ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರು ರಾಮಚಂದ್ರಪ್ಪ ಬರಹ: ಪಠ್ಯಗಳಲ್ಲಿ ದೇಶಪ್ರೇಮ ಮತ್ತು ನಾಡಪ್ರೇಮ

ವೃಥಾ ಅಪಪ್ರಚಾರ ಮತ್ತು ವೈಯಕ್ತಿಕ ತೇಜೋವಧೆ ಮಾಡುವುದು ಅಪ್ರಬುದ್ಧತೆಯ ಲಕ್ಷಣ
Last Updated 22 ಜುಲೈ 2022, 19:26 IST
ಅಕ್ಷರ ಗಾತ್ರ

ನನ್ನ ನೇತೃತ್ವದ ಸಮಿತಿಗಳು ನಡೆಸಿದ ಪಠ್ಯ ಪರಿಷ್ಕರಣೆಯಲ್ಲಿ ದೇಶಪ್ರೇಮ ಮತ್ತು ನಾಡಪ್ರೇಮದ ಪಾಠಗಳಿಗೆ ಆದ್ಯತೆ ನೀಡಿಲ್ಲವೆಂದು ಮರುಪರಿಷ್ಕರಣೆ ರೂವಾರಿಗಳು ಆರೋಪಿಸಿದ್ದಾರೆ. ಇತ್ತೀಚೆಗೆ ಬರಹ ಗಾರರಿಗೆ ಬರುತ್ತಿರುವ ಬಹುಪಾಲು ಬೆದರಿಕೆ ಪತ್ರ ಗಳಲ್ಲಿ ಕೂಡ ಈ ಪ್ರಸ್ತಾಪವಿದ್ದು ನನ್ನ ಹೆಸರು ಹೇಳಿ ಬೆದರಿಕೆ ಹಾಕಲಾಗುತ್ತಿದೆ. ಆದರೆ ವಾಸ್ತವ ಬೇರೆಯೇ ಇದೆ. ನಾವು ಪರಿಷ್ಕರಣೆ ಮಾಡಿದಾಗ ದೇಶಪ್ರೇಮ ಮತ್ತು ನಾಡಪ್ರೇಮದ ಪಾಠಗಳಿಗೆ ಸಾಕಷ್ಟು ಆದ್ಯತೆ ನೀಡಿದ್ದೇವೆ.

3 ರಿಂದ 10ನೇ ತರಗತಿಯವರೆಗಿನ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕಗಳಲ್ಲಿ ಒಟ್ಟು 28 ಪಾಠಗಳು ದೇಶಪ್ರೇಮ ಮತ್ತು ನಾಡಪ್ರೇಮಕ್ಕೆ ಸಂಬಂಧಿಸಿವೆ. 3ನೇ ತರಗತಿಯಲ್ಲಿ ಮೂರು (ಸ್ವಾತಂತ್ರ್ಯ ದಿನಾಚರಣೆ, ಈಸೂರು ಸ್ವಗತ, ಪ್ರಾಮಾಣಿಕ ಬಾಲಕ), 4ನೇ ತರಗತಿಯಲ್ಲಿ ನಾಲ್ಕು (ಕನ್ನಡಮ್ಮನ ಹರಕೆ, ವೀರ ಮಾತೆ ಜೀಜಾಬಾಯಿ, ಹುಬ್ಬಳ್ಳಿಯ ಹುತಾತ್ಮ ಬಾಲಕ, ಕನಸುಗಾರ ಕಲಾಂ), 5ನೇ ತರಗತಿಯಲ್ಲಿ ಐದು (ಧೀರ ಸೇನಾನಿ, ಸಂಗೊಳ್ಳಿ ರಾಯಣ್ಣ, ಹುತ್ತರಿ ಹಾಡು, ಸ್ವಾತಂತ್ರ್ಯದ ಹಣತೆ, ಭುವನೇಶ್ವರಿ), 6ನೇ ತರಗತಿಯಲ್ಲಿ ಎರಡು (ಕರ್ನಾಟಕ ಏಕೀಕರಣ, ಕಿತ್ತೂರ ಕೇಸರಿ), 7ನೇ ತರಗತಿಯಲ್ಲಿ ನಾಲ್ಕು (ಮೈಲಾರ ಮಹಾದೇವ, ಸ್ವಾತಂತ್ರ್ಯ ಸ್ವರ್ಗ, ಹಚ್ಚೇವು ಕನ್ನಡದ ದೀಪ, ಬಿಡುಗಡೆಯ ಹಾಡು), 8ನೇ ತರಗತಿಯಲ್ಲಿ ಎರಡು (ಕನ್ನಡಿಗರ ತಾಯಿ, ಕಟ್ಟುವೆವು ನಾವು) 9ನೇ ತರಗತಿಯಲ್ಲಿ ಮೂರು (ಆದರ್ಶ ಶಿಕ್ಷಕ ಸರ್ವಪಲ್ಲಿ ರಾಧಾಕೃಷ್ಣನ್, ಹೊಸಹಾಡು, ಕನ್ನಡ ನಾಡು-ನುಡಿ), 10ನೇ ತರಗತಿಯಲ್ಲಿ ಐದು (ಭಾಗ್ಯಶಿಲ್ಪಿಗಳು, ಸಂಕಲ್ಪಗೀತೆ, ಹಲಗಲಿಯ ಬೇಡರು, ಸ್ವಾಮಿ ವಿವೇಕಾನಂದರ ಚಿಂತನೆಗಳು, ಭಗತ್ ಸಿಂಗ್) ಹೀಗೆ ಒಟ್ಟು 28 ಗದ್ಯ ಪಾಠಗಳು ಕನ್ನಡ ಪ್ರಥಮ ಭಾಷೆ ಪಠ್ಯಗಳಲ್ಲಿವೆ.

ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆ ಪಠ್ಯಗಳಲ್ಲಿ ದೇಶ ಮತ್ತು ನಾಡಪ್ರೇಮದ ಪಾಠಗಳಿವೆ. ಭರತ ಭೂಮಿ ನಮ್ಮ ತಾಯಿ, ಐಕ್ಯಗಾನ, ದೇಶಪ್ರೇಮಿ ಇಕ್ಬಾಲ್, ನನ್ನ ದೇಶ ನನ್ನ ಜನ, ನಿತ್ಯೋತ್ಸವ, ಧ್ವಜರಕ್ಷಣೆ, ದೊಡ್ಡವರ ದಾರಿ, ನಮ್ಮ ರಾಷ್ಟ್ರಧ್ವಜ, ಧೀರಬಾಲಕ ನರೇಂದ್ರ, ಕಟ್ಟುತೇವ ನಾವು, ಗಾಂಧೀಜಿ ಜೀವನ, ಬಂಡೆದ್ದ ಮುಂಡರಗಿ ಭೀಮರಾಯ, ಕರ್ನಾ ಟಕದ ವೀರ ವನಿತೆಯರು ಮುಂತಾದ ಪಾಠಗಳಲ್ಲದೆ ಕನ್ನಡ ನುಡಿಗೆ ಸಂಬಂಧಿಸಿದ ಆರಕ್ಕೂ ಹೆಚ್ಚು ಪಾಠ ಗಳಿವೆ. ಒಟ್ಟು ಇಪ್ಪತ್ತಕ್ಕೂ ಹೆಚ್ಚು ದೇಶಪ್ರೇಮ ಮತ್ತು ನಾಡಪ್ರೇಮದ ಪಾಠಗಳಿವೆ.

ನಮ್ಮ ಪರಿಷ್ಕರಣೆಯ ಒಂದು ಮುಖ್ಯ ವಿಶೇಷ ವೆಂದರೆ, ಬೇರೆ ಭಾಷೆ ಪಠ್ಯಗಳಲ್ಲೂ ದೇಶ ಮತ್ತು ನಾಡು-ನುಡಿ ಪ್ರೇಮದ ಪಾಠಗಳನ್ನು ಅಳವಡಿಸಿದ್ದೇವೆ. ಉರ್ದು ಪಠ್ಯದಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಮರಾಠಿ ಪಠ್ಯದಲ್ಲಿ ಭಾಷಾ ಬಾಂಧವ್ಯ ಕುರಿತ ಪಾಠಗಳನ್ನು ಸೇರಿಸಿದ್ದೇವೆ. ಸಂಸ್ಕೃತದಲ್ಲಿ ಅಕ್ಕಮಹಾದೇವಿ, ಬಸವಣ್ಣ, ತಮಿಳಿನಲ್ಲಿ ಆದಿಕವಿ ಪಂಪ, ಹಿಂದಿಯಲ್ಲಿ ಕರ್ನಾಟಕ ಸಂಸ್ಕೃತಿ ಕುರಿತ ಪಾಠಗಳನ್ನು ಸೇರ್ಪಡೆ ಮಾಡಿದ್ದು ಬೇರೆ ಭಾಷಿಕರು ಕನ್ನಡ ಕುರಿತು ಕಾಳಜಿ ವಹಿಸುವುದಕ್ಕೆ ಪ್ರೇರಣೆ ನೀಡಲಾಗಿದೆ.

ಸಮಾಜ ವಿಜ್ಞಾನ ಪಠ್ಯಗಳಲ್ಲಿ, ದೇಶಕ್ಕಾಗಿ ದುಡಿದ ಅನೇಕರನ್ನು ಕುರಿತ ಪಾಠಗಳಿವೆ. ಮಹಿಳಾ ಸ್ವಾತಂತ್ರ್ಯ ಹೋರಾಟಗಾರರನ್ನು ಕುರಿತ ಹೊಸ ಪಾಠವನ್ನು ನಾವು ಸೇರಿಸಿದ್ದೆವು. ಈ ಪಾಠದಲ್ಲಿ ರಾಣಿ ಅಬ್ಬಕ್ಕ, ಯಶೋಧರಮ್ಮ ದಾಸಪ್ಪ, ಬಳ್ಳಾರಿ ಸಿದ್ದಮ್ಮ ಮುಂತಾದವರ ವಿವರಗಳಿದ್ದವು. ಮರು ಪರಿಷ್ಕರಣೆಯಲ್ಲಿ ಈ ಅಧ್ಯಾಯವನ್ನು ಪೂರ್ಣ ಬಿಡ ಲಾಗಿದೆ. ನಾವು ಸೇರಿಸಿದ್ದ ಸಾವಿತ್ರಿಬಾಯಿ ಫುಲೆ ಮುಂತಾದ ಸಮಾಜ ಸುಧಾರಕಿಯರ ಪಾಠಗಳನ್ನು ಕೈಬಿಡಲಾಗಿದೆ. ಇಂಥವರಿಂದ ನಾವು ದೇಶ ಮತ್ತು ನಾಡಪ್ರೇಮದ ಪ್ರಮಾಣ ಪತ್ರ ಪಡೆಯಬೇಕಿಲ್ಲ. ದೇಶಪ್ರೇಮ ಮತ್ತು ನಾಡಪ್ರೇಮಗಳು ನನ್ನಂಥವರ ಭಾವಕೋಶದ ಅವಿಭಾಜ್ಯ ಭಾಗವಾಗಿವೆ. ಒಂದು ವೇಳೆ ನಾವು ಸೇರಿಸದ ಯಾವುದಾದರೂ ವಿಷಯಗಳಿದ್ದರೆ ಮರುಪರಿಷ್ಕರಣೆಯಲ್ಲಿ ಸಕಾರಾತ್ಮಕವಾಗಿ ಸೇರ್ಪಡೆ ಮಾಡಬೇಕೇ ವಿನಾ ವೃಥಾ ಅಪಪ್ರಚಾರ ಮತ್ತು ವೈಯಕ್ತಿಕ ತೇಜೋವಧೆ ಮಾಡುವುದು ಅಪ್ರಬುದ್ಧತೆಯ ಲಕ್ಷಣ. ನಾನಾಗಲೀ, ನನ್ನ ನೇತೃತ್ವದ ಸಮಿತಿಗಳವರಾಗಲೀ ನಮಗಿಂತ ಹಿಂದಿನ ಪಠ್ಯ ರಚನೆ ಸಮಿತಿಯವರ ಬಗ್ಗೆ ಯಾವತ್ತೂ ಟೀಕೆ ಮಾಡಿಲ್ಲ. ಬದಲಾಗಿ ನಮಗೆ ಕೊಟ್ಟ ಕೆಲಸವನ್ನು ಮಾಡಿದ್ದೇವೆ.

ಪಠ್ಯಕ್ರಮ, ಪಠ್ಯವಸ್ತು, ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣೆಗಳಿಗೆ ಕೆಲವು ನಿರ್ದಿಷ್ಟ ಮಾರ್ಗ ಸೂಚಿಗಳಿರುತ್ತವೆ. ಈ ಮಾರ್ಗಸೂಚಿಗಳನ್ನು ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟುಗಳು ನೀಡಿವೆ. ಸಂವಿಧಾನಾತ್ಮಕ ಆಶಯಗಳನ್ನು ಪರಿ ಪಾಲಿಸಬೇಕೆಂದು ಹೇಳಿವೆ. ಭಾಷಾ ಪಠ್ಯಗಳಲ್ಲಿ ವಸ್ತು ವೈವಿಧ್ಯವನ್ನೂ ಮತ್ತು ಎಲ್ಲ ಪಠ್ಯಗಳಲ್ಲಿ ನಿಖರತೆ ಯನ್ನೂ ಈ ಚೌಕಟ್ಟುಗಳು ಪ್ರತಿಪಾದಿಸುತ್ತವೆ. ಸುರಳಿ ವಿಧಾನವನ್ನು ಅನುಸರಿಸಿ ಪ್ರಾಥಮಿಕ ಹಂತದ ಕೆಲವು ಮುಖ್ಯ ವಿಷಯಗಳನ್ನು ಮತ್ತೆ ಪ್ರೌಢಶಾಲಾ ಹಂತದಲ್ಲೂ ಅಳವಡಿಸಬೇಕೆಂದು ಹೇಳಲಾಗಿದೆ. ಈ ಎಲ್ಲಾ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಪಠ್ಯ ರಚನೆ, ಪರಿಷ್ಕರಣೆಗಳು ನಡೆಯುತ್ತವೆ. ನಮ್ಮ ಪರಿಷ್ಕರಣೆ ಕಾರ್ಯವೂ ಈ ಆಧಾರದಲ್ಲೇ ನಡೆದಿದೆ. ಯಾವು ದಾದರೂ ಪಾಠ ಬಿಟ್ಟಿದ್ದರೆ ಅಥವಾ ಸೇರಿಸಿದ್ದರೆ ಅದಕ್ಕೆ ಸೂಕ್ತ ಕಾರಣಗಳನ್ನು ಲಿಖಿತವಾಗಿ ನೀಡಲಾಗಿದೆ. ಸಾಮಾಜಿಕ ನ್ಯಾಯ, ಲಿಂಗಸಮಾನತೆ, ರಾಷ್ಟ್ರೀಯತೆ– ಪ್ರಾದೇಶಿಕತೆಗಳ ಸಕಾರಾತ್ಮಕ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT