ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಆತ್ಮಜ್ಞಾನ

Published 20 ಮೇ 2024, 21:30 IST
Last Updated 20 ಮೇ 2024, 21:30 IST
ಅಕ್ಷರ ಗಾತ್ರ

ಅವನೊಬ್ಬ ಆತ್ಮಜ್ಞಾನಿ. ಅವನು ಏನು ಮಾತಾಡಿದರೂ ಅದರೊಳಗೊಂದು ಗೂಢಾರ್ಥ, ಜಗತ್ತನ್ನು ದಾಟಿಕೊಳ್ಳುವ ಶಕ್ತವಾದ ಮಾತುಗಳಿರುತ್ತವೆ. ಅವನಿಗೆ ಎಲ್ಲಿ ಹೋದರೂ ಆದರ, ಸನ್ಮಾನ. ಆ ಆತ್ಮಜ್ಞಾನಿಗೆ ಎಲ್ಲಿಲ್ಲದ ಹೆಮ್ಮೆ, ತಾನು ಎಲ್ಲರಿಗಿಂತ ಎತ್ತರದಲ್ಲಿರುವವನು ಎಂದು.

ಅವನ ಮನೆಯಲ್ಲಿ ತುಂಬಾ ಮಕ್ಕಳು- ಜೊತೆಗೆ ಬಡತನ ಕೂಡ. ಹೊಟ್ಟೆಯ ಪಾಡು ಹೆಂಡತಿಗೆ ದುಡಿಯುವುದನ್ನು ಬಿಟ್ಟರೆ ಬೇರೆ ದಾರಿ ಇಲ್ಲ. ಹೊರಗೆ ಗಂಡ ಜಗುಲಿಯಲ್ಲಿ ಕುಳಿತು ಜಗತ್ತನ್ನು ಗೆಲ್ಲುವುದರ ಬಗ್ಗೆ ಮಾತಾಡುತ್ತಿದ್ದರೆ ನಾಲ್ಕು ಮನೆಗಳಲ್ಲಿ ಕೆಲಸ ಮಾಡಿ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ಹಸಿವನ್ನು ನೀಗಿಸುವುದರ ಬಗ್ಗೆ ಹೆಂಡತಿ ಯೋಚಿಸುತ್ತಿರುತ್ತಿದ್ದಳು. ಅವಳಿಗೆ ಸುಖದ ಕಲ್ಪನೆಯೂ ಇಲ್ಲ. ಅವಳ ಯೋಚನೆ ಒಂದೇ ತನ್ನ ಗಂಡನಿಗೆ ಇವತ್ತಾದರೂ ಜ್ಞಾನೋದಯ ಆಗಬಹುದೇ ಎಂದು. ಆದರೆ ಹೊರಜಗತ್ತಿನ ಮೆರವಣಿಗೆಯ ವ್ಯಸನಕ್ಕೆ ಬಿದ್ದ ಗಂಡನಿಗೆ ಇದ್ಯಾವುದರ ಕಡೆಗೂ ಗಮನವೇ ಇಲ್ಲ.

ಇದನ್ನೆಲ್ಲಾ ಗಂಡನ ಜೊತೆ ತಿಳಿಸಿ ಹೇಳಲು ಪ್ರಯತ್ನ ಪಟ್ಟ ಹೆಂಡತಿಯ ಕಡೆಗೆ ಗಮನವನ್ನೇ ಕೊಡದೆ ತನ್ನ ಪಾಡಿಗೆ ತಾನಿರುತ್ತಿದ್ದ. ಆತ್ಮಜ್ಞಾನದ ಸಂಗತಿಗಳನ್ನು ತಿಳಿಸುತ್ತಿದ್ದ. ಒಮ್ಮೆ ಬಂದವರೆದುರು ತನ್ನ ಮನೆಯಲ್ಲಿ ಕಷ್ಟವಿದೆ, ಹಸಿದ ಹೊಟ್ಟೆಯ ಮಕ್ಕಳಿದ್ದಾರೆ ದಯವಿಟ್ಟು ಏನನ್ನಾದರೂ ತಂದುಕೊಡಿ ಎಂದು ವಿಧಿಯಿಲ್ಲದೆ ಕೇಳಿದಳು. ಇದನ್ನು ಕೇಳಿಸಿಕೊಂಡ ಗಂಡ ಹೆಂಡತಿಗೆ, ‘ಎಲ್ಲವನ್ನು ಬಿಡಿಸಿಕೊಳ್ಳುವುದರ ಬಗ್ಗೆ ನಾನು ಮಾತಾಡುತ್ತಿದ್ದರೆ ನೀನು ಅವರಿಂದ ಪ್ರಾಪಂಚಿಕವಾದ ಬೇಡಿಕೆಗಳನ್ನು ಇದುತ್ತಿದ್ದೀಯಲ್ಲಾ?’ ಎಂದು ಜಗಳವಾಡಿದ. ಗಂಡನ ಜೊತೆ ವಾದ ಮಾಡುತ್ತಾ, ‘ನಿಮ್ಮ ಆತ್ಮಜ್ಞಾನದಿಂದ ನಮ್ಮ ಹೊಟ್ಟೆ ತುಂಬುತ್ತಿಲ್ಲ. ಹೊಟ್ಟೆ ತುಂಬದ ಆತ್ಮಜ್ಞಾನವನ್ನು ತೆಗೆದುಕೊಂಡು ಏನು ಮಾಡುತ್ತೀರಿ? ಕಾಡುಹರಟೆಯನ್ನು ಬಿಟ್ಟು ನಾನು ದುಡಿಯುವ ಹಾಗೆ ನೀವೂ ದುಡಿಯಬಾರದಾ? ಮನೆಯಲ್ಲಿ ಸಮಸ್ಯೆಯಾದರೂ ಕಡಿಮೆಯಾದೀತು’ ಎಂದಳು.

ಅವನಿಗೆ ಇದರಿಂದ ಕೋಪ ಬಂತು, ‘ಜಗತ್ತೆಲ್ಲಾ ನನ್ನ ಮಾತನ್ನು ಕೇಳಲು ಕಾಯುತ್ತಿದ್ದರೆ ನೀನು ಮಾತ್ರ ನನ್ನನ್ನು ಅವಮಾನ ಮಾಡುತ್ತಿದ್ದೀಯಲ್ಲಾ? ನನ್ನ ಜೊತೆಯಲ್ಲಿದ್ದೂ ಆತ್ಮಜ್ಞಾನವನ್ನು ಕಲಿಯಲಿಲ್ಲವಲ್ಲಾ? ಇನ್ನಾದರೂ ಕಲಿತುಕೋ’ ಎಂದ. ಈ ಮಾತುಗಳನ್ನು ಕೇಳಿದ ಹೆಂಡತಿಗೆ ಇನ್ನಿಲ್ಲದ ಕೋಪ ಬಂತು. ವರ್ಷಗಟ್ಟಲೆ ಅನುಭವಿಸಿದ ಸಂಕಟ ಇನ್ನು ತಡೆಯಲಾರೆ ಎನ್ನುವಂತೆ ತೊಳೆಯುತ್ತಿದ್ದ ಪಾತ್ರೆಯನ್ನು ನೆಲಕ್ಕೆ ಕುಕ್ಕಿ, ‘ಜಗತ್ತಿನ ಜೊತೆ ಏನು ಬೇಕಾದರೂ ಹೇಳು, ಆದರೆ ಹೆಂಡತಿಯ ಜೊತೆ ಆಡುವ ಮಾತೇ ಇದು? ಸಾಮಾನ್ಯ ಜ್ಞಾನವೇ ಇಲ್ಲದಿರುವ ನೀನು ಸರಿಯಾಗುವುದು ಸಾಧ್ಯವೇ ಇಲ್ಲ’ ಎಂದು ಕೋಪದಿಂದ ಅವನನ್ನು ಬಿಟ್ಟು ಹೊರಟು ಹೋದಳು.

ಆತ್ಮಜ್ಞಾನಿಗೆ ನಿಜಕ್ಕೂ ತಾನೇನು ಮಾತಾಡಿದೆ? ಹೆಂಡತಿ ತನ್ನನ್ನು ಯಾಕೆ ಬೈದಳು? ತನ್ನನ್ನು ಬಿಟ್ಟು ಹೋಗುವ ಹಾಗೆ ಯಾಕಾಯಿತು? ಎನ್ನುವುದು ಅರ್ಥವೇ ಆಗಲಿಲ್ಲ. ಅವನಿಗೆ ಕೊನೆಗೂ ಅರ್ಥವಾಗದ ಸಂಗತಿ ಎಂದರೆ ತಾನೊಬ್ಬ ಆತ್ಮಜ್ಞಾನಿ ಮಾತ್ರವಲ್ಲ ತಾನೊಬ್ಬ ಗಂಡ ಮತ್ತು ಮಕ್ಕಳ ತಂದೆ ಎಂಬುದು. ಹೊರಜಗತ್ತಿನ ಗೀಳಿಗೆ ಬಿದ್ದು ಜವಾಬ್ದಾರಿ ಮರೆತರೆ ಹೇಗೆ? ಒಳ ಹೊರಗನ್ನು ನಿಭಾಯಿಸುವವ ಮಾತ್ರ ನಿಜವಾದ ಜ್ಞಾನಿ. ಇಲ್ಲದಿದ್ದ ಯಾವ ಆತ್ಮಜ್ಞಾನವೂ ನಮ್ಮನ್ನು ಪಾರುಮಾಡಲಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT