ಪ್ರೀತಿಸಿದ ಹುಡುಗಿಯೊಬ್ಬಳು ಕೈಕೊಟ್ಟು ಹೋಗಿದ್ದಕ್ಕೆ ಬೇಸರಗೊಂಡು ಯುವಕ ಆತ್ಮಹತ್ಯೆಗೆ ನಿರ್ಧರಿಸುತ್ತಾನೆ. ಈಜು ಬಾರದ ತಾನು ನೀರಿನಲ್ಲಿ ಬಿದ್ದರೆ ಖಂಡಿತಾ ಸಾಯುವೆ ಎಂದು ಕೆರೆಯ ದಂಡೆಯ ಮೇಲೆ ನಿಲ್ಲುತ್ತಾನೆ. ಅಲ್ಲಿಗೆ ವಯಸ್ಸಾದ ವ್ಯಕ್ತಿಯೊಬ್ಬ ಬರುತ್ತಾನೆ. ಯುವಕನ ಸ್ಥಿತಿಯನ್ನು ನೋಡಿ ಅವನ ಯೋಚನೆಗಳು ಅರ್ಥವಾಗುತ್ತದೆ. ನೋವಿಗೆ ಸಂತೈಕೆ ಬೇಕಿದ್ದ ಯುವಕ ಎಲ್ಲವನ್ನೂ ಹೇಳಿಕೊಳ್ಳುತ್ತಾನೆ. ಆಗ ಇದ್ದಕ್ಕಿದ್ದ ಹಾಗೆ ‘ಎಲಾ ದುಷ್ಟ ಕಿಡ್ನಿಯೇ ನೀನು ಇಷ್ಟು ವಿಶ್ವಾಸದ್ರೋಹಿಯಾ?’ ಎಂದು ಬೈಯ್ಯತೊಡಗುತ್ತಾನೆ.
ಯುವಕನಿಗೆ ಅಚ್ಚರಿ ತಾನು ಸಾಯಲು ಹೊರಟಿದ್ದಕ್ಕೂ ಈ ಮುದುಕ ಕಿಡ್ನಿಯನ್ನು ಬಯ್ಯುವುದಕ್ಕೂ ಕಾರಣ ತಿಳಿಯದೆ ಕಿಡ್ನಿಯನ್ನು ಯಾಕೆ ಬಯ್ಯುತ್ತಿರುವೆ’ ಎಂದು ಕೇಳುತ್ತಾನೆ. ‘ಅಲ್ಲಪ್ಪಾ ನೀನು ಎಷ್ಟು ಗ್ರೇಟ್, ಈ ಕಿಡ್ನಿ ಇದೆಯಲ್ಲಾ ಇದಕ್ಕೆ ಸ್ವಲ್ಪವೂ ಪ್ರೀತಿಯಿಲ್ಲ ಈಗ ಆರು ತಿಂಗಳ ಹಿಂದಷ್ಟೇ ಆರೋಗ್ಯದಲ್ಲಿ ಏರುಪೇರಾಗಿ ನನ್ನ ಒಂದು ಕಿಡ್ನಿಯನ್ನು ತೆಗೆದರು. ಜೊತೆಯಲ್ಲಿ ಹುಟ್ಟಿದಾಗಿನಿಂದ ಇದ್ದಇನ್ನೊಂದು ಕಿಡ್ನಿಗೆ ಏನೂ ಅನ್ನಿಸಲೇ ಇಲ್ಲವಲ್ಲ. ಅದು ಅದರ ಪಾಡಿಗೆ ಕೆಲಸ ಮಾಡುತ್ತಲೇ ಇದೆ’ ಎಂದನು.
ಯುವಕ, ‘ಅದು ಕೆಲಸ ಮಾಡುತ್ತಿರುವುದರಿಂದಲೇ ನೀವು ಬದುಕಿರುವುದಲ್ಲವಾ? ಅದಕ್ಕೂ ನನ್ನ ಜೀವನಕ್ಕೂ ಏನು ಸಂಬಂಧ’ ಎಂದ.
ಆಗ ಮುದುಕ ಹೇಳಿದ: ‘ಇದೆ ಸಂಬಂಧ ಇದೆ. ಜೊತೆಜೊತೆಯಾಗಿ ಹುಟ್ಟಿದ ಅಂಗವನ್ನೇ ಕಳೆದುಕೊಂಡರೂ ಅದು ನಿನ್ನಷ್ಟು ದುಃಖಿಸಲಿಲ್ಲ ತನ್ನ ಕೆಲಸ ಏನಿದೆ ಅದರ ಜೊತೆಗೆ, ಹೋದ ಕಿಡ್ನಿಯ ಕೆಲಸವನ್ನೂ ಅದೇ ಮಾಡುತ್ತಿದೆ. ನೀನು ನೋಡು ಎರಡು ವರ್ಷಗಳ ಹಿಂದೆ ಸಿಕ್ಕ ಹುಡುಗಿ ತಪ್ಪಿ ಹೋದಳು ಎಂದು ಆತ್ಮಹತ್ಯೆಗೆ ಹೊರಟಿರುವೆ. ಒಳ್ಳೆಯದು ನಿನ್ನ ಪ್ರೀತಿ ದೊಡ್ಡದು ಎಂದು ನಿರೂಪಿಸಿಕೊಳ್ಳಲು ನೀನು ಸಾಯುವುದು ಒಳಿತು’ ಎನ್ನುತ್ತಾನೆ.
ಯುವಕನಿಗೆ ಏನು ಹೇಳಬೇಕೆನ್ನುವುದು ತೋಚದೆ ಕಸಿವಿಸಿಗೊಂಡ. ಇದನ್ನು ಗಮನಿಸುತ್ತಿದ್ದ ಮುದುಕ ‘ಹುಟ್ಟಿದಾಗಿನಿಂದ ಜೊತೆಯಲ್ಲಿದ್ದವರೆಲ್ಲಾ ಸತ್ತರೂ ನಾವಿರುತ್ತೇವೆ. ಹುಟ್ಟಿದಾಗಿಂದ ನಮ್ಮ ಜೊತೆಯಲ್ಲೆ ಇದ್ದ ಅಂಗವೊಂದರಿಂದ ನಮ್ಮ ಜೀವಕ್ಕೆ ಅಪಾಯ ಆಗುತ್ತೆ ಅಂದಾಗ ಅದನ್ನೂ ನಾವೇ ಕತ್ತರಿಸಲು ಅನುಮತಿಸುತ್ತೇವೆ. ಯಾಕೆಂದರೆ ಎಲ್ಲಕ್ಕಿಂತ ಜೀವ ದೊಡ್ಡದು. ಅಂಥಾದ್ದರಲ್ಲಿ ನಿನ್ನೆ ಮೊನ್ನೆ ಪ್ರೀತಿಸಿ ಕೈಕೊಟ್ಟಳು ಎಂದು ನಿನ್ನ ಜೀವವನ್ನು ಕಳೆದುಕೊಳ್ಳುತ್ತೀಯಲ್ಲಾ ಇದು ನ್ಯಾಯವಾ?’ ಎಂದ.
ಯುವಕ ಗೊಂದಲದಲ್ಲೇ ಇದ್ದಾನೆ. ಅದನ್ನು ನೋಡಿ ಮುದುಕ ಮತ್ತೆ ಸಮಾಧಾನ ಹೇಳುವವನಂತೆ ‘ನೀನಷ್ಟೇ ಮುಖ್ಯ, ನೀನು ಮಾತ್ರವೇ ಮುಖ್ಯ ಎಂದುಕೋ. ಆಗ ಎಲ್ಲವೂ ಸರಿಯಾಗುತ್ತೆ. ಯಾರಿಂದಲೂ ನೀನು ಬದುಕು ನಡೆಸುತ್ತಿಲ್ಲ. ಎರಡು ವರ್ಷಗಳ ಹಿಂದೆಯೂ ನೀನಿದ್ದೆ. ಈಗಲೂ ಇದ್ದೀಯ. ಅವಳು ಬಂದಳು ಹೋದಳು. ದೇವರು ಜೀವಕೊಡುತ್ತಾನೆ. ಜೀವನ ಮಾತ್ರ ನೀನೇ ಮಾಡಬೇಕು. ಸಾಯುವ ಎಲ್ಲ ಯೋಚನೆಯನ್ನು ಬದುಕುವ ಕಡೆಗೆ ತಿರುಗಿಸು. ಸಾಧಿಸಬೇಕಾಗಿರುವ ಅದ್ಭುತ ದಾರಿಗಳು ತೆರೆದು ಕೊಳ್ಳುತ್ತವೆ. ಸಾಧನೆ ಮಾಡು ಹುಡುಗಿ ಮಾತ್ರವೇನು? ಇಡೀ ಜಗತ್ತೇ ನಿನ್ನ ಹಿಂದಿರುತ್ತದೆ’ ಎಂದ. ಯುವಕನಿಗೆ ತಪ್ಪಿನ ಅರಿವಾಗಿ ಇನ್ನೆಂದೂ ಸಾಯುವ ಯೋಚನೆಯನ್ನೂ ಮಾಡದೆ ಬದುಕಿನ ಕಡೆಗೆ ಮುಖ ಮಾಡುತ್ತಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.