ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಪಂಕ್ಚರ್‌ ಫಜೀತಿ!

Last Updated 10 ಜನವರಿ 2020, 20:00 IST
ಅಕ್ಷರ ಗಾತ್ರ

ಪ್ರಭ್ಯಾ ಸೈಕಲ್‌ ಏರಿ ನಮ್ಮ ಮನಿ ಕಡೆಗೆ ಬರೋದನ್ನ ಕಿಡಕಿ ಒಳ್ಗ ನೋಡ್ತಾ ನಿಂತ್ಕೊಂಡಿದ್ದೆ. ಚೂರಿ ಚಿಕ್ಕಣ್ಣ ಚಿತ್ರದ, ‘ಸೈಕಲ್‌ ಮೇಲೆ ಬಂದಾ ನಮ್ಮ ಮೈನರ್‌, ಈ ದಾರಿಗೆಲ್ಲ ನೀನೆ ಏನೊ ಓನರ್‌sss... ಕಾದಾಡದಿರು ನೀ ಡೇಂಜರ್‌...’ ಹಾಡು ಗುನುಗುನಿಸುತ್ತ ಅವನನ್ನ ಎದುರುಗೊಂಡೆ. ಟ್ರಿನ್‌ ಟ್ರಿನ್‌ ಸದ್ದು ಮಾಡ್ತಾ ಕೆಳಗ್‌ ಇಳಿದವನs, ನನ್ನ ಕೈಯ್ಯಾಗ್‌ ಕರಪತ್ರ ಕೊಟ್ಟ. ‘ಏನೋ ಹೊಸಾ ಪ್ರಚಾರ ಕೆಲ್ಸಾ ಸುರು ಹಚ್ಕೊಂಡಂಗ್‌ ಕಾಣಸ್ತದ’ ಎಂದೆ.

‘ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ, ಜನಸಂಖ್ಯೆ ನೋಂದಣಿ ಬಗ್ಗೆ ನಮ್ಮ ಪಕ್ಷ ಮನೆ ಮನೆ ಜನಜಾಗೃತಿ ಕಾರ್ಯಕ್ರಮಾನ ಹಮ್ಮಿಕೊಂಡದ್‌. ಅದ್ಕ ನಿನ್ನಿಂದನ ಶ್ರೀಕಾರ ಹಾಕ್ಬೇಕಂತ ಬಂದೀನಿ’ ಅಂದ.

‘ಶ್ರೀಕಾರ್‌ ಅಂದಕೂಡ್ಲ ಮೊನ್ನೆ ನಮೋ ಸಾಹೇಬ್ರು ಬೆಂಗ್ಳೂರಿಗೆ ಬಂದಾಗ ರಾಜ್ಯದ ಜನರಿಗೆ ಮೂರು ನಾಮಾ ಹಾಕಿ ಹೋಗಿದ್ದು ನೆನ
ಪಾಗ್ತದ ನೋಡಪಾ’ ಎಂದೆ.

‘ಏಯ್‌ ಹಂಗ್ಯಾಕ್‌ ಹೇಳ್ತಿಯೊ ದೀಡ್‌ಪಂಡಿತ್‌. ಹಣೆಗೆ ವಿಭೂತಿ ಧರಿಸಿದ್ದು ನೋಡಿ ಅವ್ರ ಬಗ್ಗೆ ನನಗ್‌ ಭಾಳ್‌ ಅಭಿಮಾನ ಅನಿಸ್ತು’ ಅಂದ.

ಅವನ ‘ನಮೋಭಿಮಾನ’ ಪಂಕ್ಚರ್‌ ಮಾಡ್ಬೇಕಂತ, ‘ಅವ್ರೇನೊ ವಿಭೂತಿ ಧರಿ
ಸಿದ್ದು ಖರೆ. ಆದ್ರ ರಾಜ್ಯದ ಜನರಿಗೆಲ್ಲ ಮೂರು ನಾಮಾ ಹಾಕಿದ್ರಲ್ಲೋ. ಆಡಿಯೋರ
ಪ್ನೋರು ಬಹಿರಂಗ ಸಭೆಯೊಳ್ಗ, ‘ಯಪ್ಪಾ, ಸರ್ಕಾರಕ್ಕ ಬರಬೇಕಾದ ಕೇಂದ್ರದ ರೊಕ್ಕಾನ ದಾನಾ ಮಾಡಿ ಪುಣ್ಯ ಕಟ್ಟಿಕೊ’ ಅಂತ ಜೋಳಿಗೆ ಹಿಡ್ಕೊಂಡು ಪರಿಪರಿಯಾಗಿ ಬೇಡಿಕೊಂಡ್ರೂ ನಮೋ ಕರುಳು ಒಂದಿಷ್ಟೂ ಚುರುಕ್‌ ಅನ್ನಲಿಲ್ಲಲ್ಲೊ. ತಿಲಕವಿಟ್ಟರೆ ಸ್ವರ್ಗವು ಸಿಗದು, ವಿಭೂತಿ ಬಳಿದರೆ ಕೈಲಾಸ ಸಿಗದು ಅಂತ ವೀರಬಾಹು ಹಾಡಿದ್ದು ನೆನಪಾಗ್ತದ ನೋಡ್’ ಎಂದೆ.

‘ಅದೆಲ್ಲ ಕುಟಿಲ ರಾಜಕೀಯ ಇರಬಹುದು. ಈಗ ನಾನು ಬಂದಿದ್ದು ಪೌರತ್ವ... ಅಂತ ಹೇಳುತ್ತಿದ್ದಂತೆ ‘ಸಾಕು ನಿಲ್ಸೊ ನಿನ್ನ ಹೊಸಾ ಪುರಾಣ’ ಎಂದು ಜೋರ್‌ ಮಾಡ್ದೆ.

‘ಏಯ್‌ ಮಳ್ಳ, ನನಗ್‌ ಕಮಲದ ಹೂ, ಕೇಸರಿ ಬಣ್ಣ ಅಂದ್ರ ಆಗಿಬರೋದಿಲ್ಲ ಅಂತ ಗೊತ್ತಿದ್ದೂ ಇಲ್ಲಿಗೆ ಬಂದೀಯಲ್ಲೊ ಭಂಡಾ’ ಎಂದು ಕನಲಿದೆ.

ನನ್ನ ಮಾತನ್ನ ಕಿವಿಮ್ಯಾಗ್‌ ಹಾಕ್ಕೊಳ್ದ, ‘ದೇಶದ್ರೋಹಿಗಳನ್ನ ದೇಶಪ್ರೇಮಿಗಳನ್ನಾಗಿ ಮಾಡುವುದೇ ಈ ಆಂದೋಲನದ ಮುಖ್ಯ ಉದ್ದೇಶ ಅದಪಾ. ದೇಶದಾಗ್‌ ಇರಬೇಕಂದ್ರ ನಾವ್‌ ಹೇಳಿದಂತೆ ಕೇಳ್ಬೇಕು. ಇಲ್ಲಂದ್ರ ನೆಟ್ಟಗಿರಲ್ಲ. ಸ್ವಲ್ಪ ಸಮಾಧಾನದಿಂದ ಕೇಳೋ ಮಳ್ಳ’ ಎಂದು ಜಬರಿಸಿದ.

‘ಏಯ್‌ ಬಿಕನಾಸಿ. ನನ್ನನ್ನ ದೇಶದ್ರೋಹಿಗಳ ಸಾಲಿಗೆ ಸೇರ‍್ಸಾಕ್‌ ಹೊಂಟಿಯಲ್ಲ. ನಾಲಿಗಿ ಬಿಗಿ ಹಿಡಿದು ಮಾತಾಡು. ಇಲ್ಲಂದ್ರ ನೀನೇ ತುಕಡೆ ತುಕಡೆ ಆಗ್ತಿ ನೋಡ್‌’ ಎಂದು ತಿರುಗೇಟು ಕೊಟ್ಟೆ.

ತಮ್ಮ ಹರಿತ (?) ನಾಲಿಗಿ ಸಡಿಲು ಬಿಟ್ಟು ಮಾತನಾಡಿದ್ದು ಕೊಳ್ಳಿಗೆ ಸುತ್ಕೊಳ್ಳೋದು ಗೊತ್ತಾಗಿ ಉಲ್ಟಾ ಹೊಡೆದ ಎಂಎಲ್‌ಎ ಥರಾ, ‘ಏಯ್‌ ಹಂಗಲ್ಲೊ, ಈ ಮೂರೂ ಚಿಂತನೆಗಳು ಯಾವೊಬ್ಬ ಭಾರತೀಯನ ವಿರುದ್ಧ ಇಲ್ಲಪಾ. ಸ್ವಲ್ಪ ಅರ್ಥಾ ಮಾಡ್ಕೊ’ ಎಂದು ಪುಸಲಾಯಿಸಲು ಬಂದ.

‘ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರೆಲ್ಲ ತುಕಡೆ ತುಕಡೆ ಗ್ಯಾಂಗ್‌ ಅಂತ ಶಾಣೆ ಸಾಹೇಬ್ರು ಗಂಟ್ಲಾ ಹರ್ಕೊತಾರ್. ಇನ್ನೊಂದೆಡೆ ನಮೋ ಸಾಹೇಬ್ರು ಜೆಎನ್‌ಯು ಒಳಗಿನ, ಮುಖವಾಡ ಧರಿಸಿದ ಸ್ವಯಂ ಘೋಷಿತ ‘ಹಿಂದೂ ರಕ್ಷಾ ದಳ’ದ ಮುಖೇಡಿಗಳ ಕೃತ್ಯವನ್ನ ಖಂಡಿಸಲಾರದ ಮೌನವ್ರತದ ಮೊರೆ ಹೋಗ್ತಾರ್‌. ಇರಾನ್‌ ಮೇಲಿನ ದಾಳಿ ಬಗ್ಗೆ ಟ್ರಂಪಣ್ಣಗ ಫೋನ್‌ ಹಚ್ಚಾಕ್‌ ಅವ್ರಿಗೆ ವ್ಯಾಳ್ಳೆ ಐತಿ. ಹೆಣ್ಮಕ್ಕಳ ಮೇಲಿನ ಹಲ್ಲೆ ಖಂಡಿಸುವ ಟ್ವೀಟ್‌ ಮಾಡಾಕ್‌ 56 ಇಂಚಿನವರಿಗೆ ಧೈರ್ಯಾನs ಇಲ್ಲ’ ಎಂದೆ.

‘ಆಡಿಯೋರಪ್ನೋರ್‌ ಮಾತಿಗೆ ಬೆಲೆಕೊಟ್ಟು ರೊಕ್ಕಾ ಬಿಡುಗಡೆ ಮಾಡ್ಯಾರ್‌ ಸಮಾಧಾನ ಮಾಡ್ಕೊ’ ಎಂದು ಧಾಟಿ ಬದಲಿಸಿದ.

‘ಕೇಳಿದ್ದು ಒಂದು, ಕೊಟ್ಟಿದ್ದು ಒಂದು. ಎರಡೂ ಸರ್ಕಾರದೊಳಗ್‌ ರೊಕ್ಕಾನs ಇಲ್ಲ. ಬೊಕ್ಕಸಕ್ಕs ತೂತು ಬಿದ್ದಾವ್. ಸಿಎಎ, ಎನ್‌ಪಿಆರ್‌ ಮತ್ತ ಎನ್‌ಆರ್‌ಸಿ ಜಾರಿಗೆ ತರಾಕ್‌ ಸರ್ಕಾರದಾಗ ರೊಕ್ಕ ಅದನ ಇಲ್ಲ ಅನ್ನೋದನ್ನ ಮೊದ್ಲು ನೋಡ್ಕೊಂಡ್‌ ಮಾತಾಡ್ಲಿ’ ಎಂದೆ ಸಿಟ್ಟಿನಿಂದ.

‘ನಿನ್ನ ಮನಸ್‌ ಬದಲ್‌ ಮಾಡ್ಯಾಕ್‌ ಬಂದೀನಲ್ಲ. ನನಗ ನಾನೇ ಚಪ್ಪಲೀಲೆ ಹೊಡ್ಕೊಬೇಕ್‌’ ಎಂದು ಸಿಟ್ಟು ಮಾಡ್ಕೊಂಡು ಎದ್ದು ಹೊರ ಹೋದ. ಸೈಕಲ್‌ ಗಾಲಿಗಳೆರಡೂ ಪಂಕ್ಚರ್‌ ಆಗಿದ್ದು ನೋಡಿ, ‘ಹತ್ತಿರದಾಗ್ ಪಂಕ್ಚರ್‌ ತಿದ್ದವ್ರು ಅದಾರೇನೊ’ ಎಂದ.

‘ಅವ್ರೆಲ್ಲ ಪ್ರತಿಭಟನೆ ಮಾಡಾಕ್‌ ಹೋಗ್ಯಾರ್‌. ಪಂಕ್ಚರ್‌ ಆಗಿದ್ದನ್ನ, ಪಂಕ್ಚರ್‌ ಮಾಡಿದ್ದನ್ನ ಸರಿ ಮಾಡಾಕ್‌ ಪಂಕ್ಚರ್‌ ತಿದ್ದೋರು ಬೇಕು. ಪಂಕ್ಚರ್‌ ಆಗಿರೋ ಆರ್ಥಿಕತೆಯನ್ನ, ಜನರ ಮನಸ್ಸನ್ನ ರಿಪೇರಿ ಮಾಡಾಕ್‌ ಭಾಳ್‌ ಕಷ್ಟ ಅದ ಮಗ್ನ. ದೇಶ ಕಟ್ಟಾಕ್ಕೂ ಪಂಕ್ಚರ್‌ ತಿದ್ದೋರು ಬೇಕು’ ಎಂದೆ.

‘ಥೂ, ಎಲ್ಲಾ ಹಾಳಾಯ್ತು. ಇವತ್ತ ಕನಿಷ್ಠ ಮುನ್ನೂರು ಮನಿಗೆ ಭೆಟ್ಟಿ ಕೊಡಬೇಕಂತ್‌ ಲೆಕ್ಕಾ ಹಾಕಿದ್ದೆ. ಪ್ರಥಮ ಚುಂಬನಂ ದಂತಭಗ್ನಂ ಅನ್ನೊ ಹಂಗ್‌, ನಿನ್ನ ಮನಿಗೆ ಬಂದಾಗs ಸೈಕಲ್‌ ಪಂಕ್ಚರ್‌ ಆಯ್ತಲ್ಲೊ. ನನ್ನ ಎಲ್ಲಾ ಪ್ಲ್ಯಾನ್‌ ಹಳ್ಳಾಹಿಡಿತು’ ಅಂತ ಗೊಣಗುತ್ತ ಸೈಕಲ್‌ ಎಳಕೊಂಡು ಹೊರಟ. ಅದೇ ಹೊತ್ತಿಗೆ ರೇಡಿಯೊದಾಗ್‌ ಮೇಯರ್‌ ಮುತ್ತಣ್ಣ ಚಿತ್ರದ, ‘ಒಂದೇ ನಾಡು..., ಒಂದೇ ಕುಲವು, ಒಂದೇ ದೈವವು... ಒಮ್ಮನದಿಂದ ಎಲ್ಲರೂ ದುಡಿದರೆ ಜಗವನೆ ಗೆಲ್ಲುವೆವು... ಭೇದವ ಅಳಿಸೋಣ, ಸ್ನೇಹವ ಬೆಳೆಸೋಣ’ ಹಾಡು ಕೇಳಿ ಬರಾಕತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT