ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ದಾಲಿಕೆಯಾಗಿದ್ದು ಯಾರ ಸಂಭಾಷಣೆ?

ಕದ್ದಾಲಿಕೆ ನಡೆದಾಗ ರಾಜ್ಯದಲ್ಲಿ ಸಾರ್ವಜನಿಕ ತುರ್ತುಸ್ಥಿತಿ ನಿರ್ಮಾಣವಾಗಿತ್ತೇ?
Last Updated 8 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಮೂರು ತಿಂಗಳುಗಳ ಹಿಂದೆ ಕರ್ನಾಟಕದ ಆಡಳಿತವು ಜೆಡಿಎಸ್‌– ಕಾಂಗ್ರೆಸ್ ಮೈತ್ರಿಕೂಟದ ಕೈಯಲ್ಲಿ ಇತ್ತು. ಮೈತ್ರಿಕೂಟದ ಕೆಲವು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರ ಪರಿಣಾಮವಾಗಿ ಮೈತ್ರಿಕೂಟವು ವಿಧಾನಸಭೆಯಲ್ಲಿ ಅಗತ್ಯ ಸಂಖ್ಯಾಬಲ ಕಳೆದುಕೊಂಡಿತು. ಅದುವರೆಗೆ ವಿರೋಧ ಪಕ್ಷದಲ್ಲಿ ಇದ್ದ ಬಿಜೆಪಿಯು ಸರ್ಕಾರ ರಚಿಸಲು ಅವಕಾಶವಾಯಿತು.

ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಅಪಾಯ ಎದುರಾದ ಸಂದರ್ಭದಲ್ಲಿ, ರಾಜಕೀಯ ಉದ್ದೇಶಕ್ಕಾಗಿ ಹಲವರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗಿದೆ ಎಂಬ ದೂರುಗಳು ಕೇಳಿಬಂದವು. 2018ರ ಆಗಸ್ಟ್‌ 1ರಿಂದ 2019ರ ಆಗಸ್ಟ್‌ 19ರವರೆಗಿನ ದೂರವಾಣಿ ಕರೆಗಳ ಕದ್ದಾಲಿಕೆಯ ತನಿಖೆಯನ್ನು ಬಿಜೆಪಿ ನೇತೃತ್ವದ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆ ಸಿಬಿಐಗೆ ವಹಿಸಿತು.

ಹಿಂದಿನ ಸರ್ಕಾರದ ಅವಧಿಯಲ್ಲಿ ನೂರಾರು ರಾಜಕೀಯ ವ್ಯಕ್ತಿಗಳ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗಿದೆ ಎಂಬ ಮಾಹಿತಿಯು ಸಾರ್ವಜನಿಕರ ಕಿವಿ ಮೇಲೆ– ಸಿಬಿಐ ತನಿಖೆ ಆರಂಭ ಆದಾಗಿನಿಂದ– ಮಾಧ್ಯಮಗಳ ಮೂಲಕ ಬೀಳುತ್ತಿದೆ. ಈ ವಿಚಾರವಾಗಿ ಸಿಬಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ, ಮಾಧ್ಯಮಗಳಲ್ಲಿ ವರದಿ ರೂಪದಲ್ಲಿ ಪ್ರಕಟ ಆಗಿರುವುದನ್ನು, ಪ್ರಸಾರ ಆಗಿರುವುದನ್ನು ನಿರಾಕರಿಸಿಯೂ ಇಲ್ಲ.

ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ಸಂಸ್ಥೆಯು ತನಿಖೆ ನಡೆಸುತ್ತಿರುವ ರೀತಿ, ಮಾಲೀಕ ಯಾರು ಎಂಬುದು ಗೊತ್ತಿಲ್ಲದ ದನಕರುಗಳ ಕಳ್ಳತನದ ತನಿಖೆ ನಡೆಸುವ ಬಗೆಯಲ್ಲಿ ಇದೆ ಎಂಬುದು ದೂರವಾಣಿಯ ಕದ್ದಾಲಿಕೆಗೆ ಸಂಬಂಧಿಸಿದ ಕಾನೂನುಗಳ ಅರಿವಿರುವ ಯಾವುದೇ ವ್ಯಕ್ತಿಗೆ ಅನಿಸಬಹುದು. ದೂರವಾಣಿ ಕದ್ದಾಲಿಕೆಗೆ ಗುರಿಯಾದ ರಾಜಕೀಯ ಅಥವಾ ರಾಜಕೀಯೇತರ ವ್ಯಕ್ತಿಗಳನ್ನು ಸಿಬಿಐ, ‘ಯಾವುದೇ ಕಾನೂನುಬದ್ಧ ಹಕ್ಕು ಹೊಂದಿಲ್ಲದವರು’, ‘ಅವರಿಗೆ ಕಾನೂನಿನ ಪ್ರಕಾರ ಯಾವುದೇ ತೊಂದರೆ ಆಗಿಲ್ಲ’ ಎಂಬಂತೆ ಕಾಣಬಾರದು. ಹಿಂದಿನ ಸರ್ಕಾರದ ಅವಧಿಯಲ್ಲಿ ಕಾನೂನಿನ ವ್ಯಾಪ್ತಿ ಮೀರಿ ನಡೆಸಿದ ದೂರವಾಣಿ ಕದ್ದಾಲಿಕೆಗೆ ಗುರಿಯಾದ ವ್ಯಕ್ತಿಗಳಿಗೆ, ‘ನಿಮ್ಮ ಸಂಭಾಷಣೆಗಳು ಕದ್ದಾಲಿಕೆ ಆಗಿದ್ದವು’ ಎಂದು ತಿಳಿಸುವ ಹೊಣೆ ಸಿಬಿಐ ಮೇಲಿದೆ. ಕದ್ದಾಲಿಕೆ ನಡೆದಿದ್ದು ಯಾವ ದಿನ, ಎಷ್ಟು ಹೊತ್ತಿಗೆ ಎಂಬ ಮಾಹಿತಿಯನ್ನೂ ಅದು ನೀಡಬೇಕು.

ವ್ಯಕ್ತಿಯ ದೂರವಾಣಿ ಸಂಭಾಷಣೆಯನ್ನು ಆಲಿಸಲು, ದೂರವಾಣಿ ಮೂಲಕ ಕಳುಹಿಸಿದ ಹಾಗೂ ಸ್ವೀಕರಿಸಿದ ಸಂದೇಶಗಳನ್ನು ಪರಿಶೀಲಿಸಲು ಭಾರತೀಯ ಟೆಲಿಗ್ರಾಫ್ ಕಾಯ್ದೆ– 1985ರ ಸೆಕ್ಷನ್ 5(2) ಅಡಿ ಅವಕಾಶವಿದೆ. ದೂರವಾಣಿ ಸಂಭಾಷಣೆಗಳ ವಿಚಾರದಲ್ಲಿ ಹಲವು ದೇಶಗಳು ಸ್ವತಂತ್ರವಾದ ನ್ಯಾಯಾಂಗ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ಹೊಂದಿವೆ. ಆದರೆ, ಭಾರತದಲ್ಲಿ ಇಂತಹ ವ್ಯವಸ್ಥೆ ಇಲ್ಲ. ಸೆಕ್ಷನ್ 5(2) ಅನ್ನು ಹೇಗೆ ವ್ಯಾಖ್ಯಾನಿಸಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ 1997ರಲ್ಲಿ, ಪೀಪಲ್ಸ್‌ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್‌ (ಪಿಯುಸಿಎಲ್‌) ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ.

ಸೆಕ್ಷನ್ 5(2)ರ ಅಡಿ ದೂರವಾಣಿ ಸಂಭಾಷಣೆ ಆಲಿಸಲು ತೀರ್ಮಾನಿಸುವ ಮುನ್ನ ಸಾರ್ವಜನಿಕವಾಗಿ ಒಂದೆರಡು ವಿಷಯಗಳು ಗೊತ್ತಾಗಿರಬೇಕು– ಅಂದರೆ ಸಾರ್ವಜನಿಕ ತುರ್ತು ಸ್ಥಿತಿ ನಿರ್ಮಾಣ ಆಗಿರಬೇಕು ಅಥವಾ ಸಾರ್ವಜನಿಕರ ಭದ್ರತೆಗೆ ಅಪಾಯ ಎದುರಾಗಿರಬೇಕು. ಇಂತಹ ಸ್ಥಿತಿ ಎದುರಾಗಿದ್ದರೆ ಅದು ಸಾರ್ವಜನಿಕರ ಗಮನಕ್ಕೆ ಬಂದಿರುತ್ತದೆ ಎಂದು ಕೋರ್ಟ್‌ ಹೇಳಿತು. ಅಂತಹ ಸ್ಥಿತಿ ಸೃಷ್ಟಿಯಾದಾಗ ಮಾತ್ರವೇ ದೂರವಾಣಿ ಸಂಭಾಷಣೆ ಆಲಿಸುವುದಕ್ಕೆ ಅನುಮತಿ ನೀಡಬಹುದು. ಹಾಗಾದರೆ, 2018ರ ಆಗಸ್ಟ್‌ 1ರಿಂದ 2019ರ ಆಗಸ್ಟ್‌ 19ರ ನಡುವೆ ಸಾರ್ವಜನಿಕ ತುರ್ತುಸ್ಥಿತಿ ನಿರ್ಮಾಣವಾಗಿತ್ತೇ? ಅಥವಾ ಸಾರ್ವಜನಿಕರ ಭದ್ರತೆಗೆ ಅಪಾಯ ಎದುರಾಗಿತ್ತೇ? ಇದಕ್ಕೆ ಉತ್ತರ ನಮಗೆ ಈಗಾಗಲೇ ಗೊತ್ತಿದೆ. ಈಗ ಈ ಪ್ರಶ್ನೆಗೆ ಸಿಬಿಐ ಸಾರ್ವಜನಿಕವಾಗಿ ಉತ್ತರ ನೀಡಬೇಕು.

ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ಹಲವಾರು ವ್ಯಕ್ತಿಗಳ ದೂರವಾಣಿ ಸಂಭಾಷಣೆಗಳನ್ನು ಕದ್ದು ಆಲಿಸಿದ್ದರು ಎಂಬುದು ಸಿಬಿಐಗೆ ತನಿಖೆಯ ಸಂದರ್ಭದಲ್ಲಿ ಗೊತ್ತಾಗಿದೆ. ಇದು ಗೊತ್ತಾಗಿರುವುದು ಸಿಬಿಐ ಮೇಲೆ ಕಾನೂನುಬದ್ಧ ಹೊಣೆಗಾರಿಕೆಯೊಂದನ್ನು ಇರಿಸಿದೆ. ಅಂದರೆ, ಕದ್ದಾಲಿಕೆಗೆ ಗುರಿಯಾದ ವ್ಯಕ್ತಿಗಳನ್ನು ಅಪರಾಧದ ಬಲಿಪಶುಗಳು ಎಂದು ಪರಿಗಣಿಸಿ, ಅವರಿಗೆ ಕದ್ದಾಲಿಕೆ ಕುರಿತ ಮಾಹಿತಿ ನೀಡಬೇಕು.

ದೂರವಾಣಿ ಸಂಭಾಷಣೆಗಳ ಆಲಿಕೆ ನಡೆದಿರುವ ಬಗೆಯನ್ನು ನೋಡಿಯೇ– ಅಂದರೆ, ಸಂಬಂಧಪಟ್ಟ ಕಾನೂನುಗಳು, ಆ ಕಾನೂನುಗಳನ್ನು ಸುಪ್ರೀಂ ಕೋರ್ಟ್‌ ಅರ್ಥೈಸಿದ ಬಗೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಆಧರಿಸಿ– ಹಿಂದಿನ ಸರ್ಕಾರದ ಅವಧಿಯಲ್ಲಿ ಸಂಭಾಷಣೆ ಕದ್ದಾಲಿಕೆ ನಿಜಕ್ಕೂ ನಡೆದಿತ್ತು ಎಂಬುದನ್ನು ಸಾಬೀತು ಮಾಡಲು ಸಿಬಿಐಗೆ ಸಾಧ್ಯವಾಗುತ್ತದೆ. ಹೀಗೆ ಸಾಬೀತು ಮಾಡುವುದು ಹಾಗೂ ಕ್ರಿಮಿನಲ್ ಅಪರಾಧ ಎಸಗಿದ್ದಕ್ಕಾಗಿ ಕದ್ದಾಲಿಕೆ ನಡೆಸಿದವರ ಸುತ್ತ ಕಾನೂನಿನ ಕುಣಿಕೆ ಬಿಗಿಗೊಳಿಸುವುದು ಬೇರೆ ಬೇರೆ. ಇದನ್ನು ಇನ್ನೊಂದು ಬಗೆಯಲ್ಲಿ ಹೇಳಬೇಕು ಎಂದಾದರೆ, ಅಕ್ರಮ ಎಸಗಿದ್ದಕ್ಕೆ ಯಾರನ್ನು ಹೊಣೆ ಮಾಡಬೇಕು ಎಂಬ ಬಗ್ಗೆ ತೀರ್ಮಾನ ಮಾಡುವುದಕ್ಕೆ ಮೊದಲೇ, ಅದಕ್ಕೆ ಗುರಿಯಾದವರನ್ನು ಗುರುತಿಸಿ ಅವರಿಗೆ ಮಾಹಿತಿ ನೀಡಬೇಕಾಗುತ್ತದೆ.

ರಾಜ್ಯ ಸರ್ಕಾರವು ಸಿಬಿಐ ಸಂಸ್ಥೆಗೆ ಕೊಡುತ್ತಿರುವಂತಹ ಗೌರವವನ್ನು ಆ ಸಂಸ್ಥೆಗೆ ನೀಡಲು ನನಗಂತೂ ಕಷ್ಟ. ಕನ್ನಡ ಸಿನಿಮಾಗಳ ಚಿತ್ರಕಥೆ ಹಾಗೂ ಕಥಾಹಂದರಗಳಲ್ಲಿ ಸಿಬಿಐಗೆ ದೊಡ್ಡ ಸ್ಥಾನ ಇದೆ ಎಂಬುದು ನನಗೆ ಗೊತ್ತು! ಆದರೆ, ವಾಸ್ತವದಲ್ಲಿ ಈ ಸಂಸ್ಥೆಯ ಕೆಲಸಗಳಲ್ಲಿ ಬಹಳಷ್ಟು ಕೊರತೆಗಳು ಕಾಣಿಸುತ್ತವೆ. ಸಾರ್ವಜನಿಕವಾಗಿ ಬಹಳ ಮಹತ್ವದ್ದಾಗಿದ್ದ ಈಚಿನ ಕೆಲವು ಪ್ರಕರಣಗಳಲ್ಲಿ ಸಿಬಿಐ ಹಲವಾರು ಬಗೆಗಳಲ್ಲಿ ವೈಫಲ್ಯ ಕಂಡಿದೆ: ಉಜಿರೆಯ ಸೌಜನ್ಯಾ ಎಂಬ ಯುವತಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಕೊಲೆ, ಸುಪ್ರೀಂ ಕೋರ್ಟ್‌ ಸೂಚನೆ ಮೂಲಕ ತನಿಖೆ ನಡೆದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ– ಅದರಲ್ಲೂ ಮುಖ್ಯವಾಗಿ ಡೆಕ್ಕನ್ ಮೈನಿಂಗ್ ಪ್ರಕರಣ– ಪ್ರಾಸಿಕ್ಯೂಷನ್‌ನಲ್ಲಿ ಹಿನ್ನಡೆ ಅನುಭವಿಸಿದ್ದು; ಬೇರೆ ಕಡೆ ವಶಪಡಿಸಿಕೊಂಡು ಇರಿಸಿದ್ದ ಕಬ್ಬಿಣದ ಅದಿರು ಕಾಣೆ ಹಾಗೂ ರಫ್ತು ಪ್ರಕರಣಗಳನ್ನು ಇಲ್ಲಿ ಉದಾಹರಣೆಯಾಗಿ ಉಲ್ಲೇಖಿಸಬಹುದು.

ದೂರವಾಣಿ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಈಗ ನಡೆಸುತ್ತಿರುವ ಬಗೆಯಲ್ಲಿ ಮುಂದುವರಿಸುವುದರಲ್ಲಿ ಹೆಚ್ಚಿನ ಸಮರ್ಥನೆಯೇನೂ ಕಾಣಿಸುತ್ತಿಲ್ಲ. ಈ ಕದ್ದಾಲಿಕೆಗೆ ಗುರಿಯಾಗಿದ್ದವರು ಯಾರು ಎಂಬುದನ್ನು ಸಿಬಿಐ ತಕ್ಷಣಕ್ಕೆ ಬಹಿರಂಗಪಡಿಸಿದರೆ, ಅವರು ಕಾನೂನಿನ ಅಡಿ ಮುಂದಿನ ಹೆಜ್ಜೆ ಇರಿಸಲು ಅನುವಾಗುತ್ತದೆ.

ಸಿಬಿಐನ ನವದೆಹಲಿ ಮತ್ತು ಮುಂಬೈ ಕಚೇರಿಗಳನ್ನು ಹೊರತುಪಡಿಸಿದರೆ ಈ ವರ್ಷ ಅತಿಹೆಚ್ಚಿನ ಸಂಖ್ಯೆಯಲ್ಲಿ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದು ಈ ತನಿಖಾ ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ. ಆದರೆ, ಬೆಂಗಳೂರಿನಲ್ಲಿ ದಾಖಲಾಗುವ ಪ್ರಕರಣಗಳಿಗೆ ಸಂಬಂಧಿಸಿದ ಎಫ್‌ಐಆರ್‌ಗಳಲ್ಲಿ ಆ ಪ್ರಕರಣಗಳಿಗೆ ಸಂಬಂಧಿಸಿದ ಪೊಲೀಸ್‌ ಠಾಣೆ ನವದೆಹಲಿಯಲ್ಲಿ ಇದೆಯೇನೋ ಎಂಬ ರೀತಿಯ ಉಲ್ಲೇಖಗಳನ್ನು ಸಿಬಿಐ ಮಾಡುತ್ತದೆ. ಅದರ ಬದಲು, ತನ್ನ ಬೆಂಗಳೂರು ಕಚೇರಿಯನ್ನೇ ಪ್ರಕರಣಕ್ಕೆ ಸಂಬಂಧಪಟ್ಟ ಪೊಲೀಸ್ ಠಾಣೆ ಎಂದು ಸಿಬಿಐ ಪರಿಭಾವಿಸಬೇಕು. ಕರ್ನಾಟಕದ ಪೊಲೀಸ್‌ ಇಲಾಖೆಯು ಈ ರಾಜ್ಯದ ‘ಪೊಲೀಸ್‌ ವ್ಯವಸ್ಥೆ’ಯಲ್ಲಿ ಎಷ್ಟು ಭಾಗಿಯೋ ಅಷ್ಟೇ ಪ್ರಮಾಣದಲ್ಲಿ ಸಿಬಿಐ ಕೂಡ ವ್ಯವಸ್ಥೆಯಲ್ಲಿ ಭಾಗೀದಾರ.

ಕೆ.ವಿ. ಧನಂಜಯ,ಸುಪ್ರೀಂ ಕೋರ್ಟ್‌ ವಕೀಲ
ಕೆ.ವಿ. ಧನಂಜಯ,ಸುಪ್ರೀಂ ಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT