ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಭಾಷಾ ಗೌರವ ಅಂತ ಒಂದಿದೆ ಅಲ್ವಾ?

ನುಡಿ ಬೆಳಗು
Published 18 ಏಪ್ರಿಲ್ 2024, 19:06 IST
Last Updated 18 ಏಪ್ರಿಲ್ 2024, 19:06 IST
ಅಕ್ಷರ ಗಾತ್ರ

ಕೆಲವು ವರ್ಷಗಳ ಹಿಂದೆ ಒಂದು ಕನ್ನಡ ಸಿನಿಮಾ ಬಂದಿತ್ತು. ಅದು ಯಶಸ್ವಿಯೂ ಆಯಿತು. ಯಶಸ್ಸಿಗೆ ಮುಖ್ಯ ಕಾರಣ ಅದರ ಹೀರೋ ಹೀರೋಯಿನ್ನು ವಿಲನ್ನುಗಳ ಫಿಲ್ಟರ್ ಇಲ್ಲದ ಸಂಭಾಷಣೆ. ‘ಇಂಥ ಸಬ್ಜೆಕ್ಟಿಗೆ ಯಾವ ಭಾಷೆ ಬೇಕೋ ಅದನ್ನೇ ಬಳಸಿದ್ದೇನೆ. ನಾನು ತಪ್ಪು ಮಾಡಿದ್ದೇನೆ ಅಂತ ನನಗನಿಸುತ್ತಿಲ್ಲ’ ಅಂದ ಅದರ ನಿರ್ದೇಶಕ.

ಈ ಸಿನಿಮಾದಲ್ಲಿ ಇಂಥ ಭಾಷಾ ವಿಕಾರ ಇದೆಯೆಂಬುದನ್ನು ತಿಳಿದೇ ಒಬ್ಬ ಮನಶ್ಶಾಸ್ತ್ರಜ್ಞರು ಆ ಸಿನಿಮಾ ನೋಡಲು ಹೋದರು. ಸಿನಿಮಾದ ಪ್ರೇಕ್ಷಕರು ಯಾವ ಯಾವ ಮಾತುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಮನಶ್ಶಾಸ್ತ್ರೀಯ ದೃಷ್ಟಿಯಿಂದ ಗ್ರಹಿಸುವ, ವಿಶ್ಲೇಷಿಸುವ ಉದ್ದೇಶದಿಂದ ಅವರು ಸಿನಿಮಾಕ್ಕೆ ಹೋಗಿದ್ದರು.

ಸಿನಿಮಾ ನೋಡಿ ಬಂದ ಮೇಲೆ ಅವರು ಸ್ನೇಹಿತರ ಒಂದು ಸಣ್ಣ ಕೂಟದಲ್ಲಿ ಆ ಕುರಿತು ಮಾತಾಡಿದರು. ಆಗ ಅವರು ಹೇಳಿದ್ದೇನೆಂದರೆ, ‘ಪ್ರೇಕ್ಷಕರು ಬೆಚ್ಚುವಂಥ, ಕೆರಳುವಂಥ, ಸಭ್ಯರು ಸಾರ್ವಜನಿಕವಾಗಿ ಮಾತಾಡಲು ಇಷ್ಟಪಡದಂಥ ಮಾತುಗಳನ್ನು ಆಡಿಸಿ ಈ ನಿರ್ದೇಶಕ ಸಿನಿಮಾವನ್ನು ಯಶಸ್ಸಿಗೆ ತೆಗೆದುಕೊಂಡು ಹೋಗಿದ್ದಾನೆ. ಇಂಥ ಸಿನಿಮಾಗಳ ಪ್ರೇಕ್ಷಕರು ಅಸೂಕ್ಷ್ಮವಾಗಿರುವ ಕಾರಣದಿಂದಲೂ ಸಿನಿಮಾ ಗೆದ್ದಿದೆ. ಆದರೆ ಇಲ್ಲಿ ಒಂದು ಅಪಾಯವಿದೆ. ಅದೇನೆಂದರೆ ಈ ಸಿನಿಮಾದಲ್ಲಿ ಆಡಿಸಿರುವ ಅಸಹ್ಯ ಸಂಭಾಷಣೆಗಳೇ, ಬೇರೆಯ ನಿರ್ಮಾಪಕ, ನಿರ್ದೇಶಕರಿಗೆ ಯಶಸ್ಸಿನ‌ ಸೂತ್ರಗಳು ಅಂತಾಗಿಬಿಡುತ್ತವೆ. ಅಷ್ಟೇ ಆದರೆ ಪರವಾಗಿಲ್ಲ; ಈ ಚಿತ್ರದ ನಿರ್ದೇಶಕ ಇಂಥ ಸಂಭಾಷಣೆಗಳಿಂದ ತನ್ನ ಪ್ರೇಕ್ಷಕರನ್ನು ಕೆರಳಿಸಿ ಕೈಬಿಟ್ಟಿರುವುದರಿಂದ ಆ ಪ್ರೇಕ್ಷಕರು ಮುಂದಿನ‌ ಸಿನಿಮಾಗಳಲ್ಲಿ ಇನ್ನಷ್ಟು ಮತ್ತಷ್ಟು ಹಸಿ ಸಂಭಾಷಣೆಗಳನ್ನು ಅಪೇಕ್ಷಿಸುತ್ತಾರೆ. ಮುಂದಿನ ಸಿನಿಮಾಗಳ ನಿರ್ದೇಶಕರು ತಮ್ಮ ಪ್ರೇಕ್ಷಕರ ಅಪೇಕ್ಷೆಗಳನ್ನು ತಣಿಸುವುದಕ್ಕಾಗಿಯೇ ಇನ್ನಷ್ಟು, ಮತ್ತಷ್ಟು ಅಸಹ್ಯ ಸಂಭಾಷಣೆಗಳನ್ನು ಉಣಬಡಿಸುತ್ತಾ ಹೋಗುತ್ತಾರೆ.
ಈಗ ಆತಂಕದ ಪ್ರಶ್ನೆಯೆಂದರೆ ಇದು ಎಲ್ಲಿ ಹೋಗಿ ನಿಲ್ಲುತ್ತದೆ? ಸಭ್ಯರಿಗೆ ಸಿನಿಮಾಗಳ ಬಗ್ಗೆಯೇ ಜುಗುಪ್ಸೆ, ತಿರಸ್ಕಾರ ಬಂದುಬಿಡುತ್ತದೆ. ಆದರೆ ಸಿನಿಮಾದ ಯಶಸ್ಸಷ್ಟೇ ಮುಖ್ಯವಾದ ನಿರ್ದೇಶಕ, ನಿರ್ಮಾಪಕರು, ಸಭ್ಯರು ನಮ್ಮ ಸಿನಿಮಾಕ್ಕೆ ಬರದಿದ್ದರೆ ಕತ್ತೆ ಬಾಲ ಎಂಬ ಧೋರಣೆಗೆ ಬಂದುಬಿಡುತ್ತಾರೆ’.

ಇದು ಯಾಕೆ ನೆನಪಾಯಿತೆಂದರೆ ಚುನಾವಣೆಯ ಕಾಲದಲ್ಲಿ ನಮ್ಮ ಬಹಳಷ್ಟು ರಾಜಕಾರಣಿಗಳ ನಾಲಿಗೆಯ ಫಿಲ್ಟರ್ ಕಿತ್ತುಹೋಗಿದೆ. ಅಂಥ ಮಾತುಗಳಲ್ಲೇ ಅವರು ಚುನಾವಣೆ ಗೆದ್ದರೆ ಅದೇ ಯಶಸ್ಸಿನ ಸೂತ್ರವಾಗಿಬಿಡುತ್ತದೆ. ಸಹಜವಾಗಿಯೇ ಮುಂದು ಮುಂದಿನ ರಾಜಕಾರಣಿಗಳು ತಮ್ಮ ನಾಲಿಗೆಯನ್ನು ಇನ್ನಷ್ಟು ಅಸಹ್ಯ ಮಾಡಿಕೊಳ್ಳುತ್ತಾರೆ. ಅಸೂಕ್ಷ್ಮ ಮತದಾರರು ಮಜಾ ತೆಗೆದುಕೊಳ್ಳುತ್ತಾರೆ. ಸಭ್ಯ ಮತದಾರರು ಇಡೀ ಚುನಾವಣೆ ವ್ಯವಸ್ಥೆಯ ಬಗೆಗೇ ಜುಗುಪ್ಸೆಗೊಳ್ಳುತ್ತಾರೆ. ಅಸಹ್ಯ ಪಡುತ್ತಾರೆ.

ಭಾಷಾ ಗೌರವ ಅಂತ ಒಂದಿದೆ ಅಲ್ವಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT