ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯದ ಕನ್ನಡಿಯಲ್ಲಿ ಕೊರೊನಾ

ಕೋವಿಡ್-19 ರೋಗವು ಜೀವಶಾಸ್ತ್ರದ ಜೊತೆಗೆ ಗಣಿತಶಾಸ್ತ್ರದ ಒಂದು ಒಗಟೂ ಹೌದು
Last Updated 1 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

‘ವಕ್ತ್‌ ನೇ ಕಿಯಾ, ಕ್ಯಾ ಹಸೀನ್ ಸಿತಮ್, ‌ತುಮ್‌ ರಹೇ ನ ತುಮ್‌, ಹಮ್‌ ರಹೇ ನ ಹಮ್‌’– 1959ರಲ್ಲಿ, ಕೈಫಿ ಅಜ್ಮಿಯವರು ‘ಕಾಗಜ್ ಕೆ ಫೂಲ್’ ಚಿತ್ರಕ್ಕಾಗಿ ಬರೆದ ಈ ಹಾಡು, ಕೊರೊನಾ ವೈರಸ್‌ ದಾಳಿಯನ್ನು ಕಲ್ಪಿಸಿಕೊಂಡೇ ಸೃಷ್ಟಿಸಿರಬಹುದು ಎನಿಸುತ್ತದೆ. ‘ಸಮಯದ ದೆಸೆಯಿಂದ ನೀನು ನೀನಾಗಿಲ್ಲ, ನಾನು ನಾನಾಗಿಲ್ಲ’ ಎಂಬ ಇದರ ಅರ್ಥ ಈಗಿನ ಸ್ಥಿತಿಗೆ ಸರಿಹೊಂದುವಂತಿದೆ. ಕೊರೊನಾ ಕಾರಣದಿಂದ ಎಲ್ಲರಲ್ಲಿ ಉಂಟಾದ ಬದಲಾವಣೆಗಳು ನಿಜಕ್ಕೂ ಅಳತೆಗೋಲಿಗೆ ಸಿಗುತ್ತಿಲ್ಲ. ಒಂದೆಡೆ ಮಾನವೀಯತೆ ಮೈದೋರಿದರೆ, ಇನ್ನೊಂದೆಡೆ ವಿಕೃತ ರೂಪ ಕಾಣುತ್ತಿದೆ.

ಕೊರೊನಾ ಸೋಂಕಿಗೆ ಹೋಲಿಸಬಹುದಾದ ಸೋಂಕೊಂದು ಈಗಾಗಲೇ ಪ್ರಪಂಚಕ್ಕೆ ಅಪ್ಪಳಿಸಿ, ಸಾವು–ನೋವು ದಾಖಲಿಸಿದೆ. 1918ರಲ್ಲಿ ವಿಶ್ವದಾದ್ಯಂತ ಮೃತ್ಯುನರ್ತನ ಮಾಡಿದ ‘ಸ್ಪ್ಯಾನಿಷ್‌ ಇನ್‌ಫ್ಲೂ‌ಯೆಂಜಾ’ ಎಂಬ ಸೋಂಕು ವಿಶ್ವದಾದ್ಯಂತ 2ರಿ೦ದ 5 ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು.

ಭಾರತದಲ್ಲಿ ಸ್ಪ್ಯಾನಿಷ್ ಫ್ಲೂ ಕಾಣಿಸಿಕೊಂಡು ಇಡೀ ದೇಶವನ್ನು ನಡುಗಿಸಿತ್ತು. ಮೂರು ವರ್ಷ ಮೆರೆದ ಈ ದೈತ್ಯ ಶೀತ ಹುಟ್ಟಿದ್ದು ಯಾವ ದೇಶದಲ್ಲಿ ಎಂದು ನಿಖರ ಮಾಹಿತಿ ಇಲ್ಲದೇ ಹೋದರೂ, ಸಾಮಾನ್ಯವಲ್ಲದ ಶೀತದಿಂದ ಮತ್ತು ಬೇರೆಯದೇ ಸೋಂಕಿನಿಂದ ತನ್ನಲ್ಲಿ ನೂರು ಜನ ಬಳಲುತ್ತಿರುವುದಾಗಿ ಸ್ಪೇನ್‌ ಮೊದಲ ಬಾರಿಗೆ ವರದಿ ಮಾಡಿತು. ಬೇರೆ ದೇಶಗಳಲ್ಲಿ ಸೋಂಕು ಕಾಣಿಸಿಕೊಂಡರೂ ಸುರಕ್ಷತೆ ದೃಷ್ಟಿಯಿಂದ ಮಾಹಿತಿಯನ್ನು ನೀಡಲು ಯಾವುದೇ ದೇಶ ಮುಂದೆ ಬರಲಿಲ್ಲ. ತನ್ನ ದೇಶದ ಸೋಂಕಿನ ಮಾಹಿತಿಯನ್ನು ಧೈರ್ಯದಿಂದ ತಿಳಿಸಿ, ಬೇರೆ ದೇಶಗಳಿಗೂ ಸತ್ಯವನ್ನು ಮುಂದಿಡಲು ಪ್ರೇರಣೆಯಾದ ದೇಶದ ಹೆಸರನ್ನೇ ವೈರಸ್ ಪಡೆದುಕೊಂಡಿತು.

ಭಾರತದಲ್ಲಿ ಬಾಂಬೆಯ ನೌಕಾ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ 6 ಸಿಪಾಯಿಗಳಲ್ಲಿ ಈ ಸೋಂಕು ಮೊದಲು ಕಾಣಿಸಿಕೊಂಡಿತು. ನಂತರ ಇಡೀ ದೇಶವನ್ನು ವ್ಯಾಪಿಸಿತು. ಗಾಂಧೀಜಿ ತಮ್ಮ ಆತ್ಮಚರಿತ್ರೆಯಲ್ಲಿ ತಿಳಿಸಿರುವಂತೆ, ದೇಶದಲ್ಲಿ ತೀವ್ರ ಬರಗಾಲದ ಕಾರಣದಿಂದ ಉಂಟಾಗಿದ್ದ ಆಹಾರದ ಕೊರತೆ ಮತ್ತು ಅಪೌಷ್ಟಿಕತೆಯು ಸೋಂಕು ಬೇಗ ಹರಡಲು ದಾರಿ ಮಾಡಿಕೊಟ್ಟವು.

ಸ್ಪ್ಯಾನಿಷ್ ಫ್ಲೂನ ಮಾಹಿತಿ ನಮಗೆ ಕೆಲವು ವಿಶೇಷ ಸಲಹೆಗಳನ್ನು ಖಂಡಿತ ನೀಡಬಲ್ಲದು. ಕೊರೊನಾ ಕೊನೇಪಕ್ಷ ಯಾವಾಗ ಮುಗಿಯುತ್ತದೆ ಎಂಬ ಪ್ರಶ್ನೆಗೆ ಸಣ್ಣ ಉತ್ತರವನ್ನಾದರೂ ಕೊಡಬಲ್ಲದು. ಹಾಗಾದರೆ ಈ ಫ್ಲೂನ ಅಂತ್ಯವಾದದ್ದಾದರೂ ಹೇಗೆ ಎಂಬುದು ಕುತೂಹಲ ಕೆರಳಿಸುವ ಪ್ರಶ್ನೆ. ಏಕೆಂದರೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಯು ಅಂಬೆಗಾಲಿಡುತ್ತಿದ್ದ ಸಮಯ ಅದು. ಮಾಸ್ಕ್ ಧರಿಸಬೇಕು ಎಂಬುದನ್ನು ಬಿಟ್ಟು, ಕೈತೊಳೆಯುವುದು, ಸ್ಯಾನಿಟೈಸರ್ ಬಳಕೆ, ಭೌತಿಕ ಅಂತರ, ವೆಂಟಿಲೇಟರ್ ಬಳಕೆ ಮುಂತಾದವು ಗೊತ್ತಿರಲಿಲ್ಲ. ಸೋಂಕಿತರಿಗೆ ಸಾಧಾರಣ ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳಂತೆ ಚಿಕಿತ್ಸೆ ನೀಡಲಾಗುತ್ತಿತ್ತು.

ಅಮೆರಿಕದ ಪ್ರಸಿದ್ಧ ವೈದ್ಯ ಜಾನ್‌ ಎಮ್.‌ ಬ್ಯಾರ‍್ರಿ ತಮ್ಮ ‘ದಿ ಗ್ರೇಟ್‌ ಇನ್‌ಫ್ಲೂ‌ಯೆಂಜಾ’ ಪುಸ್ತಕದಲ್ಲಿ ತಿಳಿಸಿರುವಂತೆ, ಸೋಂಕಿತರಲ್ಲಿ ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವ ಸಾಮಾನ್ಯ ಲಕ್ಷಣವಾಗಿದ್ದರೆ, ಕಣ್ಣಿನಿಂದ ರಕ್ತ ಸೋರುವುದು ಭಯಾನಕವಾಗಿತ್ತು. ಸುಟ್ಟುಹಾಕಲು ಕಟ್ಟಿಗೆಯ ಕೊರತೆಯಿಂದ ಹೆಣಗಳನ್ನು ರಸ್ತೆಯ ಅಕ್ಕಪಕ್ಕದಲ್ಲಿ ಬಿಸಾಕಲಾಗುತ್ತಿತ್ತು. ‘ನಿರಾಲಾ’ ಎಂದೇ ಪ್ರಖ್ಯಾತರಾದ ಹಿಂದಿ ಕವಿ ಸೂರ್ಯಕಾಂತ ಅವರು ಈ ಸಮಯದಲ್ಲಿ ಬರೆದ ‘ಗಂಗೆ ಹೆಣಗಳಿಂದ ಬಾತು ಹೋಗಿದ್ದಾಳೆ’ ಎಂಬ ಸಾಲನ್ನು ಸ್ಟ್ಯಾನ್‌ಫರ್ಡ್‌ ಯೂನಿವರ್ಸಿಟಿಯ ಅಮಿತ್‌ ಕಪೂರ್‌ ಮತ್ತು ಚಿರಾಗ್‌ ಯಾದವ್‌ ‘ದಿ ಎಕನಾಮಿಕ್‌ ಟೈಮ್ಸ್‌’ ಪತ್ರಿಕೆಯಲ್ಲಿನ ಲೇಖನದಲ್ಲಿ ಜ್ಞಾಪಿಸಿಕೊಂಡಿದ್ದಾರೆ.

ಕೊರೊನಾ ಸೋಂಕಿನಿಂದ ವಿಶ್ವ ಅನುಭವಿಸುತ್ತಿರುವ ನೋವು, ನಷ್ಟಗಳನ್ನು ಏಳು ವರ್ಷಗಳ ಹಿಂದೆಯೇ ಮೈಕ್ರೊಸಾಫ್ಟ್ ಕಂಪನಿಯ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರು ಟೆಡ್‌ ಟಾಕ್‌ನಲ್ಲಿ ಚರ್ಚಿಸಿದ್ದಾರೆ. ವಿಶ್ವವನ್ನು ನಡುಗಿಸುವುದು ಅಣ್ವಸ್ತ್ರವಲ್ಲ, ಬದಲಾಗಿ ಕಣ್ಣಿಗೆ ಕಾಣದ ಒಂದು ಸೂಕ್ಷ್ಮಾಣುಜೀವಿ ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದರು. ಆಫ್ರಿಕಾದಲ್ಲಿ ಕಾಣಿಸಿಕೊಂಡ ಎಬೊಲಾ ಸೋಂಕನ್ನು ಎಚ್ಚರಿಕೆಯ ಗಂಟೆ ಎಂದು ಭಾವಿಸದಿದ್ದರೆ ಇನ್ನೊಂದು ಪಿಡುಗಿಗೆ ತಯಾರಾಗಬೇಕು ಎಂದು ಹೇಳಿದ್ದರು.

ಯಾವುದೇ ಒಂದು ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಎಷ್ಟು ಬೇಗ ಮತ್ತು ಹೇಗೆ ಹರಡುತ್ತದೆ ಎಂಬುದನ್ನು ತಿಳಿಯುವುದೇ ಅದನ್ನು ಗೆಲ್ಲುವ ಗುಟ್ಟಾಗಬಹುದು. ಪ್ರತೀ ಸೋಂಕಿತ ವ್ಯಕ್ತಿಯು ಉಂಟುಮಾಡುವ ಹೊಸ ಪ್ರಕರಣಗಳ ಸರಾಸರಿ ಸಂಖ್ಯೆಯನ್ನು ‘ಸಂತಾನೋತ್ಪತ್ತಿ ಸಂಖ್ಯೆ’ ಎಂದು ಕರೆಯುತ್ತಾರೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಒಂದು ಕೋಣೆಯಲ್ಲಿರುವ ಇಬ್ಬರಿಗೆ ಸೋಂಕನ್ನು ಅಂಟಿಸುತ್ತಾನೆ ಅಂದರೆ, ಆ ವ್ಯಕ್ತಿಯ ಸಂತಾನೋತ್ಪತ್ತಿ ಸಂಖ್ಯೆ ಎರಡು ಎಂದರ್ಥ. ಈಗ ಆ ಇಬ್ಬರು ಸೋಂಕನ್ನು ತಲಾ ಇನ್ನಿಬ್ಬರಿಗೆ ತಗುಲಿಸುತ್ತಾರೆ. ಒಂದು ವೇಳೆ ಇದು ಹೀಗೇ ಮುಂದುವರಿದರೆ 33ನೇ ಹಂತದಲ್ಲಿ ವಿಶ್ವದ ಪ್ರತಿಯೊಬ್ಬರೂ ಸೋಂಕಿತರಾಗಬೇಕು. ಆದರೆ ಹಾಗಾಗುವುದಿಲ್ಲ.

ಒಂದು ಹಂತ ತಲುಪಿದ ಮೇಲೆ, ಸೋಂಕು ತಗುಲುವ ಅಪಾಯ ಹೊಂದಿರುವ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಪ್ರತಿರೋಧ ಶಕ್ತಿ ಉಳ್ಳವರ ಸಂಖ್ಯೆ ಹೆಚ್ಚಿಗೆ ಇರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಗೆ ಸೋಂಕು ಉಂಟಾಗಿದೆ, ಅವನ ಜೊತೆಯಲ್ಲಿರುವ ವ್ಯಕ್ತಿಗಳು ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಕೆಲವು ದಿನಗಳ ಬಳಿಕ ಆ ಗುಂಪಿನ ಎರಡನೇ ವ್ಯಕ್ತಿ ಸೋಂಕನ್ನು ಪಡೆದಾಗ, ಅದನ್ನು ಹರಡಲು ತಕ್ಷಣ ಸಂಪರ್ಕಕ್ಕೆ ಸಿಗುವ ವ್ಯಕ್ತಿ ಎಂದರೆ ಮೊದಲು ಸೋಂಕು ಪಡೆದಿದ್ದವ. ಆದರೆ, ಅವನು ಅಷ್ಟರಲ್ಲಾಗಲೇ ಸೋಂಕಿಗೆ ಒಳಗಾಗಿ, ಪ್ರತಿರೋಧ ಶಕ್ತಿಯನ್ನು ಪಡೆದಿರುತ್ತಾನೆ. ಅಂದರೆ ಸೋಂಕನ್ನು ಹರಡಲು ಎರಡನೇ ವ್ಯಕ್ತಿಗೆ ಪ್ರತಿರೋಧ ಶಕ್ತಿ ಇಲ್ಲದ ವ್ಯಕ್ತಿಗಳ ಲಭ್ಯತೆ ಇಲ್ಲವಾಗುತ್ತದೆ. ಈ ರೀತಿ ಸೋಂಕನ್ನು ಪಡೆಯುವ ಜನ ಕಡಿಮೆಯಾಗುತ್ತಾ ಒಂದು ಹಂತದಲ್ಲಿ ಸೋಂಕು ಮುಕ್ತಾಯವಾಗುತ್ತದೆ.

ಇನ್ನೊಂದು ಉಪಾಯವೆಂದರೆ, ಲಸಿಕೆಯ ಸಂಶೋಧನೆ. ಇದು ಕೂಡ ಸೋಂಕನ್ನು ತಡೆಯಬಲ್ಲದು. ಮೊದಲನೆಯದಾಗಿ, ಸೋಂಕು ಹರಡುವ ಪ್ರಮಾಣವು ಸೋಂಕು ಹೊಂದಿರುವ ಜನರ ಸಂಖ್ಯೆಯನ್ನು ಅವಲಂಬಿಸಿದೆ. ಸೋಂಕಿತರ ಸಂಖ್ಯೆ ಹೆಚ್ಚಿದಂತೆ, ಹರಡುವಿಕೆ ಹೆಚ್ಚಾಗುತ್ತದೆ. ಎರಡನೆಯದಾಗಿ, ಸೋಂಕಿತ ವ್ಯಕ್ತಿ ಎಷ್ಟು ಜನರ ಸಂಪರ್ಕಕ್ಕೆ ಬರುತ್ತಾನೆ ಎಂಬುದನ್ನು ಅವಲಂಬಿಸಿರುತ್ತದೆ. ಸಂಪರ್ಕಿತರ ಸಂಖ್ಯೆ ಹೆಚ್ಚಾದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಮೂರನೆಯದಾಗಿ, ಸೋಂಕಿತ ವ್ಯಕ್ತಿ ಪ್ರತಿರೋಧ ಶಕ್ತಿ ಇಲ್ಲದ ವ್ಯಕ್ತಿಗೆ ಸೋಂಕನ್ನು ಹರಡಬಹುದಾದ ಸಾಧ್ಯತೆ. ನಾಲ್ಕನೆಯದಾಗಿ, ಸೋಂಕುಪೀಡಿತರಾಗುವ ಜನರ ಪ್ರಮಾಣ. ಸೋಂಕು ಕಾಣಿಸಿಕೊಂಡ ಪ್ರಾರಂಭದಲ್ಲಿ ಈ ಸಂಖ್ಯೆ ಹೆಚ್ಚಿದ್ದು ಕ್ರಮೇಣ ಕ್ಷೀಣಿಸುತ್ತದೆ. ಕೋವಿಡ್- 19, ಜೀವಶಾಸ್ತ್ರದ ಜೊತೆ ಗಣಿತಶಾಸ್ತ್ರದ ಒ೦ದು ಒಗಟೂ ಹೌದು.

ಚಿಕಿತ್ಸೆಗಿಂತ ಮುಂಜಾಗ್ರತೆಯೇ ಉತ್ತಮ. ಸಂದಿಗ್ಧ ಪರಿಸ್ಥಿತಿಯಲ್ಲಿ ತನಗೆ ತಾನು ಸಹಾಯ ಮಾಡಿಕೊಳ್ಳುತ್ತಾ ಬೇರೆಯವರನ್ನು ಸುರಕ್ಷಿತವಾಗಿಡುವುದು ವೀರೋಚಿತ ಕರ್ತವ್ಯ. ನಿಜವಾಗಿ, ತನ್ನ ಸೋಂಕಿನ ಪರಿಸ್ಥಿತಿಯನ್ನು ತಿಳಿಸಿ ಚಿಕಿತ್ಸೆ ಪಡೆಯುವುದು ಸಹಕಾರ. ತನ್ನಿಂದ ತನ್ನವರಿಗೆ ಸೋಂಕು ತಗುಲಬಾರದು ಎಂಬ ಕಳಕಳಿಯು ನೈತಿಕ ನಾಯಕತ್ವ. ಅಂತರ ಕಾಯ್ದುಕೊಳ್ಳುವಿಕೆ ಎಂಬ ಬ್ರಹ್ಮಾಸ್ತ್ರದಿಂದ, ಸೋಂಕಿನ ಕೊಂಡಿಯನ್ನು ಕತ್ತರಿಸಿ, ಸೂಕ್ಷ್ಮಾಣುವನ್ನು ದೂರವಿಟ್ಟು ದಿನಗಳನ್ನು ದೂಡುವುದರಲ್ಲಿದೆ ಕೊರೊನಾದ ಅಂತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT