ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಸಂದರ್ಭಕ್ಕನುಗುಣವಾಗಿ ಸದಾ ಬದಲಾಗಿ

ಎಚ್.ಎಸ್.ನವೀನಕುಮಾರ್ ಹೊಸದುರ್ಗ
Published 26 ಮೇ 2024, 23:33 IST
Last Updated 26 ಮೇ 2024, 23:33 IST
ಅಕ್ಷರ ಗಾತ್ರ

ನಿಮಗೆಲ್ಲರಿಗೂ ಟೋಪಿ ಮಾರುವವನು ಹಾಗೂ ಕೋತಿಗಳ ಕಥೆ ಖಂಡಿತ ಗೊತ್ತಿರುತ್ತದೆ. ಟೋಪಿ ಮಾರಾಟಗಾರನೊಬ್ಬ ಒಂದೂರಿನಿಂದ ಇನ್ನೊಂದೂರಿಗೆ ಟೋಪಿ ಮಾರಲು ತನ್ನ ಬುಟ್ಟಿಯೊಂದಿಗೆ ಹೊರಟಿದ್ದ. ಒಂದು ಮಾವಿನ ತೋಪಿನಲ್ಲಿ ಕುಳಿತು ಊಟ ಮಾಡಿದ, ಹಾಗೆ ಮರದ ನೆರಳಲ್ಲಿ ಮಲಗಿ ನಿದ್ರೆ ಹೋದ. ಎದ್ದು ನೋಡುತ್ತಾನೆ, ಅವನ ಬುಟ್ಟಿಯಲ್ಲಿ ಒಂದು ಟೋಪಿಯೂ ಇಲ್ಲ. ತಲೆ ಎತ್ತಿ ನೋಡಿದರೆ ಮರದ ಮೇಲೆ ಕೋತಿಗಳೆಲ್ಲ ಇವನ ಟೋಪಿಯನ್ನು ಹಾಕಿಕೊಂಡು ಕುಳಿತಿವೆ.

ತಾನು ಮಾರುವ ವಸ್ತುವನ್ನೇ ಎಗರಿಸಿರುವ ಈ ಕಪಿಗಳಿಂದ ಟೋಪಿಯನ್ನು ಮರಳಿ ಪಡೆಯಲು ಟೋಪಿ ಮಾರಾಟಗಾರ ಹರಸಾಹಸ ಮಾಡಿದ. ಅವುಗಳನ್ನು ಗದರಿಸಿ ನೋಡಿದ, ಆದರೆ ಅವು ಈತನನ್ನೇ ತಿರುಗಿ ಗದರಿಸಿದವು. ಕಡ್ಲೆಬೀಜದ ಆಮಿಷ ಒಡ್ಡಿದ.  ಕೋತಿಗಳು ಕಡ್ಲೆ ಬೀಜವನ್ನು ತಿಂದು ಖಾಲಿ ಮಾಡಿದವೇ ವಿನಃ ಇವನ ಟೋಪಿಯನ್ನು ಮರಳಿಸಲಿಲ್ಲ. ಕೊನೆಗೆ ಹತಾಶನಾದ ಟೋಪಿ ಮಾರುವವ ತನ್ನ ತಲೆಯಲ್ಲಿದ್ದ ಟೋಪಿಯನ್ನು ಬೇಜಾರಿನಿಂದ ಕೆಳಕ್ಕೆಸೆದ. ಇದನ್ನೇ ಅನುಕರಿಸಿದ ಕೋತಿಗಳು ತಮ್ಮ ತಲೆಯ ಮೇಲಿನ ಟೋಪಿಯನ್ನು ಕೆಳಕ್ಕೆ ಹಾಕಿದವು. ಬೇಗ ಬೇಗನೆ ಅವುಗಳನ್ನು ಸಂಗ್ರಹಿಸಿಕೊಂಡು ಟೋಪಿ ಮಾಡುವ ಅಲ್ಲಿಂದ ಹೊರಟ. ಇದು ಕಥೆಯ ಪೂರ್ವಾರ್ಧ ಮಾತ್ರ.

ಈ ಕಥೆಯ ಮುಂದುವರಿದ ಭಾಗದಲ್ಲಿ ಈ ಟೋಪಿ ಮಾರುವವನ ಮೊಮ್ಮಗ ಸಹಾ ಅದೇ ವೃತ್ತಿ ಮಾಡುತ್ತಿದ್ದ. ತನ್ನ ಅಜ್ಜ ಸಂಚರಿಸುತ್ತಿದ್ದ ಮಾರ್ಗದಲ್ಲೇ ಇವನೂ ಹೊರಟಿದ್ದ. ಅದೇ ಮಾವಿನ ತೋಪಿನ ಬಳಿ ಈತನೂ ಊಟಕ್ಕೆ ಕುಳಿತ. ನಂತರ ಅಲ್ಲಿಯೇ ಮಲಗಿ ನಿದ್ರೆ ಹೋದ. ಕಥೆ ಮರುಕಳಿಸಿತು. ಎಚ್ಚರವಾಗಿ ನೋಡುತ್ತಾನೆ, ಈ ಬಾರಿಯೂ ಇವನ ಬುಟ್ಟಿಯಲ್ಲಿ ಒಂದು ಟೋಪಿಯೂ ಇಲ್ಲ. ಹಳೆಯ ಕಥೆಯಂತೆ ಎಲ್ಲ ಮಂಗಗಳು ಟೋಪಿ ಧರಿಸಿ ಮರವೇರಿ ಕುಳಿತಿವೆ.

ಆದರೆ ಮೊಮ್ಮಗ ಗಾಭರಿಗೊಳ್ಳಲಿಲ್ಲ, ಬದಲಿಗೆ ತಣ್ಣಗೆ, ಒಂದು ಕವಳ ಹಾಕಿದ. ನಂತರ ತನ್ನ ತಲೆಯ ಮೇಲಿದ್ದ ಟೋಪಿಯನ್ನು ಅಜ್ಜ ಮಾಡಿದಂತೆ ತಾನು ಸಹ ನೆಲಕ್ಕೆ ಒಗೆದ. ಆದರೆ ಈ ಬಾರಿ ಯಾವ ಕೋತಿಯೂ ತನ್ನ ತಲೆಯ ಮೇಲಿದ್ದ ಟೋಪಿಯನ್ನು ಕೆಳಕ್ಕೆಸೆಯಲಿಲ್ಲ. ಬದಲಿಗೆ ಕೋತಿಗಳ ನಾಯಕ ಮರದಿಂದ ಕೆಳಗಿಳಿದು ಬಂದು ಹೇಳಿತು, ‘ಅಣ್ಣಾ ನಿನ್ನಜ್ಜ ನಿನಗೆ ಹೇಳಿರುವ ಕಥೆಯನ್ನೇ ನಮ್ಮಜ್ಜನೂ ನಮಗೆ ಹೇಳಿದ್ದಾನೆ ಹೀಗಾಗಿ ನಾವ್ಯಾರೂ ನಿನಗೆ ಟೋಪಿ ಕೊಡುವುದಿಲ್ಲ, ನೀನಿಲ್ಲಿಂದ ಹೋಗಬಹುದು’ ಎಂದು.

ಬದಲಾಗುತ್ತಿರುವ ಜಗತ್ತಿನಲ್ಲಿ ನಾವೂ ಅನಿವಾರ್ಯವಾಗಿ ಬದಲಾಗಲೇಬೇಕು. ಹಿಂದೆಂದೋ ನಡೆದ ಕಥೆಯ ಆಧಾರದ ಮೇಲೇ ಜಗತ್ತು ಹಾಗೆಯೇ ಇರುತ್ತದೆ ಎಂದು ಅಂದುಕೊಳ್ಳುವುದು ಎಂದಿಗೂ ಸಲ್ಲ. ನಮ್ಮಂತೆಯೇ ಬೇರೆಯವರು ಸಹಾ ಸನ್ನಿವೇಶಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತಾರೆ ಎನ್ನುವ ಅರಿವು ನಮಗೆ ಸದಾ ಇರಬೇಕು ಹಾಗೂ ಅದಕ್ಕೆ ತಕ್ಕಂತೆ ಪರಿಷ್ಕರಣೆಗೊಂಡು  ಪ್ರತಿಕ್ರಿಯಿಸುವುದನ್ನು ನಾವು ಕಲಿಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT