶಿಷ್ಟವಾದ ಸಾಂಸ್ಕೃತಿಕ ಬಂಡವಾಳದ ಎದೆಗಾರಿಕೆಯಿಂದ ಇಡೀ ಸಮಾಜವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದರೆ, ಭಾರತದ ಎಡಪಂಥೀಯತೆ ಮೂಲೆಗುಂಪಾಗಿ ತಾನು ಈಗ ಬಂದು ತಲುಪಿರುವ ಮೂಲೆಯನ್ನೇ ಜಗತ್ತು ಎಂದು ಭಾವಿಸಿಕೊಂಡಂತಿದೆ. ‘ಮತಾಂಧತೆಯನ್ನು ವಿರೋಧಿಸುತ್ತ ವಿರೋಧಿಸುತ್ತ ಪ್ರಕ್ಷುಬ್ಧ ಕಾಲದಲ್ಲಿ ಸ್ವತಃ ನಾವೇ ಮತಾಂಧರಾಗುತ್ತೇವೆ’ ಎಂದು ರಾಮಮನೋಹರ ಲೋಹಿಯಾ ಅವರು ಹೇಳಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು