ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಬೇಕಾಗಿದೆ ಬಂಧುತ್ವ ಸುಖ

ಕೌಟುಂಬಿಕ ಜೀವನದ ಆತ್ಮೀಯತೆಗೊಂದು ವ್ಯಾಖ್ಯೆ ಬರೆಯಬೇಕಾಗಿದೆ
Last Updated 30 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಅಮೆರಿಕದಿಂದ ಊರಿಗೆ ಮರಳಿದ್ದ ಬಂಧುವನ್ನು ಕಾಣಲು ಹೋಗಿದ್ದೆ. ಅವರ ಮಗನನ್ನು ಕರೆದು, ‘ಇವರು ನಿನ್ನ ಚಿಕ್ಕಪ್ಪ’ ಎಂದು ಹೇಳಿದರು. ಅವನಿಗೆ ಕನ್ನಡ ಅಷ್ಟೊಂದು ಬರುತ್ತಿರಲಿಲ್ಲ. ‘ಅಂದರೆ ನನ್ನ ಸೆಕೆಂಡ್ ಫಾದರ‍್ರಾ?’ ಎಂದು ಕೇಳಿದ. ಸಂಬಂಧವನ್ನು ಮಗನಿಗೆ ಅರ್ಥ ಮಾಡಿಸಲು ಅವರು ಹೆಣಗಾಡಿದರು.

ದಂಪತಿ ಉದ್ಯೋಗಕ್ಕೆ ಹೋಗುತ್ತಾರೆ. ಮರಳಿ ಬಂದ ಮೇಲೆ ಮಕ್ಕಳೊಂದಿಗೆ ನಡೆಯುವ ಮಾತುಕತೆ ಅವರ ಶಿಕ್ಷಣದ ಕುರಿತಾಗಿಯೇ ಇರುತ್ತದೆ. ಸಂಬಂಧಗಳನ್ನು ವಿವರಿಸುವ ವ್ಯವಧಾನವೂ ಇರುವುದಿಲ್ಲ. ಅಂತಹ ಸಂಬಂಧಗಳ ಮುಖದರ್ಶನವೂ ಮಕ್ಕಳಿಗೆ ಆಗುವುದಿಲ್ಲ.

ಶಾಲೆಯಲ್ಲಿ ಕಲಿಯುತ್ತಿದ್ದಾಗ ನಮ್ಮ ಮೇಷ್ಟರು ಒಂದು ಪದ್ಯ ಹೇಳುತ್ತಿದ್ದರು. ‘ದಧಿಯಿಂದ ಹೊರಬಂದು ನವನೀತ ತಕ್ರದೊಳು| ನೆಲೆಸಿದರೂ ಬೆರೆಯದೆ ಸುಮ್ಮನಿರುವಂತೆ| ಮಾನವರ ಜೊತೆಜೊತೆಗೆ ಬದುಕಿದರೂ ಬಾಂಧವ್ಯ ಸಮರಸದಿ ಕರಗದಿರೆ ಬದುಕು ವ್ಯರ್ಥ’– ಮೊಸರಿನಿಂದ ತೆಗೆದ ಬೆಣ್ಣೆಯನ್ನು ಮಜ್ಜಿಗೆಯೊಳಗಿರಿಸಿದಾಗ, ತಾನು ಅದೇ ಮಜ್ಜಿಗೆಯಿಂದ ಹೊರಬಂದವನೆಂಬುದನ್ನು ಅರಿಯದೆ ಪ್ರತ್ಯೇಕ ಉಳಿಯುವ ಹಾಗೆ ಮನುಷ್ಯ ಇರಬಾರದು ಎಂದು ಅವರು ವಿವರಿಸುತ್ತಿದ್ದರು.

ವರ್ತಮಾನದ ಬದುಕು ಮಾತ್ರ ಮಜ್ಜಿಗೆಯ ನಡುವೆ ಕುಳಿತಿರುವ ಬೆಣ್ಣೆಯ ಹಾಗೆಯೇ ದೂರ ಉಳಿಯುತ್ತಿದೆ. ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ಸಂಕಲ್ಪ ಹೊತ್ತು ಹೆತ್ತವರು ತಮ್ಮ ಪೂರ್ಣ ಶಕ್ತಿ, ಸಂಪತ್ತು ಎಲ್ಲವನ್ನೂ ಇದ್ದೊಬ್ಬ ಮಗನ ಶ್ರೇಯೋಭಿ ವೃದ್ಧಿಗೇ ಮೀಸಲಿಡುತ್ತಾರೆ. ಮಗ ಅತ್ಯುನ್ನತವಾದ ನೌಕರಿ ಸಂಪಾದಿಸಬೇಕೆಂಬ ತಮ್ಮ ಕನಸನ್ನು ನನಸು ಮಾಡುವ ಯಂತ್ರವಾಗಿ ಅವನನ್ನು ರೂಪಿಸುತ್ತಾರೆ.

ನಾವು ಚಿಕ್ಕವರಿರುವಾಗ ಶಾಲೆಗೆ ಬೇಸಿಗೆ ರಜೆ ಸಿಗುವುದನ್ನೇ ಕಾಯುತ್ತಿದ್ದೆವು. ಅಜ್ಜಿ ಮನೆಗೆ ಹೋಗಿ ಕೆಲವು ದಿನ ಅಲ್ಲಿದ್ದು, ಕಾಟು ಮಾವಿನಹಣ್ಣು ಹೆಕ್ಕುವುದು, ಹಳ್ಳದ ನೀರಿನಲ್ಲಿ ಈಜುವುದೇ ಮೊದಲಾದ ಸ್ವಚ್ಛಂದ ವಿಹಾರ ಮಾಡುತ್ತ ಕಾಲ ಕಳೆಯುತ್ತಿದ್ದೆವು. ಚಿಕ್ಕಮ್ಮ, ದೊಡ್ಡಮ್ಮ, ಭಾವ, ಅತ್ತಿಗೆ, ಪುಟ್ಟತ್ತೆ ಹೀಗೆ ಸಂಬಂಧಗಳ ಸರಪಣಿ ಹಿಡಿದುಕೊಂಡು ಹೋಗಿ ಅವರ ಮಕ್ಕಳೊಂದಿಗೆ ಒಡನಾಡಿ, ಬೆಟ್ಟದ ಹಣ್ಣು ತಿಂದು, ಹಾರುವ ಪತಂಗದ ಬಾಲಕ್ಕೆ ನೂಲು ಕಟ್ಟಿ ಗಾಳಿಪಟದಂತೆ ಹಾರಿಸುವ ಆಟದಲ್ಲಿ ಸ್ವರ್ಗೀಯ ಸುಖ ಅನುಭವಿಸುತ್ತಿದ್ದೆವು.

ಈಗ ರಜೆಯ ಕಾಲದಲ್ಲೂ ಮಕ್ಕಳಿಗೆ ಬಾಂಧವ್ಯದ ಜಾಡು ಹಿಡಿದು ಹೋಗಲು ಅನುಕೂಲವಿಲ್ಲ. ಆತ ಕಲಿಯುವ ತರಗತಿಗೆ ಹೆತ್ತವರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಅವನು ಪ್ರತಿಯೊಂದು ಕ್ಷಣವೂ ಅಧ್ಯಯನ ನಿರತನಾಗಿರಬೇಕು. ಕತೆ ಹೇಳುವ ಕಾಲ ಇದಲ್ಲ. ಪಠ್ಯದ ಹೊರತು ಬೇರೆ ಪುಸ್ತಕ ಮುಟ್ಟಿಯೂ ನೋಡಬಾರದು. ಸಂಬಂಧಿಕರ ಮನೆಗೆ ರಜೆಯಲ್ಲಿ ಹೋಗಿ ಬರುವುದು ದಂತಕತೆ. ಯಾಕೆಂದರೆ ಮಗು ಹೋಗಬೇಕಾದ ಸಂಬಂಧಿಕರ ಮನೆಯಲ್ಲಿಯೂ ಮಕ್ಕಳಿರುತ್ತಾರೆ, ಅವರದೂ ಇದೇ ಯಶೋಗಾಥೆ.

ವಿದ್ಯೆ ಕಲಿತು ಕೈತುಂಬ ಸಂಬಳ ತಂದರೆ ಮಾತ್ರ ಗೌರವದಿಂದ ಬದುಕಲು ಸಾಧ್ಯವೆಂಬ ಭಾವ ಹೇಗೆ ಮೊಳೆಯಿತೋ ತಿಳಿಯದು. ಅದು ಮುಗ್ಧ ಮಗುವೊಂದರ ಭಾವಲೋಕವನ್ನು ಹೊಸಕಿ ಹಾಕುವಷ್ಟು ಪ್ರಬಲವಾಯಿತು. ಕೌಟುಂಬಿಕ ಸಂಬಂಧಗಳು ವ್ಯಾವಹಾರಿಕವಾದವು. ಮನೆಗಳಲ್ಲಿ ನಡೆಯುತ್ತಿದ್ದ ಮದುವೆಗಳು ಕಲ್ಯಾಣ ಮಂಟಪಗಳಲ್ಲಿ ನಡೆಯತೊಡಗಿದ ಬಳಿಕ, ಹಿಂದಿನ ದಿನವೇ ಸಂಬಂಧಿಕರು ಮದುವೆ ಮನೆಗೆ ಹೋಗಿ ತರಕಾರಿ ಹೆಚ್ಚಿ ಕೊಟ್ಟು, ಮರುದಿನ ಅಭ್ಯಾಗತರಿಗೆ ಬಡಿಸಿ, ನಕ್ಕು ನಲಿದು ಬರುವ ಭಾವ ಸಂಗಮದ ಕ್ಷಣಗಳು ಸಾಹಿತ್ಯದಲ್ಲಿ ಮಾತ್ರ ಉಳಿದುಕೊಂಡವು.

ಈಗ ಅತಿಥಿ ಸತ್ಕಾರ ಮಾಡಲು ಸಂಬಳದ ಜನರಿದ್ದಾರೆ. ಊಟದ ಸಮಯಕ್ಕೆ ಬಂಧುಗಳು ಬರುತ್ತಾರೆ. ಮಕ್ಕಳನ್ನು ಸಮಾರಂಭಗಳಿಗೆ ಕರೆತರುವ ವಾಡಿಕೆ ಕಡಿಮೆ. ಅವರಿಗೆ ಪರೀಕ್ಷೆ, ತುಂಬ ಓದಲಿಕ್ಕಿದೆ ಎಂಬುದು ಕಾರಣ. ಹತ್ತಿರದಲ್ಲೇ ಇದ್ದರೂ ಮಗಳ ಮಕ್ಕಳನ್ನು ವರ್ಷಗಟ್ಟಲೆಯಿಂದ ನೋಡದ ಅಜ್ಜ, ಅಜ್ಜಿಯರಿದ್ದಾರೆ. ಮೊಮ್ಮಕ್ಕಳು ಬರುವುದಿಲ್ಲ. ಅವರೊಂದಿಗೆ ಇದ್ದು ಕತೆ ಹೇಳಬೇಕಾದ ಹಿರಿಯ ಜೀವಗಳು ವೃದ್ಧಾಶ್ರಮದ ಒಳಗೆ ಶುಷ್ಕ ಕಣ್ಣುಗಳಿಂದ ಬರಡು ಸಾಮ್ರಾಜ್ಯದಲ್ಲೇ ಕನವರಿಕೆ ಮಾಡುತ್ತಿವೆ.

ಮಗು ಕಲಿಯುತ್ತಿರುವ ಇಂಗ್ಲಿಷ್‌ ಭಾಷೆ ಶುದ್ಧವಾದ ಮಾತೃಭಾಷೆಯ ಕೊರಳು ಹಿಸುಕಿದೆ. ಅಪ್ಪ, ಅಮ್ಮ, ಚಿಕ್ಕಮ್ಮ, ಅತ್ತೆ ಮೊದಲಾದ ಮೃದು ಮಧುರವಾದ ಬಾಂಧವ್ಯದ ಜೇನು ತೊಟ್ಟಿಕ್ಕುವ ಪದಗಳನ್ನು ಕೇಳಿ ಮಗುವಿಗೆ ಗೊತ್ತಿಲ್ಲ. ಅಂತಹ ಸಂಬಂಧಿಕರನ್ನು ನೋಡಿ ತಿಳಿದಿಲ್ಲ. ‘ಭಾವ ಸಕ್ಕರೆಯೆಸಳು, ಬಾಂಧವ್ಯ ಹಾಲುಕೆನೆ, ಬೆರೆತರದು ಸವಿ ಸುಖದ ಒಲುಮೆಯೊಸಗೆ, ಭಾವ ಬಡವಾದಾಗ ಎಲ್ಲವೂ ರಸಹೀನ, ಕಾಲವನು ದೂಷಿಸದೆ ತಿದ್ದಿಕೋ ಮನುಜ’ ಎಂಬಂತೆ, ಸಂಬಂಧಗಳನ್ನು ನೆನಪಿಡುವ, ಬಾಂಧವ್ಯವನ್ನು ಬೆಳೆಸುವ, ಉಳಿಸುವ ಮನೋಧರ್ಮವನ್ನು ಮಕ್ಕಳಿಗಾಗಿ ಮತ್ತೆ ಬಿತ್ತನೆ ಮಾಡುವ ಸತ್ಕಾರ್ಯ ನಡೆಯಲೇಬೇಕಾಗಿದೆ.

ಉಳಿದ ಎಲ್ಲ ದೇಶಗಳಂತೆ ಭಾರತದ ಸಂಸ್ಕೃತಿ ಇರುವುದಲ್ಲ. ಕೌಟುಂಬಿಕ ಜೀವನದ ಆತ್ಮೀಯತೆಗೆ ಒಂದು ವ್ಯಾಖ್ಯೆ ಬರೆಯುವುದಾದರೆ ಇಲ್ಲಿರುವವರಿಗೆ ಮಾತ್ರ ಸಾಧ್ಯ. ಬಿದ್ದರೆತ್ತುವರಿಲ್ಲ, ಬೆನ್ನ ಬಳಸುವರಿಲ್ಲ, ನಾನಿದ್ದೇನೆಂಬ ಹಿತರಿಲ್ಲದ ಸಮಾಜವನ್ನು ಸೃಷ್ಟಿಸಿ ನಾವಿಬ್ಬರು, ನಮಗೊಂದು ಮಗು ಎಂಬ ಅರ್ಥವ್ಯಾಪ್ತಿಯನ್ನೂ ದಾಟಿ ಸಂಬಂಧಗಳ ಪರಿಧಿಯೊಳಗೆ ಮಗುವನ್ನು ಕರೆತರುವ ಮೂಲಕ, ಕಳೆದು ಕೊಳ್ಳುತ್ತಿರುವ ಬಂಧುತ್ವ ಸುಖದ ಪುನರುತ್ಥಾನ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT