ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಹೂವು ಹೇಳಿದ ಪಾಠ

Published 18 ಮಾರ್ಚ್ 2024, 22:30 IST
Last Updated 18 ಮಾರ್ಚ್ 2024, 22:30 IST
ಅಕ್ಷರ ಗಾತ್ರ

ತನಗೆ ತೊಂದರೆ ಕೊಟ್ಟವರನ್ನು ಬಿಡುವುದಿಲ್ಲ ಅದೇನಾದರೂ ಆಗಲಿ ಎನ್ನುವ ನಿರ್ಧಾರಕ್ಕೆ ಮಗ ಬಂದಿದ್ದ. ಇದನ್ನೆಲ್ಲ ಅಪ್ಪ ನೋಡುತ್ತಿದ್ದ. ಮಗನಿಗೆ ತೊಂದರೆ ಆಗಿದ್ದೂ ನಿಜ, ಅದರಿಂದ ಅವನ ಮನಸ್ಸಿಗೆ ನೋವಾಗಿದ್ದು ನಿಜ, ಹಾಗೆಂದು ಅಪ್ಪನ ಜವಾಬ್ದಾರಿ ಹೋಗು ಅವರಿಗೆ ತೊಂದರೆ ಕೊಡು ಎಂದು ಹೇಳುವುದಲ್ಲ ಎನ್ನುವುದೂ ಅವನಿಗೆ ಗೊತ್ತಿತ್ತು. ಹಾಗೆಂದು ಇದನ್ನು ಮಾಡಬೇಡ ಎಂದರೆ ಮಗನಿಗೆ ಇನ್ನಷ್ಟು ಬೇಸರವಾಗುತ್ತದೆ, ಅಪ್ಪ ಕೂಡ ತನ್ನ ಪರವಾಗಿಲ್ಲ ಎಂದು. ಜಗತ್ತಿನಲ್ಲಿ ನಾವು ಹೇಗೆ ಇರಬೇಕು ಎನ್ನುವುದನ್ನು ಮಗನಿಗೆ ತಿಳಿಸುವುದು ಅವನ ಕರ್ತವ್ಯವಾಗಿತ್ತು. 

ದಿನ ಕಳೆದಂತೆಲ್ಲ ತನ್ನ ನಿರ್ಧಾರವನ್ನು ಮಗ ಗಟ್ಟಿ ಮಾಡಿಕೊಳ್ಳುತ್ತಿದ್ದ. ಅದನ್ನು ಹೇಗೆ ಸಡಿಲಿಸಿ ಅವನ ಕೈಗಳಿಗೆ ಯಾವ ಕೆಡುಕೂ ತಾಕದ ಹಾಗೆ ನಿಲುವಿನಿಂದ ದೂರ ಕರೆದು ತರಬೇಕೆಂದು ಅಪ್ಪ... ಹೀಗೆ ಇಬ್ಬರೂ ಯೋಚಿಸುತ್ತಲೇ ಇದ್ದರು.

ಒಂದು ದಿನ ಮನೆಗೆ ಪೂಜೆಗಾಗಿ ಬುಟ್ಟಿಗಳಲ್ಲಿ ಹೂವನ್ನು ತರಲಾಗಿತ್ತು. ಬಣ್ಣ ಬಣ್ಣದ ಸುವಾಸನೆಯ ಹೂಗಳು. ಹೂಗಳ ಪರಿಮಳ ಮನೆಯ ತುಂಬೆಲ್ಲ ಹರಡಿ ಅಲೌಕಿಕ ವಾತಾವರಣ ಸೃಷ್ಟಿಯಾಗಿತ್ತು. ಅಪ್ಪ  ಆ ಬುಟ್ಟಿಗಳ ಮುಂದೆ ಕುಳಿತು ಹೂಗಳನ್ನು ಹೊಸಕ ತೊಡಗಿದ. ಮಗ ಅಪ್ಪನ ಕೆಲಸವನು ನೋಡುತ್ತಾ, ‘ಅಪ್ಪ ಇದೇಕೆ ಇಂಥಾ ಕೆಲಸವನ್ನು ಮಾಡುತ್ತಿರುವೆ’ ಎಂದು ಕೇಳಿದ. ಅದಕ್ಕೆ ಅಪ್ಪ ‘ಮಗನೇ, ನನಗೆ ಈ ಹೂಗಳಲ್ಲಿ ಒಂದೊಂದರಲ್ಲಿ ಒಂದೊಂದು ಗುಣ ಇಷ್ಟವಾಗುತ್ತಿಲ್ಲ. ಅದಕ್ಕೆ ಇವುಗಳನ್ನು ಇಲ್ಲವಾಗಿಸುತ್ತಿದ್ದೇನೆ’ ಎನ್ನುತ್ತಾನೆ. ಅಪ್ಪನದ್ದು ಹುಚ್ಚಾಟ ಅನ್ನಿಸಿ ಮಗ ‘ಅಲ್ಲಪ್ಪಾ ಹೂಗಳು ಇರುವ ಹಾಗಿರುತ್ತವೆ ಅವುಗಳಲ್ಲಿ ನಿನಗಿಷ್ಟ ಆಗಿಲ್ಲ ಎಂದು ನಾಶ ಮಾಡಲಿಕ್ಕೆ ಹೊರಟಿದ್ದೀಯಲ್ಲಾ ಇದು ಸರಿಯಾ, ಪಾಪ ಈ ಹೂಗಳು ಏನು ಮಾಡಿವೆ ಇಷ್ಟವಾಗುವುದು ಇಷ್ಟವಾಗದೇ ಇರುವುದು ನಿನ್ನ ಸಮಸ್ಯೆ’ ಎನ್ನುತ್ತಾನೆ.

ಅವನ ಮಾತಿಗೆ ಇನ್ನೂ ಏನನ್ನೋ ಹೇಳುವವನಂತೆ ಅಪ್ಪ ‘ನೋಡಿದ್ಯಾ ಮಗನೇ, ಈ ಹೂಗಳಿವೆಯಲ್ಲ ಇವುಗಳು ನಾನು ಬಣ್ಣ ವಾಸನೆ, ಆಕಾರ ಇಷ್ಟವಿಲ್ಲವೆಂದು ಹೊಸಕುತ್ತಿದ್ದೇನೆ. ಆದರೂ ಅವು ನನಗೆ ಏನನ್ನೂ ಮಾಡುತ್ತಿಲ್ಲ ಬದಲಿಗೆ ಹಿಸುಕಿದ ಕೈಗೆ ಕೂಡಾ ಸುವಾಸನೆಯನ್ನು ನೀಡುತ್ತಿವೆ’ ಎನ್ನುತ್ತಾನೆ. ಆಗ ಮಗ ‘ಹೌದು ತಾನೆ ಅವುಗಳ ಈ ಗುಣಕ್ಕಾದರೂ ಬಿಡು ಇನ್ನು ಹೊಸಕಬೇಡ’ ಎನ್ನುತ್ತಾನೆ

ಅಪ್ಪ ನಕ್ಕ, ‘ಹೂವು ಎಂಥಾ ದೊಡ್ಡ ಪಾಠವನ್ನು ಹೇಳುತ್ತಿದೆ ಅಲ್ಲವೇ ಮಗೂ? ನಾವೂ ಅಷ್ಟೆ ನಮಗೆ ತೊಂದರೆ ಕೊಡುವವರಿಗೆ ಪ್ರೀತಿಯನ್ನು ಹಂಚಿದರೆ ದ್ವೇಷಕ್ಕೆ ಎಡೆಯಿರುವುದಿಲ್ಲ. ಹೂವನ್ನು ನೋಡಿ ಕಲಿಯಬೇಕಾದದ್ದು ತುಂಬಾ ಇದೆ’ ಎನ್ನುತ್ತಾನೆ. ಮಗ ತನ್ನ ನಿರ್ಧಾರಗಳಿಂದ ದೂರ ಸರಿದು ಹಾದಿ ತಪ್ಪಿದ ತನ್ನ ಯೋಚನೆಗಳಿಗೆ ಕಡಿವಾಣ ಹಾಕಿ ಕೆಡುಕಿನ ಯೋಚನೆಗಳನ್ನು ಬಿಡುತ್ತಾನೆ.

ಇದನ್ನೇ ಧರ್ಮ ಗುರು ಗೋವಿಂದ ಸಿಂಗರು, ತನ್ನನ್ನು ಹೊಸಕಿದ ಕೈಗಳನ್ನೂ ಹೂವು
ಸುಗಂಧಭರಿತಗೊಳಿಸುತ್ತದೆ ಎಂದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT