ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ದೇವರು ಸ್ವೀಕರಿಸಿದ ಹಜ್‌ ಯಾತ್ರೆ

Published 6 ಮೇ 2024, 23:40 IST
Last Updated 6 ಮೇ 2024, 23:40 IST
ಅಕ್ಷರ ಗಾತ್ರ

ಮಹಾಪುರುಷರೊಬ್ಬರು ಹಜ್‌ ಯಾತ್ರೆ ಮುಗಿಸಿ ಬರುವ ದಾರಿಯಲ್ಲಿ ಮಲಗಿದ್ದಾಗ ಒಂದು ಸುಂದರ ಕನಸು ಕಂಡರು. ಕನಸಲ್ಲಿ ಇಬ್ಬರು ದೇವದೂತರು ಮಾತನಾಡಿಕೊಳ್ಳುತ್ತಿದ್ದರು, ‘ಇವತ್ತು ಒಂದು ಲಕ್ಷಕ್ಕೂ ಹೆಚ್ಚಿನ ಜನರು ಹಜ್‌ಯಾತ್ರೆ ಮಾಡಿದರು. ಅವರಲ್ಲಿ ಅಲ್ಲಾಹನು ಯಾರ ಮೂಲಕ ಹಜ್‌ಅನ್ನು ಸ್ವೀಕರಿಸಿದ್ದಾನೆ’ ಎಂದು ಒಬ್ಬ ಕೇಳಿದರೆ, ‘ನಿನಗೆ ಗೊತ್ತಾ... ಅಲ್ಲಾಹನು ಇಲ್ಲಿಗೆ ಬಾರದೆ ಇರುವ ಆದರೆ ಬರುವ ಸಂಕಲ್ಪ ಮಾಡಿದ್ದ ಒಬ್ಬ ಚಮ್ಮಾರನ ಮೂಲಕ ಇಲ್ಲಿನ ಎಲ್ಲರ ಹಜ್ ಅನ್ನು ಸ್ವೀಕರಿಸಿದ್ದಾನೆ’ ಎನ್ನುತ್ತಾನೆ ಇನ್ನೊಬ್ಬ. ನಿದ್ದೆಯಿಂದ ಎದ್ದ ಮಹಾತ್ಮನಿಗೆ ದೇವದೂತರ ಮಾತುಗಳು ಅಚ್ಚರಿ ಮತ್ತು ಕುತೂಹಲಕರವಾಗಿ ಕಂಡಿತು. ಅವರು ಹೇಳಿದ ವಿವರಗಳನ್ನು ಹಿಡಿದು ಚಮ್ಮಾರನನ್ನು ಹುಡುಕಹೊರಡುತ್ತಾರೆ. ಊರಿಂದ ಊರಿಗೆ ಚಮ್ಮಾರನನ್ನು ಹುಡುಕುತ್ತಾ ಹೊರಟ ಮಹಾತ್ಮನನ್ನು ರಾಜನೊಬ್ಬ ತನ್ನ ದೇಶಕ್ಕೆ ಆಹ್ವಾನಿಸಿ ಎಲ್ಲ ವಿವರಗಳನ್ನು ತಿಳಿದುಕೊಳ್ಳುತ್ತಾನೆ. ಹಜ್‌ಗೆ ಹೊರಟು ಹೋಗದೆ ನಿಂತ ಚಮ್ಮಾರನನ್ನು ಹುಡುಕಿಸುತ್ತಾನೆ. ಅವನನ್ನು ಇಲ್ಲಿಗೇ ಕರೆಸುವೆ ಎಂದರೂ ಕೇಳದೆ ಮಹಾಪುರುಷ ತಾನೆ ಅವನ ಜಾಗಕ್ಕೆ ಹೋಗುವುದಾಗಿ ಹೊರಡುತ್ತಾನೆ. 

ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದ ಚಮ್ಮಾರ ಮಹಾಪುರುಷನನ್ನು ಕಂಡು ನಮಸ್ಕರಿಸುತ್ತಾನೆ. ಮಹಾಪುರುಷನು ಕಾತರದಿಂದ, ‘ಈ ಸಲ ನೀನೇಕೆ ಹಜ್‌ಗೆ ಹೋಗಲಿಲ್ಲ. ದಯಮಾಡಿ ತಿಳಿಸು’ ಎನ್ನುತ್ತಾನೆ. 

‘ಬಹುಕಾಲದಿಂದ ನನ್ನ ಶ್ರಮದಿಂದ ಕೂಡಿಟ್ಟ ಹಣದಿಂದ ಈ ಸಲ ಹಜ್‌ಗೆ ಹೋಗುವ ತಯಾರಿಯಲ್ಲಿದ್ದೆ. ನನ್ನ ಮಡದಿಯು ಗರ್ಭಿಣಿಯಾಗಿದ್ದಳು. ಪಕ್ಕದ ಮನೆಯಿಂದ ಮಾಂಸ ಬೇಯಿಸುವ ವಾಸನೆ ಅವಳಲ್ಲಿ ತಿನ್ನುವ ಆಸೆಯನ್ನು ಹೆಚ್ಚಿಸಿತ್ತು. ಅದಕ್ಕಾಗಿ ಹಣ ಖರ್ಚು ಮಾಡಿದರೆ ಹಜ್‌ಗೆ ಹೋಗಲು ಕಡಿಮೆ ಬೀಳುತ್ತದೆ. ಅವರನ್ನೇ ಕೇಳಿದರೆ ಕೊಡಲಾರರೇ? ಎಂದು ಅವರ ಮನೆಯ ಬಾಗಿಲನ್ನು ತಟ್ಟಿದೆವು. ಪಕ್ಕದ ಮನೆಯಾಕೆ ಬಾಗಿಲನ್ನು ತೆಗೆದು ನಮ್ಮ ಮಾತುಗಳನ್ನು ಸಮಾಧಾನದಿಂದ ಕೇಳಿಸಿಕೊಂಡು, ‘ನಾನು ನಿಮಗೆ ಮಾಂಸವನ್ನು ಕೊಡಲಾರೆ. ಅದು ಹದ್ದುಗಳು ಕುಕ್ಕಿ ತಿಂದಿದ್ದ ಸತ್ತ ಕತ್ತೆಯ ಮಾಂಸ. ಬಡತನ, ಮಕ್ಕಳು, ಹಸಿವೆ ನಾನು ಇದನ್ನು ಮಾಡಬಹುದು. ಅಲ್ಲಾಹ್‌ಗೆ ಸಮರ್ಪಿತವಾಗದ ಅಪವಿತ್ರವಾದ ಅದನ್ನು ನಿಮಗೆ ಕೊಡಲು ಸಾಧ್ಯವಿಲ್ಲ’ ಎಂದಳು.

ಆಕೆಯ ಕಣ್ಣುಗಳಲ್ಲಿ ಸಂಕಟ ಮಡುಗಟ್ಟಿತ್ತು. ನನಗೆ ತಡೆಯಲಾಗಲಿಲ್ಲ. ಹಜ್‌ಯಾತ್ರೆಯ ಹಣವನ್ನು ತಂದು, ‘ನಿಮಗೆ ಇಷ್ಟು ಸಂಕಟ ಇರುವಾಗ ಈ ಹಣದಿಂದ ಹಜ್‌ಗೆ ಹೋಗುವ ಬದಲು ನಿಮ್ಮ ಸಂಕಟಕ್ಕೆ ಆದರೆ ಒಳಿತು’ ಎಂದು ಕೊಟ್ಟೆ. ಈ ಕಾರಣಕ್ಕೆ ನಾನು ಹಜ್‌ಗೆ ಹೋಗಲಾಗಲಿಲ್ಲ’ ಎನ್ನುತ್ತಾನೆ. ಈ ಮಾತುಗಳನ್ನು ಕೇಳಿ ಆ ಮಹಾಪುರುಷ ಚಮ್ಮಾರನನ್ನು ತಬ್ಬಿ, ‘ಅಲ್ಲಾಹನು ನೀನು ಬಾರದಿದ್ದರೂ ನಿನ್ನ ತ್ಯಾಗದ ಮೂಲಕವೇ ಈ ಸಲದ ಎಲ್ಲರ ಹಜ್‌ ಅನ್ನು ಸ್ವೀಕರಿಸಿದ್ದಾನೆ. ಅವನಿಗೆ ಗೊತ್ತು ಅಂತಃಕರಣ ಮತ್ತು ಪ್ರೀತಿಯೇ ದೊಡ್ಡದೆಂದು. ಮಿಡಿವ ನಿನ್ನ ಹೃದಯದಲ್ಲೇ ಹಜ್ ಇದೆ’ ಎನ್ನುತ್ತಾನೆ. 

ಮನುಷ್ಯನ ಚರಿತ್ರೆಯಲ್ಲಿ ಎಲ್ಲ ಧರ್ಮಗಳೂ ಹೇಳಿದ್ದು ಇದೇ ಅಲ್ಲವೇ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT