ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ: ಪ್ರಯಾಸದ ಪ್ರಯಾಣ

ನಂಜುಂಡಪ್ಪ ಸಮಿತಿಯ ಶಿಫಾರಸುಗಳು ನಮ್ಮ ಸರ್ಕಾರಗಳಿಗೆ ಕಾಣುವುದೇ ಇಲ್ಲ
Last Updated 17 ಮಾರ್ಚ್ 2020, 20:15 IST
ಅಕ್ಷರ ಗಾತ್ರ

ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, 2020-21ನೇ ಸಾಲಿನ ಬಜೆಟ್ ಅನ್ನು ಈ ತಿಂಗಳ 5ರಂದು ಮಂಡಿಸಿದರು. ಡಿ.ಎಂ.ನಂಜುಂಡಪ್ಪ ಅವರ ನೇತೃತ್ವದಲ್ಲಿ ರಚನೆಯಾಗಿದ್ದ ರಾಜ್ಯದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ವರದಿಯನ್ನು ಗೌರವಿಸುತ್ತಾ ಬಂದ ನಾಯಕ ಅವರು. ಆದರೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಆ ವರದಿಯಲ್ಲಿನ ಶಿಫಾರಸುಗಳನ್ನು ಈಗಿನ ಬಜೆಟ್‌ನಲ್ಲಿ ಅವರು ಮನ್ನಿಸಿದ್ದಾರೆಂಬ ಭಾವನೆ ಬರುತ್ತಿಲ್ಲ. ಪರಿಸ್ಥಿತಿ ಯಾವ ಹಂತ ಮುಟ್ಟಿದೆಯೆಂದರೆ, ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಅಗತ್ಯದ ಕುರಿತು ಬಜೆಟ್ ಮಂಡನೆಗೆ ಮುನ್ನ ಆಗಾಗ ಹೇಳಿಕೆ ನೀಡುತ್ತಿದ್ದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಈಗ ಆ ವಿಷಯದ ಕುರಿತು ಗಂಭೀರವಾಗಿ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ.

ಜಿ.ವಿ.ಜೋಶಿ

ನಂಜುಂಡಪ್ಪ ವರದಿಯ 25ನೇ ಅಧ್ಯಾಯದಲ್ಲಿರುವ ‘ಪ್ರಾದೇಶಿಕ ಅಸಮತೋಲನಗಳಿಗೆ ಪ್ರವಾಸೋದ್ಯಮದ ಅಭಿವೃದ್ಧಿ’ ಎಂಬ ತಲೆಬರಹವು ರಾಜ್ಯದ ಈಗಿನ ಸ್ಥಿತಿಗತಿಗೆ ಹೊಂದಿಕೆಯಾಗುತ್ತದೆ. ಸುಂದರವಾದ ಪ್ರಾಕೃತಿಕ ದೃಶ್ಯಗಳು, ಉದ್ದವಾದ ಕರಾವಳಿ, ಶಿಲಾಸ್ಮಾರಕಗಳು, ಐತಿಹಾಸಿಕ ಕೋಟೆಗಳು, ಅರಮನೆಗಳು ಮತ್ತು ದೇವಾಲಯಗಳು, ಸಾಮೂಹಿಕವಾಗಿ ಸಂಚರಿಸುವ ಕಾಡುಮೃಗಗಳು, ವನ್ಯಜೀವಿಗಳಿಗೆ ಹೆಸರಾದ ಬಂಡೀಪುರ ಮತ್ತು ನಾಗರಹೊಳೆ, ಆಕರ್ಷಕ ಜೋಗ ಜಲಪಾತ– ಹೀಗೆ ಹಲವಾರು ಪ್ರವಾಸಿತಾಣಗಳನ್ನು ಒಳಗೊಂಡ ಕರ್ನಾಟಕವು ಪ್ರವಾಸಿಗರ ಸ್ವರ್ಗ ಎಂದು ಈ ಅಧ್ಯಾಯದಲ್ಲಿ ವರ್ಣಿಸಲಾಗಿದೆ. ಆದರೆ ಈ ಹಿಂದೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆದ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿಗಳು ನೆರೆಯ ಕೇರಳ ಮತ್ತು ಗೋವಾ ರಾಜ್ಯಗಳ ಪ್ರವಾಸೋದ್ಯಮದ ಪ್ರಗತಿಯು ಒಂದು ಮಾದರಿ ಎಂದು ಕೊಂಡಾಡುವಂತಾಗಿದ್ದು ವಿಪರ್ಯಾಸವೇ ಸರಿ.

ಉತ್ತರ ಕರ್ನಾಟಕದಲ್ಲಿ ಪ್ರವಾಸಿ ತಾಣಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು, ಪ್ರವಾಸವನ್ನು ಒಂದು ಉದ್ಯಮವೆಂದು ಪರಿಗಣಿಸಬೇಕಾದ ಅಗತ್ಯ, ಉದ್ದಿಮೆ ನೀತಿಯಲ್ಲಿರುವ ಎಲ್ಲ ಸವಲತ್ತುಗಳನ್ನು ಪ್ರವಾಸೋದ್ಯಮದಲ್ಲಿ ಆಸಕ್ತಿಯುಳ್ಳ ಖಾಸಗಿ ಹೂಡಿಕೆಗಳಿಗೆ ವಿಸ್ತರಿಸಬೇಕಾದ ಅವಶ್ಯಕತೆ, ಪ್ರವಾಸಿ ತಾಣಗಳನ್ನು ತಲುಪಲು ಬೇಕಾದ ಮೂಲ ಸೌಕರ್ಯಗಳನ್ನು ರಾಜ್ಯ ಸರ್ಕಾರವೇ ಒದಗಿಸುವುದು- ಹೀಗೆ ಹಲವಾರು ಪ್ರಮುಖ ಶಿಫಾರಸುಗಳನ್ನು ನಂಜುಂಡಪ್ಪ ಸಮಿತಿ ಮಾಡಿತ್ತು. ಪ್ರವಾಸೋದ್ಯಮದಲ್ಲಿ ದಕ್ಷಿಣ ಕರ್ನಾಟಕದಲ್ಲಿ 1,10,885 ಮತ್ತು ಉತ್ತರ ಕರ್ನಾಟಕದಲ್ಲಿ 44,854 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯನ್ನು ವರದಿಯು 2002ರಲ್ಲೇ ಗುರುತಿಸಿತ್ತು. ಆದರೆ ಪ್ರವಾಸೋದ್ಯಮದ ಬೆಳವಣಿಗೆಗೆ ರಾಜ್ಯ ಸರ್ಕಾರ ಇತ್ತೀಚೆಗೆ ತೆಗೆದುಕೊಂಡ ಕ್ರಮಗಳನ್ನು ನೋಡಿದರೆ ಆಗುವುದು ನಿರಾಶೆ ಮಾತ್ರ.

ಪ್ರವಾಸೋದ್ಯಮದ ಪ್ರಗತಿಯಿಂದ ಆಗುವ ಲಾಭವು ಅದರಿಂದ ಆಗುವ ನಷ್ಟಕ್ಕಿಂತ ಎಷ್ಟೋ ಪಾಲು ಹೆಚ್ಚಿನದು. ಪ್ರವಾಸೋದ್ಯಮದ ಪ್ರಾರಂಭಿಕ ಹಂತದಲ್ಲಿ ಹಣ ತೊಡಗಿಸಿದರೆ, ಕ್ರಮೇಣ ಆ ಹಣಕ್ಕಿಂತ ಅಧಿಕ ಪ್ರಮಾಣದಲ್ಲಿ ಆದಾಯ ಉತ್ಪತ್ತಿಯಾಗುತ್ತದೆ. ಇದನ್ನು ಅರ್ಥಶಾಸ್ತ್ರದಲ್ಲಿ ಗುಣಕದ ಪರಿಣಾಮ (Multiplier Effect) ಎಂದು ಕರೆಯಲಾಗಿದೆ. ನಂಜುಂಡಪ್ಪ ಸಮಿತಿಯು ಈ ಪರಿಣಾಮದ ಮಹತ್ವವನ್ನು ಗುರುತಿಸಿತ್ತು. ಕಡಿಮೆ ಹಣ ಹೂಡಿಕೆಯಿಂದ ವಿವಿಧ ರಂಗಗಳ ಅಭಿವೃದ್ಧಿಗೆ ಪೂರಕವಾಗಬಲ್ಲ ಮತ್ತು ಸಾಮಾಜಿಕ ಲಾಭ ಹೆಚ್ಚಿಸಬಲ್ಲ ಪ್ರವಾಸೋದ್ಯಮದ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂಬ ಸಂದೇಶ ನೀಡಿತ್ತು. ರಾಜ್ಯದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಕೇವಲ ರಾಜಕೀಯ ಲಾಭದತ್ತ ದೃಷ್ಟಿಯಿಟ್ಟು ನಂಜುಂಡಪ್ಪ ವರದಿಯನ್ನು ಸ್ಮರಿಸಿಕೊಂಡವಾದರೂ ಅದೇ ವರದಿಯು ಪ್ರವಾಸೋದ್ಯಮದ ಅಭಿವೃದ್ಧಿಗೆ ಮಾಡಿದ ಶಿಫಾರಸುಗಳತ್ತ ಸರಿಯಾಗಿ ದೃಷ್ಟಿ ಹಾಯಿಸಲೇ ಇಲ್ಲ! ಅದಕ್ಕಾಗಿಯೇ ಉದ್ಯಮವು ಅತಿಯಾದ ಪ್ರಯಾಸದೊಂದಿಗೆ ಪ್ರಯಾಣ ಮಾಡುವಂತಾಗಿದೆ.

ನಂಜುಂಡಪ್ಪ ವರದಿಯನ್ನು ಚೆನ್ನಾಗಿ ಬಲ್ಲ ರಾಜಕಾರಣಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿದ್ದರೂ ಪ್ರವಾಸೋದ್ಯಮದ ಪಾಲಿಗೆ ಭಾಗ್ಯದಾಯಕರಾಗಲಿಲ್ಲ. 2017-18ನೇ ಸಾಲಿನಲ್ಲಿ ಅವರು ಪ್ರವಾಸೋದ್ಯಮಕ್ಕೆ ನೀಡಿದ ಅನುದಾನ ₹ 572 ಕೋಟಿ. 2018-19ನೇ ಸಾಲಿನ ಮುಂಗಡ ಪತ್ರದಲ್ಲಿ ಅದು ₹ 459 ಕೋಟಿಗೆ ಕುಸಿಯಿತು. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದ ಸಿದ್ದರಾಮಯ್ಯ, ಕರಾವಳಿ ಪ್ರದೇಶದಲ್ಲಿ ಹೌಸ್ ಬೋಟ್ ಮತ್ತು ತೇಲುವ ರೆಸ್ಟೋರೆಂಟ್ ನಿರ್ಮಾಣಕ್ಕಾಗಿ ಅಲ್ಪ ಮೊತ್ತದ ಅನುದಾನ ನೀಡಿದರು.

ಪಶ್ಚಿಮಕ್ಕೆ ವರ್ಣಮಯವಾದ ಕರಾವಳಿ, ಅಂತಃಶಕ್ತಿಯನ್ನು ಬೆಳೆಸಬಲ್ಲ ರಮಣೀಯ ಪೃಕೃತಿ ಸೌಂದರ್ಯ, ಪ್ರವಾಸಿಗರನ್ನು ಸ್ವಾಗತಿಸಲು ಸಾಲು ಸಾಲಾಗಿ ನಿಂತ ಬೆಟ್ಟದಿಣ್ಣೆಗಳು ಮತ್ತು ಅವುಗಳನ್ನೇ ಸುತ್ತು-ಬಳಸಿ ಹರಿಯುತ್ತಾ ಸಮುದ್ರ ಸೇರುವ ನದಿ-ಹೊಳೆಗಳಿಂದಾಗಿ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶ ಇದೆಯೆಂದು 1973ರಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದ ಗೆಜೆಟಿಯರ್ ತೋರಿಸಿತ್ತು. 1967-71ರ ಅವಧಿಯಲ್ಲಿ ಸಂಸತ್ತಿನಲ್ಲಿ ಉತ್ತರ ಕನ್ನಡವನ್ನು ಪ್ರತಿನಿಧಿಸಿದ್ದ ಕವಿ, ಸಮಾಜವಾದಿ ದಿನಕರ ದೇಸಾಯಿ, ತಮ್ಮ ಜಿಲ್ಲೆಯಲ್ಲಿದ್ದ ಪ್ರವಾಸೋದ್ಯಮದ ಪ್ರಗತಿಯ ಸಾಧ್ಯತೆಯನ್ನು ವಾರಪತ್ರಿಕೆಯೊಂದರಲ್ಲಿ ಕೊಂಡಾಡಿದ್ದರು. ಉತ್ತರ ಕನ್ನಡವನ್ನು ‘ಸಿರಿಗನ್ನಡದ ಚಪ್ಪರ’ ಎಂದು ಕರೆದಿದ್ದರು. ಇದನ್ನೆಲ್ಲ ಲೆಕ್ಕಕ್ಕೇ ತೆಗೆದುಕೊಳ್ಳದ ಸಿದ್ದರಾಮಯ್ಯ, ಒಬ್ಬ ಮುಖ್ಯಮಂತ್ರಿಯಾಗಿ ನಂಜುಂಡಪ್ಪ ಸಮಿತಿಯ ವರದಿಯನ್ನು ಬದಿಗಿಟ್ಟರು.

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಎರಡನೇ ಮೈತ್ರಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಸಾ.ರಾ.ಮಹೇಶ್ ಅವರ ಕಣ್ಣಿಗೆ ಬಿದ್ದದ್ದು ಮೂಲಸೌಕರ್ಯ ರಹಿತ, ಪ್ರವಾಸಿಗರೊಡನೆ ಒರಟಾಗಿ ವರ್ತಿಸುವ ಗೈಡುಗಳುಳ್ಳ, ಪ್ರವಾಸಿಗರ ಸುಲಿಗೆ ನಡೆಸುತ್ತಿದ್ದ, ನರಕಸದೃಶವಾದ ಕೆಲವು ಪ್ರವಾಸಿ ತಾಣಗಳು. ಪರಿಸ್ಥಿತಿಯನ್ನು ಸುಧಾರಿಸುವ ಭರವಸೆ ನೀಡಲು ಅವರು ಹಿಂದೆ ಬೀಳಲಿಲ್ಲ. ರಾಜ್ಯದ 30 ಪ್ರವಾಸಿ ತಾಣಗಳ ಅಭಿವೃದ್ಧಿಗೆ ₹ 300 ಕೋಟಿ ಮೊತ್ತದ ಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಮಹೇಶ್ ಹೇಳಿದ್ದೇ ಬಂತು! 2018ರ ಜುಲೈ 5ರಂದು ಕುಮಾರಸ್ವಾಮಿ ಅವರು ಮಂಡಿಸಿದ ಭಾರವಾದ ಸಾಲ ಮನ್ನಾ ಸೊಲ್ಲು ಹೊಂದಿದ ಬಜೆಟ್ ನೋಡಿದ ನಂತರ ಸಾ.ರಾ. ಮಹೇಶ್ ತಬ್ಬಿಬ್ಬಾಗಿರ
ಬಹುದು. ಕುಮಾರಸ್ವಾಮಿಯವರಬಜೆಟ್‌ನಲ್ಲಿದ್ದ ‘ಇಲ್ಲ’ಗಳ ಸೊಲ್ಲಿನಲ್ಲಿ ಮೂಲ ಸೌಕರ್ಯಗಳಿಲ್ಲದ, ಪ್ರವಾಸಿಗರಿಗೆ ಸರಿಯಾಗಿ ಮಾರ್ಗದರ್ಶನ ಮಾಡಬಲ್ಲ ಗೈಡುಗಳಿಲ್ಲದ ಪ್ರವಾಸಿ ತಾಣಗಳೂ ಸೇರಿಹೋದವು! ಖಾಸಗಿ ರಂಗದ ಕೊಡುಗೆಯನ್ನೇ ಆಧಾರವಾಗಿ ಇಟ್ಟುಕೊಂಡ ಪ್ರವಾಸೋದ್ಯಮದ ಅಭಿವೃದ್ಧಿಯ ಸೊಲ್ಲು ಹೊಂದಿದ ಬಜೆಟ್ ಅನ್ನು ಅವರು ಮಂಡಿಸಿದರು. ತಮಗೆ ರಾಜಕೀಯ ಬೆಂಬಲ ನೀಡದ ಪ್ರದೇಶಗಳ ಪ್ರವಾಸೋದ್ಯಮ ಅಭಿವೃದ್ಧಿ ವಿಚಾರವೂಅವರ ಬಜೆಟ್ ಭಾಷಣದಲ್ಲಿ ನಾಪತ್ತೆಯಾಗಿತ್ತು.

ಕುಮಾರಸ್ವಾಮಿ ಅವರು 2018ರ ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಗೈಡ್‌ಗಳಿಗೆ ತರಬೇತಿ ನೀಡಲು ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆಗೆ ದಯಪಾಲಿಸಿದ್ದು ಕೇವಲ ₹ 3 ಕೋಟಿ. ಅಲ್ಲೇ ಪ್ರವಾಸಿ ಗೈಡ್‌ಗಳಿಗೆ ವಿವಿಧ ಭಾಷೆಗಳಲ್ಲಿ ತರಬೇತಿ ನೀಡಲು ಖಾಸಗಿ ಸಂಸ್ಥೆಗಳಿಗೆ ಬಜೆಟ್ ನೀಡಿದ್ದು ಕೇವಲ ₹ 60 ಲಕ್ಷ. ಈ ಪ್ರಸ್ತಾವಗಳು ಕೂಡ ಸರಿಯಾಗಿ ಕಾರ್ಯಗತವಾಗದೇ ಹೋದದ್ದು ಈಗ ಇತಿಹಾಸ ಎಂದು ಜನ ಹೇಳುತ್ತಿರುವಾಗಲೇ ಇನ್ನಷ್ಟು ನಿರಾಶೆಗೊಳಿಸುವ ಬಜೆಟ್
ಯಡಿಯೂರಪ್ಪನವರಿಂದ ಮಂಡನೆಯಾಗಿದೆ.

ಲೇಖಕ: ಪ್ರಾಧ್ಯಾಪಕ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ ವಿಭಾಗ, ಆಳ್ವಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ, ಮೂಡುಬಿದಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT