ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ಗಾಂಧೀಜಿ ಹೇಳಿದ್ದ ಹಳ್ಳಿ

Published 9 ಜುಲೈ 2024, 22:37 IST
Last Updated 9 ಜುಲೈ 2024, 22:37 IST
ಅಕ್ಷರ ಗಾತ್ರ

ಅರುಣ್‌ ಕುಮಾರ್ ಎಂಬ ಕಲಾವಿದ ಹೊಸ ಕನಸುಗಳ ಹೊತ್ತು ಮಲೆನಾಡಿನ ತಮ್ಮ ಹಳ್ಳಿಗೆ ಬಂದರು. ಗಾಂಧೀಜಿ ಹೇಳಿದ್ದ ಗ್ರಾಮ ಸ್ವರಾಜ್ಯದ ಆಶಯ ಎದೆಯೊಳಗಿತ್ತು. ಆದರೆ ದೆಹಲಿಯಲ್ಲಿ ನೆಲೆಸಿದ ಇವರಿಂದ ನಮ್ಮ ಕುಗ್ರಾಮಕ್ಕೆ ಆಗುವುದು ಏನೇನೂ ಇಲ್ಲ. ನಗರದ ಜನರೇ ಹೀಗೆ ಸೋಗಿನವರು. ಅವಾಸ್ತವಿಕ ಮಾತುಗಾರರು ಎಂದು ಜನ ಮೊದಲು ಅಸಡ್ಡೆ ತೋರಿದರು. 

ರೈತಾಪಿ ಹಿನ್ನೆಲೆಯಿಂದ ಬಂದ ಅರುಣ್‌ ಅವರಿಗೆ ಊರಲ್ಲಿ ಕೊಂಚ ಜಮೀನಿತ್ತು. ಅಳಿದು ಹೋಗುತ್ತಿದ್ದ ಭತ್ತದ ಮುನ್ನೂರು ತಳಿಗಳನ್ನು ಹುಡುಕಿ ತಂದು ಅಲ್ಲಿ ಬೆಳೆ ತೆಗೆದರು. ಅದರ ಬೀಜಗಳನ್ನು ಊರಿನ ಜನರಿಗೆ ಹಂಚಿದರು. ತಮಗಿದ್ದ ಬ್ಯಾಣದ ಜಾಗೆಯಲ್ಲಿ ಸಹಜ ಕಾಡನ್ನು ಬೆಳೆಸಿ ಅಲ್ಲಿ ಉಚಿತ ಕಲಿಕೆಯ ಕೇಂದ್ರ ತೆರೆದರು. ಹಳ್ಳಿಗರಿಗೆ ಹಣ್ಣು, ಗಿಡಮೂಲಿಕೆ, ಅಪರೂಪದ ಸಸ್ಯಗಳನ್ನು ಬೆಳೆಸಿ ಕೊಟ್ಟರು. ಹೊರಗಿನಿಂದ ನುರಿತ ತಜ್ಞರ ಕರೆಯಿಸಿ ಸ್ಥಳೀಯ ರೈತರಿಗೆ ಹೊಸ ಜ್ಞಾನ ಮಾರ್ಗಗಳನ್ನು ಪರಿಚಯಿಸಿದರು. ಆರ್ಥಿಕ ಸ್ವಾವಲಂಬನೆಗೆ ಅನುವಾಗುವ ಪರ್ಯಾಯ ಬೆಳೆಗಳ ಕಲಿಸಿದರು. 

ಜೇಸು ಪ್ರಕಾಶ್‌ ಎಂಬ ಗೆಳೆಯನ ಜೊತೆಗೂಡಿ ಊರಿನ ಕೆರೆಗಳ ಹೂಳೆತ್ತುವ ದೊಡ್ಡ ಯೋಜನೆಗೆ ಕೈ ಹಾಕಿದರು. ಅನೇಕ ಹಳ್ಳಿಗಳನ್ನು ದತ್ತು ತೆಗೆದುಕೊಂಡರು. ಸುತ್ತಲ ಜನರ ದೈಹಿಕ ಶ್ರಮ ಒಗ್ಗೂಡಿಸಿದರು. ಬಾಡುವ ಕೆರೆಗಳನ್ನು ಜನರೇ ಮುತುವರ್ಜಿ ವಹಿಸಿ ಉಳಿಸಿಕೊಳ್ಳುವುದು ಎಷ್ಟು ಮುಖ್ಯ ಎಂದು ಮನವರಿಕೆ ಮಾಡಿದರು. ಗ್ರಾಮೀಣ ಶಕ್ತಿ ಛಲದಿಂದ ಒಗ್ಗೂಡಿತು. ಜನವರಿ ತಿಂಗಳಲ್ಲೇ ಬತ್ತಿ ಹೋಗುತ್ತಿದ್ದ ಕೆರೆಗಳು ನಳನಳಿಸಿ ನಗುತ್ತಾ ನಿಂತವು. ಊರ ಬಾವಿಗಳಲ್ಲಿನ ಜಲ ಸ್ತರ ಹೆಚ್ಚಾಯಿತು. ಪ್ರಾಣಿ, ಪಕ್ಷಿ, ದನ ಕರುಗಳು ನೀರಿಲ್ಲದೆ ನಲುಗುವ ದಿನಗಳು ನಿಂತೇ ಹೋದವು.

‘ರೈತರನ್ನು ಒಲಿಸಿಕೊಳ್ಳದೆ, ಅವರ ಬದುಕನ್ನು ಒಳಗೊಳ್ಳದೆ ಯಾವುದನ್ನು ಮಾಡಲಾಗದು. ಅವರು ಕಣ್ಣಿಗೆ ಕಂಡರೆ ಮಾತ್ರ ನಂಬುತ್ತಾರೆ. ಯಾರಿಗೂ ಬರಿಯ ಭಾವುಕ ಕನಸುಗಳ ಬಗ್ಗೆ ನಂಬಿಕೆ ಇರುವುದಿಲ್ಲ. ಅಂತಿಮ ಫಲಿತಾಂಶ ಗಳಿಸುವ ತನಕ ಸಹನೆ ಇರಬೇಕು. ನನಗೆ ಅಪ್ಪ ಈ ಹಳ್ಳಿಗೆ ನಿನ್ನ ಕೊಡುಗೆ ಏನೂ ಇರದಿದ್ದರೆ ನೀನು ಎಷ್ಟು ಓದಿ, ಎಷ್ಟು ಗಳಿಸಿ, ಎಲ್ಲಿದ್ದರೂ ಏನು ಪ್ರಯೋಜನ? ಸ್ಥಳೀಯ ಜ್ಞಾನವನ್ನು, ಈ ನೆಲದ ಬೆಳೆಯ ತಳಿಗಳನ್ನು, ನಮ್ಮ ಉಸಿರಾಟದ ಕಾಡನ್ನು ನೀನು ಉಳಿಸಿ ಬೆಳೆಸಬೇಕು’ ಎಂದಿದ್ದರು. ಆ ಮಾತನ್ನು ಪಾಲಿಸಲು ಅರುಣ್‌ ಕುಮಾರ್, ಸಾರಾ ಎಂಬ ಸಂಸ್ಥೆಯನ್ನು ಬಟ್ಟೆಮಲಪ ಎಂಬಲ್ಲಿ ಕಟ್ಟಿದ್ಧಾರೆ. ಇದರ
ವಾರಸುದಾರರು ಸುತ್ತಲ ಹಳ್ಳಿಯ ಎಲ್ಲಾ ಸಮಸ್ತರು.

ಶಾಲೆಗಳು ಕಲಿಸಲಾಗದ ಪಾಠಗಳು ಮಕ್ಕಳಿಗೆ ಸಿಗಲೆಂದು ಚಿತ್ರಶಾಲೆ, ಮ್ಯೂಸಿಯಂ, ವಿಜ್ಞಾನ ಕೇಂದ್ರ, ಗ್ರಂಥಾಲಯ ರೂಪಿಸಿದ್ದಾರೆ. ಮುಳುಗಡೆಯಾದ ಸ್ಥಳದ ಜನರ ಸಾಂಸ್ಕೃತಿಕ ಕುರುಹುಗಳನ್ನು, ಅವರ ಎದೆಯ ಜನಪದ ದನಿಯನ್ನು ಉಳಿಸಲು ಹೆಣಗುತ್ತಿದ್ದಾರೆ. ಇವರ ತಮ್ಮ ಕುಮಾರ್‌ ಅಣ್ಣನ ಆಸೆಗೆ ಇಲ್ಲಿ ಆಸರೆಯಾಗಿದ್ದಾರೆ. ಸಮಾಜಮುಖಿಯಾಗಿ ತುಡಿಯುವ ಕನಸಿನ ಮನಸ್ಸುಗಳು ನಮ್ಮ ನಡುವೆ ಇದ್ದಾವೆ ಎಂಬುದೊಂದು ಹೆಮ್ಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT