ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ಕಷ್ಟಕ್ಕೆ ಒದಗುವುದು ಎಂದರೆ...

Published 24 ನವೆಂಬರ್ 2023, 0:30 IST
Last Updated 24 ನವೆಂಬರ್ 2023, 0:30 IST
ಅಕ್ಷರ ಗಾತ್ರ

‘ಒಬ್ಬರಿದ್ದರು ಕಲ್ಪವೃಕ್ಷದಂತೆ ಎತ್ತರವಾಗಿ, ತಂಪಾಗಿ...’

ಕನ್ನಡದ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಈ ಸಾಲುಗಳನ್ನು ಬರೆದದ್ದು ಕೀರ್ತಿಶೇಷರಾದ ಪ್ರೊಫೆಸರ್ ಟಿ.ಎಸ್. ವೆಂಕಣ್ಣಯ್ಯ ಅವರನ್ನು ಸ್ಮರಿಸಿ. ಕುವೆಂಪು ಅವರು ತಮ್ಮ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಅರ್ಪಿಸಿದ್ದೂ ಇದೇ ವೆಂಕಣ್ಣಯ್ಯ ಅವರಿಗೆ. ನಾವು, ಮಹಾತ್ಮರು, ಮಹಾನುಭಾವರು ಅನ್ನುತ್ತೇವಲ್ಲ ಆ ವಿಶೇಷಣಗಳನ್ನು ಇವರಂಥ ಪುಣ್ಯಾತ್ಮರಿಗಷ್ಟೇ ಬಳಸಬೇಕು. ಮೈಸೂರು ವಿಶ್ವವಿದ್ಯಾನಿಲಯದ ಮೊಟ್ಟಮೊದಲ ಕನ್ನಡ ಪ್ರೊಫೆಸರ್ ಅವರು. ಅವರ ಎಷ್ಟೋ ಶಿಷ್ಯರಿಗೆ, ಸಮಕಾಲೀನರಿಗೆ ಅವರು ಮನುಷ್ಯರೇ ಅಲ್ಲ, ದೇವರು. ಅವರ ಬಗ್ಗೆ ಹೇಳಬೇಕಾದ ಹಲವಾರು ಪ್ರಸಂಗಗಳಿವೆ. ಈಗ ಒಂದನ್ನು ಹೇಳುತ್ತೇನೆ.

ಮೈಸೂರಿನ ಕುಕ್ಕರಹಳ್ಳಿ ಕೆರೆಯ ಏರಿಯ ಮೇಲಿರುವ ಕಲ್ಲು ಬೆಂಚಿನ ಮೇಲೆ ಓರ್ವ ಯುವಕ ಕುಳಿತಿದ್ದ. ಆತ ಯಾರೋ ಅಲ್ಲ, ಕನ್ನಡದ ಪ್ರಖ್ಯಾತ ಪ್ರಬಂಧಕಾರರಾದ ಎ.ಎನ್.ಮೂರ್ತಿರಾಯರು. ಆಗಿನ್ನೂ ಯುವಕ. ವೆಂಕಣ್ಣಯ್ಯನವರ ಶಿಷ್ಯ ಕೂಡಾ.
ಮೂರ್ತಿರಾಯರಿಗೆ ಆ ದಿನ ಯಾವುದೋ ದುಃಖ, ದುಗುಡ. ಹೊಟ್ಟೆ ತುಂಬಾ ಸಂಕಟ. ಅದನ್ನು ಯಾರಿಗೂ ಹೇಳಲಾಗದೆ ಆ ಕಲ್ಲುಬೆಂಚಿನ‌ ಮೇಲೆ ಸುಮ್ಮಗೆ ಕೂತು ಕೆರೆಯನ್ನೇ ನೋಡುತ್ತಿದ್ದರು. ಎದೆಯ ಬೇಗುದಿ ಮುಖದ ಮೇಲೂ ಮೂಡಿ ನಿಂತಿತ್ತು. ಕಂಠ ಕಟ್ಟಿಕೊಂಡಿತ್ತು.

ಅವರು ಹಾಗೆ ಕುಳಿತಿರುವಾಗ ಆ ಆರೂಕಾಲು ಅಡಿ ಎತ್ತರದ ವ್ಯಕ್ತಿ- ಟಿ.ಎಸ್. ವೆಂಕಣ್ಣಯ್ಯನವರು- ವಾಕಿಂಗಿಗೆಂದು ಬಂದವರು ಆ ಯುವಕ ಕುಳಿತಿದ್ದ ಕಲ್ಲುಬೆಂಚಿನ‌ ಮುಂದೆ ಹಾದು ಹೋದರು. ಹಾಗೆ ಹೋಗುವಾಗ ಶಿಷ್ಯನ‌ ಮುಖದ ಮೇಲೆ ಎದೆಗುದಿಯ‌ ರೇಖೆಗಳನ್ನು ಕಂಡರು. ಒಂದೈದಾರು ಹೆಜ್ಜೆ ಮುಂದೆ‌ ಹೋದರು. ಹೋಗಿ ಕೆಲವು‌ ನಿಮಿಷ ಅಲ್ಲೇ ನಿಂತರು. ಆಮೇಲೆ ವೆಂಕಣ್ಣಯ್ಯನವರು ನಿಧಾನವಾಗಿ ಬಂದು ಶಿಷ್ಯನ ಪಕ್ಕ ಕುಳಿತರು. ಆತನ‌ ಮುಖವನ್ನು ಮತ್ತೊಮ್ಮೆ ನೋಡಿ ಕಾರುಣ್ಯದ ಕೊಳವಾದರು. ಮತ್ತೆ ಒಂದೆರಡು‌ ನಿಮಿಷ ಸುಮ್ಮನಿದ್ದು ಶಿಷ್ಯನ ಕುರುಳು ನೇವರಿಸುತ್ತಾ, ಬೆನ್ನು ಸವರುತ್ತಾ... ‘ಮೂರ್ತೀ...’ ಅಂದರು. ಶಿಷ್ಯನ‌ ಕಣ್ಣುಗಳಲ್ಲಿ ನಾಲ್ಕು ಹನಿ ಇಣುಕಿದವಷ್ಟೆ. ಮಾತು ಬರಲಿಲ್ಲ. ಮೇಷ್ಟ್ರು ಈಗ ಮಾತಾಡಿದರು, ‘ಮೂರ್ತೀ, ನಿನ್ನ ಎದೆಯಲ್ಲಿ ಏನೋ ಸಂಕಟವಿದೆ ಮಗೂ... ಅದನ್ನು ತತ್‌ಕ್ಷಣ ನಾನೇನೂ ಪರಿಹಾರ ಮಾಡಲಾರೆನೇನೋ... ಆದರೆ ಈಗ‌ ನಿನಗೆ ಅಳಬೇಕು ಅನ್ನಿಸಿದರೆ ಒಂದಿಷ್ಟು ಹೊತ್ತು ಒರಗಿಕೊಂಡು ಅಳೋದಕ್ಕೆ ನನ್ನ ಭುಜ ಇದೆ‌ ಕಣಪ್ಪಾ... ನನ್ನ ಭುಜಕ್ಕೊರಗಿ‌ ಅತ್ತುಕೋ ಮರೀ...’ ಅಂದರು. ಮೂರ್ತಿರಾಯರಿಗೆ ಅಳುವುದಕ್ಕೊಂದು ಭುಜ ಬೇಕಿತ್ತು. ಆ ವಾತ್ಸಲ್ಯಮಯಿ ಗುರುಗಳ ಭುಜದ ಮೇಲೆ ತಲೆಯಿಟ್ಟು ಗಳಗಳ ಅಂತ ಅತ್ತುಬಿಟ್ಟರು. ಅದೆಲ್ಲಾ ಆದ ಮೇಲೆ ವೆಂಕಣ್ಣಯ್ಯನವರು ಶಿಷ್ಯನಿಗೆ ಹೇಳಿದರು- ‘ಮೂರ್ತೀ, ನಮ್ಮನ್ನು ಸೃಷ್ಟಿ ಮಾಡಿದ ಭಗವಂತ ಜೀವಮಾನವಿಡೀ ಒಂದೂ ಕಷ್ಟ ಬರದಂತೆ ಸದಾ ಸುಖವಾಗಿಡುತ್ತೇನೆಂದು ನಮಗೆ ಬಾಂಡ್ ಬರೆದುಕೊಟ್ಟಿಲ್ಲಪ್ಪ. ಕಷ್ಟಗಳು ಬಂದಾಗ ಧೈರ್ಯವಾಗಿ ಎದುರಿಸಬೇಕು, ಅನುಭವಿಸಬೇಕು...’

ಈ ಪ್ರಕರಣವನ್ನು ವಿವರಿಸಿ ಮೂರ್ತಿರಾಯರು ಬರೆಯುತ್ತಾರೆ- ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಒದಗುವುದು ಅಂದರೆ ಇದೇ. ದುಡ್ಡುಕಾಸು ಕೊಡಬೇಕೆಂದಿಲ್ಲ. ಅಳುವುದಕ್ಕೆ ಒಂದು ಭುಜ, ಕುರುಳು ನೇವರಿಸುವುದಕ್ಕೆ ನಾಲ್ಕು ಬೆರಳು ಬೇಕಾಗುತ್ತವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT