ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮೆದುಳಿನ ಮೇವಿಗೊಂದು ‘ಗೂಡು’!

ಬಸ್‌ ನಿಲ್ದಾಣಗಳಲ್ಲಿ ತೆರೆದಿರುವ ‘ಪುಸ್ತಕದ ಗೂಡು’ಗಳು ಅನುಕರಣೀಯ
Last Updated 4 ಜನವರಿ 2022, 19:31 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡದ ಎಲ್ಲೆಡೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ವಿಶಿಷ್ಟ, ವಿನೂತನ ಎನ್ನಬಹುದಾದ ಒಂದು ಜನಪ್ರಿಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅದು ‘ಪುಸ್ತಕ ಗೂಡು’ ಎಂಬ ಕಾರ್ಯಕ್ರಮ. ಬಸ್ಸಿಗಾಗಿ ನಿಲ್ದಾಣಗಳ ಆಸನದಲ್ಲಿ ಕಾದು ಕುಳಿತಿರುವ ಪ್ರಯಾಣಿಕರನ್ನೇ ಗುರಿಯಾಗಿಸಿಕೊಂಡು ನಿಲ್ದಾಣದಲ್ಲಿ ಒಂದು ಗೂಡು ಸ್ಥಾಪನೆಯಾಗುತ್ತದೆ. ಅದರೊಳಗೆ ವೈವಿಧ್ಯಮಯವಾದ ಪುಸ್ತಕಗಳಿರುತ್ತವೆ. ಮೊಬೈಲ್ ಗುಂಡಿಯ ಮೇಲೆ ಪಥಸಂಚಲನ ಮಾಡುವ ಬೆರಳುಗಳಿಗೂ ಮೆದುಳಿಗೂ ಒಂದಿಷ್ಟು ಹೊಸ ಬಗೆಯ ಸ್ವಾದ ಅನುಭವಿಸಲು ಇದರ ಆಯೋಜನೆಯಾಗಿದೆ.

ಹೀಗೆಂದು ಜಿಲ್ಲಾ ಪಂಚಾಯಿತಿಯು ಹೊಸ ಪುಸ್ತಕ ಗಳ ಖರೀದಿಗೆ ತೆರಿಗೆಯ ಹಣ ಖರ್ಚು ಮಾಡುತ್ತಿಲ್ಲ. ಪ್ರತಿಯೊಂದು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಪುಸ್ತಕ ಸಂಗ್ರಹದ ಹೊಣೆ ಹೊತ್ತುಕೊಳ್ಳುತ್ತಾರೆ. ಮನೆಮನೆಗೂ ಭೇಟಿ ನೀಡುತ್ತಾರೆ. ‘ಓದಿದ ಬಳಿಕ ರದ್ದಿ ಅಂಗಡಿಗೆ ಕೊಡಲು ತೆಗೆದಿರಿಸಿದ ವಾರಪತ್ರಿಕೆಗಳು, ಮಾಸಪತ್ರಿಕೆಗಳಿದ್ದರೆ ನಮಗೆ ಕೊಡಿ’ ಎಂದು ಕೇಳುತ್ತಾರೆ.

ಪುಸ್ತಕಗಳನ್ನೂ ಹಾಗೆಯೇ ಪಡೆಯುತ್ತಾರೆ. ಕಥೆ, ಕಾದಂಬರಿ, ಕವಿತೆ, ಮಕ್ಕಳ ಸಾಹಿತ್ಯ, ನಾಟಕ ಯಾವುದೇ ಇರಲಿ ದಾನವಾಗಿ ಪಡೆದುಕೊಳ್ಳುತ್ತಾರೆ. ಈ ಗೂಡುಗಳು ಹಳ್ಳಿಗಳು, ಗ್ರಾಮಾಂತರ ಪ್ರದೇಶದ ಬಸ್ ತಂಗುದಾಣಗಳಲ್ಲಿದ್ದರೆ ಅದರ ನಿರ್ವಹಣೆಯನ್ನು ಸ್ಥಳೀಯ ರಿಕ್ಷಾ ಚಾಲಕರು ಹೊತ್ತುಕೊಳ್ಳುತ್ತಾರೆ. ಬೆಳಿಗ್ಗೆ ಗೂಡಿನ ಬಾಗಿಲು ತೆರೆಯುವುದು, ಸಂಜೆ ಬಾಗಿಲಿಗೆ ಬೀಗ ಜಡಿಯುವುದು ಅವರ ಜವಾಬ್ದಾರಿ. ಇದು, ರಾತ್ರಿ ವೇಳೆ ಪುಸ್ತಕಗಳ ಸುರಕ್ಷತೆಗಾಗಿ ವಹಿಸುವ ನಿಗಾ ಅಷ್ಟೇ.

ಯಾರೋ ಒಬ್ಬರು ಜಿಲ್ಲಾ ಪಂಚಾಯಿತಿ ಅಧಿಕಾರಿಗೆ, ‘ಸಾರ್, ಹೀಗೆ ಇಟ್ಟರೆ ಪುಸ್ತಕಗಳನ್ನು ಯಾರಾದರೂ ಕದ್ದುಕೊಂಡು ಹೋಗುವುದಿಲ್ಲವೇ?’ ಎಂದು ಕೇಳಿದರಂತೆ. ಅದಕ್ಕೆ ಅವರು, ‘ಹೋಗ್ಲಿ ಬಿಡಿ, ಓದುವ ಆಸಕ್ತಿ ಇದ್ದವರು ಪುಸ್ತಕ ಕೊಂಡುಹೋಗಿ ಮನೆಯಲ್ಲಿ ಇಟ್ಟುಕೊಂಡರೆ ಹಾಗಾದರೂ ಪುಸ್ತಕಾ ಭಿಮಾನ ಬೆಳೆಯುತ್ತದಲ್ಲ?’ ಎಂದು ಉತ್ತರಿಸಿದರಂತೆ.

ವಾಚನಾಲಯಗಳಲ್ಲಿ ಬಹಳಷ್ಟು ಪುಸ್ತಕಗಳ ಸಂಗ್ರಹವಿದೆ. ಅಲ್ಲಿ ಹೋಗಿ ಓದುವವರ ಸಂಖ್ಯೆ ವಿರಳವಾಗುತ್ತಿದೆ. ಅಂಥದ್ದರಲ್ಲಿಯೂ ಪುಸ್ತಕ ಗೂಡುಗಳು ಹೆಚ್ಚು ಜನರನ್ನು ತಲುಪುತ್ತವೆಂಬ ವಿಶ್ವಾಸ ಅಧಿಕಾರಿಗಳಿಗೆ ಇದೆ. ಸಮಯವನ್ನು ಕೊಲ್ಲಲು ಪುಸ್ತಕಗಳನ್ನು ತಿರುವಿ ಹಾಕುವುದರ ಮೂಲಕ ಓದಿನ ಪ್ರೇಮ ಗಾಢವಾಗಿ ಬೆಳೆಯುವುದು ಖಚಿತ ಎನ್ನುತ್ತಾರೆ ಅವರು.

ಇಂತಹ ಯೋಜನೆ ಸಾರ್ವತ್ರಿಕವಾಗಿ ಮೆಚ್ಚುಗೆ ಗಳಿಸಿದೆ. ಹಲವಾರು ಲೇಖಕರು ಲಭ್ಯವಿರುವ ಕೃತಿ ಗಳನ್ನು ಕೊಡುತ್ತಿದ್ದಾರೆ. ವಿಮರ್ಶಕರು ವಿಮರ್ಶೆಗಾಗಿ ಬರುವ ಪುಸ್ತಕಗಳನ್ನು ನೀಡುತ್ತಾರೆ. ‘ಯಾವುದೇ ಪುಸ್ತಕ ಕೊಡಿ, ನಾವು ಸ್ವೀಕರಿಸುತ್ತೇವೆ’ ಎಂಬುದು ಪಂಚಾಯಿತಿ ಅಧಿಕಾರಿಗಳ ನಿಲುವು. ಭಿನ್ನ ರುಚಿಯ ಓದುಗರಿರುತ್ತಾರೆ. ಒಂದೊಂದು ಪುಸ್ತಕವೂ ಅಂತಹ ವಾಚಕರಿಗೆ ಇಷ್ಟವಾಗುವುದು ಎನ್ನುತ್ತಾರೆ ಅವರು.

ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಹತ್ತಾರು ಕಡೆ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಇರುವ ಎಲ್ಲೆಡೆಯೂ ಪುಸ್ತಕ ಗೂಡುಗಳು ಈಗಾಗಲೇ
ಪ್ರತಿಷ್ಠಾಪನೆಗೊಂಡಿವೆ.

ಪುಸ್ತಕೋದ್ಯಮ ಹಿಂದೆ ಸರಿಯುತ್ತಿದೆ ಎಂದು ಪ್ರಕಾಶಕರು ಮಾಡುತ್ತಿರುವ ಚಿಂತೆ ಪರೋಕ್ಷವಾಗಿ ನೂರಾರು ಲೇಖಕರ ಪಾಲಿಗೆ ಹೊಡೆತವೂ ಹೌದು. ಪುಸ್ತಕ ಮಾರಾಟ ಕಡಿಮೆಯಾದರೆ ಹೊಸ ಲೇಖಕರ ಕೃತಿಗಳನ್ನು ಪ್ರಕಟಿಸಲು ಪ್ರಕಾಶಕರು ಹಿಂದೇಟು ಹಾಕುತ್ತಾರೆ. ಕೊರೊನಾ ಸಂಕಷ್ಟದಿಂದ ಪ್ರಕಾಶಕರೂ ನಷ್ಟ ಅನುಭವಿಸಿದ್ದಾರೆ. ಹೆಸರಾಂತ ಪ್ರಕಾಶನ ಸಂಸ್ಥೆಗಳು ಡಿಜಿಟಲ್ ಕೃತಿಯ ತಯಾರಿಗೆ ಮುಂದಾಗಿದ್ದರೂ ಅದರ ಖರ್ಚು ವೆಚ್ಚ ದುಬಾರಿಯಾಗಿದೆ. ಹಾಕಿದ ಹಣ ಹಿಂದೆ ಬರುವ ವೇಗ ಚೆನ್ನಾಗಿಲ್ಲ ಎನ್ನುವುದೂ ಗೊತ್ತಾಗಿದೆ. ಪುಸ್ತಕ ಉದ್ಯಮ ಕ್ಷೇಮವಾಗಿರ
ಬೇಕಾದರೆ ಓದುಗರು, ಅದರಲ್ಲೂ ಕೊಂಡು ಓದುವ ಓದುಗರೇ ಜೀವಾಳವಾಗುತ್ತಾರೆ.

ಸರ್ಕಾರವು ಗ್ರಂಥಾಲಯಗಳಿಗಾಗಿ ಪುಸ್ತಕಗಳನ್ನು ಖರೀದಿಸುವ ಒಂದೇ ಕಾರಣಕ್ಕೆ ಪುಸ್ತಕಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಇಂತಹ ಸಂಕೀರ್ಣ ಸ್ಥಿತಿಯಲ್ಲಿ ಉದ್ಯಮ ತೂಗುಯ್ಯಾಲೆಯಾಡುತ್ತಿರುವಾಗ ವಿದ್ಯಾರ್ಥಿಗಳು, ಕಾರ್ಮಿಕರು, ಗೃಹಿಣಿಯರು ಬಸ್ಸು ಬರುವ ತನಕ ಒಂದು ಪುಸ್ತಕ ಓದಬಹುದು. ಓದು ಅರ್ಧದಲ್ಲಿ ನಿಂತುಹೋದರೆ, ಅದು ಆಸಕ್ತಿದಾಯಕ ವಾಗಿದ್ದರೆ ಮರಳಿ ಅದೇ ನಿಲ್ದಾಣಕ್ಕೆ ಬಂದು ಓದು ಮುಂದುವರಿಸಬಹುದು ಅಥವಾ ಆ ಪುಸ್ತಕವನ್ನು ಖರೀದಿಸಿ ಮನೆಗೆ ಒಯ್ಯಬಹುದು ಎಂಬ ಭಾವನೆ ಪಂಚಾಯಿತಿ ಅಧಿಕಾರಿಗಳದ್ದು.

ಯಾರೋ ಈ ಯೋಜನೆ ಮಾಡಿದ್ದಾರೆ ಎಂದು ಸರ್ಕಾರವೂ ಸುಮ್ಮನಿರಬೇಕಾಗಿಲ್ಲ. ಗ್ರಾಮ ಪಂಚಾ ಯಿತಿ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಗ್ರಂಥಾಲಯಗಳಿವೆ, ಗ್ರಂಥಪಾಲಕರಿದ್ದಾರೆ. ಆದರೆ ಅಲ್ಲಿಗೆ ಹೋಗಿ, ಕುಳಿತು ಓದಿನಲ್ಲಿ ಆಸಕ್ತರಾಗುವವರು ನಿವೃತ್ತ ನೌಕರರು ಸೇರಿ ಬೆರಳೆಣಿಕೆಯಷ್ಟು ಜನ.

ಬಸ್ ತಂಗುದಾಣಗಳಲ್ಲಿ ವಿವಿಧ ಮನೋಭಿ ರುಚಿಯ ತುಂಬಾ ಜನ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಗ್ರಂಥಾಲಯದ ಪುಸ್ತಕ, ಪತ್ರಿಕೆಗಳು ವಾರದ ಏಳು ದಿನಗಳೂ ಸರ್ಕಾರಿ ರಜೆಯ ಹಂಗಿಲ್ಲದೆ ಅವರ ಕೈಗೆ ಸಿಗಲು ಪ್ರಾಯೋಗಿಕವಾಗಿ ಒಂದು ಪ್ರಯತ್ನ
ಕೈಗೊಳ್ಳಬಹುದಲ್ಲವೇ? ಪಂಚಾಯಿತಿ ಅಧಿಕಾರಿಯೊಬ್ಬರು ಬಿತ್ತಿರುವ ಓದಿನ ಹವ್ಯಾಸದ ಬೀಜ ಹೆಮ್ಮರವಾಗಿ ಬೆಳೆಯಲು ಸರ್ಕಾರದ ಸಹಕಾರವೂ ಇದ್ದರೆ ಒಳ್ಳೆಯದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT