ಗುರುವಾರ , ಫೆಬ್ರವರಿ 27, 2020
19 °C

ಅನುದಾನ ತುಸು ಹೆಚ್ಚಳ, ಭರವಸೆ ಮೂಡಿಸುವುದಿಲ್ಲ

ನಾರಾಯಣ ಎ Updated:

ಅಕ್ಷರ ಗಾತ್ರ : | |

ಶಿಕ್ಷಣ ಕ್ಷೇತ್ರಕ್ಕಾಗಿ ಮೀಸಲಿರಿಸಿದ ಮೊತ್ತ ಸ್ವಲ್ಪ ಹೆಚ್ಚಳ ಕಂಡಿದೆ. ಆದರೆ ಹೋದ ವರ್ಷಕ್ಕೆ ಹೋಲಿಸಿದರೆ ಹೆಚ್ಚಳದ ದರ ಕುಸಿದಿದೆ. ಅತ್ಯಂತ ಆದ್ಯತೆಯ ಈ ಕ್ಷೇತ್ರದಲ್ಲಿ ಭರವಸೆ ಮೂಡಿಸುವ ರೀತಿಯ ಯಾವುದೇ ಯೋಜನೆ, ಯೋಚನೆಗಳು ಕಾಣಿಸುತ್ತಿಲ್ಲ. ಹೋದ ವರ್ಷ ಪ್ರಕಟಿಸಿದ ಕೆಲ ಯೋಜನೆಗಳ ಮುಂದುವರಿಕೆಯ ಬಗ್ಗೆಯೂ ಸುಳಿವಿಲ್ಲ. ‘ಹೊಸ ಶಿಕ್ಷಣ ನೀತಿಯೊಂದನ್ನು ಪ್ರಕಟಿಸಲಿದ್ದೇವೆ’ ಅಂತ ಹೋದ ವರ್ಷ ಹೇಳಲಾಗಿತ್ತು. ಅದನ್ನೇ ಪುನರಾವರ್ತಿಸಲಾಗಿದೆ. ಪ್ರಕಟಣೆಗೆ ಯಾವುದೇ ಸಮಯ ಮಿತಿ ಈಗಲೂ ನಿಗದಿಪಡಿಸಿಲ್ಲ.

ಶಿಕ್ಷಣಕ್ಕೆ ಮೀಸಲಿರಿಸಿದ ಮೊತ್ತ ₹99,320 ಕೋಟಿ. ಹೋದ ವರ್ಷದ ಮೊತ್ತ ₹94,854 ಕೋಟಿ. ಹೆಚ್ಚಳ ₹4,466 ಕೋಟಿ. ಹೋದ ವರ್ಷ ಕಂಡ ಹೆಚ್ಚಳ ₹10,000 ಕೋಟಿ. ಶಿಕ್ಷಣದ ಮೇಲಿನ ವೆಚ್ಚ ಒಟ್ಟು ರಾಷ್ಟ್ರೀಯ ವರಮಾನದ ಶೇ 6ರಷ್ಟಾದರೂ ಇರಬೇಕು. ಇದಕ್ಕಾಗಿ ಕೇಂದ್ರ ಸರ್ಕಾರದ ಶಿಕ್ಷಣ ವೆಚ್ಚ ಕನಿಷ್ಠ ಶೇ 15ರಷ್ಟು ವಾರ್ಷಿಕ ಬೆಳವಣಿಗೆ ಕಾಣಬೇಕು. ಹೋದ ವರ್ಷ ಹೆಚ್ಚಳವು ಶೇ 13ರಷ್ಟಿತ್ತು. ಈ ವರ್ಷದ ಹೆಚ್ಚಳ ಶೇ 5ರಷ್ಟೂ ಇಲ್ಲ. ಶಿಕ್ಷಣ ವೆಚ್ಚದ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಚೆಲ್ಲಿದಂತೆ ಕಾಣಿಸುತ್ತದೆ. ಅದಕ್ಕೆ, ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಮತ್ತು ಶಿಕ್ಷಣದಲ್ಲಿ ಹೂಡಿಕೆಗಾಗಿ ವಿದೇಶಿ ಮೂಲಗಳಿಂದ ಸಾಲ ಮಾಡುವುದಕ್ಕೆ ಅನುವು ಮಾಡುವ ವಿಚಾರಗಳನ್ನು ಬಜೆಟ್ ಪ್ರಸ್ತಾಪಿಸಿದೆ. ಸರ್ಕಾರದ ಹೂಡಿಕೆ ಕಡಿಮೆಯಾಗಿ, ಖಾಸಗಿ ಮತ್ತು ವಿದೇಶಿ ಬಂಡವಾಳವು ಶಿಕ್ಷಣ ರಂಗವನ್ನು ದೊಡ್ಡದಾಗಿ ಪ್ರವೇಶಿಸುವ ಸ್ಪಷ್ಟ ಸೂಚನೆ ಇದು.

‘ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ, ಶಿಕ್ಷಣದ ಗುಣಮಟ್ಟ ಪಾತಾಳಕ್ಕಿಳಿದಿರುವುದು ಶಿಕ್ಷಣಕ್ಕೆ ಸಂಬಂಧಿಸಿದ ಅತಿ ಮುಖ್ಯ ಸಮಸ್ಯೆ. ಇದನ್ನು ಸರಿಪಡಿಸಲು ಮುಖ್ಯವಾಗಿ ಶಿಕ್ಷಕರ ಗುಣಮಟ್ಟ ಸುಧಾರಿಸಬೇಕಿದೆ; ಶಿಕ್ಷಕರ ಶಿಕ್ಷಣ ಮತ್ತು ತರಬೇತಿಗಳನ್ನು ಆದ್ಯತಾ ವಲಯಗಳಾಗಿ ಗುರುತಿಸಬೇಕಿದೆ’ ಎಂದು ಶಿಕ್ಷಣ ತಜ್ಞರು ಬಜೆಟ್ ಪೂರ್ವದಲ್ಲಿ ಪ್ರತಿಪಾದಿಸಿದ್ದರು. ಈ ಕುರಿತು ಬಜೆಟ್‌ನಲ್ಲಿ ಚಕಾರವಿಲ್ಲ. ಶಿಕ್ಷಣ ವಂಚಿತ ಸಮುದಾಯಗಳಿಗೆ ನೆರವಾಗಲು ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸುವ ಪ್ರಸ್ತಾಪವಿದೆ. ಬೋಧನೆಯ ವಿಚಾರಕ್ಕೆ ಬಂದರೆ ಶಿಕ್ಷಕರಿಗಿಂತ ಹೆಚ್ಚಾಗಿ ತಂತ್ರಜ್ಞಾನವನ್ನು ಅವಲಂಬಿಸುವ ಮೂಲಕ ಶಿಕ್ಷಣವನ್ನು ಸುಧಾರಿಸುವ ಯೋಚನೆ ಇಲ್ಲಿ ಕೆಲಸಮಾಡಿದ್ದು ಕಾಣಬಹುದು. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಅಗತ್ಯ. ಆದರೆ ಆನ್‌ಲೈನ್ ಕೋರ್ಸ್‌ಗಳನ್ನು ನಡೆಸಲು ಸಹ ಗುಣಮಟ್ಟದ ಶಿಕ್ಷಕರ ಅಗತ್ಯವಿದೆ. ಶಿಕ್ಷಕರ ಗುಣಮಟ್ಟ ಶೂನ್ಯದಿಂದ ಸೃಷ್ಟಿಯಾಗುವುದಿಲ್ಲ. ಕೌಶಲ ವೃದ್ಧಿಗಾಗಿ ₹3,000 ಕೋಟಿ ಅನುದಾನ ಮತ್ತು ಕೆಲ ಯೋಜನೆಗಳಿವೆ. ಆದರೆ ಶಿಕ್ಷಣ ರಂಗದ ಸಮಸ್ಯೆಗಳಿಗೆ ಇದು ಸಾಕಾಗುವುದಿಲ್ಲ. ಖಾಸಗಿಯಾಗಿ ಆನ್‌ಲೈನ್ ಮೂಲಕ ದೊರೆಯುವ ಶಿಕ್ಷಣ ಮತ್ತು ತರಬೇತಿ ಶುಲ್ಕದ ಮೇಲೆ ವಿಧಿಸುವ ಶೇಕಡ 18ರಷ್ಟಿರುವ ಜಿಎಸ್‌ಟಿಯನ್ನು ತಗ್ಗಿಸಬೇಕು ಎನ್ನುವ ಬೇಡಿಕೆಯನ್ನು ಪರಿಗಣಿಸಲಾಗಿಲ್ಲ.

‘ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಲಾಗುವುದು’ ಎಂದು ಕಳೆದ ಬಜೆಟ್‌ನಲ್ಲಿ ಹೇಳಲಾಗಿತ್ತು. ಅದರ ಬಗ್ಗೆ ಪ್ರಸ್ತಾಪವಿಲ್ಲ. ಭಾರತೀಯ ಶಿಕ್ಷಣ ನಿಯಂತ್ರಣ ಆಯೋಗ ರಚಿಸುವುದಾಗಿಯೂ, ಅದಕ್ಕೆ ಬೇಕಾದ ಕಾನೂನನ್ನು ಮುಂದಿನ ವರ್ಷದಲ್ಲಿ ರೂಪಿಸುವುದಾಗಿಯೂ ಹೇಳಲಾಗಿತ್ತು.  ಆ ಬಗ್ಗೆ ಯಾವುದೇ ಸುಳಿವಿಲ್ಲ.

ಪೊಲೀಸ್ ವಿಶ್ವವಿದ್ಯಾಲಯ ಮತ್ತು ಫೋರೆನ್ಸಿಕ್ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಈ ವರ್ಷದ ಬಜೆಟ್‌ನಲ್ಲಿ ಹೇಳಲಾಗಿದೆ. ಪೊಲೀಸ್ ವ್ಯವಸ್ಥೆ ಮತ್ತು ಫೋರೆನ್ಸಿಕ್ ತಂತ್ರಜ್ಞಾನದಲ್ಲಿ ಅಧ್ಯಯನ, ಸಂಶೋಧನೆ ಇತ್ಯಾದಿ ನಡೆಯಬೇಕು. ಹಾಗೆಂದು ಈ ಉದ್ದೇಶಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಅಗತ್ಯವಿದೆಯೇ? ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಅನುಸರಿಸುತ್ತಿರುವ ಏಕ ಶಿಸ್ತೀಯ ವಿಶ್ವವಿದ್ಯಾಲಯಗಳ ಸ್ಥಾಪನೆ ನೀತಿಯ ಮುಂದುವರಿಕೆ ಇದು. ವಿಶ್ವವಿದ್ಯಾಲಯದ ಪರಿಕಲ್ಪನೆಯನ್ನೇ ಅತ್ಯಂತ ಸಂಕುಚಿತವಾಗಿ ನೋಡುವ ದೃಷ್ಟಿಕೋನದ ಫಲವಾಗಿ ಇಂತಹ ಯೋಜನೆಗಳು ಹುಟ್ಟಿಕೊಳ್ಳುತ್ತವೆ. ವಿಶ್ವ ವಿಶ್ವವಿದ್ಯಾಲಯಗಳ ಕೆಲಸ ಎಲ್ಲಾ ಶಿಸ್ತುಗಳನ್ನು ಒಂದೆಡೆ ಸೇರಿಸಿ ಪರಸ್ಪರ ಜ್ಞಾನ ವಿನಿಮಯ ಮತ್ತು ಸಂಶೋಧನೆಗೆ ಅನುವು ಮಾಡಿಕೊಡುವುದು. ಒಂದು ಸಂಶೋಧನಾ ಕೇಂದ್ರದಿಂದ ಆಗಬೇಕಿರುವ ಕೆಲಸಕ್ಕೆ ಒಂದೊಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ರಾಜ್ಯಗಳ ನೀತಿಯನ್ನು ಕೇಂದ್ರ ಸರ್ಕಾರವಾದರೂ ಸರಿಪಡಿಸಬಹುದು ಎಂದುಕೊಂಡರೆ ಈಗ ರಾಜ್ಯಗಳ ಚಾಳಿಯನ್ನೇ ಕೇಂದ್ರವೂ ಅನುಸರಿಸಲು ಹೊರಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು