ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಗೆಲುವು

Published 10 ಜೂನ್ 2024, 23:45 IST
Last Updated 10 ಜೂನ್ 2024, 23:45 IST
ಅಕ್ಷರ ಗಾತ್ರ

ಯುದ್ಧೋನ್ಮಾದಿಯಾದ ಅಲೆಗ್ಜಾಂಡರನಿಗೆ ಯುದ್ಧದ ನಿರರ್ಥಕತೆಯನ್ನು ಹೇಳುವುದು ಅವನ ಗುರುವಾದ ಡಯೋನಿಜ್‌ನಿಗೆ ಅನಿವಾರ್ಯವಾಯಿತು. ‘ಜಗತ್ತನ್ನು ಗೆದ್ದು ಏನು ಮಾಡುತ್ತೀಯಾ ಅಲೆಗ್ಜಾಂಡರ್?’ ಎಂದು ಪದೇ ಪದೇ ಕೇಳುತ್ತಿದ್ದರೂ, ‘ಗುರು ಯಾಕೆ ನನ್ನನ್ನು ಹೀಗೆ ಪ್ರಶ್ನಿಸುತ್ತಾನೆ?’ ಎಂದು ಅವನು ಯೋಚಿಸಲೂ ಇಲ್ಲ. ಬದಲಿಗೆ, ‘ಯುದ್ಧವಿಲ್ಲದೆ ಜಗತ್ತನ್ನು ಗೆಲ್ಲಲು ಹೇಗೆ ಸಾಧ್ಯ? ಯುದ್ಧವೊಂದೇ ಅಂತಿಮ’ ಎನ್ನುತ್ತಿದ್ದ. 

ಡಯೋನಿಜ್ ಇನ್ನು ತಾನು ಸುಮ್ಮನಿರಬಾರದು ಎಂದು ನಿರ್ಧರಿಸಿ ಯುದ್ಧಭೂಮಿಯಲ್ಲಿ ಹೆಣಗಳ ರಾಶಿಯಲ್ಲಿ ಉಳಿದ ತಲೆಬುರುಡೆ ಎಲುಬುಗಳನ್ನು ಸಂಗ್ರಹಿಸತೊಡಗಿದ. ಈ ಸುದ್ದಿ ಅಲೆಗ್ಜಾಂಡರನಿಗೆ ತಿಳಿಯಿತು. ಎಂಥಾ ಅಪದ್ಧವಿದು ಮಹಾನ್ ಗುರುವೆಂದು ತಾನು ನಂಬಿದವ ಏನು ಮಾಡುತ್ತಿದ್ದಾನೆ ಎಂದು ಡಯೋನಿಜ್‌ನನ್ನು ಹುಡುಕುತ್ತ ಬಂದ. 

ಯುದ್ಧಭೂಮಿಯಲ್ಲಿ ಒಂದಿಷ್ಟು ತಲೆ ಬುರುಡೆ, ಮೂಳೆಗಳನ್ನು ಮುಂದಿಟ್ಟು ಯೋಚಿಸುತ್ತಾ ಕುಳಿತಿದ್ದ ಡಯೋನಿಜ್ ಕಣ್ಣಿಗೆ ಬೀಳುತ್ತಿದ್ದಂತೆ ಅಲೆಗ್ಜಾಂಡರ್ ಅಸಮಾಧಾನದಿಂದ ‘ಇದೇನು ಡಯೋನಿಜರೇ ನಾನು ನಿಮ್ಮ ಬಗ್ಗೆ ಎಲ್ಲೆಡೆಗೆ ಮಹಾಜ್ಞಾನಿ ಎಂದು ಪ್ರಚಾರ ಮಾಡುತ್ತಿದ್ದರೆ ನೀವಿಲ್ಲಿ ಹೀಗೆ ಹೆಣದ ಅವಶೇಷದ ಜೊತೆ ಏನನ್ನು ಮಾಡುತ್ತಿರುವಿರಿ’ ಎಂದು ಕೇಳಿದ.

‘ಅಲೆಗ್ಜಾಂಡರ್ ಸಾಮ್ರಾಟ ನಾನು ತುಂಬಾ ತಲೆಕೆಡಿಸಿಕೊಂಡು ನೋಡುತ್ತಲಿದ್ದೇನೆ, ನನಗೆ ಇದರಲ್ಲಿ ಸಾಮಾನ್ಯ ಸೈನಿಕನ ತಲೆಬುರುಡೆ ಯಾವುದು? ಸೇನಾನಿಯ  ತಲೆಬುರುಡೆ ಯಾವುದು? ಮತ್ತು ನೀನು ಕೊಂದ ಸಾಮ್ರಾಟನ ತಲೆಬುರುಡೆ ಯಾವುದು ಎನ್ನುವುದೇ ಗೊತ್ತಾಗುತ್ತಿಲ್ಲ, ಸ್ವಲ್ಪ ತಿಳಿಸಿ ಹೇಳುತ್ತೀಯಾ’ ಎಂದನು. ಅಲೆಗ್ಜಾಂಡರನಿಗೆ ಇದು ಹುಚ್ಚುತನದ ಪರಮಾವಧಿ ಎನ್ನಿಸಿ, ‘ನಿಮ್ಮನ್ನು ಪರಮ ಜ್ಞಾನಿಗಳು ಎಂದುಕೊಂಡಿದ್ದೆ. ಸತ್ತುಹೋದ ಮೇಲೆ ಎಲ್ಲವೂ ಒಂದೇ ಅಲ್ಲವೇ?’ ಎಂದ.

ಪರಮ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ ‘ಹೌದೇ ಹೌದೇ. ನಾಳೆ ಅಲೆಗ್ಜಾಂಡರ್ ದೊರೆಯ ತಲೆ ಬುರುಡೆಯದ್ದೂ ಇದೇ ಕಥೆಯೇ?’ ಎಂದು ಡಯೋನಿಜ್ ಗಟ್ಟಿಯಾಗಿ ಕೂಗಿದ. ಆ ಮಾತನ್ನು ಕೇಳಿ ಅಲೆಗ್ಜಾಂಡರ್ ಬೆಚ್ಚಿಬಿದ್ದು ‘ಏನು ಹೇಳುತ್ತಿರುವಿರಿ. ನನ್ನ ಸಾವು ನನ್ನ ತಲೆಬುರುಡೆ ಇದರ ಬಗ್ಗೆ ಹೇಗೆ  ಮಾತನಾಡಲು ಸಾಧ್ಯ?’ ಎಂದ. 

‘ಸಾವು ಎಲ್ಲರಿಗೂ ಸಮಾನವೇ. ವಿಶ್ವವನ್ನು ಗೆಲ್ಲ ಹೊರಟ ನೀನು ಸಾವನ್ನು ಗೆಲ್ಲಲಾರೆ. ನಿನ್ನ ತಲೆಯ ಮೇಲಿನ ಕಿರೀಟವೂ ಇನ್ನೊಬ್ಬರ ಪಾಲೇ. ಆದರೆ ಯುದ್ಧವಿಲ್ಲದೆ ಪ್ರೇಮದಿಂದ ಜಗತ್ತನ್ನು ಗೆಲ್ಲು. ಮಹಾನ್ ಸಾಮ್ರಾಟನಿಗೂ ದಯಾರ್ದ್ರ ಹೃದಯವಿತ್ತು ಎಂದು ಜಗತ್ತು ಪ್ರೀತಿಯಿಂದ ನೆನೆಯುತ್ತದೆ’ ಎಂದ ಡಯೋನಿಜ್ ನಗುತ್ತಾ. ಅಲೆಗ್ಜಾಂಡರ್ ತಲೆ ತಗ್ಗಿಸಿದ.

ಡಯೋನಿಜ್ ಹೇಳಿದ, ‘ನೀನು ಸಾಮ್ರಾಟ, ನಿನ್ನ ರಾಜ್ಯವನ್ನು ಪ್ರಜೆಗಳನ್ನು ಕಾಪಾಡಿಕೊಳ್ಳಲು ಮಾತ್ರ ಯುದ್ಧ ಮಾಡಬೇಕು. ಗಡಿಗಳನ್ನು ವಿಸ್ತಾರ ಮಾಡುವುದನ್ನು ಬಿಡು, ನಿನ್ನ ಮನಸ್ಸನ್ನು ವಿಸ್ತಾರ ಮಾಡಿಕೋ. ಇಡೀ ಜಗತ್ತೇ ನಿನ್ನದಾಗುತ್ತದೆ. ಗೆದ್ದ ಜಾಗವನ್ನು ನಿನ್ನ ಸೋಲಿಸಿ ಇನ್ನೊಬ್ಬ ಕಸಿದುಕೊಳ್ಳಬಹುದು, ಪ್ರೀತಿಸುವ ನಿನ್ನ ಹೃದಯವನ್ನು ಯಾರೂ ಕಸಿಯಲಾರರು’ ಎಂದ. 
ನಿಜ, ಗೆಲ್ಲುವುದು ಎಂದರೆ ಇನ್ನೊಬ್ಬರನ್ನು ನೋಯಿಸುವುದೆಂದಲ್ಲ. ನನ್ನದಲ್ಲದ್ದಕ್ಕೆ ಆಸೆಪಡುವುದೂ ಅಲ್ಲ. ತನ್ನತನವನ್ನು ಅತ್ಯಂತ ಪ್ರೀತಿಯಿಂದ ಜತನದಿಂದ ಕಾಪಾಡುವುದು ಮಾತ್ರ ಅಲ್ಲವೇ?                      

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT