ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಬಿದ್ದು ಎದ್ದೇಳುವ ಪರಿ

Published 20 ಮಾರ್ಚ್ 2024, 22:31 IST
Last Updated 20 ಮಾರ್ಚ್ 2024, 22:31 IST
ಅಕ್ಷರ ಗಾತ್ರ

ಸ್ಟೀವ್‌ ಜಾಬ್ಸ್‌ ಯಾರಿಗೆ ಗೊತ್ತಿಲ್ಲ? ವಿಶ್ವವಿಖ್ಯಾತ ಆ್ಯಪಲ್‌ ಕಂಪನಿಯ ಸಂಸ್ಥಾಪಕರಲ್ಲೊಬ್ಬರು. ಕಾರಣಾಂತರಗಳಿಂದ ಸ್ಟೀವ್‌ರನ್ನು ಅವರು ಕಟ್ಟಿದ ಕಂಪನಿಯಿಂದಲೇ ಹೊರಹಾಕಲಾಯಿತು. ಆ ಸವಾಲಿನ ಸಂದರ್ಭದಲ್ಲಿ ಅವರೆದುರು ಎರಡು ಆಯ್ಕೆಗಳಿದ್ದವು. ಮೊದಲನೆಯದು, ಕಷ್ಟಪಟ್ಟು ತಾನೇ ಕಟ್ಟಿದ ಕಂಪನಿಯಿಂದಲೇ ಹೊರಬರುವಂತಾಯಿತಲ್ಲ ಎಂದು ಯೋಚಿಸುತ್ತ ಸ್ವಮರುಕದಿಂದ ನರಳುವುದು, ಎರಡನೆಯದು, ಉಂಟಾದ ಸಮಸ್ಯೆಯಿಂದ ಹೊರಬರಲು ತಾನೇನು ಮಾಡಬೇಕು ಎಂಬುದನ್ನು ತರ್ಕಬದ್ಧವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗುವುದು.

ಸಾಧಾರಣ ವ್ಯಕ್ತಿಗಳು ಮೊದಲನೆಯ ದಾರಿ ಆಯ್ದುಕೊಳ್ಳುತ್ತಾರೆ. ಆದರೆ ಸ್ಟೀವ್‌ ಹೀಗೇಕಾಯಿತೆಂದು ಯೋಚಿಸುತ್ತ ಕೂರುವ ಬದಲು ಈ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬಹುದೆಂದು ಯೋಚಿಸಿ ಕಾರ್ಯತತ್ಪರರಾದರು. ನೆಕ್ಸ್ಟ್‌ ಕಂಪ್ಯೂಟರ್‌ ಮತ್ತು ಪಿಕ್ಸಾರ್‌ ಆ್ಯನಿಮೇಷನ್‌ ಸ್ಟುಡಿಯೋಸ್‌ ಎಂಬ ಎರಡು ಅತ್ಯದ್ಭುತ ಸಂಸ್ಥೆಗಳನ್ನು ಹುಟ್ಟುಹಾಕಿದರು. ಹನ್ನೆರಡು ವರ್ಷಗಳ ಬಳಿಕ ಆ್ಯಪಲ್‌ ಸ್ಟೀವ್‌ ಅವರನ್ನು ಮತ್ತೆ ಆಹ್ವಾನಿಸಿತು. ಎಷ್ಟೆಂದರೂ ಆ್ಯಪಲ್‌ ಸ್ಟೀವ್‌ರ ಕನಸಿನ ಕೂಸಲ್ಲವೇ? ಮರಳಿ ಸಿಇಓ ಆದರು. ಸ್ಟೀವ್‌ ಬಂದ ಮೇಲೆ ನಿರ್ಮಾಣವಾದ ಐಪಾಡ್‌, ಐಫೋನ್‌, ಐಟ್ಯೂನ್ಸ್‌ ಸ್ಟೋರ್‌, ಐಮ್ಯಾಕ್ ಮತ್ತು ಐಪ್ಯಾಡ್‌ನಂತಹ ಉತ್ಪನ್ನಗಳು ಕಂಪನಿಯನ್ನು ಮುಗಿಲೆತ್ತರಕ್ಕೆ ಏರಿಸಿದವು. 

ಸ್ಟೀವ್‌ ಅವರ ಉದಾಹರಣೆಯಿಂದ ನಾವು ಕಲಿಯಬೇಕಾದದ್ದು ಬದುಕಿನಲ್ಲಿ ಸೋತರೂ ಅದರಿಂದೀಚೆ ಜಿಗಿದು ಮತ್ತೆ ಆ ಎತ್ತರ ತಲುಪುವ ಬಗೆಯನ್ನು. ಸೋಲು ಅಥವಾ ಆಘಾತ ಎಂಬುದು ವೃತ್ತಿಜೀವನದ ಅಥವಾ ಬದುಕಿನ ಆರಂಭದಲ್ಲಿ ಮಾತ್ರವಲ್ಲ. ಯಾವ ಸಂದರ್ಭದಲ್ಲಿ ಬೇಕಾದರೂ ಅನಿರೀಕ್ಷಿತವಾಗಿ ಸವಾಲೊಡ್ಡಬಹುದು. ಸ್ಟೀವ್‌ರಂತೆ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ.

ಕ್ರಿಕೆಟ್‌ನಂತಹ ಅನಿಶ್ಚಿತತೆಯ ಆಟದಲ್ಲಿ ಸಣ್ಣ ಅಂದಾಜನ್ನಾದರೂ ಮಾಡಬಹುದು. ಆದರೆ ಬದುಕು ಹಾಗಲ್ಲ. ಇಲ್ಲಿ ನಡೆಯುವಷ್ಟು ಅನಿರೀಕ್ಷಿತಗಳು ಮತ್ತೆಲ್ಲೂ ನಡೆಯುವುದಿಲ್ಲ. ಎಲ್ಲ ಸರಿಯಿದೆ ಎಂದು ಸಮಾಧಾನದ ಉಸಿರು ಬಿಡುತ್ತಿರುವಾಗಲೇ ಹೊಸದೊಂದು ಆಘಾತ ನಮಗಾಗಿ ಕಾಯುತ್ತಿರುತ್ತದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಮೊದಲು ಮಾಡಬೇಕಾದದ್ದು ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದು. ಏಕೆಂದರೆ ಆಗಿಹೋದ ಘಟನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಜತೆಗೆ ಅದನ್ನು ಸರಿಪಡಿಸಲು ಏನು ಕ್ರಮ ಕೈಗೊಳ್ಳಬಹುದೆಂದು ಯೋಚಿಸಿ ಆ ದಿಸೆಯಲ್ಲಿ ಕಾರ್ಯತತ್ಪರವಾಗುವುದು. ಆಘಾತಗಳು ಬರುವುದನ್ನು ತಪ್ಪಿಸಲಂತೂ ಸಾಧ್ಯವಿಲ್ಲ, ಆದರೆ ಅವನ್ನೇ ಮೆಟ್ಟಿಲಾಗಿಸಿಕೊಂಡು ಯಶಸ್ಸು ಕಾಣುವುದಿದೆಯಲ್ಲ, ಅದು ಜಾಣತನ. 

ತನಗೆ ಮಾತ್ರ ಏಕೆ ಕಷ್ಟ ಬಂತೆಂದು ಯೋಚಿಸುವವರು ಮರೆಯದೇ ನೆನಪಿಡಬೇಕಾದ ಸಂಗತಿಯೆಂದರೆ ಪ್ರತಿಯೊಬ್ಬರೂ ಅವರದ್ದೇ ಆದ ಸಂಕಟವೊಂದನ್ನು ಹೊಂದಿರುತ್ತಾರೆ ಮತ್ತು ಅದರಿಂದ ಹೊರಬರಲು ಹೋರಾಡುತ್ತಿರುತ್ತಾರೆ. ಎದೆಗುಂದಿ ಹತಾಶರಾಗಿ ಸೋಲೊಪ್ಪಿಕೊಳ್ಳುವ ಬದಲು ನೆಲಕ್ಕೆ ಬಲವಾಗಿ ಬಡಿಸಿಕೊಂಡರೂ ಪುಟಿದೇಳುವ ಚೆಂಡಿನಂತೆ ಎದ್ದೇಳುವುದು ಬದುಕು ಚಲನಶೀಲ ಎಂಬುದರ ನಿದರ್ಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT