ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2047: ರಾಜ್ಯಕ್ಕೆ ಒಂದು ಮುನ್ನೋಟ

ನಮ್ಮ ಅಧಿಕಾರಸ್ಥರು ಇಚ್ಛಾಶಕ್ತಿಯೊಂದಿಗೆ ಮುಂದುವರಿದರೆ, 2047ರ ಹೊತ್ತಿಗೆ ಕನ್ನಡನಾಡು ಅಭಿವೃದ್ಧಿ ಹೊಂದಿದ ರಾಜ್ಯವಾಗಲಿದೆ
Last Updated 19 ಆಗಸ್ಟ್ 2022, 21:39 IST
ಅಕ್ಷರ ಗಾತ್ರ

ದೇಶದ ಅಗ್ರಗಣ್ಯ ರಾಜ್ಯಗಳಲ್ಲಿ ಒಂದಾದ ಕರ್ನಾಟಕವು ಆರ್ಥಿಕವಾಗಿ ಸದೃಢವಾಗಿದೆ. ಸಮಾಜೋ–ಆರ್ಥಿಕ ಬೆಳವಣಿಗೆಯನ್ನು ಸಾಧಿಸುವತ್ತ ದಾಪುಗಾಲು ಇಡುತ್ತಿದೆ. ನಮ್ಮ ಸರ್ಕಾರವು ಜಾಗತಿಕ ದರ್ಜೆಯ ಅಭಿವೃದ್ಧಿ ಮಾದರಿಗಳಿಗೆ ತೆರೆದುಕೊಂಡಿದೆ. ಅದರೊಂದಿಗೆ ಸರ್ಕಾರವು ಇಚ್ಛಾಶಕ್ತಿ ಪ್ರದರ್ಶಿಸಿದರೆ 2047ರ ಹೊತ್ತಿಗೆ ಕನ್ನಡನಾಡು ಅಭಿವೃದ್ಧಿಯಲ್ಲಿ ಮುಂಚೂಣಿ ಸ್ಥಾನಕ್ಕೆ ಬರಲಿದೆ.

ರಾಜ್ಯದಲ್ಲಿ ಒಟ್ಟು ಫಲವತ್ತತೆಯ ಪ್ರಮಾಣ (ಟಿಎಫ್‌ಆರ್‌) 1.7ರಷ್ಟು ಇದೆ. ದೇಶದ ಸರಾಸರಿಗಿಂತ (2.0) ಹಾಗೂ ಅಪೇಕ್ಷಿತ ಮಟ್ಟಕ್ಕಿಂತ ಇದು ಕಡಿಮೆ.ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಕಡಿಮೆ ಆಗುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯ. ಮುಂಬರುವ ದಿನಗಳಲ್ಲಿ ನಮ್ಮಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ ತ್ವರಿತವಾಗಿ ಏರಲಿದೆ. ಅಂದರೆ, ಇನ್ನು ಕೆಲವೇ ವರ್ಷಗಳಲ್ಲಿ ನಾವು ಮುಂದುವರಿದ ದೇಶಗಳಂತೆ ಆಗಲಿದ್ದೇವೆ. ಹೀಗಾಗಿ, ಸೂಕ್ತ ಸಾಮಾ ಜಿಕ ಭದ್ರತೆಯ ಒಂದು ವ್ಯವಸ್ಥೆ ಅತ್ಯಗತ್ಯವಾಗಲಿದೆ.

ಆರ್ಥಿಕ ಬೆಳವಣಿಗೆಯತ್ತ ಗಮನಹರಿಸಿದರೆ, ರಾಜ್ಯದ ಜಿಡಿಪಿ ಪ್ರಮಾಣವು 2047ರ ಹೊತ್ತಿಗೆ 2.12 ಟ್ರಿಲಿಯನ್ ಡಾಲರ್ (₹ 333 ಲಕ್ಷ ಕೋಟಿ) ಮುಟ್ಟಲಿದೆ. ನಮ್ಮ ರೂಪಾಯಿಯ ಮೌಲ್ಯವು ಡಾಲರಿನ ಎದುರು ಶೇ 3ರಷ್ಟು ಕುಸಿತ ಕಾಣಲಿದೆ ಎಂಬ ಅಂದಾಜಿನಲ್ಲಿ ಮಾಡಿರುವ ಲೆಕ್ಕಾಚಾರವಿದು. ಇದೇನೇ ಇರಲಿ, ಈ ಬೆಳವಣಿಗೆಯನ್ನು ಸಾಧಿಸಬೇಕೆಂದರೆ, ನಿರಂತರ ಹೂಡಿಕೆ ಮತ್ತು ಸಮರ್ಪಕ ನೀತಿಗಳೊಂದಿಗೆ ಸಾಗಬೇಕಾಗಿದೆ.

ಸ್ಫೋಟಕ ಎನ್ನಬಹುದಾದ ಆರ್ಥಿಕ ಬೆಳವಣಿಗೆ ಮತ್ತು ಜನಸಂಖ್ಯಾ ಸಮತೋಲನ ಎರಡನ್ನೂ ಸಾಧಿಸುವುದು ಸಾಧ್ಯವಾದರೆ, ರಾಜ್ಯದ ತಲಾವಾರು ಆದಾಯವು 2047ರ ವೇಳೆಗೆ ಎಂಟು ಪಟ್ಟು ವೇಗದಲ್ಲಿ ಬೆಳೆಯಬಹುದು. ಇದು, ಅಸಾಧ್ಯವಾದ ಗುರಿಯೇನಲ್ಲ. ಏಕೆಂದರೆ, ಉದ್ಯೋಗಾವಕಾಶಗಳ ವೃದ್ಧಿ ಮತ್ತು ಸಾಮರ್ಥ್ಯ ವಿಸ್ತರಣೆಯ ಮೂಲಕ ಸೇವಾ ವಲಯವು ಈಗಾಗಲೇ ನಮ್ಮ ಆರ್ಥಿಕತೆಯಲ್ಲಿ ಶೇ 66.3ರಷ್ಟು ಪಾಲನ್ನು ಹೊಂದಿದೆ. 2047ರ ಹೊತ್ತಿಗೆ ನಮ್ಮ ಆರ್ಥಿಕತೆಗೆ ಈ ವಲಯದ ಕೊಡುಗೆಯು ಶೇ 75ರಷ್ಟು ಆಗುವ ಸಂಭವವಿದೆ. ಇದಲ್ಲದೆ, ಶೇ 8ರಿಂದ 10ರಷ್ಟು ಕೃಷಿ ಕ್ಷೇತ್ರದಿಂದಲೂ ಶೇ 15ರಿಂದ 17ರಷ್ಟು ಪಾಲು ಕೈಗಾರಿಕಾ ವಲಯದಿಂದಲೂ ಬರಬಹುದು.

ದೇಶದ ಮಹಾನಗರಗಳ ಪೈಕಿ ಬೆಂಗಳೂರು, ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ತೆರಿಗೆಯನ್ನು ಸಲ್ಲಿಸುತ್ತಿದೆ. ಈಗ ನಮ್ಮಲ್ಲಿರುವ ಕಾರ್ಯ ಪರಿಸರವನ್ನು (ಇಕೊ ಸಿಸ್ಟಂ) ಹೀಗೇ ಮುಂದುವರಿಸಿಕೊಂಡು ಹೋದರೆ, ಬೆಂಗಳೂರು ‘ಜಾಗತಿಕ ನಾವೀನ್ಯತೆಯ ತೊಟ್ಟಿಲು’ ಎನಿಸಿಕೊಳ್ಳಲಿದೆ. ರಾಜ್ಯವು ಈಗ ಬಹಳ ತುರ್ತಾಗಿ ಒಂದು ಕೆಲಸವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ. ಅದೇನೆಂದರೆ, ರಾಜ್ಯದ 10 ಹೊಸ ನಗರ ಪ್ರದೇಶಗಳನ್ನು ಆರ್ಥಿಕ ಚಟುವಟಿಕೆಗಳ ಆಡುಂಬೊಲಗಳನ್ನಾಗಿ ಪರಿವರ್ತಿಸಬೇಕಾಗಿದೆ. ಆಗ ಈ ನಗರಗಳು ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ತಾಣಗಳಾಗಿ, ರಾಜ್ಯದ ಆರ್ಥಿಕ ಕಾರಿಡಾರ್‌ಗಳ ಯಶಸ್ಸಿಗೆ ಮತ್ತಷ್ಟು ಇಂಬು ಕೊಡಲಿವೆ.

ಇದಕ್ಕೆ ಪೂರಕವಾಗಿ ಉತ್ಪಾದನಾ ಕೇಂದ್ರಗಳ ಬೆಸೆಯುವಿಕೆ, ರಫ್ತು ವಹಿವಾಟಿಗೆ ಅಗತ್ಯವಾದ ಅನುಕೂಲಗಳು ಬಹಳ ಮುಖ್ಯ. ಇವುಗಳಲ್ಲಿ ನಾವು ಸೈ ಎನಿಸಿಕೊಂಡರೆ, ಸಹಜವಾಗಿಯೇ ವಾಣಿಜ್ಯ ವಹಿವಾಟು ಮತ್ತು ಹೂಡಿಕೆಗಳು ಬೆಳೆಯುತ್ತ ಹೋಗಲಿವೆ. ಸುಗಮ ಮಾರುಕಟ್ಟೆ ವ್ಯವಸ್ಥೆಯು ಒಟ್ಟಾರೆಯಾಗಿ ಉತ್ಪಾದನೆಯನ್ನು ಹೆಚ್ಚಿಸಲಿದ್ದು, ಆಯಾ ಪ್ರದೇಶಗಳಲ್ಲಿ ಸ್ಪರ್ಧಾತ್ಮಕತೆಯನ್ನೂ ವೃದ್ಧಿಸಲಿದೆ. ಜೊತೆಗೆ ನಾವು ಸುಸ್ಥಿರತೆ ಯನ್ನು ಮರೆಯುವಂತಿಲ್ಲ. ಪರಿಸರ ಮತ್ತು ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಕಟ್ಟುನಿಟ್ಟಾದ ಕೆಲವು ವೈಜ್ಞಾನಿಕ ಮಾನದಂಡಗಳನ್ನು ಅಳವಡಿಸಿಕೊಳ್ಳುವುದು ಬಹಳ ಅಪೇಕ್ಷಣೀಯ.

ನೀತಿ ಆಯೋಗದ ನಾವೀನ್ಯತಾ ಸೂಚ್ಯಂಕದಲ್ಲಿ ಮಾತ್ರವಲ್ಲದೆ ಹಲವು ವಲಯಗಳಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ. ಇದನ್ನು ಕಾಯ್ದುಕೊಳ್ಳಲು ಅಗತ್ಯವಿರುವ ಪ್ರತಿಯೊಂದು ಉಪಕ್ರಮವನ್ನೂ ಕ್ಷಿಪ್ರಗತಿಯಲ್ಲಿ ಕೈಗೊಳ್ಳಬೇಕು. ಪ್ರವರ್ಧಮಾನಕ್ಕೆ ಬರುತ್ತಿರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಶೋಧನೆಗಳತ್ತ ಗಮನಹರಿಸಬೇಕು. ಅತ್ಯಂತ ನಿರ್ಣಾಯಕವಾದ ಶಿಕ್ಷಣ ಮತ್ತು ಪರಿಣತಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ವೃದ್ಧರನ್ನು ಜತನದಿಂದ ಕಾಪಾಡಬಲ್ಲಂತಹ ಒಂದು ಸೂತ್ರವನ್ನು ಸರ್ಕಾರ ಮತ್ತು ಸಮಾಜ ಕೈಗೂಡಿಸಿ ಆವಿಷ್ಕರಿಸಬೇಕು. ಇಲ್ಲದೇ ಹೋದರೆ, ಕುಸಿಯುತ್ತಿರುವ ಒಟ್ಟು ಫಲವತ್ತತೆಯ ಪ್ರಮಾಣ, ಏರುತ್ತಿರುವ ವಿಭಕ್ತ ಕುಟುಂಬಗಳ ಸಂಖ್ಯೆ, ಯುವಜನರ ವಲಸೆ ಇವೆಲ್ಲವೂ ನಮ್ಮ ಸಮಾಜವನ್ನು ಕಾಡಲಿವೆ.

ಪ್ರತೀ ಜಿಲ್ಲೆಯಲ್ಲೂ ಬಹೂಪಯೋಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ನಾವು ಸ್ಥಾಪಿಸಬೇಕು. ಇದರಿಂದಾಗಿ, ಜನರಿಗೆ ಅವರ ಜಿಲ್ಲೆಗಳಲ್ಲೇ ಸುಸಜ್ಜಿತ ವೈದ್ಯಕೀಯ ಸೇವೆಗಳು ಸಿಗಲಿವೆ. ಇದಕ್ಕೆ ಪೂರಕವಾಗಿ ಪ್ರತಿಯೊಂದು ತಾಲ್ಲೂಕಿನಲ್ಲೂ ಪ್ರಾಥಮಿಕ ಆರೋಗ್ಯ ಮತ್ತು ಆರೈಕೆ ಕೇಂದ್ರ ಕೂಡ ಅಸ್ತಿತ್ವಕ್ಕೆ ಬರಬೇಕು.

2047ರ ಈ ಮುನ್ನೋಟವನ್ನು ಕರ್ನಾಟಕವು ಖಂಡಿತವಾಗಿಯೂ ಸಾಧಿಸಬಹುದು. ಇದಕ್ಕೆ ವಿಸ್ತೃತ ಕಾರ್ಯನೀತಿಗಳು, ಸ್ಪಷ್ಟ ಗುರಿಯುಳ್ಳ ಹೂಡಿಕೆ ಮತ್ತು ಗುಣಮಟ್ಟದ ಆಡಳಿತವು ಅತ್ಯಗತ್ಯವಾದ ಮೆಟ್ಟಿಲುಗಳಾಗಿವೆ.

ಲೇಖಕರು: ಪ್ರಶಾಂತ್ ಪ್ರಕಾಶ್, ರಾಜ್ಯ ಸರ್ಕಾರದ ಸ್ಟಾರ್ಟ್ಅಪ್‌ ವಿಷನ್ ಗ್ರೂಪ್‌ನ ಅಧ್ಯಕ್ಷ, ನಿಶಾ ಹೊಳ್ಳ,
ಸಿ-ಕ್ಯಾಂಪ್‌ನ ಟೆಕ್ನಾಲಜಿ ಫೆಲೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT