ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡುವುದು ಸಂವಿಧಾನ, ಸ್ವಹತ್ಯೆಗೆ ಸಮಾನ

ನಾವು ನಿರಾಕರಿಸುವ ಯಾವುದೇ ಗ್ರಂಥದ ಪೂರ್ಣಪಾಠ ನಮಗೆ ಗೊತ್ತಿರಬೇಕು. ನಮ್ಮ ಪ್ರತಿಭಟನೆಯು ಅರಿವು ಮತ್ತು ವಿವೇಕದಿಂದ ಮೂಡಿರಬೇಕು
Last Updated 2 ಸೆಪ್ಟೆಂಬರ್ 2018, 19:33 IST
ಅಕ್ಷರ ಗಾತ್ರ

‘ಸಂವಿಧಾನಕ್ಕೂ ಭಗವದ್ಗೀತೆಗೂ ಸಂಬಂಧವಿದೆ’ (ವಾ.ವಾ., ಆ. 27) ಎಂದು ಮೈಸೂರಿನ ಪಿ.ಜೆ. ರಾಘವೇಂದ್ರ ಹೇಳಿದ್ದಾರೆ. ಇದಕ್ಕೆ ಸಮರ್ಥನೆಯಾಗಿ ‘ಭಾರತ ಸಂವಿಧಾನದ ಮೂಲಪ್ರತಿಯಲ್ಲಿ ಭಾಗ 4ರ ಆರಂಭದಲ್ಲಿ ಗೀತೋಪದೇಶದ ಸನ್ನಿವೇಶದ ಸುಂದರವಾದ ಚಿತ್ರವಿದೆ’ ಎಂದಿದ್ದಾರೆ. ಇದು ನಿಜ. ಆದರೆ ಅರ್ಧಸತ್ಯ. ಸಂವಿಧಾನದ ಮೂಲಪ್ರತಿಯನ್ನು ಪ್ರೇಮ್ ಬಿಹಾರಿ ನಾರಾಯಣ್ ಎನ್ನುವವರು ಸುಂದರವಾದ ಕೈಬರಹದಲ್ಲಿ ಬರೆದರು. ಶಾಂತಿನಿಕೇತನದ ಪ್ರಸಿದ್ಧ ಕಲಾವಿದ ನಂದಲಾಲ್ ಬೋಸ್ ಮತ್ತು ಅವರ ಕೆಲವು ಶಿಷ್ಯಂದಿರು ಪ್ರತಿಯೊಂದು ಭಾಗದ ಆರಂಭದಲ್ಲಿ ಶಾಂತಿನಿಕೇತನ ಶೈಲಿಯಿಂದ ಪ್ರೇರಿತವಾದ ಸುಂದರವಾದ ಚಿತ್ರಗಳನ್ನು ಬಿಡಿಸಿದರು. ಈ ಸರಣಿಯಲ್ಲಿ ಮೊದಲ ಚಿತ್ರ ಮೊಹೆಂಜೊದಾರೊ ನಾಗರಿಕತೆಯನ್ನು ಬಿಂಬಿಸುತ್ತದೆ. ನಂತರ, ವೇದಕಾಲದಿಂದ ಹಿಡಿದು ಸ್ವಾತಂತ್ರ್ಯ ಹೋರಾಟದವರೆಗಿನ ಭಾರತೀಯ ಪರಂಪರೆಯನ್ನು ದರ್ಶಿಸಲಾಗಿದೆ. ಇವುಗಳಲ್ಲಿ ಒಂದು ಗೀತೋಪದೇಶದ ಚಿತ್ರ.

ಜೊತೆಗೆ ರಾಮಾಯಣ, ಮಹಾಭಾರತದ ಸನ್ನಿವೇಶಗಳು, ನಟರಾಜನ ವಿಗ್ರಹ, ಬುದ್ಧ, ಮಹಾವೀರ, ಅಶೋಕ,ವಿಕ್ರಮಾದಿತ್ಯ, ಅಕ್ಬರ್, ಶಿವಾಜಿ, ಗುರುಗೋವಿಂದ್ ಸಿಂಗ್, ಟಿಪ್ಪು ಸುಲ್ತಾನ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ... ಇವರೆಲ್ಲರ ಚಿತ್ರಗಳಿವೆ. ಸ್ವಾತಂತ್ರ್ಯ ಆಂದೋಲನವನ್ನು ಪ್ರತಿಬಿಂಬಿಸುವಲ್ಲಿ ಗಾಂಧಿ, ಸುಭಾಷ್‌ಚಂದ್ರ ಬೋಸ್ ಇವರ ಚಿತ್ರಗಳಿವೆ. ಬಹುಶಃ ಮೂಲಪ್ರತಿಯನ್ನು ಚಿತ್ರಗಳಿಂದ ಅಲಂಕರಿಸಬೇಕು ಎಂದು ಆಗ ಬಯಸಿದವರಲ್ಲಿ, ಇದರಲ್ಲಿರುವ ಒಂದೊಂದೇ ಚಿತ್ರವನ್ನು ಹರಿದು ತೆಗೆದು ಅದನ್ನು ಆಧರಿಸಿ ಸಂವಿಧಾನದ ಉದ್ದೇಶವನ್ನೇ ತಿರುಚುವ ಕೆಲಸವನ್ನು ಮುಂದಿನವರು ಮಾಡಿಯಾರು ಎಂಬ ಕಲ್ಪನೆಯೇ ಇರಲಿಲ್ಲವೇನೋ!

ಗೀತೋಪದೇಶದ ಚಿತ್ರವಿದೆ ಎನ್ನುವ ಕಾರಣಕ್ಕೆ ಸಂವಿಧಾನಕ್ಕೂ ಭಗವದ್ಗೀತೆಗೂ ಸಂಬಂಧ ಏರ್ಪಡುವುದಿಲ್ಲ. ಧಾರ್ಮಿಕ ಗ್ರಂಥಗಳಾಗಲೀ, ಸ್ಮೃತಿ– ಪುರಾಣಗಳಾಗಲೀ ‘ಭಾರತ ಪ್ರಜೆಗಳಾದ ನಾವು’ ‘ನಮಗೆ ನಾವೇ ಕೊಟ್ಟುಕೊಂಡ’ ಸಂವಿಧಾನಗಳಲ್ಲ. ಎಲ್ಲವೂ ಅಪೌರುಷೇಯವಾಗಿ ರಚಿತವಾಗಿ ಜನರ ಮೇಲೆ ಹೇರಲ್ಪಟ್ಟವು. ಆಯಾ ಕಾಲದ ಸಾಮಾಜಿಕ ಸನ್ನಿವೇಶ ಮತ್ತು ರಾಜಕೀಯ ಉದ್ದೇಶಗಳ ಈಡೇರಿಕೆಗಾಗಿ ರಚಿತವಾದವು. ಅವು, ಸಾಮ್ರಾಜ್ಯಶಾಹಿಯ ವಿರುದ್ಧ 90 ವರ್ಷಗಳ ಜನಾಂದೋಲನದ ಫಲವಾಗಿ ಸಿಕ್ಕ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಜಾತಿ, ಮತ, ಲಿಂಗ, ವರ್ಗ ಯಾವುದೇ ತಾರತಮ್ಯವಿಲ್ಲದೇ ಎಲ್ಲರಿಗೂ ಸಮಾನತೆ, ಸಮತೆಯನ್ನು ಒದಗಿಸುವಂತೆ ಪಣತೊಡುವ ಸಂವಿಧಾನ ಹೇಗಾಗುತ್ತವೆ?

ಇಂಥ ಒಂದು ಭಾರತ ಸಂವಿಧಾನದ ಪ್ರತಿಯನ್ನು ಇದೇ ಆಗಸ್ಟ್‌ 9ರಂದು ಒಂದೆರಡು ಸಂಘಟನೆಗಳ ಯುವಕರು ದೆಹಲಿಯ ಜಂತರ್ ಮಂತರ್ ಬಳಿ ಸುಟ್ಟರು. ಒಂದುರೂಪಕವಾಗಿ ಇದನ್ನು ನೋಡುವುದಾದರೆ: ಬಹುಶಃ
ಬೆಂಕಿಯಲ್ಲಿ ನಲುಗುತ್ತಿದ್ದಾಗ ಸಂವಿಧಾನವು ಹೇಳಿರಬೇಕು, ‘ಓ ದೇವರೇ, ಇವರನ್ನು ಕ್ಷಮಿಸು, ಇವರು ಏನು ಮಾಡುತ್ತಿದ್ದಾರೆ ಎಂಬ ಅರಿವು ಇವರಿಗಿಲ್ಲ’. ಈ ಮಾತುಗಳನ್ನು ಹೇಳಿದ್ದು ಜೀಸಸ್‌ ಕ್ರೈಸ್ಟ್‌. ಯಾವ ಜನರ ಉದ್ಧಾರಕ್ಕಾಗಿ ಸಾಮ್ರಾಜ್ಯಶಾಹಿ ಮತ್ತು ಪುರೋಹಿತಶಾಹಿ ಶೋಷಕರ ವಿರುದ್ಧ ಸಾಮಾಜಿಕ ಕ್ರಾಂತಿಯನ್ನು ಮಾಡಿದರೋ ಅದೇ ಜನ, ಶತ್ರುಗಳ ಪಿತೂರಿಗೆ ಗುರಿಯಾಗಿ ಅವರನ್ನು ಶಿಲುಬೆಗೆ ಏರಿಸಿ ಸಾಯಿಸಲು ಕಾರಣರಾದರು. ಕೊನೆಯುಸಿರು ಎಳೆಯುವ ಮುನ್ನ ಜೀಸಸ್ ಈ ಮಾತನ್ನು ಹೇಳಿದ್ದರಂತೆ.

ಸಂವಿಧಾನವನ್ನು ಸುಟ್ಟ ಘಟನೆಯ ಹಿಂದೆ ಕೆಲವುಬಲಪಂಥೀಯ ಸಂಘಟನೆಗಳ ಕೈವಾಡವಿದೆ ಎನ್ನಲಾಗಿದೆ.ಯಾವುದೇ ಪ್ರತಿಭಟನೆ ಮತ್ತು ಇಂಥ ವಿಧ್ವಂಸಕ ಕಾರ್ಯಗಳಿಗೆ ಪ್ರೇರಣೆ ನೀಡುವವರು ಸಾಮಾನ್ಯವಾಗಿ ಹಿಂದಿರು
ತ್ತಾರೆ, ಅಮಾಯಕ ಯುವಜನ ಮಾತ್ರ ಎದುರಿಗೆ ಇರುತ್ತಾರೆ. ಇದರ ಎಲ್ಲಾ ಪರಿಣಾಮಗಳನ್ನು ಎದುರಿಸುವವರು ಇವರೇ, ಪ್ರಚೋದಿಸಿದವರು ವಿದ್ವತ್ಪೂರ್ಣ ಚರ್ಚೆಗಳನ್ನು ಮಾಡುತ್ತಾ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.

ಧಾರ್ಮಿಕ ಗ್ರಂಥಗಳಲ್ಲೇನಿದೆ, ಅವು ಏನನ್ನು ಹೇಳುತ್ತವೆ, ಪ್ರಗತಿಪರ ಸಂವಿಧಾನವನ್ನು ಒಪ್ಪಿಕೊಂಡು ನಡೆಯುತ್ತಿರುವ ಅಧುನಿಕ ಭಾರತದ ಜನಜೀವನಕ್ಕೆ ಅವು ಸಂಬದ್ಧವೇ, ವಿರುದ್ಧವೇ, ಮಾರಕವೇ ಇವು ಯಾವುದರ ಬಗ್ಗೆಯೂ ಸರ್ವೇಸಾಮಾನ್ಯ ಜನರಿಗೆ ಅರಿವು ಇರುವುದಿಲ್ಲ. ಇವರ ಗೌರವದ ಭಾವನೆಗಳು ಅರಿವಿನಿಂದಲ್ಲ, ಅಂಧಶ್ರದ್ಧೆಯಿಂದ ಬಂದವು. ಎಲ್ಲಾ ಗೊತ್ತಿದ್ದು ಬೇಕೆಂದೇ ಜನವಿರೋಧಿ ಭಾವನೆಗಳನ್ನು ಬಡಿದೆಬ್ಬಿಸುವ ಸ್ವಾರ್ಥಿಗಳ ಬಗ್ಗೆ ಹೇಳುತ್ತಿಲ್ಲ. ಅವರ ಮಾತನ್ನು ಕೇಳಿ ಹೋರಾಟಕ್ಕೆ ಇಳಿದು, ಪ್ರಾಣ, ಆಸ್ತಿ, ಭವಿಷ್ಯವನ್ನು ಹಾಳು ಮಾಡಿಕೊಳ್ಳುವ ಯುವಜನರ ಬಗ್ಗೆ ನಾನು ಕಾಳಜಿತೋರುತ್ತಿದ್ದೇನೆ. ಈ ಯುವಜನ ಯಾವ ಜಾತಿ, ಧರ್ಮ, ಪಂಥ, ಪಕ್ಷದವರಾಗಿದ್ದರೂ ಇದು ಅನ್ಯಾಯವೇ.

ಯಾವುದೇ ಗ್ರಂಥವನ್ನು ಸುಡುವುದರಿಂದ ದೇಶದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ಬರುವುದನ್ನು ಬಿಟ್ಟರೆಬೇರೆ ಪ್ರಯೋಜನವಾಗುತ್ತಿಲ್ಲ. ನಾವು ನಿರಾಕರಿಸುವ, ಒಪ್ಪದೇ ಇರುವ (ಸುಡುವ, ಅಲ್ಲ) ಯಾವುದೇ ಗ್ರಂಥದ
ಪೂರ್ಣಪಾಠ ನಮಗೆ ಗೊತ್ತಿರಬೇಕು. ನಮ್ಮ ಪ್ರತಿಭಟನೆಯು ಅರಿವು ಮತ್ತು ವಿವೇಕದಿಂದ ಮೂಡಿರಬೇಕು. ಆಗಲೂ ನೀವು ನಿರಾಕರಿಸಬಹುದು, ಆದರೆ, ಅವುಗಳನ್ನು ಸುಟ್ಟರೆ ಅದನ್ನು ಅಂಧಶ್ರದ್ಧೆಯಿಂದಲಾದರೂ
ಒಪ್ಪಿಕೊಳ್ಳುವ ಜನಸಾಮಾನ್ಯರ ಭಾವನೆಗಳಿಗೆ ನೋವುಂಟಾಗುತ್ತದೆ ಎನ್ನುವುದನ್ನು ಪರಿಗಣಿಸಬೇಕು.

ನಿಮಗೆ ಗೊತ್ತೇ, 1953ರ ಸೆಪ್ಟೆಂಬರ್ 2ರಂದುರಾಜ್ಯಸಭೆಯ ಒಂದು ಗೋಷ್ಠಿಯಲ್ಲಿ ಸ್ವತಃ ಅಂಬೇಡ್ಕರ್‌, ‘ಸಂವಿಧಾನವನ್ನು ಸುಡುವುದರಲ್ಲಿ ನಾನೇ ಮೊದಲಿಗನಾಗುತ್ತೇನೆ’ ಎಂದಿದ್ದರು. ಸಾಮಾಜಿಕ ನ್ಯಾಯ, ಸಮಾನತೆಯ ಜೊತೆಯಲ್ಲಿ ಸಮತೆಯನ್ನು ಕೊಡಲು ಸಾಧ್ಯವಾಗದಿದ್ದರೆ ಈ ಸಂವಿಧಾನ ಇದ್ದೂ ಏನು ಪ್ರಯೋಜನ ಎನ್ನುವ ಮಾತಿಗೆ ಪ್ರಬಲವಾದ ಪ್ರತಿಪಾದನೆಯ ರೂಪದಲ್ಲಿ ಅವರು ಈ ಸಾತ್ವಿಕ ಕೋಪದ ಹೇಳಿಕೆಯನ್ನು ನೀಡಿ
ದ್ದರು (ದಯವಿಟ್ಟು ಇದನ್ನೂ ತಪ್ಪಾಗಿ ಉದ್ಧರಿಸಬೇಡಿ).

ನಮ್ಮ ವೈಜ್ಞಾನಿಕ ಮನೋವೃತ್ತಿ ಆಂದೋಲನದಲ್ಲಿ ನಾವು ಮನುಸ್ಮೃತಿಯ ಯಾವ ಶ್ಲೋಕಗಳಲ್ಲಿ ಅಸ್ಪೃಶ್ಯತೆ, ಹೆಣ್ಣಿನ ವಿರುದ್ಧ ತಾರತಮ್ಯ ಇತ್ಯಾದಿ ಮಾನವ ವಿರೋಧಿ ನೀತಿಗಳನ್ನು ನಿರೂಪಿಸಲಾಗಿದೆಯೋ ಅವುಗಳ ಕನ್ನಡಾನುವಾದವನ್ನು ಶಿಬಿರಾರ್ಥಿಗಳಿಗೆ ಕೊಟ್ಟು ಅಧ್ಯಯನ ಮಾಡಲು ಹೇಳುತ್ತೇವೆ. ಈಗ ‘ಭಾರತ ಸಂವಿಧಾನ: ಅರ್ಥ, ಅರಿವು, ಜಾಗೃತಿ’ ಎಂಬ ಕಾರ್ಯಶಿಬಿರಗಳನ್ನುಯುವಜನರನ್ನು ಉದ್ದೇಶಿಸಿ ಮಾಡುತ್ತಿದ್ದೇವೆ. ಒಪ್ಪಿಕೊಳ್ಳುವುದೋ ತಳ್ಳಿ ಹಾಕುವುದೋ ಅರಿವು ಮತ್ತು ವಿವೇಕದಿಂದಲೇ ಆದಾಗ ಮಾತ್ರ ಜನತಂತ್ರ ಜೀವಂತವಿದೆ ಎನ್ನಬಹುದು. ಈ ಕೆಲಸ ನಿಧಾನ ಎಂದು ಅನ್ನಿಸಬಹುದು.ಆದರೆ ಜನತಂತ್ರ ರಾಷ್ಟ್ರದಲ್ಲಿ ಇದೇ ಸೂಕ್ತವಾದ, ಮಾನವೀಯವಾದ, ಸುಸ್ಥಿರವಾದ ವಿಧಾನ ಎಂದು ಬೇಗ ಅರಿತಷ್ಟೂ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT