ಗುರುವಾರ , ಜೂನ್ 4, 2020
27 °C
ಪ್ರತಿರೋಧಿಸುವುದರ ಅರ್ಥವೆಂದರೆ ಪ್ರಜಾಪ್ರಭುತ್ವವನ್ನು ಅದರ ಮೂಲ ತಿಳಿವಳಿಕೆಗೆ ತರುವುದು

ಚಳವಳಿ ರೂಪ ಪಡೆದ ರೈತರ ಹೋರಾಟ ಕಥನ

ಪ್ರೊ.ಮುಜಾಪ್ಫರ್ ಅಸ್ಸಾದಿ Updated:

ಅಕ್ಷರ ಗಾತ್ರ : | |

ಜುಲೈ ತಿಂಗಳನ್ನು ಕರ್ನಾಟಕದ ಮಟ್ಟಿಗೆ ರೈತ ‘ದಂಗೆ’, ‘ರೈತ ಹೋರಾಟ’, ಚಳವಳಿ, ಉತ್ಸವ-ಆಕ್ರೋಶಗಳ ತಿಂಗಳು ಎನ್ನಬಹುದು. 38 ವರ್ಷಗಳ ಹಿಂದೆ ನರಗುಂದ-ನವಲಗುಂದದಲ್ಲಿ ನಡೆದ ರೈತ ಚಳವಳಿಯು ಇತಿಹಾಸದ ಪುಟಗಳಿಗೆ ಸೇರಿದರೂ ಒಬ್ಬ ರೈತ ಹೋರಾಟಗಾರ ಮಾತ್ರ ನೆನಪಿನಲ್ಲಿ ಉಳಿದುಬಿಡುತ್ತಾರೆ.

ಅವರೇ ಪ್ರೊ.ಎಂ.ಡಿ. ನಂಜುಂಡಸ್ವಾಮಿ. ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದೊಳಗೆ ಒಂದು ಚಿಕ್ಕ ಫಲಕವಿದೆ. ಅದರಲ್ಲಿ ರೈತ ಹೋರಾಟಗಾರ, ದಾರ್ಶನಿಕ ಪ್ರೊ. ನಂಜುಂಡಸ್ವಾಮಿ ಹೇಳಿದ ಮಾತನ್ನು ಬರೆಯಲಾಗಿದೆ: ‘ದಬ್ಬಾಳಿಕೆ ಸಹಿಸಿಕೊಂಡೇ ಬದುಕುವುದಾದರೆ ಪ್ರಜಾಪ್ರಭುತ್ವಕ್ಕೆ ಆರ್ಥವಿಲ್ಲ’. ಈ ಮಾತು ಇಂದಿನ ಸಂದರ್ಭಕ್ಕೆ ಮಹತ್ವದ್ದು. ನಾವಿರುವುದು ಹೊಸ ದಬ್ಬಾಳಿಕೆಯ ಕಾಲಘಟ್ಟದಲ್ಲಿ. ಇದರರ್ಥ ಹಳೆಯ ದಬ್ಬಾಳಿಕೆಗಳು ಮರೆಯಾಗಿವೆ ಎಂದರ್ಥವಲ್ಲ.

ಜಾತಿ, ಲಿಂಗ, ಕೋಮು ಆಧಾರಿತ ದಬ್ಬಾಳಿಕೆಗಳು ಈಗಲೂ ಇವೆ. ಹೊಸ ರೂಪದ ದಬ್ಬಾಳಿಕೆಯನ್ನು ಈ ರೀತಿ ಪಟ್ಟಿ ಮಾಡಬಹುದು: ರೈತರನ್ನು ಸಾಲಗಾರರನ್ನಾಗಿ ಇರಿಸುವುದು, ಅವರಿಗೆ ಹಕ್ಕುಗಳನ್ನು ನಿರಾಕರಿಸುವುದು, ಅವರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡದಿರುವುದು, ಅವರ ಬೌದ್ಧಿಕ ಹಕ್ಕನ್ನು ಬಹುರಾಷ್ಟ್ರೀಯರಿಗೆ ಮಾರುವುದು, ಕೃಷಿಯಲ್ಲಿ ಯಥಾಸ್ಥಿತಿಯನ್ನು ಕಾಪಾಡುವುದು...

ಇವೆಲ್ಲಾ ದಬ್ಬಾಳಿಕೆ ನಡೆಯುವುದು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ. ನಂಜುಂಡಸ್ವಾಮಿಯವರ ಮಾತಿನ ಅರ್ಥವಿಷ್ಟೇ: ಪ್ರತಿರೋಧಿಸುವುದರ ಅರ್ಥವೆಂದರೆ ಪ್ರಜಾಪ್ರಭುತ್ವವನ್ನು ಅದರ ಮೂಲ ತಿಳಿವಳಿಕೆಗೆ ತರುವುದು, ಪ್ರಜಾಪ್ರಭುತ್ವಕ್ಕೆ ಸಬಾಲ್ಟರ್ನ್ ದೃಷ್ಟಿಕೋನ ನೀಡುವುದು, ರೈತರು ಮತ್ತು ಕೆಳಸ್ತರದವರು ಈ ದೇಶದ ವಾಸ್ತವ ವಾರಸುದಾರರು ಎಂಬುದನ್ನು ಗುರುತಿಸಿ ಒಪ್ಪುವುದು.

1980ರ ದಶಕ, ರೈತ ಚಳವಳಿಗಳ ಪುನರ್‌ಹುಟ್ಟಿನ ಕಾಲಘಟ್ಟ. ಉತ್ತರಪ್ರದೇಶದಲ್ಲಿ ಮಹೇಂದ್ರ ಸಿಂಗ್‍ರ ನಾಯಕತ್ವದಲ್ಲಿ ಭಾರತೀಯ ಕಿಸಾನ್ ಯೂನಿಯನ್ ಹಾಗೂ ಮಹಾರಾಷ್ಟ್ರದಲ್ಲಿ ಶರದ್ ಜೋಷಿ ನೇತೃತ್ವದಲ್ಲಿ ರೈತರು ಸಂಘಟಿತರಾದರು. ಪಂಜಾಬಿನಲ್ಲಿ ಖೇತಿಬಾಡಿ ಯೂನಿಯನ್, ತಮಿಳುನಾಡಿನಲ್ಲಿ ತಮಿಳುಗ ವ್ಯವಸಾಯಿಗಳ ಸಂಘಂ ಹುಟ್ಟಿಕೊಂಡವು.

ಕರ್ನಾಟಕದ ನರಗುಂದ, ನವಲಗುಂದದಲ್ಲಿ ಹುಟ್ಟಿದ ರೈತ ಚಳವಳಿಗೆ ತತ್‌ಕ್ಷಣದ ದಿನಗಳಲ್ಲಿ ವಿ.ಎನ್. ಹಳಕಟ್ಟಿ, ರುದ್ರಪ್ಪ, ಸಂದರೇಶ್ ನಾಯಕತ್ವ ನೀಡಿದರು. ನಂತರ ಅದಕ್ಕೊಂದು ತಾತ್ವಿಕ ಚೌಕಟ್ಟು ನೀಡಿದರು ನಂಜುಂಡಸ್ವಾಮಿ. ರೈತ ಹೋರಾಟವು ಚಳವಳಿಯ ರೂಪ ಪಡೆಯಿತು.

ಈ ನವ ರೈತ ಚಳವಳಿಗಳು ಹುಟ್ಟಿಕೊಳ್ಳಲು ಬಲವಾದ ಕಾರಣಗಳಿದ್ದವು. 1980ರಲ್ಲಿ ವ್ಯಾಪಾರದ ಷರತ್ತುಗಳು ಕೃಷಿ ಉದ್ದಿಮೆಗೆ ವಿರುದ್ಧವಾಗಿದ್ದವು, ಕೈಗಾರಿಕೆ ಪರವಾಗಿದ್ದವು. ರೈತರನ್ನು ಸಾಲದಂಚಿಗೆ ತಳ್ಳಲಾಗಿತ್ತು. ಕೃಷಿಗೆ ಸ್ಪರ್ಧಾತ್ಮಕ ಬೆಲೆ ಇಲ್ಲದಂತಾಗಿತ್ತು. ಇದಕ್ಕೆ ಎರಡು ಕಾರಣಗಳಿದ್ದವು: 1960ರ ದಶಕದಲ್ಲಿನ ಹಸಿರು ಕ್ರಾಂತಿ ಹಾಗೂ ಕೃಷಿಯಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಅಳವಡಿಕೆ. ಹಸಿರು ಕ್ರಾಂತಿಯ ಮೂಲ ಉದ್ದೇಶ ಬಡತನವನ್ನು ನೀಗಿಸುವುದು.

ಆದರೆ, ಅದು ಮಾರುಕಟ್ಟೆ ಆಧಾರಿತ ರೈತರನ್ನು ಸೃಷ್ಟಿಸಿತ್ತು. ಹೊಲಗದ್ದೆಯಲ್ಲಿದ್ದ ಇಲಿಗಳನ್ನು ಕೃಷಿ ಕೂಲಿಕಾರ್ಮಿಕರು ತಿಂದು ಬದುಕುತ್ತಿದ್ದ ವರದಿಗಳೂ ಆಗ ತಂಜಾವೂರಿನಿಂದ ಬಂದಿದ್ದವು. ಅದೇ ಹೊತ್ತಿನಲ್ಲಿ ಅಕಾಡೆಮಿಕ್ ಚರ್ಚೆಗಳೂ ಬದಲಾದವು. ಅಷ್ಟರತನಕ ನೆಹರೂ ಮತ್ತು ರಾಷ್ಟ್ರ ನಿರ್ಮಾಣದ ಚರ್ಚೆಯಲ್ಲಿ ತೊಡಗಿದ್ದ ಅಕಾಡೆಮಿಕ್ ವರ್ಗ ಕೃಷಿಯಲ್ಲಾಗುತ್ತಿರುವ ಬದಲಾವಣೆಗಳಿಗೆ ಸ್ಪಂದಿಸಿತ್ತು. ಈ ಚರ್ಚೆಯನ್ನು ‘ಮೋಡ್ ಆಫ್ ಪ್ರೊಡಕ್ಷನ್ ಡಿಬೇಟ್’ ಎಂದು ಕರೆಯುತ್ತಾರೆ- ಉತ್ಪಾದನೆಯ ರೀತಿ ಯಾವುದು ಎಂಬುದರ ಚರ್ಚೆ ಇಲ್ಲಿತ್ತು.

ಭಾರತದ ಹಸಿರು ಕ್ರಾಂತಿಯು ಒಂದೇ ಒಂದು ಉತ್ಪಾದನಾ ರೂಪವನ್ನು ನಿರ್ಮಿಸಿತ್ತೇ ಅಥವಾ ಭಾರತಕ್ಕೆ ಸಂಬಂಧಿಸಿದಂತೆ ಎರಡು–ಮೂರು ರೂಪಗಳನ್ನು ನಿರ್ಮಿಸಿತ್ತೇ- ಅದು ಅರೆ ಊಳಿಗಮಾನ್ಯ, ಅರೆಬಂಡವಾಳ ಶಾಹಿಯೇ?... ಹೀಗೆ ಚರ್ಚೆಗಳು ನಡೆದಿದ್ದವು.

ಅದೇ ಸಂದರ್ಭದಲ್ಲಿ ಜಗತ್ತಿನ ಮತ್ತೊಂದೆಡೆ ಇನ್ನೊಂದು ಚರ್ಚೆ ನಡೆಯುತ್ತಿತ್ತು. ಬ್ಯಾರಿಂಗ್ಟನ್ ಮೂರ್, ಹಮ್ಜಾ ಅಲವಿ ಮತ್ತಿತರರು ಈ ಚರ್ಚೆಯ ಕೇಂದ್ರಬಿಂದು ಆಗಿದ್ದರು. ರೈತರ ಕುರಿತಾದ ಮಾರ್ಕ್ಸ್‌ನ ಪೂರ್ವಗ್ರಹಗಳನ್ನು ತಿರಸ್ಕರಿಸುವುದು ಇಲ್ಲಿ ಮುಖ್ಯವಾಗಿತ್ತು. ಮಾರ್ಕ್ಸ್‌ಗೆ ರೈತರೆಂದರೆ ಕ್ರಾಂತಿಕಾರಿಗಳಲ್ಲ. ಅವರು ಸಂಪ್ರದಾಯವಾದಿಗಳು, ಆಲಸಿಗಳು, ಆಧುನಿಕತೆಯ ವಿರೋಧಿಗಳು, ಪ್ರತಿಗಾಮಿಗಳು. ಆದರೆ, ಮೂರ್ ಮತ್ತಿತರರು ಹೇಳಿದ್ದು ಇಷ್ಟೇ: ಚೀನಾ, ವಿಯಟ್ನಾಂ, ಕ್ಯೂಬಾ, ರಷ್ಯಾದಲ್ಲಿ ರೈತರು ಕ್ರಾಂತಿಯ ಭಾಗವಾಗಿದ್ದರು. ರಷ್ಯಾದಲ್ಲಿ ಒಂದು ವರ್ಗ ಅದರಲ್ಲೂ ಕುಲಖ್ ವರ್ಗ ಮಾತ್ರ ಪ್ರತಿಗಾಮಿಯಾಗಿತ್ತು.

ಆದಕಾರಣ ರೈತರು ರಾಜಕೀಯ ಬದಲಾವಣೆ ತರುವಷ್ಟು ಶಕ್ತಿವಂತರು. ಇದೇ ಮುಂದೆ ಸಬಾಲ್ಟರ್ನ್ ಚಿಂತನಾಶಾಲೆಯ ಹುಟ್ಟುವಿಕೆಗೆ ದಾರಿಯಾಯಿತು. ಇದು ಗ್ರಾಮ್‍ಸ್ಕಿಯ ಚಿಂತನೆಗಳಿಂದ ಪ್ರಭಾವಿತವಾಗಿ ಹುಟ್ಟಿಕೊಂಡ ಚಿಂತನಾ ಶಾಲೆ. ಇದನ್ನು ಆಸ್ಟ್ರೇಲಿಯಾ ಚಿಂತನಾ
ಶಾಲೆಯೆಂದು ಕರೆಯುವ ವಾಡಿಕೆಯೂ ಇದೆ. ಈ ಚಿಂತನಾ ಶಾಲೆಯಲ್ಲಿದ್ದ ರಂಜಿತ್ ಗುಹಾ, ಶಹೀದ್ ಅಮಿನ್, ಗಾಯತ್ರಿ ಸ್ಪಿವಾಕ್ ಮೊದಲಾದವರು ತಮ್ಮ ಬರವಣಿಗೆಗೆ ತೆಗೆದುಕೊಂಡ ಕಾಲ ವಸಾಹತುಶಾಹಿ ಕಾಲ.

ವಸಾಹತುಶಾಹಿ ಕಾಲದಲ್ಲಿ ಶೋಷಣೆಯ ನಡುವೆ ಪ್ರತಿರೋಧ ವ್ಯಕ್ತಪಡಿಸುವುದು ಸಾಧ್ಯವಿಲ್ಲ ಎಂಬುದು ಈ ಚಿಂತಕರ ಪ್ರಕಾರ ಒಂದು ಮಿಥ್ಯೆ. ಶೋಷಿತರು ಒಂದು ವರ್ಗವಾಗಿ, ಸಮುದಾಯವಾಗಿ ಪ್ರತಿರೋಧ ತೋರುವುದು ಸಾಧ್ಯವಿದೆ. ಆದರೆ ರೂಪಕಗಳು ಮಾತ್ರ ಬೇರೆ ಬೇರೆ. ಇದನ್ನು ಗಮನದಲ್ಲಿಟ್ಟು ನೋಡುವುದಾದರೆ ವಸಾಹತುಶಾಹಿ ಸಂದರ್ಭದಲ್ಲಿ ಅಲ್ಲಲ್ಲಿ ಚದುರಿದ ನೂರಾರು ದಂಗೆಗಳು ನಡೆದಿವೆ.‌‌ ವಿಚಿತ್ರವೆಂದರೆ ಈ ದಂಗೆಗಳು ನಮಗೆ ಕಾಣಸಿಗುವುದು 1960ರ ದಶಕದ ತನಕ. ತದನಂತರ ನಮಗೆ ರೈತ ದಂಗೆಗಳ ಬದಲಿಗೆ ನೂರಾರು ಚಳವಳಿಗಳು ಸಿಗುತ್ತವೆ. ಕರ್ನಾಟಕದ ರೈತಸಂಘದ ಅಡಿಯಲ್ಲಿ ನಡೆದ ನವ ರೈತ ಚಳವಳಿ ಈ ಚಳವಳಿಗಳ ಒಂದು ಭಾಗ. ನಂಜುಂಡಸ್ವಾಮಿ ದಂಗೆಯನ್ನು ಮಾಡಲಿಲ್ಲ ಅಥವಾ ಅದಕ್ಕೆ ಪ್ರೇರೇಪಿಸಲಿಲ್ಲ. ಒಂದು ಚಳವಳಿಯನ್ನು ಕಟ್ಟಿದರು.

1980ರ ದಶಕದ ಅಂತ್ಯದವರೆಗೂ ಉತ್ತರ ಭಾರತೀಯರಿಗೆ ಅಥವಾ ಅಕಾಡೆಮಿಕ್ ವರ್ಗಕ್ಕೆ ನಂಜುಂಡಸ್ವಾಮಿ ಕುರಿತಾಗಲೀ ಇಲ್ಲಿನ ರೈತ ಚಳವಳಿ ಬಗೆಗಾಗಲೀ ತಿಳಿದಿರಲಿಲ್ಲ. ಅವರಿಗೆ ಶರದ್ ಜೋಷಿ ಮತ್ತು ಟಿಕಾಯತ್‍ರ ಪರಿಚಯವಿತ್ತು. ಶರದ್ ಜೋಷಿಯವರ ಇಂಡಿಯಾ- ಭಾರತ್ ಪರಿಕಲ್ಪನೆ, ಟಿಕಾಯತ್‍ರ ಗ್ರಾಮ್ಯ ನಡವಳಿಕೆ, ಭಾಷೆ ಹಾಗೂ ದೆಹಲಿಗೆ ಹತ್ತಿರವಿದ್ದದ್ದು ಇದಕ್ಕೆ ಕಾರಣ.

ನಂಜುಂಡಸ್ವಾಮಿಯವರ ‘ಖಾದಿ ಖರ್ಟನ್’ ಪರಿಕಲ್ಪನೆಯೂ ಅವರಿಗೆ ಅರ್ಥವಾಗದೇ ಹೊಯಿತು. 1990ರ ದಶಕದಲ್ಲಿ ಬಹುರಾಷ್ಟ್ರೀಯ ಕಂಪನಿಗಳಾದ ಕೆ.ಎಫ್.ಸಿ., ಮೊನ್ಸಾಂಟೊ ಮೇಲೆ ಕರ್ನಾಟಕದ ರೈತರು ದಾಳಿ ಇಟ್ಟಾಗ, ಅಂತರರಾಷ್ಟ್ರೀಯ ಸಾಮಾಜಿಕ ಚಳವಳಿಗಳೊಂದಿಗೆ ಗುರುತಿಸಿಕೊಂಡಾಗ, ಐರೋಪ್ಯ ಹಾಗೂ ಇನ್ನಿತರ ಖಂಡಗಳಲ್ಲಿ ಜಾಗತೀಕರಣವನ್ನು ವಿವಿಧ ರೂಪಗಳಲ್ಲಿ ಪ್ರತಿರೋಧಿಸಿದಾಗ ನಂಜುಂಡಸ್ವಾಮಿಯವರ ಹೆಸರು ರಾಷ್ಟ್ರೀಯ ಚೌಕಟ್ಟನ್ನು ದಾಟಿತ್ತು.

‘ಜರ್ನಲ್ ಆಫ್ ಪೆಸೆಂಟ್ ಸ್ಟಡೀಸ್’, ಟಾಮ್ ಬ್ರಾಸ್‍ ಸಂಪಾದಿಸಿದ ಪುಸ್ತಕ ಇದಕ್ಕೆ ಸಾಕ್ಷಿಯಾದವು. ಅವರ ರಾಜಕಾರಣದ ಬಗ್ಗೆ ಕನ್ನಡದಲ್ಲಿ ಬಂದ ಪುಸ್ತಕಗಳು ಮಾತ್ರ ಕಡಿಮೆ ಎಂದೇ ಹೇಳಬೇಕು.

ನಂಜುಂಡಸ್ವಾಮಿ ಚಿಂತನೆಗಳಲ್ಲಿ ಮೂರು ಹಂತಗಳಿವೆ. ಮೊದಲನೇ ಹಂತದಲ್ಲಿ ಲೋಹಿಯಾ ಚಿಂತನೆ ಗಟ್ಟಿಯಾಗಿತ್ತು. ಎರಡನೆಯದು ಜಾಗತೀಕರಣದ ಹಂತ. ಆಗ ಅವರ ಚಿಂತನೆ ಸ್ವಲ್ಪಮಟ್ಟಿಗೆ ಎಡಪಂಥೀಯವಾಗಿತ್ತು.

ಮೂರನೆಯದು ತೀವ್ರತರ ಅಥವಾ ರ‍್ಯಾಡಿಕಲ್ ಆಗಿತ್ತು. ಮೊದಲನೇ ಹಂತದಲ್ಲಿ ಲೋಹಿಯಾ ಹೇಳಿದಂತೆ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ ಜೊತೆಜೊತೆಯಾಗಿ ಹುಟ್ಟುತ್ತವೆ ಮತ್ತು ಬೆಳೆಯುತ್ತವೆ ಎಂಬುದು ಅವರ ವಾದವೂ ಆಗಿತ್ತು. ಭಾರತದ ಬೆಳವಣಿಗೆಯಲ್ಲಿ ಕೈಗಾರಿಕೆಗಳಿಗೆ, ನಗರಗಳಿಗೆ ನೀಡುವ ಮಹತ್ವ ಹಳ್ಳಿಗಳಿಗಿಲ್ಲ, ರೈತನ ಸಾಲವೆಂಬುದು ವ್ಯವಸ್ಥೆ ಸೃಷ್ಟಿಸಿದ ಕೃತಕ ಸಾಲವೇ ಹೊರತು ರೈತ ತನಗಾಗಿ ಮಾಡಿದ ಸಾಲ ಅಲ್ಲ. ಇವೆಲ್ಲಾ ಲೋಹಿಯಾವಾದದ ಭಾಗಗಳು. ಆದಕಾರಣ ರೈತರ ಸಾಲಮನ್ನಾ, ಕೃಷಿಯನ್ನು ಕೈಗಾರಿಕೆ ಅಂತ ಘೋಷಿಸುವುದು, ಸ್ಪರ್ಧಾತ್ಮಕ ಬೆಂಬಲ ಬೆಲೆ ಅವಶ್ಯಕತೆಯನ್ನು ಅವರು ಮನಗಾಣುತ್ತಾರೆ.

ವಾಸ್ತವವಾಗಿ ತಾತ್ವಿಕತೆಯಲ್ಲಿ ಬದಲಾವಣೆ ಬಂದದ್ದು ಜಾಗತೀಕರಣದ ಸಂದರ್ಭದಲ್ಲಿ. ಅಂತರರಾಷ್ಟೀಯ ಹಣಕಾಸು ಸಂಸ್ಥೆ, ವಿಶ್ವಬ್ಯಾಂಕ್, ಅಂತರರಾಷ್ಟ್ರೀಯ ವ್ಯಾಪಾರ ಸಂಘಟನೆಗಳು ಹಾಗೂ ಅವುಗಳೊಂದಿಗೆ ಬೆಸೆದುಕೊಂಡ ಗ್ಯಾಟ್ ಒಪ್ಪಂದ, ಬೌದ್ಧಿಕ ಸನ್ನದು, ಡಂಕೆಲ್ ಪ್ರಸ್ತಾವಗಳು ಮಾತ್ರವಲ್ಲದೇ ಬಹುರಾಷ್ಟ್ರೀಯ ಕಂಪನಿಗಳ ಸಾಂಸ್ಕೃತಿಕ ರಾಜಕೀಯ, ಅಂತರರಾಷ್ಟ್ರೀಯ ಬಂಡವಾಳದ ಯಜಮಾನಿಕೆಯನ್ನು ಸಾರ್ವತ್ರೀಕರಣಗೊಳಿಸುತ್ತದೆ ಎಂದು ಅವರು ವಾದಿಸುತ್ತಾರೆ.

ನಂಜುಂಡಸ್ವಾಮಿ ರ‍್ಯಾಡಿಕಲ್ ಆಗಿ ಕಂಡುಬರುವುದು ಮೂರನೇ ಹಂತದಲ್ಲಿ. ಇದನ್ನು 2000ದ ನಂತರ ನೋಡಬಹುದು. ಜಾಗತೀಕರಣಕ್ಕೆ ಪರ್ಯಾಯಗಳಿಲ್ಲ ಎಂಬ ವಾದ ತಿರಸ್ಕರಿಸುವ ನಂಜುಂಡಸ್ವಾಮಿ, ಇನ್ನೊಂದು ಜಗತ್ತಿನ ಸಾಧ್ಯತೆಯನ್ನು ಅಲ್ಲಗಳೆಯುವುದಿಲ್ಲ. ಇದಕ್ಕೆ ಪೂರಕ ವೆಂಬಂತೆ ಅಂತರರಾಷ್ಟ್ರೀಯ ಸಂಸ್ಥೆಗಳ, ಬಹುರಾಷ್ಟ್ರೀಯ ಕಂಪನಿಗಳ ಹಿಡಿತವನ್ನು ಕೊನೆಗಾಣಿಸಲು ಅವರು ಬಯಸುತ್ತಾರೆ. ಹೀಗಾಗಿ ಜಾಗತೀಕರಣಕ್ಕೆ ಪ್ರತಿರೋಧದ ಸಂಕೇತವಾಗುತ್ತಾರೆ. ಚಳವಳಿಗಳೂ ಜಾಗತಿಕವಾಗುತ್ತವೆ- ಪ್ಯಾರಿಸ್, ಲಂಡನ್ ಮುಂತಾದವು ಪ್ರತಿರೋಧದ ಕೇಂದ್ರಗಳಾಗುತ್ತವೆ.

ಅಂತರರಾಷ್ಟ್ರೀಯ ಆರ್ಥಿಕ ವಿಷಯಗಳ ಬಗ್ಗೆ ದಾವೋಸ್‍ನಲ್ಲಿ ನಡೆಯುವ ವಾರ್ಷಿಕ ಸಮ್ಮೇಳನಗಳು ಇವರ ಪ್ರತಿರೋಧದ ಕೇಂದ್ರಬಿಂದುವಾಗುತ್ತವೆ. ಈ ರೀತಿಯ ಬದಲಾವಣೆಯ ಸಂದರ್ಭದಲ್ಲಿ ನಂಜುಂಡಸ್ವಾಮಿಯವರನ್ನು ಇತಿಹಾಸದಲ್ಲಿ ಹೇಗೆ ಗುರುತಿ ಸಬಹುದು ಎಂಬ ಜಿಜ್ಞಾಸೆ ಇದೆ- ಬರೇ ಲೋಹಿಯಾವಾದಿಯಾಗಿಯೇ? ಎಡಪಂಥೀಯ ಲೋಹಿಯಾವಾದಿಯಾಗಿಯೇ ಅಥವಾ ರ‍್ಯಾಡಿಕಲ್ ಮಾರ್ಕ್ಸ್‌ವಾದಿಯಾಗಿಯೇ? ಇಲ್ಲಿ ಬಹುರೂಪಿ ನಂಜುಂಡಸ್ವಾಮಿ ಕಂಡುಬರುತ್ತಾರೆ.

ನಂಜುಂಡಸ್ವಾಮಿ ಮೇಲೆ ಕೆಲವು ಆಪಾದನೆಗಳಿವೆ. ಮೊದಲನೆಯದಾಗಿ ಅವರು ಪ್ರತಿನಿಧಿಸಿದ್ದು ಶ್ರೀಮಂತ ರೈತರನ್ನು. ಅವರು ವಾದಿಸಿದ ಸಾಲಮನ್ನಾ, ಸ್ಪರ್ಧಾತ್ಮಕ ಬೆಲೆ, ಬೆಂಬಲಬೆಲೆ, ಕೃಷಿಯನ್ನು ಕೈಗಾರಿಕೆಯೆಂದು ಘೋಷಿಸುವುದು... ಇಲ್ಲಿ ಮುಖ್ಯ. ವಾಸ್ತವವಾಗಿ ಈ ಥಿಯರಿಯನ್ನು ನಂಜುಂಡಸ್ವಾಮಿ ಸಾರಾಸಗಟಾಗಿ ತಿರಸ್ಕರಿಸುತ್ತಾರೆ.

ಅವರ ವಾದವಿಷ್ಟೇ: ವಿವಿಧ ಹಂತದ ಭೂ ಸುಧಾರಣೆಗಳು ದೊಡ್ಡ ರೈತರನ್ನು ಚಿಕ್ಕ ಹಿಡುವಳಿದಾರ ರೈತರನ್ನಾಗಿಸಿತಲ್ಲದೇ ಅವರನ್ನು ಸಂಪೂರ್ಣವಾಗಿ ಬಡ ರೈತರನ್ನಾಗಿಸಿದೆ. ಈ ವಾದವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ರೈತರು ಒಂದು ರಾಜಕೀಯ ಶಕ್ತಿಯಾಗಬೇಕೆಂದು ನಂಜುಂಡಸ್ವಾಮಿ ಬಯಸಿದ್ದು ಸಹಜ. ರಾಜಕೀಯದಲ್ಲಿ ಚರಣ್ ಸಿಂಗ್, ದೇವಿಲಾಲ್ ನಂತರ ಯಾರೂ ರೈತರ ಆಸಕ್ತಿ ಪ್ರತಿನಿಧಿಸುವ ಪಕ್ಷಗಳನ್ನು ಕಟ್ಟಲಿಲ್ಲ. 1980ರ ದಶಕದಲ್ಲೇ ಚರಣ್ ಸಿಂಗ್ ಕರ್ನಾಟಕದ ರೈತ ಸಂಘಕ್ಕೆ ಪತ್ರವೊಂದನ್ನು ಬರೆದು ರೈತರ ಸರ್ಕಾರ ರಚಿಸಬೇಕಾದರೆ, ಕರ್ನಾಟಕದ ರೈತರು ಉತ್ತರಪ್ರದೇಶದ ರೈತರೊಂದಿಗೆ ಕೈ ಜೋಡಿಸಬೇಕೆಂದು ಒತ್ತಾಯಿಸುತ್ತಾರೆ. ಆಗ ರೈತ ಚಳವಳಿಯು ಚುನಾವಣಾ ರಾಜಕೀಯದಿಂದ ದೂರವಿರಲು ಬಯಸಿದ್ದರಿಂದ ಚರಣ್ ಸಿಂಗ್‍ರ ಬೇಡಿಕೆಗೆ ಮಹತ್ವ ಬರಲಿಲ್ಲ. ಅವರ ‘ಗಂಗಾ-ಕಾವೇರಿ ಸಂಗಮ’ದ ಕನಸು ಹಾಗೇ ಉಳಿಯಿತು. ವಿಚಿತ್ರವೆಂದರೆ ಚುನಾವಣಾ ರಾಜಕೀಯದಿಂದ ದೂರವಿರಲು ಬಯಸಿದ್ದ ನಂಜುಂಡ ಸ್ವಾಮಿ ಇದೇ ಶಕ್ತಿ ರಾಜಕಾರಣದ ಭಾಗವಾದದ್ದು ದುರಂತ.

ಅವರ ನಡವಳಿಕೆ ಆ ಸಂದರ್ಭದ ತಪ್ಪು ಹೆಜ್ಜೆ. ಮಹಾರಾಷ್ಟ್ರದಲ್ಲಿ ಶೇತ್ಕರಿ ಸಂಘಟನೆ ಚುನಾವಣಾ ರಾಜಕೀಯದ ಭಾಗವಾಗಿತ್ತು. ಕರ್ನಾಟಕದಲ್ಲಿ ರೈತ ಚಳವಳಿಯು ಪಕ್ಷವನ್ನು ಕಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತು ಹೋಯಿತು. ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ, ಕೆ.ಎಸ್. ಪುಟ್ಟಣ್ಣಯ್ಯ ಮಾತ್ರ ಶಾಸನಸಭೆ ಪ್ರವೇಶಿಸಲು ಸಾಧ್ಯವಾಯಿತು.

ಇದು ರೈತ ಚಳವಳಿಯ ದುರಂತವೂ ಹೌದು. ರೈತ, ಜಾತಿ ರಾಜಕಾರಣದ ಭಾಗವಾಗಿಯೇ ಉಳಿದುಬಿಟ್ಟ. ಈ ಸಂದರ್ಭದಲ್ಲಿ ತಕ್ಷಣ ನೆನಪಾಗುವುದು ಕಮ್ಯುನಿಸ್ಟ್ ನಾಯಕ ಪಿ.ಸಿ.ಜೋಷಿಯವರ ಒಂದು ವಾದ. ಅವರ ಪ್ರಕಾರ ಚಳವಳಿಗಳು ಚಳವಳಿಗಾಗಿಯೇ ಇರಬೇಕು. ಅವುಗಳು ಚುನಾವಣಾ ರಾಜಕೀಯದ ಭಾಗವಾದರೆ ಮೂಲಸತ್ವ ಕಳೆದುಕೊಂಡು ರಾಜಕಾರಣದ ಬಿಕರಿ ವಸ್ತುಗಳಾಗುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು