ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಶಾಸ್ತ್ರೀಯ ಕನ್ನಡಕ್ಕೆ ‘ಸ್ವಾಯತ್ತತೆ’ ಕೊರಗು

ಮೈಕೊಡವಿ ಎದ್ದು ನಿಂತಿಲ್ಲ l ರಾಜಕೀಯ ಇಚ್ಛಾಶಕ್ತಿ ಕೊರತೆ lಹೋರಾಟಗಾರರ ಆರಂಭ ಶೂರತ್ವ
Last Updated 24 ನವೆಂಬರ್ 2019, 1:09 IST
ಅಕ್ಷರ ಗಾತ್ರ

ಮೈಸೂರು: ಶಾಸ್ತ್ರೀಯ ಸ್ಥಾನಮಾನದ ಬಹುಮುಖ್ಯ ಉದ್ದೇಶ ಆ ಭಾಷೆಯ ಪಾರಂಪರಿಕ ಅಂತಃಸತ್ವವನ್ನು ಎತ್ತಿ ನಿಲ್ಲಿಸುವುದು ಮತ್ತು ಹೊಸ ತಲೆಮಾರಿಗೆ ದಾಟಿಸುವುದು. ಆದರೆ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಮೈಸೂರಿನಲ್ಲಿ ಆರಂಭವಾಗಿ ಹತ್ತು ವರ್ಷಗಳಾದರೂ ಮೈಕೊಡವಿಕೊಂಡು ಎದ್ದು ನಿಂತಂತೆ ಕಾಣುತ್ತಿಲ್ಲ.

ತಮಿಳು ಭಾಷೆ, ಶಾಸ್ತ್ರೀಯ ಸ್ಥಾನಮಾನ ಪಡೆದ ಐದು ವರ್ಷಗಳಲ್ಲಿ ಸ್ವಾಯತ್ತತೆಯನ್ನೂ ದಕ್ಕಿಸಿಕೊಂಡಿದೆ. ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಒಂದು ವರ್ಷದಲ್ಲೇ ತೆಲುಗು ಭಾಷಾ ಕೇಂದ್ರವನ್ನು ಆಂಧ್ರಪ್ರದೇಶದ ನೆಲ್ಲೂರಿಗೆ ಸ್ಥಳಾಂತರಿಸಲಾಗಿದೆ. ಇದಕ್ಕೆ ಆಯಾ ರಾಜ್ಯಗಳ ರಾಜಕೀಯ ವ್ಯಕ್ತಿಗಳ ಪ್ರಭಾವ ಪ್ರಮುಖ ಕಾರಣ. ಆದರೆ, ಕನ್ನಡದ ವಿಷಯದಲ್ಲಿ ಇಲ್ಲಿನ ರಾಜಕೀಯ ವ್ಯಕ್ತಿಗಳ ಇಚ್ಛಾಶಕ್ತಿಯ ಕೊರತೆಯೂ ಎದ್ದು ಕಾಣುತ್ತಿದೆ.

ಇನ್ನು, ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್)ದಲ್ಲಿ ಕನ್ನಡೇತರ ಭಾಷೆಗಳಿಗೆ ನೀಡುತ್ತಿರುವ ಮಾನ್ಯತೆ ಕನ್ನಡಕ್ಕೆ ಸಿಗುತ್ತಿಲ್ಲ. ಕನ್ನಡದ ಬಗೆಗಿನ ನಿರ್ಲಕ್ಷ್ಯ ಹಾಗೂ ಪೂರ್ವಗ್ರಹಗಳು ಶಾಸ್ತ್ರೀಯ ಕನ್ನಡವನ್ನು ಬಡವಾಗಿಸಿವೆ. ದುರಂತವೆಂದರೆ, ಶಾಸ್ತ್ರೀಯ ಕನ್ನಡ ಕಚೇರಿ ಸಿಬ್ಬಂದಿಯೇ ತಮ್ಮ ಅಸ್ತಿತ್ವಕ್ಕಾಗಿ ಸ್ವಾಯತ್ತತೆಯ ವಿರುದ್ಧ ಕುತಂತ್ರ ಮಾಡುತ್ತಿದ್ದಾರೆ. ಸಿಐಐಎಲ್ ನಿರ್ದೇಶಕರು ಹಾಗೂ ಶಾಸ್ತ್ರೀಯ ಭಾಷೆಗಳ ಮುಖ್ಯಸ್ಥರು ಕನ್ನಡೇತರ ಭಾಷೆಯವರಾಗಿದ್ದು, ಅವರಿಗೆ ಕನ್ನಡದ ಬಗ್ಗೆ ಕಾಳಜಿ ಇಲ್ಲ. ಜೊತೆಗೆ, ಸಿಐಐಎಲ್ ತುಂಬಾ ತುಂಬಿಕೊಂಡಿರುವ ಕಮಿಷನ್ ಹಾವಳಿಯೂ ಸಿಐಐಎಲ್ ಹಾಗೂ ಶಾಸ್ತ್ರೀಯ ಕನ್ನಡವನ್ನೂ ಸೊರಗುವಂತೆ ಮಾಡಿದೆ ಎಂಬುದು ವಿದ್ವತ್ ವಲಯದಲ್ಲಿ ಕೇಳಿಬರುತ್ತಿರುವ ಆರೋಪ.

ಸಿಐಐಎಲ್ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಕನ್ನಡದ 20 ಪುಸ್ತಕಗಳು ಬಿಡುಗಡೆಯಾಗಿದ್ದು, ಈಗ ಮಾರಾಟಕ್ಕೆ ಒಂದು ಪ್ರತಿಯೂ ಸಿಗುತ್ತಿಲ್ಲ. ಕಾರಣ, ಆ ಪುಸ್ತಕಗಳೇ ಮುದ್ರಣವಾಗಿಲ್ಲ. ಶಾಸ್ತ್ರೀಯ ಕನ್ನಡಕ್ಕೆ ಪ್ರತ್ಯೇಕ ಪ್ರಕಟಣಾ ವಿಭಾಗವಿಲ್ಲ. ಇರುವ ಪ್ರಕಟಣಾ ವಿಭಾಗದಲ್ಲಿ ಕನ್ನಡಕ್ಕೆ ಸಂಬಂಧಿಸಿದ ಆಧುನಿಕ ತಂತ್ರಾಂಶಗಳಿಲ್ಲ. ಹೀಗಾಗಿ, ಆ ಕೆಲಸವೂ ಸರಿಯಾಗಿ ಆಗುತ್ತಿಲ್ಲ.

‘ಕೇಂದ್ರಕ್ಕೆ ಸ್ವಾಯತ್ತತೆ ಸಿಗುವುದು ಸಿಐಐಎಲ್ ನಿರ್ದೇಶಕರಿಗೇ ಇಷ್ಟವಿದ್ದಂತಿಲ್ಲ. ಸಿಐಐಎಲ್ ನಿಂದ ಈಗಾಗಲೇ ಹೊರ ಹೋಗಿರುವ ಸಂಸ್ಥೆಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದೆ, ವಾಪಸ್ ಬರಲು ಯೋಚಿಸುತ್ತಿವೆ ಎಂದು ಅದರ ನಿರ್ದೇಶಕರು ಹೇಳುತ್ತಿದ್ದಾರೆ. ಈ ಹೇಳಿಕೆಯ ಹಿಂದಿನ ಉದ್ದೇಶವೇನು’ ಎಂದು ಪ್ರಶ್ನಿಸುತ್ತಾರೆ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ.

ಈ ಕೇಂದ್ರಕ್ಕೆ ಪ್ರತಿ ವರ್ಷ ₹ 1 ಕೋಟಿ ಅನುದಾನ ಬರುತ್ತಿದೆ. ಇದರಲ್ಲಿ, ಸಿಬ್ಬಂದಿಯ ಸಂಬಳಕ್ಕೆ ₹ 22 ಲಕ್ಷ ಖರ್ಚಾಗುತ್ತದೆ. ಇನ್ನುಳಿದ ಹಣದಲ್ಲಿ ಯೋಜನೆಗಳನ್ನು ಕೈಗೊಳ್ಳಬೇಕು.

ಸ್ವಾಯತ್ತತೆಗೆ ನಿರಂತರ ಪ್ರಯತ್ನ: ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಸಿಗುವಂತೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಮೂರು ಸಭೆಗಳನ್ನು ನಡೆಸಲಾಗಿದೆ. ಅವರು ಈ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೂ ಪತ್ರ ಬರೆದು ನಿರಂತರವಾಗಿ ಈ ನಿಟ್ಟಿನಲ್ಲಿ ಪ್ರಯತ್ನ ಹಾಕುತ್ತಿದ್ದೇವೆ. ಮೈಸೂರು ವಿಶ್ವವಿದ್ಯಾಲಯವು ಮೂರು ಎಕರೆ ಜಾಗ ಹಾಗೂ ಕಟ್ಟಡ ನೀಡುತ್ತಿದೆ. ಅದಕ್ಕಾಗಿ, ಉನ್ನತ ಶಿಕ್ಷಣ ಇಲಾಖೆಯಿಂದ ಅನುಮತಿ ಸಿಕ್ಕ ಕೂಡಲೇ ಅಲ್ಲಿಗೆ ಸ್ಥಳಾಂತರವಾಗಲಿದೆ’ ಎನ್ನುತ್ತಾರೆ ಸಿಐಐಎಲ್ ನಿರ್ದೇಶಕ ಡಾ.ಡಿ.ಜಿ.ರಾವ್.

ಕೇಂದ್ರವು ರೂಪಿಸಿಕೊಂಡಿರುವ ಯೋಜನೆಗಳು:

- ಶಾಸ್ತ್ರ ಸಾಹಿತ್ಯ ಮತ್ತು ಭಾಷೆಗೆ ಸಹಾಯಕವಾಗುವಂಥ ಗ್ರಂಥಾಲಯ, ಇ-ಗ್ರಂಥಾಲಯ ಹಾಗೂ ಇ-ಬುಕ್ ಸೌಲಭ್ಯ ಹೊಂದಿದ ಗ್ರಂಥಾಲಯ ನಿರ್ಮಾಣ

- ಶಾಸನ ಮತ್ತು ಹಸ್ತಪ್ರತಿಗಳ ಸಂಗ್ರಹಣೆ, ಸಂರಕ್ಷಣೆ ಮತ್ತು ಡಿಜಿಟಲೀಕರಣ

- ಶಾಸ್ತ್ರೀಯ ಕನ್ನಡ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರ ಕುರಿತು ಸಾಕ್ಷ್ಯಚಿತ್ರಗಳ ನಿರ್ಮಾಣ

- ಹಿರಿಯ ಸಂಶೋಧಕರ ಮೂಲಕ ಪ್ರಾಚೀನ ಸಾಹಿತ್ಯದ ಆಯ್ದ ಪ್ರಸಂಗಗಳ ಪಾಠ ಬೋಧನೆಯನ್ನು ದಾಖಲೀಕರಣಗೊಳಿಸುವುದು (ಡಾಕ್ಯುಮೆಂಟೇಷನ್)

- ಹಿರಿಯ ವಿದ್ವಾಂಸ- ಗಮಕಿಗಳ ಮೂಲಕ ಪ್ರಾಚೀನ ಕಾವ್ಯಗಳನ್ನು ಗಮಕ ಗಾಯನದ ಮೂಲಕ ದಾಖಲಿಸುವುದು

- ಶಾಸ್ತ್ರೀಯ ಕನ್ನಡಕ್ಕೆ ಸಂಬಂಧಿಸಿದ ಮೌಲಿಕ ಪುಸ್ತಕಗಳ ಪ್ರಕಟಣೆ.

- ಯುವ ಸಂಶೋಧಕರಿಗೆ ಮೂಲದಲ್ಲಿ ಓದಲು ಕ್ಲಿಷ್ಟವೆನಿಸುವ ಪ್ರಾಚೀನ ಕೃತಿಗಳನ್ನು ಹೊಸಗನ್ನಡ ರೂಪದಲ್ಲಿ ತರ್ಜುಮೆ ಮಾಡಿಸಿ ಪೂರಕ ಪಠ್ಯ ಸಿದ್ಧಪಡಿಸುವುದು.

- ಶಾಸ್ತ್ರೀಯ ಕನ್ನಡ ಭಾಷೆಯ ಆಕರಗಳನ್ನು ಗುರುತಿಸುವುದು ಹಾಗೂ ನಿರ್ಮಾಣ ಮಾಡುವುದು

- ಹಳಗನ್ನಡ ಕವಿಗಳು, ವಚನಕಾರರು, ದಾಸರು, ತತ್ವಪದಕಾರರ ಕೃತಿಗಳನ್ನು ಹಾಗೂ ಮಲೆಯ ಮಾದೇಶ್ವರ ಕಾವ್ಯ, ಧರೆಗೆ ದೊಡ್ಡವರು ಮಂಟೇಸ್ವಾಮಿ ಕಾವ್ಯ, ಸಿರಿ ಮಹಾಕಾವ್ಯ ಮೊದಲಾದ ಜನಪದ ಕಾವ್ಯಗಳನ್ನು ಭಾರತೀಯ ಭಾಷೆಗಳಿಗೆ ಮತ್ತು ಇಂಗ್ಲಿಷ್ ಒಳಗೊಂಡಂತೆ ವಿದೇಶಿ ಭಾಷೆಗಳಿಗೆ ಅನುವಾದಿಸುವುದು

- ಶಾಸ್ತ್ರೀಯ ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾಗಿ ಶಾಸನಶಾಸ್ತ್ರ, ಪುರಾತತ್ವಶಾಸ್ತ್ರ, ಭಾಷಾಂತರ ಮೊದಲಾದ ವಿಷಯಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ಸರ್ಟಿಫಿಕೆಟ್ ಕೋರ್ಸ್, ನಿಯಮಿತ ಕೋರ್ಸ್‌ ಆರಂಭಿಸುವುದು

- ನಾಣ್ಯಶಾಸ್ತ್ರ, ಶಾಸನಶಾಸ್ತ್ರ, ಪುರಾತತ್ವಶಾಸ್ತ್ರ ಮತ್ತು ಪ್ರಾಚೀನ ಇತಿಹಾಸದ ಅಂತರ್‌ಶಿಸ್ತೀಯ ಸಂಶೋಧನೆಗೆ ಮಾರ್ಗಸೂಚಿ ರೂಪಿಸುವುದು

- ಶಾಸ್ತ್ರೀಯ ಭಾಷೆ, ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಪ್ರದರ್ಶಕ ಕಲೆ, ಶಾಸ್ತ್ರೀಯ ಚಿತ್ರಕಲಾ ಕ್ಷೇತ್ರಗಳ ನಡುವಿನ ಸಂಪರ್ಕಗಳನ್ನು ಪರಿಶೋಧಿಸುವುದು.

- ಶಾಸ್ತ್ರೀಯ ಭಾಷೆ ಮತ್ತು ಆಧುನಿಕ ತಂತ್ರಜ್ಞಾನ ಸಂಪರ್ಕಿಸುವುದು. ಮಾಹಿತಿ ಪ್ರಸಾರ ಮತ್ತು ಸಂಪರ್ಕದ ಮೂಲಕ ಭಾರತದ ಇತರ ಶಾಸ್ತ್ರೀಯ ಭಾಷೆಗಳ ಬಗೆಗಿನ ಕಾರ್ಯವನ್ನು ಸಂಯೋಜಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT