ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಂತ್ರಸ್ತರ ಸುತ್ತ ಮೇಲಾಟದ ಹುತ್ತ

ಭೀಕರ ಪ್ರಕರಣಗಳಲ್ಲಿ ಸಂತ್ರಸ್ತೆಯಲ್ಲೇ ತಪ್ಪು ಹುಡುಕುವುದರಿಂದ ಹಿಡಿದು ಆರೋಪಿಯನ್ನು ಒಂದು ಸಮುದಾಯದ ನಡುವೆ ನಿಲ್ಲಿಸುವ ವಿಕೃತ ಮನಃಸ್ಥಿತಿಗೆ ಸಮಾಜ ಹೊರಳುವುದೇಕೆ?
Published 21 ಏಪ್ರಿಲ್ 2024, 20:00 IST
Last Updated 21 ಏಪ್ರಿಲ್ 2024, 20:00 IST
ಅಕ್ಷರ ಗಾತ್ರ

ಹುಬ್ಬಳ್ಳಿಯ ಕಾಲೇಜೊಂದರ ಕ್ಯಾಂಪಸ್‌ನಲ್ಲಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯ ಘೋರ ಹತ್ಯೆ ನಡೆದಿರುವುದು ನಮ್ಮ ಸಮಾಜದ ಎರಡು ಕ್ರೂರ ಚಹರೆಗಳನ್ನು ತೋರಿಸುತ್ತದೆ. ಮೊದಲನೆಯದು, ಪಿತೃಪ್ರಧಾನ ಮನಃಸ್ಥಿತಿಯನ್ನು ಮೈಗೂಡಿಸಿಕೊಂಡಿರುವ ಆಧುನಿಕ ಸಮಾಜದಲ್ಲೂ ಮಹಿಳೆಗೆ ಪ್ರೀತಿಯನ್ನು ನಿರಾಕರಿಸುವ ಹಕ್ಕು ಇಲ್ಲದಿರುವುದು. ಹಾಗೊಮ್ಮೆ ನಿರಾಕರಿಸಿದರೂ ಪರಿಸ್ಥಿತಿಯ ವಿಕೋಪಕ್ಕೆ ತುತ್ತಾಗಬೇಕಾಗಿರುವ ವಾಸ್ತವ. ಎರಡನೆಯದು, ದೇಶದ ಭವಿಷ್ಯದ ಬುನಾದಿ ಎಂದು ಭಾವಿಸಲಾಗುವ ಈ ಕಾಲದ ಗಂಡುಮಕ್ಕಳಲ್ಲಿ ಆಳವಾಗಿ ಬೇರೂರಿರುವ ಅಸಹನೆ, ಕ್ರೌರ್ಯ ಮತ್ತು ಹಿಂಸಾಪ್ರವೃತ್ತಿ.

ಹತ್ಯೆಗೀಡಾಗಿರುವ ನತದೃಷ್ಟೆ ನೇಹಾ, ಕ್ರೂರವಾಗಿ ಹತ್ಯೆ ಮಾಡಿರುವ ಫಯಾಜ್‌ ಇಬ್ಬರೂ ಸುಶಿಕ್ಷಿತ ಕುಟುಂಬಗಳ ಸದಸ್ಯರಾಗಿರುವುದು, ಈ ಎರಡೂ ಆಯಾಮಗಳಿಗೆ ಮತ್ತೊಂದು ಮಜಲನ್ನು ಸೃಷ್ಟಿಸುತ್ತದೆ.

ಈ ತ್ರಿಕೋನ ದೃಷ್ಟಿಕೋನಗಳ ನಡುವೆ ನಾವು ಗುರುತಿಸಬೇಕಾಗಿರುವುದು, ಪ್ರಕರಣ ನಡೆದ ಕೂಡಲೇ ಅದನ್ನು ‘ಲವ್‌ ಜಿಹಾದ್‌’ ಎಂದು ಬಣ್ಣಿಸುವ ಮೂಲಕ ಇಡೀ ಪ್ರಕರಣಕ್ಕೆ ರಾಜಕೀಯ ಸ್ವರೂಪ ನೀಡುವ ಮಹತ್ವಾಕಾಂಕ್ಷಿ ರಾಜಕಾರಣ. ಎಂತಹ ಅಮಾನುಷ ಘಟನೆಯಾದರೂ ಸಂತ್ರಸ್ತೆ, ಹಂತಕ ಅಥವಾ ಅತ್ಯಾಚಾರಿಯ ಧಾರ್ಮಿಕ, ಜಾತಿ ಅಸ್ಮಿತೆಯನ್ನಾಧರಿಸಿ ಪ್ರತಿಭಟನೆ ನಡೆಸುವ, ನ್ಯಾಯಕ್ಕಾಗಿ ಆಗ್ರಹಿಸುವ ಒಂದು ಕೆಟ್ಟ ರಾಜಕೀಯ ಪರಂಪರೆಗೆ ಭಾರತೀಯ ಸಮಾಜ ಎಡೆಮಾಡಿಕೊಟ್ಟಿರುವುದು ನೇಹಾ ಪ್ರಕರಣದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಮಥುರಾದಿಂದ ಹುಬ್ಬಳ್ಳಿಯವರೆಗೆ ಸಮಕಾಲೀನ ಭಾರತದ ಚರಿತ್ರೆಯನ್ನು ಗಮನಿಸಿದಾಗ, ಅಮಾಯಕ ಮಹಿಳೆ ಹೀಗೆ ಒಬ್ಬ ವಿಕೃತ ಪುರುಷನ ಅಥವಾ ಮತಾಂಧ-ಪುಂಡ ಗುಂಪಿನ ಕಾಮತೃಷೆಗೆ, ದ್ವೇಷಕ್ಕೆ, ಅಸಹನೆಗೆ ಬಲಿಯಾಗಿರುವ ಪ್ರಕರಣಗಳು ಹೇರಳವಾಗಿ ಕಾಣುತ್ತವೆ.

ಒಂದು ಆರೋಗ್ಯಕರ ಸಮಾಜವನ್ನು ಕಾಡಬೇಕಿರುವ ಪ್ರಶ್ನೆಗಳೆಂದರೆ, ನೇಹಾ ಏಕೆ ಹತ್ಯೆಗೀಡಾಗಿದ್ದಾಳೆ? ಅವಳು ಮಾಡಿದ ಅಪರಾಧವಾದರೂ ಏನು? ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ಯುವತಿ ಏಕೆ ಈ ಬಗೆಯ ಕ್ರೌರ್ಯಕ್ಕೆ ಬಲಿಯಾಗಿದ್ದಾಳೆ? ಏನೂ ಅರಿಯದ ವಯಸ್ಸಲ್ಲದಿದ್ದರೂ ಬದುಕಿಗೆ ಇನ್ನೂ ಕಣ್ತೆರೆಯದ ಹರೆಯದಲ್ಲಿ ಏಕೆ ಹೆಣ್ಣುಮಕ್ಕಳು ವಿಶಾಲ ಸಮಾಜದ ಪುರುಷ ಅಹಮಿಕೆಗೆ ತುತ್ತಾಗುತ್ತಾರೆ? ಇವೆಲ್ಲವೂ ಸಮಾಜಶಾಸ್ತ್ರಜ್ಞರು ಆಳವಾಗಿ ವಿಶ್ಲೇಷಿಸಬೇಕಾದ ವಿಚಾರಗಳು.

‘ನಾಗರಿಕ’ ಎಂದು ಗುರುತಿಸಿಕೊಳ್ಳುವ ಒಂದು ಆಧುನಿಕ, ಸುಶಿಕ್ಷಿತ, ಹಿತವಲಯದ ಸಮಾಜವು ಇಂತಹ ಅಮಾನುಷ ಕೃತ್ಯಕ್ಕೆ ಏಕೆ ಅವಕಾಶ ಕಲ್ಪಿಸುತ್ತದೆ? ನಿರ್ಭಯಾಳಿಂದ ನೇಹಾವರೆಗೂ ಇಂತಹ ಭೀಕರ ಪ್ರಕರಣಗಳು ಸಂಭವಿಸಿದಾಗ ಇದೇ ಸಮಾಜದ ಸಂಯಮ, ಸೌಜನ್ಯ ಮತ್ತು ಸಂವೇದನೆ ಏಕೆ ಮುನ್ನೆಲೆಗೆ ಬರುವುದಿಲ್ಲ? ಸಂತ್ರಸ್ತೆಯಲ್ಲೇ ತಪ್ಪು ಹುಡುಕುವುದರಿಂದ ಹಿಡಿದು ಆರೋಪಿಯನ್ನು ಯಾವುದೋ ಒಂದು ಸಮುದಾಯದ ನಡುವೆ ನಿಲ್ಲಿಸುವ ಕೆಟ್ಟ ಮನಃಸ್ಥಿತಿಗೆ ಸಮಾಜ ಏಕೆ ಹೊರಳುತ್ತದೆ? ಇವೆಲ್ಲವೂ ನಾಗರಿಕರು ಯೋಚಿಸಬೇಕಾದ ವಿಚಾರಗಳು.

ನೇಹಾ, ಸೌಜನ್ಯ, ದಾನಮ್ಮ, ನಿರ್ಭಯಾಳಂತಹ ಅಮಾಯಕರು ಏಕೆ ಸುಲಭದ ತುತ್ತಾಗುತ್ತಾರೆ? ಜಾತಿ, ಅಂತಸ್ತು, ಧರ್ಮದ ಚೌಕಟ್ಟುಗಳನ್ನು ಮೀರಿ ವಿಶಾಲ ಸಮಾಜದ ನಡುವೆ ನಿಂತು ನೋಡಿದಾಗ, ಈ ಮಹಿಳೆಯರ ಸುತ್ತ ನಾವು ಕಟ್ಟಿರುವ ಸಾಂಸ್ಕೃತಿಕ ಬದುಕಿನಲ್ಲಿ ಎದ್ದುಕಾಣುವಂತಹ ಕೆಲವು ಅವಲಕ್ಷಣಗಳನ್ನು ಗುರುತಿಸಲು ಸಾಧ್ಯ. ಮಹಿಳೆಗೆ ಯಾವುದೇ ವಿಚಾರದಲ್ಲಾದರೂ ಆಯ್ಕೆಯ ಸ್ವಾತಂತ್ರ್ಯವನ್ನು ನಿರಾಕರಿಸುವ ಸಾಂಪ್ರದಾಯಿಕ ಮನಃಸ್ಥಿತಿ, ಸಮಾಜದ ಕಟ್ಟುಪಾಡುಗಳನ್ನು ಧಿಕ್ಕರಿಸುವ ಮಹಿಳೆ ಸದಾ ಶಿಕ್ಷಾರ್ಹಳು ಎಂದು ಭಾವಿಸುವ ಪ್ರಾಚೀನ ಮನೋಭಾವ, ತನ್ನಿಚ್ಛೆಯಂತೆ ನಡೆಯಲು ಬಯಸುವ ಮಹಿಳೆಯನ್ನು ಓರೆಗಣ್ಣಿನಿಂದ ನೋಡುವ ಮಡಿವಂತಿಕೆಯ ಧೋರಣೆ ಮತ್ತು ಇವೆಲ್ಲ ಗುಣಗಳನ್ನೂ ನಿಯಂತ್ರಿಸಿ ನಿರ್ದೇಶಿಸುವ ಪ್ರಾಚೀನ ಸಮಾಜದ ಪಿತೃಪ್ರಧಾನ, ಪುರುಷ ಪಾಳೆಗಾರಿಕೆ ಹಾಗೂ ಯಜಮಾನಿಕೆಯ ಸಂಸ್ಕೃತಿಯಂತಹ ಅವಲಕ್ಷಣಗಳು ಕಾಣುತ್ತವೆ.

ಸಮಾಜ ಸುಧಾರಣೆ ಮತ್ತು ಮಹಿಳಾ ಸಬಲೀಕರಣದ ಹಾದಿಯಲ್ಲಿ ಶತಮಾನಗಳನ್ನು ಸವೆಸಿರುವ ಭಾರತೀಯ ಸಮಾಜವು 21ನೇ ಶತಮಾನದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್‌ ಯುಗವನ್ನು ಪ್ರವೇಶಿಸಿದ್ದರೂ ಈ ಅವಲಕ್ಷಣಗಳನ್ನು ತೊಡೆದುಹಾಕಲು ಸಾಧ್ಯವಾಗದಿರುವುದು ನಮ್ಮ ಮುಂದಿನ ಸವಾಲಾಗಬೇಕಿದೆ. ದೇಶದ ರಾಜಕಾರಣವನ್ನು ನಿರ್ದೇಶಿಸುವ ಪುರುಷಾಧಿಪತ್ಯದ ನೆಲೆಗಳಲ್ಲಿ ನೇಹಾ, ದಾನಮ್ಮ, ಸೌಜನ್ಯ ಎಲ್ಲರೂ ವಸ್ತುಗಳಾಗಿ ಕಾಣುತ್ತಾರೆಯೇ ವಿನಾ ಸಂತ್ರಸ್ತ ಜೀವಗಳಾಗಿ ಅಲ್ಲ. ಈ ವಸ್ತುಗಳ ಸುತ್ತ ಕಟ್ಟಲಾಗುವ ನಿರೂಪಣೆಗಳು ಅವುಗಳಿಂದಾಗುವ ರಾಜಕೀಯ ಲಾಭ, ನಷ್ಟದತ್ತ ಗಮನಹರಿಸುತ್ತವೆ. ಹಾಗಾಗಿಯೇ ಸಾಂಸ್ಕೃತಿಕ ನೆಲೆಗಳಲ್ಲಿ ಮಹಿಳೆಗೆ ಸೂಚಿಸಲಾಗುವ ಘನತೆ, ಗೌರವ ಎಲ್ಲವೂ ಆಲಂಕಾರಿಕ ಆಗಿಬಿಡುತ್ತವೆ. ನೇಹಾಳ ಸಾವು ರಾಜಕೀಯ ನಾಯಕರಿಗೆ ಚುನಾವಣಾ ಬಂಡವಾಳ ಆಗುತ್ತದೆ. ಫಯಾಜ್‌ನ ಅಪರಾಧವು ಕಾನೂನು ಸರಪಳಿಗಳಲ್ಲಿ ಮರೆಯಾಗಿಬಿಡುತ್ತದೆ.

ಆದರೆ ಇಂತಹ ಪ್ರಕರಣಗಳ ಹಿಂದಿರುವ ಪುರುಷ ಅಹಮಿಕೆ ಮತ್ತು ಅದನ್ನು ಪೋಷಿಸುವ ಪಿತೃಪ್ರಧಾನ ಪಾಳೆಗಾರಿಕೆ ಮನಃಸ್ಥಿತಿ ಯಥಾಸ್ಥಿತಿಯಲ್ಲಿ ಇರುತ್ತದೆ. ನೇಹಾಳಂತಹವರು ಬಲಿಯಾಗುವುದು ಈ ಸಂಸ್ಕೃತಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT