ಬುಧವಾರ, ಆಗಸ್ಟ್ 12, 2020
21 °C
ಗರ್ಭಧಾರಣೆಯ ಸೂಕ್ತ ವಯಸ್ಸಿಗೆ ಸಂಬಂಧಿಸಿದಂತೆ ಸಲಹೆ ಪಡೆಯಲು ಕೇಂದ್ರ ಸರ್ಕಾರ ರಚಿಸಲಿರುವ ಕಾರ್ಯಪಡೆಯು ಚರ್ಚೆಗೆ ಆಸ್ಪದ ನೀಡಿದೆ

ಸಂಗತ | ಗರ್ಭಧಾರಣೆ ಮತ್ತು ಮರಣ ಪ್ರಮಾಣ

ಎನ್.ವಿ.ವಾಸುದೇವ ಶರ್ಮಾ Updated:

ಅಕ್ಷರ ಗಾತ್ರ : | |

Prajavani

‘ಭಾರತದ ಮಹಿಳೆಯರು ತಾಯಂದಿರಾಗಲು ಸೂಕ್ತ ವಯಸ್ಸನ್ನು ಸೂಚಿಸಲು ಕಾರ್ಯಪಡೆಯನ್ನು ನೇಮಿಸಲಾಗುವುದು. ನಮ್ಮ ದೇಶದಲ್ಲಿ ತಾಯಂದಿರು ಪ್ರಸವದ ಸಮಯದಲ್ಲಿ ಮರಣಿಸುವ ಪ್ರಮಾಣವನ್ನು (ಮೆಟರ್ನಲ್‌ ಮಾರ್ಟ್ಯಾಲಿಟಿ ರೇಷಿಯೊ– ಎಂಎಂಆರ್‌) ಕಡಿಮೆ ಮಾಡಲು ಇದು ಅತ್ಯಗತ್ಯ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಸಕ್ತ ಸಾಲಿನ ಬಜೆಟ್‌ ಭಾಷಣದಲ್ಲಿ ಹೇಳಿದ್ದಾರೆ.

ವಿವಿಧ ಸಾಮಾಜಿಕ, ಕೌಟುಂಬಿಕ ಕಟ್ಟುಪಾಡುಗಳಿರುವ ಭಾರತದಲ್ಲಿ ಸಾಮಾನ್ಯವಾಗಿ ತಾಯಂದಿರಾಗುವುದು ವಿವಾಹದ ನಂತರವೇ. ಹೀಗಾಗಿ ಸಚಿವೆಯ ಹೇಳಿಕೆಯು ಚರ್ಚೆಗೆ ಆಸ್ಪದ ನೀಡಿದ್ದುಂಟು. ವಿವಾಹದ ವಯಸ್ಸನ್ನು ಮುಂದೂಡುವ ಅಥವಾ ಕಡಿಮೆ ವಯಸ್ಸಿನಲ್ಲಿ ತಾಯಂದಿರಾಗುವುದನ್ನು ನಿರ್ಬಂಧಿಸುವ ವಿಚಾರಗಳಲ್ಲಿ ಉದ್ದೇಶಿತ ಕಾರ್ಯಪಡೆಯು ಯಾವುದರ ಬಗ್ಗೆ ಸಲಹೆ–ಸೂಚನೆ ನೀಡಲಿದೆ ಎಂಬ ಪ್ರಶ್ನೆ ಮೂಡಿದೆ.

ಇಲ್ಲಿ ಎರಡು ವಿಚಾರಗಳನ್ನು ಗಮನಿಸಬೇಕಿದೆ: ಭಾರತದಲ್ಲಿ ವಿವಾಹದ ವಯಸ್ಸು ಮತ್ತು ಹೆರಿಗೆ ಸಮಯದಲ್ಲಿ ತಾಯಂದಿರ ಮರಣ ಪ್ರಮಾಣ. ಪ್ರತೀ ಮೂರು ವರ್ಷಗಳ ಅವಧಿಯಲ್ಲಿ ನಡೆದ ಪ್ರತೀ ಒಂದು ಲಕ್ಷ ಹೆರಿಗೆಗಳನ್ನು ಪರಿಗಣಿಸಿ, ಈ ಸಮಯದಲ್ಲಿ ಆದ ತಾಯಂದಿರ ಮರಣ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತದೆ.

ಭಾರತದಲ್ಲಿ ತಾಯಂದಿರ ಮರಣ ಪ್ರಮಾಣ 2004-06ರಲ್ಲಿ ಪ್ರತೀ ಲಕ್ಷ ಹೆರಿಗೆಗಳಲ್ಲಿ 254 ಇದ್ದದ್ದು, ಕಳೆದ ಹತ್ತು ವರ್ಷಗಳಲ್ಲಿ ಇಳಿಯುತ್ತಾ ಬಂದಿದೆ. 2015-17ರಲ್ಲಿ 122 ಇದ್ದ ಈ ಪ್ರಮಾಣ, 2016-18ರಲ್ಲಿ 113ಕ್ಕೆ ಇಳಿದಿದೆ ಎಂದು ರಾಷ್ಟ್ರೀಯ ಮಾದರಿ ಸರ್ವೇಕ್ಷಣೆ (ಎನ್.ಎಸ್.ಎಸ್) ತಿಳಿಸಿದೆ. ಆದರೆ, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಂತೆ ನಾವು ರಾಷ್ಟ್ರ ಮಟ್ಟದಲ್ಲಿ 2030ರೊಳಗೆ ತಾಯಂದಿರ ಮರಣ ಪ್ರಮಾಣವನ್ನು 70ಕ್ಕಿಂತಲೂ ಕಡಿಮೆ ಮಾಡಬೇಕಿದೆ. ಭಾರತದಲ್ಲಿ 2017ರಲ್ಲೇ ಈ ಪ್ರಮಾಣ 100ಕ್ಕೆ ಇಳಿಯಬೇಕಿತ್ತು. ಹೀಗಾಗಿ 70ಕ್ಕೆ ಇಳಿಸಬೇಕಿರುವುದು ದೊಡ್ಡ ಸವಾಲು.

ಭಾರತದಲ್ಲಿ ತಾಯಂದಿರ ಸಾವುಗಳು ಹೆಚ್ಚಾಗಿ ಸಂಭವಿಸುತ್ತಿರುವುದು ಉತ್ತರದ ಹತ್ತು ರಾಜ್ಯಗಳಲ್ಲಿ. ಕರ್ನಾಟಕದಲ್ಲಿ ಒಟ್ಟಾರೆ ತಾಯಂದಿರ ಮರಣ ಪ್ರಮಾಣ 92ಕ್ಕೆ ಇಳಿದಿದೆಯಾದರೂ ಕಲಬುರ್ಗಿ, ರಾಯಚೂರು, ಕೊಪ್ಪಳ, ಯಾದಗಿರಿ, ಬೀದರ್, ಬಳ್ಳಾರಿ, ಗದಗ, ವಿಜಯಪುರ, ಬಾಗಲಕೋಟೆ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಾಯಂದಿರು ಮೃತರಾಗುತ್ತಿದ್ದಾರೆ. ಅಪೌಷ್ಟಿಕತೆ, ಸೋಂಕುಗಳು, ಅತ್ಯಧಿಕ ರಕ್ತದೊತ್ತಡ, ಅವೈಜ್ಞಾನಿಕ ಗರ್ಭಪಾತದ ಪ್ರಯತ್ನಗಳು, ಹೆರಿಗೆಗೆ ಸಮರ್ಪಕ ಸೇವೆಯಿಲ್ಲದಿರುವುದು, ಹೆರಿಗೆಯಲ್ಲಿ ರಕ್ತಸ್ರಾವ, ಅದರಿಂದಾಗಿ ಎಕ್ಲಾಂಪ್ಸಿಯಾ (ಬಸಿರುನಂಜು, ಪ್ರಸವಾಪಸ್ಮಾರ) ಇವು ತಾಯಂದಿರ ಮರಣಕ್ಕೆ ಹೆಚ್ಚಿಗೆ ಕಾರಣವಾಗುತ್ತಿವೆ.  ಇವೆಲ್ಲವೂ ತಡೆಗಟ್ಟಬಹುದಾದ ನ್ಯೂನತೆಗಳು. ಸಮುದಾಯಗಳಲ್ಲಿ ಆರೋಗ್ಯ ವ್ಯವಸ್ಥೆಯ ಕುರಿತು ಅಪನಂಬಿಕೆ, ಚಿಕ್ಕವಯಸ್ಸಿನಲ್ಲೇ ಅಥವಾ ತೀರಾ ತಡವಾಗಿ ಗರ್ಭ ಧರಿಸುವುದು ಕೂಡ ತಾಯಂದಿರ ಸಾವಿಗೆ ಮುಖ್ಯ ಕಾರಣಗಳಾಗಿವೆ.

ದೇಶದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳು 18 ವರ್ಷಕ್ಕೆ ಮೊದಲೇ ವಿವಾಹವಾಗಿ ಗರ್ಭ ಧರಿಸುವುದು ಮತ್ತು ಅವರ ವಯಸ್ಸನ್ನು ತಾಯಿ ಕಾರ್ಡಿನಲ್ಲಿ 19 ದಾಟಿದೆ ಎಂದು ದಾಖಲಿಸುವುದರಿಂದ ಈ ಸಂಬಂಧದ ಅಂಕಿಅಂಶದ ವಿಶ್ಲೇಷಣೆಗಳು ದಾರಿ ತಪ್ಪುತ್ತಿವೆ. ಇಲ್ಲಿ ಮುಖ್ಯವಾಗಿ ಆಗಬೇಕಿರುವುದು ಬಾಲ್ಯವಿವಾಹಗಳನ್ನು ತಡೆಯುವುದು ಮತ್ತು 20 ವರ್ಷ ದಾಟುವ ತನಕ ಗರ್ಭಿಣಿ ಆಗಬಾರದು ಎಂದು ದಂಪತಿಗಳಿಗೆ, ಮನೆಯ ಹಿರಿಯರಿಗೆ ಅರಿವು ಮೂಡಿಸುವುದಾಗಿದೆ. ಮಕ್ಕಳನ್ನು ಮಾಡಿಕೊಳ್ಳುವ ವಯಸ್ಸನ್ನು ಮುಂದೆ ಹಾಕಬೇಕೆಂದರೆ ವಿವಾಹಗಳನ್ನೂ ಮುಂದೆ ಹಾಕಬೇಕಾಗುತ್ತದೆ ಎಂಬ ಕಾರಣದಿಂದ ಈ ವಿಚಾರ ಮುಖ್ಯವಾಗಿದೆ.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯ ಅನ್ವಯ ತಾಯಂದಿರ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು, ಇದಕ್ಕೆ ನೇರವಾಗಿ ಸಂಬಂಧಿಸಿದ ಲಿಂಗ ಸಮಾನತೆಯನ್ನು ಸಾಧಿಸಲೇಬೇಕಿದೆ. 15ರಿಂದ 49 ವರ್ಷದೊಳಗಿನ ಸ್ತ್ರೀಯರಿಗೆ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಖಾತರಿಪಡಿಸಬೇಕು. ಪ್ರಮುಖವಾಗಿ ಲೈಂಗಿಕ ಸಂಪರ್ಕವನ್ನು ಒಪ್ಪುವುದು ಅಥವಾ ನಿರಾಕರಿಸುವುದು, ಅವಶ್ಯಕವಾದ ಗರ್ಭಧಾರಣೆ ತಡೆ ಸಾಧನಗಳ ಬಳಕೆಗೆ ನಿರ್ಧಾರ ಹಾಗೂ ಸಂತಾನೋತ್ಪಾದನೆ ಆರೋಗ್ಯ ಲಭ್ಯತೆ ಎಲ್ಲರಿಗೂ ದೊರಕುವಂತೆ ಮಾಡಬೇಕಿದೆ.

ಈ ಹಿನ್ನೆಲೆಯಲ್ಲಿ ಸಚಿವೆ ಸೂಚಿಸಿರುವ ಕಾರ್ಯಪಡೆಗೆ ಮಹತ್ವ ಬರುತ್ತದೆ. ಈ ಕಾರ್ಯಪಡೆಯು ಸ್ತ್ರೀಯರಿಗೆ ವಿವಾಹಯೋಗ್ಯ ವಯಸ್ಸನ್ನು ಹೆಚ್ಚಿಸುವುದು ಅಥವಾ ಗರ್ಭ ಧರಿಸಲು ವಯಸ್ಸನ್ನು ಸೂಚಿಸುವುದಕ್ಕಿಂತಲೂ ಮಾಡಬೇಕಿರುವ ಮಹತ್ತರವಾದ ಕೆಲಸವೆಂದರೆ, ಎಲ್ಲ ಹೆಣ್ಣುಮಕ್ಕಳಿಗೆ ಶಿಕ್ಷಣ ಮತ್ತು ಅದಕ್ಕೆ ಬೇಕಾದ ವಿದ್ಯಾರ್ಥಿ ನಿಲಯಗಳು, ಶಿಷ್ಯವೇತನವೇ ಮೊದಲಾದವುಗಳನ್ನು 18 ವರ್ಷದ ಆಚೆಗೂ ವಿಸ್ತರಿಸುವುದು, ಆರೋಗ್ಯ ಮತ್ತು ಪೌಷ್ಟಿಕಾಂಶ ವ್ಯವಸ್ಥೆ, ಜೀವನ ಕೌಶಲ, ಲೈಂಗಿಕ ಶಿಕ್ಷಣವನ್ನು ಒದಗಿಸಿ, ವಿವಾಹವಾಗುವ ಮತ್ತು ಗರ್ಭ ಧರಿಸುವ ವಯಸ್ಸನ್ನು ತಾವೇ ಮುಂದಕ್ಕೆ ಹಾಕುವ ನಿರ್ಧಾರ ಕೈಗೊಳ್ಳುವ ಅವಕಾಶಗಳನ್ನು ಸೃಷ್ಟಿಸಬೇಕು. ಹೀಗಾದಾಗ, ವಿವಾಹವಾಗಲು ಹೆಣ್ಣಿಗೆ 18 ಮತ್ತು ಗಂಡಿಗೆ 21 ವರ್ಷವಾಗಿರಬೇಕು ಎನ್ನುವ ಈಗಿನ ನಿಯಮವನ್ನು ಬದಲಿಸುವ ಅಗತ್ಯ ಬಾರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.