ನೀವು ಕೆಲಸಕ್ಕೆ ಹೊರಟಿರ್ತೀರಿ, ಬೆಕ್ ಅಡ್ಡ ಬಂತು ಅಂದ್ರ, ‘ಇವತ್ತು ಕೆಲಸ ಆಗಲ್ಲ’ ಅನಕೋತೀರಿ. ಅಪಶಕುನ ಅಂತೀರಿ. ಊರಾಗ ಬೆಕ್ಕು ಇರೋದ ಅದ. ಅದು ಅಡ್ಡ ಬರೋದ, ಅದರಾಗೇನು ವಿಶೇಷ? ನೀವು ಅಡ್ಡ ಬಂದಿದ್ದಕ್ಕ ಬೆಕ್ಕು ಅಂತೈತಿ ‘ಇವ ಅಡ್ಡ ಬಂದ, ಇವತ್ತು ಯಾರ ಮನೇಲೂ ಹಾಲು ಸಿಗಲ್ಲ’ ಅಂತ. ಎಲ್ಲಿಗಾರು ಹೊಂಟಾಗ ಯಾರಾದರೂ ಎಲ್ಲಿಗೆ ಅಂತ ಕೇಳಿದರ, ಹೊಳ್ಳಿ ಮನೆಗೆ ಬಂದು ಕಟ್ಟೆ ಮೇಲೆ ಕುಂತು ಉಸ್ರು ತೆಗೆದು ಹೋಗ್ತೀರಿ. ಉಸುರು ತೆಗೆದರೆ ಕೆಟ್ಟದ್ದೇನು ಗಾಳ್ಯಾಗ ಹೋಗ್ತದೇನು? ಬಸ್ ಹತ್ತಿದಾಗ ಕಂಡಕ್ಟರ್ ಎಲ್ಲಿಗೆ ಎಂದು ಕೇಳ್ತಾನ. ಅವ ದಿವ್ಯ ಜ್ಞಾನಿ ಏನ್? ಎಲ್ಲಿಗೆ ಹೊಂಟಿ ಎಂದು ಕೇಳಲಾರದೆ ಟಿಕೆಟ್ ಕೊಡಾಕೆ. ಏನ್ ಮನುಷ್ಯನ ಮನಸ್ಸು. ಬರೀ ಕೆಟ್ಟದ್ದನೇ ಆಲೋಚನೆ ಮಾಡತ್ತೆ.
ಇನ್ನು ಕೆಲವರು ‘ನಮ್ಮ ಹಣೆಬರಹ ಸರಿ ಇಲ್ಲ’ ಅಂತಾರ. ಹಣೆ ಬರಹಕ್ಕೆ ಏನಾಗ್ಯದ. ಚೆನ್ನಾಗೇ ಅದ. ಮನುಷ್ಯ ಒಂದು ತಿಳಕೊಬೇಕು. ಹಣೆಬರಹ ಏನಾದರೂ ಇರಲಿ, ನಿಮ್ಮ ಬೆವರು ಹನಿಗಳಿಂದ ಹಣೆಬರಹ ಅಳಿಸಿಕೊಳ್ಳಬಹುದು. ಹೊಸದಾಗಿ ಬರೆಯಬಹುದು. ಅದಕ್ಕ ಮನುಷ್ಯ ದುಡೀಬೇಕು. ಬೆವರು ಸುರಿಸಬೇಕು.
ನೂಲಿಯ ಚಂದಯ್ಯ ಅಂತ ಒಬ್ಬ ಶರಣ ಇದ್ದ. ಹಗ್ಗ ಹೊಸೆಯುವ ಕೆಲಸ ಮಾಡುತ್ತಿದ್ದ. ಹಗ್ಗ ಹೊಸೆಯೋದು, ಮಾರಿಕೊಂಡು ಬಂದು ಜೀವನ ಮಾಡೋದು. ಅದರಲ್ಲೇ ದಾಸೋಹ ಮಾಡಬೇಕು. ಶರಣರ ರೀತಿಯೇ ಹಾಂಗ. ತಾವು ದುಡಿದಿದ್ದರಲ್ಲೇ ಕೊಂಚ ಪಾಲನ್ನು ದಾಸೋಹಕ್ಕೂ ಬಳಸುತ್ತಿದ್ದರು.
ಒಮ್ಮೆ ನೂಲಿಯ ಚಂದಯ್ಯ ಹುಲ್ಲು ಕೊಯ್ಯೋಕೆ ಹೋಗಿದ್ದ. ಕೊರಳಲ್ಲಿ ಇರುವ ಲಿಂಗ ಕೆಳಕ್ಕೆ ಬಿತ್ತು. ‘ನಾನು ಕಾಯಕ ಮಾಡುತ್ತಿರುವಾಗ ದೇವರು ಕೆಳಕ್ಕೆ ಬಿದ್ದಾನೆ ಅಂದ್ರ ಅದು ಅವನ ತಪ್ಪು ನನ್ನದಲ್ಲ’ ಅಂತಾನೆ.
ಅದೊಂದು ಅಪಶಕುನ ಎಂದುಕೊಳ್ಳಲಿಲ್ಲ. ನಾವು ಎಷ್ಟು ಭಯಗ್ರಸ್ತರು ಅಂದರ ದೀಪ ಆರಿದರೆ ಭಯಪಡ್ತೀವಿ. ಯಾವಾಗಲೂ ಆರದ ದೀಪ ಸೂರ್ಯ ಇದ್ದಾನೆ ಎಂಬುದನ್ನು ಮರೀತೀವಿ. ಮನುಷ್ಯ ಹಚ್ಚಿದ ದೀಪ ಆರತದ. ನಿಸರ್ಗ ಹಚ್ಚಿದ ದೀಪ ಎಂದಿಗೂ ಆರೋದಿಲ್ಲ.
ನೆಲಕ್ಕೆ ಬಿದ್ದ ಲಿಂಗ ನುಲಿಯ ಚಂದಯ್ಯನ ಬೆನ್ನುಬಿತ್ತು. ‘ನನ್ನ ಸ್ವೀಕರಿಸು’ ಅಂತ ಬೇಡಿಕೊಳ್ತು. ಅದಕ್ಕೆ ಚಂದಯ್ಯ ಜಗ್ಗಲಿಲ್ಲ. ‘ನಿನ್ನ ಹಾಂಗೇ ಸ್ವೀಕರಿಸಲ್ಲ. ನೀನು ಅನುಭವ ಮಂಟಪಕ್ಕೆ ಬರಬೇಕು. ಅಲ್ಲಿ ಅಲ್ಲಮಪ್ರಭು ಮುಂದೆ ಯಾರದ್ದು ತಪ್ಪು ಒಪ್ಪು ಅಂತ ಚರ್ಚೆ ಆಗಬೇಕು. ಅಲ್ಲಿ ತೀರ್ಮಾನ ಆಗಬೇಕು. ನಿನ್ನದೇ ತಪ್ಪು ಎಂದಾದರೆ ನಾನು ಹಗ್ಗ ಹೊಸಿತೀನಿ, ನೀನು ಮಾರಿಕೊಂಡು ಬರಬೇಕು’ ಅಂತಾನೆ.
ನಾವು ದೇವರನ್ನು ಹುಡುಕಿಕೊಂಡು ಕಾಶಿ, ರಾಮೇಶ್ವರ, ಜ್ಯೋತಿರ್ಲಿಂಗ ಅಂತ ಹೋಗ್ತೀವಿ. ಆದರೆ, ಶರಣರು ಅಂತಾರೆ, ‘ನೀನು ಸುಮ್ಮನೆ ಮನೆಯಲ್ಲಿಯೇ ಕುಳಿತು ನಿನ್ನ ಕಾಯಕ ನಿಷ್ಠೆಯಿಂದ ಮಾಡು. ದೇವರು ನಿನ್ನ ಹಿಂದೆ ಬರ್ತಾನೆ’ ಅಂತ. ಅದಕ್ಕೆ ನುಲಿಯ ಚಂದಯ್ಯ ‘ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು ಲಿಂಗಕರ್ಪಿತವಲ್ಲದೆ ದುರಾಶೆಯಿಂದ ಬಂದುದು ಅನರ್ಪಿತ. ಇದು ಕಾರಣ ಸತ್ಯಶುದ್ಧ ಕಾಯಕ ನಿತ್ಯದ್ರವ್ಯವಾದರೆ ಚಂದೇಶ್ವರ ಲಿಂಗಕ್ಕೆ ನೈವೇದ್ಯ ಸಂದಿತ್ತು ಕೇಳಯ್ಯ’ ಅಂತಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.