ಗುರುವಾರ , ಆಗಸ್ಟ್ 11, 2022
23 °C

ಶಿಕ್ಷಕರ ದಿನಾಚರಣೆ ವಿಶೇಷ: ದಾರಿ ತೋರಿದ ಗುರುವಿಗೆ ನಮನ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಗುರುವೇ ದೇವರು ಎಂದು ನಂಬಿರುವ ಸಂಸ್ಕೃತಿ ನಮ್ಮದು. ಇಂದು ಶಿಕ್ಷಕರ ದಿನ. ದಾರಿ ತೋರಿದ ಗುರುವನ್ನು ನೆನಪಿಸಿಕೊಳ್ಳುವುದಕ್ಕಾಗಿಯೇ ಇರುವ ಸಂದರ್ಭ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿದ ಗಣ್ಯರು, ಗುರಿ ಸೇರಲು ಮಾರ್ಗದರ್ಶನ ಮಾಡಿದ ಗುರುವನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.

 

ಫೇಲ್‌ ಮಾಡದೆ ದಾರಿ ತೋರಿದ ಗುರು

ಹಳ್ಳಿಯಲ್ಲಿ ಬೆಳೆದ ನನಗೆ ಚಿಕ್ಕಂದಿನಲ್ಲಿ ಓದುವ ಉತ್ಸಾಹ ಇರಲಿಲ್ಲ. ನಾನು ಶಿಕ್ಷಣ ಪಡೆದಿದ್ದು ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲಿ. ತಂದೆ ತಾಯಿಯ ಒತ್ತಾಯಕ್ಕೆ ಕಟ್ಟು ಬಿದ್ದು ಶಾಲೆಗೆ ಹೋಗುತ್ತಿದ್ದೆ. ತರಗತಿಗೆ ಚಕ್ಕರ್‌ ಹೊಡೆಯಲು ಯಾವ ಕಾರಣ ಸಿಗುತ್ತದೆ ಎಂದು ಹುಡುಕುತ್ತಿದ್ದೆ. ದನ ಕಾಯುವುದು, ಗದ್ದೆ ಕೆಲಸ ನೆಚ್ಚಿನ ಕೆಲಸಗಳಾಗಿದ್ದವು. ಶಾಲಾ ಪಠ್ಯಕ್ರಮಗಳು ಹಿಂಸೆ ಅನಿಸುತ್ತಿತ್ತು. ಶಿಕ್ಷಣದ ಮಹತ್ವ ನನಗೆ ಚಿಕ್ಕಂದಿನಲ್ಲಿ ಗೊತ್ತೇ ಆಗಲಿಲ್ಲ. 


ಕೆ.ಎ. ದಯಾನಂದ

ಕೃಷ್ಣಮೂರ್ತಿ ಎಂಬುವವರು ಏಳನೇ ತರಗತಿಯ ವರೆಗೆ ಮುಖ್ಯ ಶಿಕ್ಷಕರು ಆಗಿದ್ದರು. ಅವರು ಲವ ಕುಶ ಪಾಠ ಮಾಡುತ್ತಿದ್ದರೆ ಹುಚ್ಚು ಹಿಡಿದವರಂತೆ ಕೇಳಿಸಿಕೊಳ್ಳುತ್ತಿದ್ದೆವು. ಜೋಗೇಗೌಡರು ಗಣಿತ ಪಾಠ ಮಾಡುತ್ತಿದ್ದರು. ಅವರು ಗುಣಾಕಾರ ಹಾಗೂ ಭಾಗಾಕಾರದ ಪಾಠಗಳು ಈಗಲೂ ನೆನಪಿವೆ. ಪಾಠ ಕಲಿಸಿದ ಎಲ್ಲ ಶಿಕ್ಷಕರು ಜೀವನದಲ್ಲಿ ಗಾಢ ಪ್ರಭಾವ ಬೀರಿದ್ದಾರೆ. 

ಓದು ಅಂದರೆ ನನಗೆ ಅಲರ್ಜಿ. ಓದದ ಕಾರಣಕ್ಕೆ ಶಿಕ್ಷಕರು ಹೊಡೆಯುತ್ತಿದ್ದರು, ಬೈಯುತ್ತಿದ್ದರು. ಆದರೂ ಸಹ  ಶಿಕ್ಷಕರು ಒಂಬತ್ತನೇ ತರಗತಿ ವರೆಗೆ ಫೇಲ್ ಮಾಡಲಿಲ್ಲ. ಒಂದು ವೇಳೆ ಫೇಲ್‌ ಮಾಡಿದ್ದರೆ ಅಪ್ಪ ಅಮ್ಮ ನನ್ನನ್ನು ಕೂಲಿ ಕೆಲಸಕ್ಕೆ ಹಾಕುತ್ತಿದ್ದರು. ಆಗ ನಾನು ಹಳ್ಳಿಯಲ್ಲೇ ಉಳಿದುಕೊಳ್ಳಬೇಕಿತ್ತು. ಗುರುಗಳು ಪಾಸ್‌ ಮಾಡಿದ್ದರಿಂದ ನನ್ನ ಬದುಕಿನ ಪಥ ಬದಲಾಯಿತು. ಶಿಕ್ಷಕರು ಶಿಕ್ಷಣದ ಜತೆಗೆ ನನ್ನ ಹಿತಾಸಕ್ತಿಯನ್ನೂ ಕಾಪಾಡಿದರು. ನಂತರ ಚಿಕ್ಕಪ್ಪನ ಮನೆಯಲ್ಲಿದ್ದು ಹೇಗೋ ಕಷ್ಟಪಟ್ಟು ಎಸ್ಸೆಸ್ಸೆಲ್ಸಿ ಉತ್ತೀರ್ಣನಾದೆ. ಆ ಬಳಿಕ ಹೊರಗೆ ಕೆಲಸ ಮಾಡಿಕೊಂಡು ಅವಕಾಶ ಸಿಕ್ಕಾಗಲೆಲ್ಲ ಕಾಲೇಜಿಗೆ ಹೋಗಿ ಪದವಿ ಪಡೆದೆ.

ನನ್ನ ಬದುಕು ಬದಲಿಸಲು ಮನೆಯ ವಾತಾವರಣ ಸಹ ಕಾರಣ. ಶಾಲೆಗೆ ಹೋಗುತ್ತಿದ್ದ ವೇಳೆಯಲ್ಲಿ ನಾನು ಅತ್ತೆ ಮನೆಯಲ್ಲಿದ್ದೆ. ಕುಟುಂಬದ ಅನೇಕ ಮಕ್ಕಳು ಅಲ್ಲೇ ಇದ್ದರು. ಅತ್ತೆಗೆ ಮಕ್ಕಳೆಲ್ಲ ಚೆನ್ನಾಗಿ ಓದಿ ಉದ್ಧಾರವಾಗಬೇಕು ಎಂಬ ಹಠ. ಹೆದರಿಸಿ ನಮ್ಮನ್ನು ಓದಲು ಕೂರಿಸುತ್ತಿದ್ದರು. ಇದು ನನ್ನಲ್ಲಿ ಓದುವ ಮನಸ್ಥಿತಿ ಬೆಳೆಸಿತು. ಈ ಮನಸ್ಥಿತಿ ಮುಂದೆ ಕೆಎಎಸ್‌ ಪರೀಕ್ಷೆ ಬರೆಯುವಾಗ ಅನುಕೂಲವಾಯಿತು. ದಿನಪೂರ್ತಿ ಓದುವ ಹಾಗೂ ಕೂರುವ ಕಲೆ ಕಲಿಸಿತು. ಸಾಹಿತ್ಯ ಅಭಿರುಚಿ ಹಾಗೂ ಭಾಷಾ ವಿಜ್ಞಾನ ಬೆಳೆಸಿದ್ದು ನನ್ನ ಅಣ್ಣ. ಆತನ ಸೂಚನೆಯನ್ನು ಪಾಲಿಸಿದ್ದರಿಂದ ನಾನು ಉನ್ನತ ಹುದ್ದೆಗೆ ಬರಲು ಸಾಧ್ಯವಾಯಿತು.

ಅಮ್ಮ ಅನಕ್ಷರಸ್ಥೆ. ಮನೆಯಲ್ಲಿ ವಿದ್ಯುತ್‌ ದೀಪ ಇರಲಿಲ್ಲ. ಆದರೂ, ಚಿಮಣಿ ಬೆಳಕಿನಲ್ಲಿ ಕುಳಿತು ರಾತ್ರಿ 7ರಿಂದ 9ರ ವರೆಗೆ ಓದುವಂತೆ ಪ್ರೇರೇಪಿಸುತ್ತಿದ್ದಳು. ಅಪ್ಪ ಹವ್ಯಾಸಕ್ಕೆ ರಾಮಾಯಣ ಹಾಗೂ ಮಹಾಭಾರತ ಓದುತ್ತಿದ್ದರು. ಇದು ಸಹ ಓದಿನ ಆಸಕ್ತಿ ಹೆಚ್ಚಲು ಕಾರಣ. ಅಪ್ಪ, ಅಮ್ಮ, ಅಣ್ಣ, ಸಂಬಂಧಿಕರು, ಸ್ನೇಹಿತರು ಹಾಗೂ ಶಿಕ್ಷಕರು ಬದುಕಿನ ಒಂದೊಂದು ಹಂತದಲ್ಲಿ ಪ್ರೇರೇಪಣೆ ನೀಡಿದರು. ಅವರೆಲ್ಲ ನನಗೆ ಗುರುಗಳೇ. 

ಕೆ.ಎ. ದಯಾನಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ
 

‘ಗುರು‘ ಬಿತ್ತಿದ ಬೀಜದಿಂದ ಐಪಿಎಸ್‌ ಅಧಿಕಾರಿಯಾದೆ‘

‘ನೀವು ಐಪಿಎಸ್‌ ಹೇಗೆ ಆದಿರಿ?’ ಎಂದು ಅನೇಕರು ಕೇಳಿದ್ದಿದೆ. ಆಗೆಲ್ಲ, ನನ್ನ ಬದುಕಿನ ದಿಕ್ಕಿಗೆ ಪ್ರೇರಣೆಯಾದ ಶಿಕ್ಷಕರು ನೆನಪಾಗುತ್ತಾರೆ. ಆಗಿನ್ನೂ ನಾನು ಮೂರನೇ ತರಗತಿ. ಕ್ಲಾಸ್‌ ಟೀಚರ್‌ ಮಾರ್ಗರೆಟ್‌ ಮೇಡಂ, ಎಲ್ಲ ಮಕ್ಕಳ ಬಳಿ ಮುಂದೆ ಏನಾಬೇಕೆಂದು ಕೊಂಡಿದ್ದೀರಾ? ಎಂದು ಕೇಳಿದ್ದರು. ಆ ಪ್ರಶ್ನೆ ನನ್ನ ಮನಸ್ಸಿನಲ್ಲಿ ಬೀಜ ಬಿತ್ತಿದಂದಾಯಿತು. ಅಪ್ಪನಲ್ಲಿ ಕೇಳಿದಾಗ, ಐಎಎಸ್‌, ಐಪಿಎಸ್‌ ಕಾರ್ಯವ್ಯಾಪ್ತಿ ಬಗ್ಗೆ ಹೇಳಿದ್ದರು.


ಡಿ. ರೂಪಾ

ಮುಂದೆ, ಖಾಕಿ ಕಡೆಗೆ ಮತ್ತಷ್ಟು ಹತ್ತಿರವಾಗಿಸಿ, ಐಪಿಎಸ್‌ ಆಯ್ಕೆ ಮಾಡಿಕೊಳ್ಳಲು ಕಾರಣವಾಗಿದ್ದು ಏಳನೇ ತರಗತಿಯಲ್ಲಿದ್ದಾಗ ಹೈಸ್ಕೂಲ್‌ ಮುಖ್ಯ ಶಿಕ್ಷಕಿಯಾಗಿದ್ದ ಸಿಸ್ಟರ್‌ ಮರಿಯೆಟ್‌ ಎನ್‌ಸಿಸಿ ಬಗ್ಗೆ ಮಾಡಿದ್ದ ಭಾಷಣ. ಕರ್ನಾಟಕ– ಗೋವಾ ರಾಜ್ಯವನ್ನು ಪ್ರತಿನಿಧಿಸಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ನಮ್ಮ ಶಾಲೆಯ ವಿದ್ಯಾರ್ಥಿನಿಯರು ಮತ್ತು ಎನ್‌ಸಿಸಿಯಿಂದ ಭವಿಷ್ಯದಲ್ಲಿನ ಪ್ರಯೋಜನಗಳ ಕುರಿತು ಅವರಾಡಿದ ಮಾತುಗಳು ನನ್ನ ಮನಸ್ಸಿಲ್ಲಿದ್ದ ಬೀಜ ಮೊಳಕೆಯೊಡೆಯುವಂತೆ ಮಾಡಿತು. ಎಂಟನೇ ತರಗತಿಯಲ್ಲಿ ನಾನೂ ಎನ್‌ಸಿಸಿ ಸೇರಿಕೊಂಡೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ವೇಳೆ, ಅಲ್ಲಿ ಕಿರಣ್‌ ಬೇಡಿ ಮಾಡಿದ ಭಾಷಣ ನನ್ನಲ್ಲಿ ಐಪಿಎಸ್‌ ಕಡೆಗಿನ ಒಲವನ್ನು ಗಟ್ಟಿಗೊಳಿಸಿತ್ತು. ಎಸ್‌ಎಸ್‌ಎಲ್‌ಸಿಯಲ್ಲಿ 23ನೇ ರ‍್ಯಾಂಕ್‌, ಕಲಾ ವಿಷಯ ಆಯ್ಕೆ ಮಾಡಿಕೊಂಡು ಪಿಯುಸಿಯಲ್ಲಿ ಎರಡನೇ ರ‍್ಯಾಂಕ್ ಪಡೆದೆ. ಆಗಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ಶಾಲಾ ದಿನಗಳಲ್ಲಿನ ಶಿಕ್ಷಕರ ಪ್ರೇರಣೆಯ ಮಾತುಗಳು ಈಗಲೂ ನನ್ನೊಳಗೆ ಗುಯುಂಗುಟ್ಟುತ್ತಿರುತ್ತವೆ.

ಡಿ. ರೂಪಾ, ಐಪಿಎಸ್‌, ಕಾರ್ಯದರ್ಶಿ, ಗೃಹ ಇಲಾಖೆ


ಅನನ್ಯಾ ಭಟ್

ಆತ್ಮವಿಶ್ವಾಸ ತುಂಬಿದ ರಾಜು ಅನಂತಸ್ವಾಮಿ

ನನ್ನ ಬದುಕಿನ ದಿಕ್ಕು ಬದಲಿಸಿದ ವ್ಯಕ್ತಿ, ಗುರು ಎಂದರೆ ರಾಜು ಅನಂತಸ್ವಾಮಿ. ಯಾಕೆಂದರೆ ನಾನು ಗಾಯಕಿ‌ ಆಗಬೇಕು ಮತ್ತು ನನ್ನಲ್ಲಿ ಆ ಶಕ್ತಿ ಇದೆ, ನಾನು ಎಲ್ಲರಿಗಿಂತ ಭಿನ್ನವಾಗಿ ಹಾಡಬಲ್ಲೆ ಎಂಬುದನ್ನು ಗುರುತಿಸಿದ್ದು ಅವರೇ.

ನಾನಾಗ ತುಂಬಾ ಚಿಕ್ಕ ಹುಡುಗಿ; ಸುಮ್ಮನೇ, ಡ್ರಾಮಾ ಸ್ಕೂಲ್‌ನಲ್ಲಿ ಸಮ್ಮರ್‌ ಕ್ಯಾಂಪ್‌ಗೆಂದು ಸೇರಿದ್ದೆ. ಅಲ್ಲಿ ಅವರು, ‘ನಿನ್ನ ಧ್ವನಿ ಬೇರೇನೇ ಇದೆ; ನಿನಗೆ ಬೇರೇನೇ ಶಕ್ತಿ ಇದೆ. ನಿಂಗ್ಯಾಕೆ ಆಗಲ್ಲ? ಹಾಡು’ ಎಂದು ನನ್ನಿಂದ ತುಂಬಾ ಹಾಡಿಸುತ್ತಿದ್ದರು. ಅವರನ್ನು ತುಂಬಾ ಮಿಸ್‌ ಕೂಡ ಮಾಡ್ಕೋತೀನಿ ನಾನು.

ಅವರ ಮಾರ್ಗದರ್ಶನ ಸಿಗದೇ ಹೋಗಿದ್ದರೆ ಬೇರೇ ಏನೋ ಆಗಿರುತ್ತಿದ್ದೆ. ಗಾಯಕಿಯೇ ಆಗಿರುತ್ತಿದ್ದೆನೋ ಏನೋ. ಆದರೆ, ನನ್ನಲ್ಲಿ ಏನೋ ಶಕ್ತಿ ಇದೆ ಎಂದು ನಾನು ನಂಬುತ್ತಿರಲಿಲ್ಲ ಅಥವಾ ನನಗೆ ಆತ್ಮವಿಶ್ವಾಸ ಬರ್ತಿರಲಿಲ್ಲ ಅಂತ ಅನ್ನಿಸುತ್ತೆ.

ಅನನ್ಯಾ ಭಟ್‌, ಗಾಯಕ


ಮಿಲನಾ ನಾಗರಾಜ್‌

ಅಪ್ಪನೇ ‘ದಾರಿ ತೋರಿದ ಗುರು’

ಎಲ್ಲರ ಬದುಕಿನಲ್ಲೂ ಶಾಲಾ– ಕಾಲೇಜು ಹಂತಗಳಲ್ಲಿ ತುಂಬಾ ಜನರು ಶಿಕ್ಷಕರು ಬಂದು ಹೋಗುತ್ತಾರೆ. ಆದರೆ, ನನ್ನ ಬದುಕಿಗೆ ದಾರಿ ತೋರಿದ ಗುರು ಎಂದರೆ ನನ್ನ ತಂದೆಯೇ. 

ಈಗ ಸಿನಿಮಾ ಕ್ಷೇತ್ರದಲ್ಲಿರಬಹುದು, ಆದರೆ, ಕ್ರೀಡಾ ಕ್ಷೇತ್ರದಿಂದ ಬಂದವಳು ನಾನು. ನನ್ನ ಮತ್ತು ನನ್ನ ತಮ್ಮನ ಬದುಕಿನಲ್ಲಿ ಶಿಕ್ಷಣ ಮತ್ತು ಕ್ರೀಡೆ ಮಹತ್ವದ ಪಾತ್ರ ವಹಿಸಿದೆ. ಈಜುಪಟುವಾಗಿದ್ದರಿಂದ ಬದುಕಿನಲ್ಲಿ ಆತ್ಮವಿಶ್ವಾಸದ ಮಟ್ಟ ನನ್ನಲ್ಲಿ ಹೆಚ್ಚೇ ಇದೆ. ರಾಷ್ಟ್ರಮಟ್ಟದಲ್ಲಿ ಈಜು ಸ್ಪರ್ಧೆಯಲ್ಲಿ ಒಂದು ಪದಕ ಗೆಲ್ಲಲು ಎಂಟು–ಹತ್ತು ವರ್ಷಗಳ ಕಾಲ ಪರಿಶ್ರಮಪಟ್ಟಿರುವೆ. ಆಗೆಲ್ಲ ನನ್ನ ಜತೆಗೆ ಗುರುವಾಗಿ, ಮಾರ್ಗದರ್ಶಕರಾಗಿ ಇದ್ದವರು ತಂದೆ.

ಯಾರೂ ಗೆಲುವಿನ ಹಾದಿಯಲ್ಲಿ ನಮ್ಮನ್ನು ಹೊತ್ತೊಯ್ಯುವುದಿಲ್ಲ. ಆ ದಾರಿಯನ್ನಷ್ಟೇ ತೋರುತ್ತಾರೆ. ಆ ರೀತಿ ನಮಗೆ ಬಾಲ್ಯದಿಂದಲೂ ಪ್ರೇರಣೆ ಕೊಟ್ಟದ್ದು ನಮ್ಮ ತಂದೆ–ತಾಯಿಯೇ. ಅವರ ಮಾರ್ಗದರ್ಶನ ಸರಿಯಾಗಿ ಸಿಗದಿದ್ದರೆ ನಮ್ಮ ಜೀವನ ಏನಾಗಿರುತ್ತಿತ್ತೋ ಹೇಳಲಾಗದು.

ಬದುಕು ಎಂದರೆ ವೃತ್ತಿ ಅಥವಾ ಯಶಸ್ಸು ಮಾತ್ರ ಅಲ್ಲ. ಜೀವನ ಮೌಲ್ಯ, ಕೌಟುಂಬಿಕ ಮೌಲ್ಯ, ನೈತಿಕತೆಯ ಪಾಲನೆ ಹಾಗೂ ಸಂಸ್ಕೃತಿಯನ್ನು ಗೌರವಿಸುವುದೂ ಮುಖ್ಯ. ಇದನ್ನು ನಮಗೆ ಕಲಿಸಿದ ಗುರು ಎಂದರೆ ನಮ್ಮ ಅಪ್ಪನೇ.

ಮಿಲನಾ ನಾಗರಾಜ್‌, ನಟಿ ಮತ್ತು ನಿರ್ಮಾಪಕಿ

 

ಬದುಕೇ ದೊಡ್ಡ ಶಿಕ್ಷಕ!

ಇದುವರೆಗೆ ಕಲಿಸಿದವರನ್ನೆಲ್ಲ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಸ್ಮರಿಸಿದರೆ ಒಬ್ಬೊಬ್ಬರನ್ನೂ ಪ್ರತ್ಯೇಕಿಸಿ ನೋಡುವುದು ಕಷ್ಟ. ಅಥವಾ ಎಲ್ಲರೂ ಮುಖ್ಯರೇ ಎನಿಸುತ್ತಾರೆ.


ಕೆ.ಆರ್‌.ನಂದಿನಿ

ಈ ಕ್ಷಣದಲ್ಲಿ ನಿಂತು ಸಮಗ್ರ ಹಿನ್ನೋಟ ಹರಿಸಿದರೆ ಬದುಕೇ ಒಂದು ದೊಡ್ಡ ಪಾಠ ಶಾಲೆಯಾಗಿ ಕಾಣುತ್ತದೆ. ಅಲ್ಲಿ ವೃತ್ತಿಯಿಂದ ಶಿಕ್ಷಕರಲ್ಲದ ಹಲವರಿಂದಲೂ ನಾನು ಬಹಳಷ್ಟು ಪಾಠಗಳನ್ನು ಕಲಿತಿದ್ದೇನೆ. ಚಿಕ್ಕಂದಿನಲ್ಲಿ ಅ, ಆ, ಇ,ಈ, ಎಬಿಸಿಡಿ ಕಲಿಸಿದ ಶಿಕ್ಷಕರು, ಐಎಎಸ್‌ ಕನಸು ಹೊತ್ತು ನಡೆದಾಗ ಮಾರ್ಗದರ್ಶನ ಮಾಡಿದ ಹಿರಿಯರಾದಿಯಾಗಿ ಎಲ್ಲರೂ ಪಾಠ ಹೇಳಿದವರೇ. ಹೀಗಾಗಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಲಿಸಿದ ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳನ್ನು ಹೇಳುತ್ತೇನೆ.

ಕೆ.ಆರ್‌.ನಂದಿನಿ, ಯುಪಿಎಸ್‌ಸಿ ಟಾಪರ್‌, ಬಳ್ಳಾರಿ ಜಿಪಂ ಸಿಇಓ


ಪಿ.ಎನ್. ಪ್ರಕಾಶ್

ಶೂಟಿಂಗ್‌ನಲ್ಲಿ ಪ್ರಕಾಶಿಸಲು ಅಪ್ಪನೇ ಕಾರಣ

ಸುಮಾರು ಇಪ್ಪತ್ತೊಂದು ವರ್ಷಗಳ ಹಿಂದೆ ಬೈಕ್‌ ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದೆ. ಬ್ಯಾಡ್ಮಿಂಟನ್ ಕೂಡ ಆಡುತ್ತಿದ್ದೆ. ಆದರೆ ನನ್ನನ್ನು ಶೂಟಿಂಗ್‌ ಕ್ರೀಡೆಗೆ ಬರುವಂತೆ ಮಾಡಿದವರು ಅಪ್ಪ ಪಿ.ಎನ್. ಪಾಪಣ್ಣ. ಅವರು ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಅದೊಂದು ದಿನ ನನ್ನನ್ನು ಕರೆದು ಶೂಟಿಂಗ್ ಕ್ರೀಡೆಯಲ್ಲಿ ತೊಡಗಿಕೊ ಎಂದು ಸಲಹೆ ನೀಡಿದರು.

ನನಗೆ ಶೂಟಿಂಗ್ ಕೂಡ ಒಂದು ಕ್ರೀಡೆ ಎಂದು ಗೊತ್ತಾಗಿದ್ದೇ ಆಗ. ಆಸಕ್ತಿ ಮೂಡಿತು. ಅವರ ಮಾರ್ಗದರ್ಶನದಿಂದ ನನ್ನ ಜೀವನಕ್ಕೆ ಹೊಸ ತಿರುವು ಸಿಕ್ಕಿತು. 2013ರಲ್ಲಿ ವಿಶ್ವ ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದು ಅವಿಸ್ಮರಣೀಯ. ಈಗ ನನ್ನ ತಂದೆಯೂ ಐಎಸ್‌ಎಸ್‌ಎಫ್‌ ಮಾನ್ಯತೆ ಪಡೆದ ಕೋಚ್ ಆಗಿ ತರಬೇತಿ ನೀಡುತ್ತಿದ್ದಾರೆ.

ಪಿ.ಎನ್. ಪ್ರಕಾಶ್, ಅಂತರರಾಷ್ಟ್ರೀಯ ಶೂಟಿಂಗ್ ಪಟು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು