ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಶಿವ ವರದಿ ಎಂಬ ‘ಸಾಮಾಜಿಕ ಹಗರಣ’

Last Updated 6 ಸೆಪ್ಟೆಂಬರ್ 2020, 21:31 IST
ಅಕ್ಷರ ಗಾತ್ರ

ಒಳಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು 2004ರಲ್ಲಿ ಇ.ವಿ. ಚಿನ್ನಯ್ಯ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಇದು ಸ್ಪಷ್ಟವಾಗಿದ್ದರೂ, ಮತಬ್ಯಾಂಕ್‌ ಮೇಲೆ ಕಣ್ಣಿಟ್ಟು, ಸದಾಶಿವ ಆಯೋಗವನ್ನು ರಚಿಸುವ ಮೂಲಕ ಜಾತಿಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಲು ಅಂದಿನ ಮುಖ್ಯಮಂತ್ರಿ ಯಶಸ್ವಿಯಾದರು.

ಡಾ.ಆರ್‌.ಎನ್‌. ರಾಜಾನಾಯಕ್‌

ರಚನೆಯ ಹಂತದಿಂದ ಆರಂಭಿಸಿ, ಕಾರ್ಯವೈಖರಿಯವರೆಗೆ ಸದಾಶಿವ ಆಯೋಗದ ಬಗ್ಗೆ ಬಹಳ ಗೊಂದಲಗಳಿವೆ. ಅಂಕಿಅಂಶಗಳ ಸಂಗ್ರಹ, ಕ್ರೋಡೀಕರಣ ಪ್ರಕ್ರಿಯೆ, ವಿಶ್ಲೇಷಣೆ... ಹೀಗೆ ಸಾರ್ವಜನಿಕರಿಗೆ ಇನ್ನೂಅಧಿಕೃತವಾಗಿ ಲಭ್ಯವಾಗದಿರುವ ವರದಿಯ ಬಗ್ಗೆ ಅನಧಿಕೃತವಾಗಿ ತಿಳಿದ ಮಾಹಿತಿಯಂತೆ ಬಹಳಷ್ಟು ಅನುಮಾನಗಳಿವೆ. ಎಲ್ಲಾ ಹಂತದಲ್ಲೂ ಸರಣಿ ಲೋಪಗಳಾಗಿರುವುದರಿಂದ ಈ ವರದಿಯನ್ನು ಬಹಿರಂಗಪಡಿಸುವ ಧೈರ್ಯವನ್ನು ಯಾವ ಸರ್ಕಾರವೂ ಮಾಡುತ್ತಿಲ್ಲ ಎಂಬ ಶಂಕೆಯೂ ಇದೆ.

ಒಂದು ಸಣ್ಣ ಉದಾಹರಣೆ ಹೇಳುವುದಾದರೆ, ಕುಟುಂಬದ ಮಾಹಿತಿ ಸಂಗ್ರಹಿಸಲು ಆಯೋಗವು ಬಳಸಿದ ನಮೂನೆಯಲ್ಲಿ 104 ಕಾಲಂಗಳಿದ್ದವು. ಮಾಹಿತಿ ಸಂಗ್ರಹಕಾರ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದು ಪದವೀಧರನಾದ ವ್ಯಕ್ತಿಗೆ ಮಾತ್ರ ಸಾಧ್ಯವಿತ್ತು ಎಂದು ಮಾಹಿತಿ ಸಂಗ್ರಹಿಸಿದವರು ಹೇಳುತ್ತಾರೆ. ಇಂತಹ ನಮೂನೆಯೊಂದಿಗೆ ಮಾಹಿತಿ ಸಂಗ್ರಹಕಾರ ಮನೆಗಳಿಗೆ ಹೋಗಿದ್ದು ಯಾವಾಗ ಎಂದರೆ, ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಗಳ ಜನರು ಜೀವನೋಪಾಯಕ್ಕಾಗಿ ವಲಸೆ ಹೋದ ಸಂದರ್ಭದಲ್ಲಿ. ಅಂದರೆ, ಈ ಸಮುದಾಯದ ಒಟ್ಟು ಜನಸಂಖ್ಯೆಯ ಶೇ 70ರಿಂದ ಶೇ 75ರಷ್ಟು ಮಾತ್ರ ಲೆಕ್ಕಕ್ಕೆ ಸಿಕ್ಕಂತಾಯಿತು. ಗಣತಿಗೆ ತಹಶೀಲ್ದಾರರನ್ನು ಬಳಸಿಕೊಳ್ಳಬೇಕಾಗಿತ್ತು. ಆದರೆ ಆಯೋಗವು ಕಾಟಾಚಾರಕ್ಕೆ ಮಾತ್ರ ತಹಶೀಲ್ದಾರರುಗಳನ್ನು ಬಳಸಿಕೊಂಡಿದೆ ಎಂಬುದು ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವಾಗಿದೆ. ವರದಿಯ ಬಗ್ಗೆ ಇನ್ನೊಂದು ಗಂಭೀರ ಆರೋಪವೆಂದರೆ, ಬಲಗೈನವರ ಅನೇಕ ಉಪ ಪಂಗಡದವರನ್ನು ಎಡಗೈನವರ ವಿಭಾಗದಲ್ಲಿ ಸೇರಿಸಿಕೊಂಡಿದ್ದಾರೆ ಎಂಬುದು. ಹೀಗೆ ಹಲವಾರು ಅಪಾದನೆಗಳು, ಅನುಮಾನಗಳು, ಕತೆಗಳು ಸದಾಶಿವ ಆಯೋಗದ ವರದಿಯ ಸುತ್ತ ಹರಡಿವೆ.

ಸಂವಿಧಾನದ 7ನೇ ವಿಧಿ, ಕೇಂದ್ರಪಟ್ಟಿಯ ನಮೂದು 69ರ ಪ್ರಕಾರ, ಜನಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುವುದಿಲ್ಲ. ಅಂತಹ ಸಂದರ್ಭ ಬಂದರೆ, 46ನೇ ವಿಧಿ ಪ್ರಕಾರ ಸುಪ್ರೀಂ ಕೋರ್ಟ್ 1985ರಲ್ಲಿ ಹೊರಡಿಸಿದ ಆದೇಶದಂತೆ ಕೇಂದ್ರ ಸರ್ಕಾರ ರೂಪಿಸಿದ ಮಾರ್ಗದರ್ಶಿ ಸೂತ್ರವನ್ನು ಅನುಸರಿಸಿ ಗಣತಿ ಮಾಡಬೇಕು. ಆಯೋಗವು ಇದನ್ನು ಸಹ ಕಡೆಗಣಿಸಿದೆ.

ಸ್ಪೃಶ್ಯ ಮತ್ತು ಅಸ್ಪೃಶ್ಯ ಎಂಬ ಪದಗಳನ್ನು ತಮ್ಮ ಮೂಗಿನ ನೇರಕ್ಕೆ ಬಳಸಿ, ವಿಧಿ 341(1)ನ್ನು ಅಪಮಾನಿಸುವುದು ಅಪರಾಧವಾಗುತ್ತದೆ. ಮೀಸಲಾತಿ ಯನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಮಾನದಂಡದ ಮೇಲೆ ಜಾರಿ ಮಾಡಲಾಗಿದೆಯೇ ವಿನಾ ಬೇರೆ ಮಾನದಂಡಗಳಿಂದ ಅಲ್ಲ. ಕಪೋಲಕಲ್ಪಿತ ಮಾನದಂಡಗಳ ಪ್ರಚಾರ ಮಾಡುವುದು ನಿಯಮಬಾಹಿರ ಮತ್ತು ವಿಧಿ 17 ಮತ್ತು 21ರ ಉಲ್ಲಂಘನೆಯಾಗುತ್ತದೆ. ಹಾಲಿ ಇರುವ ಮೀಸಲಾತಿ ವ್ಯವಸ್ಥೆಯನ್ನೇ ಇಷ್ಟು ವರ್ಷಗಳಾದರೂ ಸರಿಯಾಗಿ ಅನುಷ್ಠಾನಗೊಳಿಸದೆ, ಒಳಮೀಸಲಾತಿ ಕುರಿತು ಮಾತನಾಡುವುದು ಬಾಲಿಶವಾಗುತ್ತದೆ.

ಒಳಮೀಸಲಾತಿಯಂಥ ಗಂಭೀರ ವಿಷಯವನ್ನು ಕುರಿತು ನಿರ್ಧಾರ ಕೈಗೊಳ್ಳುವಾಗ, ಮೀಸಲಾತಿ ಜಾರಿಗೆ ಬಂದಾಗಿನಿಂದ ಇದುವರೆಗೆ ಜಾತಿ–ಉಪಜಾತಿಗಳಿಗೆ ಆಗಿರುವ ಪ್ರಯೋಜನದ ನೈಜ ಅಂಕಿಅಂಶಗಳನ್ನು ಬಿಂಬಿಸುವ ವರದಿ ಆಧಾರವಾಗಬೇಕೇ ವಿನಾ ಹೋರಾಟ– ಚೀರಾಟಗಳಲ್ಲ. ಒಳಮೀಸಲಾತಿ ಪರವಾಗಿರುವವರು, ಮೂರು ರೀತಿಯ ಮೀಸಲಾತಿಗಳು ಹೇಗೆ ಕಾರ್ಯಾಂಗದ ಮೂಲಕ ಜಾರಿಯಾಗುತ್ತವೆ ಎಂಬುದನ್ನು‌ ಮೊದಲು ತಿಳಿಯಬೇಕಿದೆ.

ಮೊದಲನೆಯದಾಗಿ, ಉದ್ಯೋಗದಲ್ಲಿ ಶೇ 3ರಷ್ಟು ಮಾತ್ರ ಮೀಸಲಾತಿ ಜಾರಿಯಾಗುತ್ತದೆ. ಕಾರಣ, ನಮ್ಮದು ಅನೌಪಚಾರಿಕ ಆರ್ಥಿಕ ವ್ಯವಸ್ಥೆ. 100 ಹುದ್ದೆಗಳು ಸೃಷ್ಟಿಯಾದರೆ ಶೇ 92ರಷ್ಟು ಅಸಂಘಟಿತ ವಲಯಕ್ಕೆ ಮತ್ತು ಶೇ 5ರಷ್ಟು ಖಾಸಗಿ ವಲಯಕ್ಕೆ ಸೇರುತ್ತವೆ. ಇಲ್ಲಿ ಮೀಸಲಾತಿ ಜಾರಿಯಾಗುವುದಿಲ್ಲ. ಉಳಿದ ಶೇ 3ರಷ್ಟು ಸರ್ಕಾರಿ ವಲಯದ್ದು. ಇದು ಸಹ ಪೂರ್ಣಪ್ರಮಾಣದಲ್ಲಿ ಜಾರಿಯಾಗಿಲ್ಲ.

ಎರಡನೆಯದು ಶೈಕ್ಷಣಿಕ ಮೀಸಲಾತಿ; ಶೇ 60ರಷ್ಟು ಖಾಸಗಿ ಆಗಿರುವ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ಬರುವುದು ಶೇ 40ರಷ್ಟು ಮಾತ್ರ.

ಮೂರನೆಯದು ರಾಜಕೀಯ ಮೀಸಲಾತಿ. ಎಲ್ಲರ ಕಣ್ಣೂ ಇರುವುದು ಅಂತಿಮವಾಗಿ ಇದರ ಮೇಲೆಯೇ. ವಿಧಿ 334ರಂತೆ ಇದು 40 ವರ್ಷಕ್ಕೆ ಕೊನೆಯಾಗಬೇಕಾಗಿತ್ತು. ಆದರೆ, ರಾಜಕೀಯ ಸಬಲೀಕರಣದ ಉದ್ದೇಶ ಈಡೇರದ ಕಾರಣ ಅದು ಮುಂದುವರಿಯುತ್ತಾ ಇದೆ. ಅಂಬೇಡ್ಕರ್ ಅವರ ಆದ್ಯತೆಯು ರಾಜಕೀಯ ಮೀಸಲಾತಿ ಆಗಿತ್ತು‌. ‘All powers are subordinate to political power (ಎಲ್ಲಾ ಅಧಿಕಾರಗಳು ರಾಜಕೀಯ ಅಧಿಕಾರಕ್ಕೆ ಅಧೀನವಾಗಿವೆ) ಎಂಬ ತತ್ವ ಮಾತ್ರ ಪರಿಶಿಷ್ಟರನ್ನು ಮುಖ್ಯ ವಾಹಿನಿಗೆ ತರಬಲ್ಲದು’ ಎಂದು ಅವರು ನಂಬಿದ್ದರು. ಆದರೆ ಈಗ, ಒಳಮೀಸಲಾತಿ ಪರವಾಗಿರುವ ಕೆಲವರು ಅಪ್ರಜ್ಞಾಪೂರ್ವಕವಾಗಿ ಮೀಸಲಾತಿ ವಿರೋಧಿ ಶಕ್ತಿಗಳೊಂದಿಗೆ ಸೇರಿಕೊಂಡು ಅಂಬೇಡ್ಕರ್‌ ಅವರ ಕನಸಿಗೆ ಅಡ್ಡಿಯಾಗುತ್ತಿರುವುದನ್ನು ನೋಡಿದರೆ, ಮೀಸಲಾತಿ ಪೂರ್ವದ ಗುಲಾಮಗಿರಿ ಸ್ಥಿತಿ ಮರುಕಳಿಸುವಂತೆ ಕಾಣುತ್ತದೆ.

ಒಳಮೀಸಲಾತಿ ಪರವಾಗಿರುವ ನಮ್ಮ ಸ್ನೇಹಿತರು ಗಮನಿಸಬೇಕಾದ ವಿಷಯವೆಂದರೆ, ಸುಪ್ರೀಂ ಕೋರ್ಟ್ ಆಗಸ್ಟ್‌ 27ರಂದು ವ್ಯಕ್ತಪಡಿಸಿರುವ ಅಭಿಪ್ರಾಯವು ಜಾರಿಮಾಡಲು ಬರುವುದಿಲ್ಲ. ಹಾಗೆಯೇ, ಸದಾಶಿವ ಆಯೋಗದ ವರದಿ ಜಾರಿಗೆ ಪ್ರಯತ್ನ ಮಾಡಿದರೆ, ಅದು ನ್ಯಾಯಾಂಗ ನಿಂದನೆಯಾಗುವುದರ ಜೊತೆಗೆ ಅದೊಂದು ಸಾಮಾಜಿಕ ಹಗರಣವಾಗುತ್ತದೆ. ಆದ್ದರಿಂದ, ಅದರ ಬಗ್ಗೆ ಹೋರಾಡಿ ಶಕ್ತಿ ವ್ಯಯಿಸುವುದರ ಬದಲು, ಒಳಮೀಸಲಾತಿ ವಿರೋಧಿಗಳ ಜೊತೆ ಕೈಜೋಡಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸಬೇಕು.

ಬಿಜೆಪಿಗೆ ಆತ್ಮಾವಲೋಕನಕ್ಕೆ ಸಕಾಲ

ಒಳಮೀಸಲಾತಿಯ ಪರ ಮಾತನಾಡುತ್ತಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ‘ನಾವೆಲ್ಲಾ ‌ಹಿಂದೂ ನಾವೆಲ್ಲರೂ ಒಂದು’ ಎಂಬ ಘೋಷಣೆಯಿಂದ ಆಕರ್ಷಿತರಾಗಿ ನಿಮ್ಮ ಜತೆಗೆ ಬಂದಿಲ್ಲ. ಪರ್ಯಾಯದ ಹುಡುಕಾಟದಲ್ಲಿರುವ ಈ ವರ್ಗದವರಿಗೆ ನೀವು ‘ಟೆ೦ಟ್ ಸ್ಕೂಲ್’ ರೂಪದಲ್ಲಿ ತಾತ್ಕಾಲಿಕ ಆಶ್ರಯ ನೀಡಿದ್ದೀರಿ ಅಷ್ಟೇ. ಅವರು ನಿಮ್ಮನ್ನು ಸ್ವಾಭಾವಿಕವಾಗಿ ಅಪ್ಪಿಕೊಳ್ಳಬೇಕೆಂದರೆ ನೀವು ಅವರ ಮೂಲ ನೆಲಸಂಸ್ಕೃತಿಗೆ ಕೈಹಾಕಬಾರದು. ಇದರಲ್ಲಿ ಅವರ ದೇವರು, ಆಚಾರ ವಿಚಾರಗಳು, ನೆಲ–ಜಲ– ಭಾಷೆ ಎಲ್ಲವೂ ಸೇರಿವೆ. ಈ ದೇಶದ ಮೊದಲನೇ ದರ್ಜೆ ಪ್ರಜೆಗಳು ಎಂದು ಅವರನ್ನು‌ ಗುರುತಿಸಿ, ಗೌರವಿಸಿ, ಅವರ ಶೋಷಣೆಯನ್ನು ನಿಲ್ಲಿಸುವುದರಿಂದ ಮಾತ್ರವೇ ಇದು ಸಾಧ್ಯ.

ಈ ಸಮುದಾಯದವರ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಕಡೆಗೆ ಬಿಜೆಪಿ ಗಮನಹರಿಸಬೇಕು. ಅವುಗಳಲ್ಲಿ ಪ್ರಮುಖವೆಂದರೆ, ಒಳಮೀಸಲಾತಿಯ ವಿಚ್ಛಿದ್ರಕಾರಿ ಅಸ್ತ್ರವನ್ನು ಬಿಟ್ಟು, ಈ ಸಮುದಾಯವನ್ನು ಒಗ್ಗಟ್ಟಿನಿಂದ ಇರಲು ಬಿಡುವುದು. ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ಜಾರಿಗೆ ತರುವುದು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಮೀಸಲಾತಿಯನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿ 9ನೇ ಶೆಡ್ಯೂಲ್‌ನಲ್ಲಿ ಸೇರಿಸುವುದಾಗಿವೆ. ಮನಸ್ಸು ಮಾಡಿದರೆ ಇವುಗಳನ್ನು ಜಾರಿಮಾಡಲು ಹೆಚ್ಚು ಸಮಯ ಹಿಡಿಯದು.

(ಲೇಖಕರು ಸಾಮಾಜಿಕ ಕಳಕಳಿ ವೇದಿಕೆ– ಬೆಂಗಳೂರು ಇದರ ಸಂಸ್ಥಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT