ಮಂಗಳವಾರ, ಜೂನ್ 15, 2021
25 °C
ಆಸ್ಪತ್ರೆಗಳಲ್ಲಿ ರಕ್ತದ ಅಗತ್ಯ ಪೂರೈಸುವ ಸಲುವಾಗಿ ಆರೋಗ್ಯವಂತ ನಾಗರಿಕರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವ ಮೊದಲೇ ರಕ್ತದಾನ ಮಾಡುವ ಬಗ್ಗೆ ಚಿಂತನೆ ಮಾಡಬೇಕು

ಸಂಗತ| ಲಸಿಕೆಗೆ ಮೊದಲಾಗಲಿ ರಕ್ತದಾನ

ಡಾ. ವಿನಯ ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಕಳೆದ ಲಾಕ್‍ಡೌನ್‍ನಲ್ಲಿ ಸರ್ಕಾರವು ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿದಾಗ ದೇಶದಾದ್ಯಂತ ರಕ್ತನಿಧಿಗಳು ರಕ್ತದ ಕೊರತೆಯನ್ನು ಎದುರಿಸಿದ್ದು ಮೊನ್ನೆ ಮೊನ್ನೆಯಂತಿದೆ. ಇದೀಗ ರಕ್ತನಿಧಿಗಳು ಮತ್ತೊಂದು ಬಗೆಯ ಸಂಕಷ್ಟ ಹಾಗೂ ಸವಾಲನ್ನು ಎದುರಿಸುವ ಪ್ರಸಂಗ ಬಂದಿದೆ.

ಜನವರಿ ಹದಿನಾರರಿಂದ ದೇಶದಾದ್ಯಂತ ಕೋವಿಡ್ ಲಸಿಕಾ ಅಭಿಯಾನ ಆರಂಭವಾಯಿ ತಷ್ಟೆ. ಮೊದಲ ಹಂತದಲ್ಲಿ, ಕೊರೊನಾ ಯೋಧರಂತೆ ಕಾರ್ಯನಿರ್ವಹಿಸಿದ ಆರೋಗ್ಯ ಕಾರ್ಯಕರ್ತರು, ಪೊಲೀಸ್‌ ಇಲಾಖೆ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಗೃಹರಕ್ಷಕ ದಳ, ಪ್ರಕೃತಿ ವಿಕೋಪ ನಿರ್ವಹಣೆಯ ಸ್ವಯಂಪ್ರೇರಿತ ಕೆಲಸಗಾರರು ಮೊದಲಾದವರಿಗೆ ಲಸಿಕೆಯನ್ನು ಕೊಡಲಾಯಿತು. ಮಾರ್ಚ್ ಒಂದರಿಂದ ಎರಡನೆಯ ಹಂತದಲ್ಲಿ ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಂದ ಬಳಲುವ ನಲವತ್ತೈದು ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಲಸಿಕೆಯನ್ನು ಕೊಡಲು ಪ್ರಾರಂಭಿಸಿದ್ದಾಯಿತು.

ಏಪ್ರಿಲ್ ಒಂದರಿಂದ ಮೂರನೆಯ ಹಂತದ ಲಸಿಕಾ ಅಭಿಯಾನದಲ್ಲಿ ನಲವತ್ತೈದು ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಿಕೆ ಕಾರ್ಯಕ್ರಮ ಆರಂಭಗೊಂಡಿತು. ಇದೀಗ ಸರ್ಕಾರವು ಮೇ ಒಂದರಿಂದ ನಾಲ್ಕನೆಯ ಹಂತದಲ್ಲಿ ಹದಿನೆಂಟು ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಆಯೋಜಿಸಿದೆ. ಆದರೆ ಯಾವುದೇ ರಕ್ತ ಭಂಡಾರದಲ್ಲಿ ರಕ್ತದಾನಕ್ಕೆ ಒಂದಿಷ್ಟು ನಿಯಮಗಳು ಇರುತ್ತವೆ. ದಾನಿಯು ರಕ್ತದಾನಕ್ಕೆ ಅರ್ಹನೇ ಎಂದು ಪರಿಶೀಲಿಸಿಯೇ ವೈದ್ಯಾಧಿಕಾರಿಯು ಆತನಿಂದ ರಕ್ತವನ್ನು ಸಂಗ್ರಹಿಸು ತ್ತಾರೆ. ವ್ಯಕ್ತಿಯ ವಯಸ್ಸು, ದೇಹದ ತೂಕ, ಹಿಮೊಗ್ಲೋಬಿನ್, ರಕ್ತದೊತ್ತಡ ಮೊದಲಾದ ಅಂಶಗಳನ್ನು ಪರೀಕ್ಷಿಸುವುದರ ಜೊತೆಯಲ್ಲಿಯೇ ಆತ ಯಾವುದಾದರೂ ಸೋಂಕಿನಿಂದ ಬಳಲಿದ್ದನೇ, ಹಚ್ಚೆ (ಟ್ಯಾಟೂ) ಹಾಕಿಸಿಕೊಂಡಿದ್ದನೇ ರಕ್ತ ವರ್ಗಾವಣೆ ಮಾಡಿಸಿಕೊಂಡಿದ್ದನೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನೇ ಮತ್ತು ಯಾವುದಾದರೂ ಕಾಯಿಲೆಗಾಗಿ ಲಸಿಕೆ ಹಾಕಿಸಿ ಕೊಂಡಿದ್ದನೇ ಎಂಬ ಎಲ್ಲ ಮಾಹಿತಿಯನ್ನು ಪಡೆದು, ಅವು ಯಾವುವೂ ಕನಿಷ್ಠ ಈ ಒಂದು ತಿಂಗಳೊಳಗೆ ನಡೆದಿಲ್ಲ ಎನ್ನುವುದನ್ನು ಖಾತರಿ ಮಾಡಿಕೊಂಡ ನಂತರವೇ ರಕ್ತ ಸಂಗ್ರಹಕ್ಕೆ ಮುಂದಾಗುತ್ತಾರೆ.

ಇದೀಗ ಕೋವಿಡ್ ಲಸಿಕೆಯೂ ಆ ಪಟ್ಟಿಯಲ್ಲಿ ಸೇರುತ್ತದೆ. ಅಲ್ಲದೆ, ಕೋವಿಡ್ ಲಸಿಕೆ ಪಡೆದವರಿಂದ ಕಡ್ಡಾಯವಾಗಿ ನಾಲ್ಕು ವಾರಗಳವರೆಗೆ ರಕ್ತ ಸಂಗ್ರಹ ಮಾಡುವಂತಿಲ್ಲ ಎಂದು ರಾಷ್ಟ್ರೀಯ ರಕ್ತ ವರ್ಗಾವಣಾ ಮಂಡಳಿ ಸೂಚಿಸಿದೆ.

ಸಾಮಾನ್ಯವಾಗಿ ರಕ್ತನಿಧಿಗಳು ರಕ್ತ ಸಂಗ್ರಹಕ್ಕಾಗಿ ಹದಿನೆಂಟರಿಂದ ಐವತ್ತು ವರ್ಷದೊಳಗಿನ ಸ್ವಯಂಪ್ರೇರಿತ ರಕ್ತದಾನಿಗಳನ್ನೇ ಅವಲಂಬಿಸಿರು ತ್ತವೆ. ಆದರೆ ಈ ಮೇ ಒಂದರಿಂದ ಈ ಗುಂಪಿನವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಆರಂಭಿಸಿದರೆ, ಮೊದಲ ಚುಚ್ಚುಮದ್ದಿನ ನಂತರ ನಾಲ್ಕು ವಾರಗಳ ಕಾಲ ಅವರು ರಕ್ತದಾನಕ್ಕೆ ಅನರ್ಹರಾಗಿರು ತ್ತಾರೆ. ಎರಡನೆಯ ಚುಚ್ಚುಮದ್ದನ್ನು ನಾಲ್ಕರಿಂದ ಆರು ವಾರಗಳ ಅಂತರದಲ್ಲಿ ಹಾಕಿಸಿಕೊಂಡಾಗ ಅದರ ಮುಂದಿನ ನಾಲ್ಕು ವಾರಗಳ ಕಾಲವೂ ಅವರು ರಕ್ತದಾನಕ್ಕೆ ಅನರ್ಹರಾಗಿರುತ್ತಾರೆ. ಅಂದರೆ, ಮೇ ಮೊದಲ ವಾರದಿಂದ ಸುಮಾರು ಅರವತ್ತು ದಿನಗಳವರೆಗೆ ದೇಶದಾದ್ಯಂತ ಈ ಮಹತ್ವದ ಗುಂಪಿನ ರಕ್ತದಾನಿಗಳು ಯಾವ ಕಾರಣಕ್ಕೂ ರಕ್ತದಾನವನ್ನು ಮಾಡುವಂತಿರುವುದಿಲ್ಲ.

ಹೀಗಾದಾಗ ಮುಂದಿನ ಎರಡು ತಿಂಗಳವರೆಗೆ ದೇಶದ ಎಲ್ಲ ರಕ್ತನಿಧಿಗಳಲ್ಲಿಯೂ ರಕ್ತ ಸಂಗ್ರಹಣಾ ಕಾರ್ಯ ಹೆಚ್ಚು ಕಮ್ಮಿ ಸ್ಥಗಿತಗೊಂಡು ರಕ್ತದ ಕೊರತೆ ಉಂಟಾಗುವ ಸಾಧ್ಯತೆ ಇದೆ. ಈ ಸಮಸ್ಯೆಯ ತೀವ್ರತೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ನಮಗೆ ಈಗ ಉಳಿದಿರುವ ದಾರಿ ಒಂದೇ. ನಾಲ್ಕನೆಯ ಹಂತದ ಲಸಿಕಾ ಅಭಿಯಾನ ಆರಂಭವಾಗುವ ಮೊದಲು ಈ ಮಹತ್ವದ ಗುಂಪಿನ ರಕ್ತದಾನಿಗಳು ರಕ್ತದಾನಕ್ಕೆ ಮುಂದಾಗಬೇಕು. ‘ಮೊದಲು ರಕ್ತದಾನ, ನಂತರ ಕೋವಿಡ್ ಲಸಿಕೆ’ ಎಂಬುದು ಅವರ ಈ ಹೊತ್ತಿನ ಸಂಕಲ್ಪವಾಗಬೇಕು. ಅಂದರೆ ಇಂದಿನಿಂದ ನೀವು ಲಸಿಕೆಗೆ ನೋಂದಣಿ ಮಾಡುವ ದಿನದೊಳಗಾಗಿ ಹತ್ತಿರದ ರಕ್ತನಿಧಿಗೆ ತೆರಳಿ ರಕ್ತದಾನ ಮಾಡಿ. ಆಗ ರಕ್ತನಿಧಿಗಳು ಮುಂದಿನ ನಲವತ್ತು ದಿನಗಳವರೆಗೆ ಸ್ವಲ್ಪ ಮಟ್ಟಿಗೆ ರಕ್ತದ ಸಂಗ್ರಹಣೆಯನ್ನು ನಿರ್ವಹಿಸಬಹುದು.

ಆಸ್ಪತ್ರೆಗಳಲ್ಲಿ ರಕ್ತದ ಅವಶ್ಯಕತೆ ಬಹಳಷ್ಟು ಸಂದರ್ಭಗಳಲ್ಲಿ ಇರುತ್ತದೆ. ಅಪಘಾತ, ಹೆರಿಗೆ, ಶಸ್ತ್ರಚಿಕಿತ್ಸೆ ವೇಳೆ, ಕ್ಯಾನ್ಸರ್ ರೋಗಿಗಳಿಗೆ, ಸುಟ್ಟಗಾಯಗಳ ಚಿಕಿತ್ಸೆಗೆ, ಕೆಲವು ಬಗೆಯ ಜನ್ಮಜಾತ ರಕ್ತಹೀನತೆಯ ಚಿಕಿತ್ಸೆಯಲ್ಲಿ ರಕ್ತ ಅತ್ಯಗತ್ಯ. ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ಆರೋಗ್ಯವಂತ ನಾಗರಿಕರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವ ಮೊದಲೇ ರಕ್ತದಾನ ಮಾಡುವ ಬಗ್ಗೆ ಚಿಂತನೆ ಮಾಡಬೇಕು.

ಅಂತೆಯೇ, ಇದೀಗ ಕೋವಿಡ್ ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ಹಾಕಿಸಿಕೊಂಡು ನಾಲ್ಕು ವಾರಗಳು ಪೂರೈಸಿದ ಅರವತ್ತು ವರ್ಷದೊಳಗಿನ ಇತರರೂ ರಕ್ತನಿಧಿಗಳ ಈ ಬವಣೆಯನ್ನು ಗಮನದಲ್ಲಿ ಇರಿಸಿಕೊಂಡು ಸಹಕರಿಸಿದರೆ ಸಹಸ್ರಾರು ರೋಗಿಗಳಿಗೆ ನೆರವಾದೀತು. ಆರೋಗ್ಯ ಕಾರ್ಯಕರ್ತರು, ಪೊಲೀಸ್‌ ಇಲಾಖೆ ಸಿಬ್ಬಂದಿ ಮೊದಲಾದ ಮೊದಲ ಸಾಲಿನ ಕೊರೊನಾ ಯೋಧರು ರಕ್ತದಾನಕ್ಕೆ ಮುಂದಾಗಬೇಕು ಹಾಗೂ ರಕ್ತನಿಧಿಗಳು ಯಶಸ್ವಿಯಾಗಿ ಕಾರ್ಯ
ನಿರ್ವಹಿಸಲು ಸಹಕರಿಸಬೇಕು.

ಲೇಖಕಿ: ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜು. ರಕ್ತನಿಧಿಯ ವೈದ್ಯಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು