ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಿಷ್ಣುತೆಯ ಗಾಯ: ಮೈತ್ರಿಯ ಮುಲಾಮು

ಗಾಂಧಿಯಿಂದ ಕೋಮು ಸೌಹಾರ್ದವನ್ನು ಕಲಿಯದಿದ್ದರೆ, ಅಂಬೇಡ್ಕರ್ ನಿಖರವಾಗಿ ಹೇಳಿದಂತೆ ಜಾತಿವಿನಾಶದತ್ತ ಹೆಜ್ಜೆ ಇಡದಿದ್ದರೆ ದೇಶಕ್ಕೆ ನಷ್ಟವೇ ಹೆಚ್ಚು
Last Updated 5 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ದೇಶ ಇಂದು ಅಸಹಿಷ್ಣುತೆಯ ಕೂಪವಾಗಿದೆ. ಅಸಮಾನತೆ ಇರುವ ಸಮಾಜದಲ್ಲಿ ಅಸಹಿಷ್ಣುತೆ ಅಂತಸ್ಥವಾಗಿರುತ್ತದೆ. ಅದಕ್ಕೆ ಚಾರಿತ್ರಿಕ ಕಾರಣಗಳಿವೆ. ಕಾರಣಗಳೇನೇ ಇರಲಿ, ಚರಿತ್ರೆಯನ್ನು ಅಳಿಸಲಾಗುವುದಿಲ್ಲ ಎಂಬ ಸತ್ಯವನ್ನು ನಮ್ಮ ಯುವಜನರು ಮನಗಾಣಬೇಕಾಗಿದೆ. ಅದಕ್ಕೆ ಅಡ್ಡ ಬರುತ್ತಿರುವುದು ನಾನು, ನನ್ನದು, ನನ್ನ ಜಾತಿ, ನನ್ನ ಧರ್ಮ ಎಂಬ ದುರಭಿಮಾನ. ನನ್ನ ಪ್ರಕಾರ ಇದಕ್ಕೆ ಕಾರಣ ಹೊಸ ಪೀಳಿಗೆಗೆ ಪ್ರಾಥಮಿಕ ಹಂತದಲ್ಲಿ ಸರಿಯಾದ ಶಿಕ್ಷಣ ದೊರಕದೇ ಇರುವುದು.

ನಮ್ಮ ಇತಿಹಾಸ, ಸಂಸ್ಕೃತಿ, ಸಾಮಾಜಿಕತೆ ಇವ್ಯಾವುದೂ ಅವರಿಗೆ ಶಿಕ್ಷಣದ ಮುಖಾಂತರ ಸ್ಪಷ್ಟವಾಗಿ ತಿಳಿಯುವುದೇ ಇಲ್ಲ. ಜಾತಿ, ಮೇಲು–ಕೀಳೆಂಬ ಮುದ್ರೆಯೊತ್ತಿದ ಒಂದು ಅನೈತಿಕ ಸಾಮಾಜಿಕ ಪದ್ಧತಿ ಎಂದು, ಅಸ್ಪೃಶ್ಯತೆ ಮನುಷ್ಯ ವಿರೋಧಿಯಾದ ಮಹಾಪಾಪ ಕಾರ್ಯವೆಂದು ಆ ವಯಸ್ಸಿನಲ್ಲಿ ಅವರಿಗೆ ಮನದಟ್ಟಾದರೆ ಮುಂದೆ ಅವರು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸನ್ನದ್ಧರಾಗುತ್ತಾರೆ. ಈಗ ಅವರು ಕಲಿಯುತ್ತಿರುವುದು ಮನೆಯಲ್ಲಿ ತಂದೆ–ತಾಯಿಗಳಿಂದ ಜಾತಿನೀತಿಯ ಕಟ್ಟುಪಾಡುಗಳು ಮತ್ತು ಶಾಲೆಯಲ್ಲಿ ಶಿಕ್ಷಕರಿಂದ ಧರ್ಮಗಳ ಕುರಿತು ಮೇಲ್ಮೈ ತಿಳಿವಳಿಕೆ. ಹಾಗಾಗಿ ಭಾರತೀಯತೆಯ ಸ್ಪಷ್ಟ ಪರಿಕಲ್ಪನೆ ಯುವಜನರಲ್ಲಿ ಬಹುತೇಕರಿಗೆ ಇದ್ದಂತಿಲ್ಲ.

ಅಸಹಿಷ್ಣುತೆಗೆ ಮೂರು ತೆರನಾದ ಕಾರಣಗಳನ್ನು ಗುರುತಿಸಬಹುದು. ಅವು ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕಾರಣಗಳು. ಇತ್ತೀಚೆಗೆ ಉತ್ತರಪ್ರದೇಶದ ಕೌಸಾಂಬಿಯಲ್ಲಿ ಪಶುವೈದ್ಯೆಯಾದ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯ ಮುಗಿದ ನಂತರ ಕುಡಿಯಲು ನೀರು ಕೇಳಿದರು. ಅಲ್ಲಿನ ಸರಪಂಚರು ನೀರು ಕೊಡುವುದಿಲ್ಲ ಎಂದರು ಮತ್ತು ಆಕೆಗೆ ನೀರು ಕೊಡಬೇಡಿ ಎಂದು ಇತರರಿಗೂ ಹೇಳಿದರು. ಕಾರಣ, ಆಕೆ ಅಸ್ಪೃಶ್ಯಳಾಗಿದ್ದುದು. ಕೆಲ ತಿಂಗಳ ಹಿಂದೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಹಳ್ಳಿಯೊಂದರಲ್ಲಿ ದೇವಸ್ಥಾನದ ಬಳಿ ಮೂವರು ದಲಿತ ಯುವಕರು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದರು ಎಂಬ ಕಾರಣದಿಂದ ಸವರ್ಣೀಯರು ಅವರನ್ನು ಥಳಿಸಿದರು, ಅದು ಆ ಮೂವರ ಕೊಲೆಯಲ್ಲಿ ಪರ್ಯವಸಾನವಾಯಿತು. ಇದು ಜಾತಿ ಅಸಹಿಷ್ಣುತೆ ಮತ್ತು ದ್ವೇಷದ ಬರ್ಬರ ಮುಖ.

ಎರಡನೆಯದಾಗಿ, ದಲಿತರು ಮತ್ತು ಹಿಂದುಳಿದವರಿಗೆ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿ ಮತ್ತಿತರ ಸೌಲಭ್ಯಗಳಿರುವುದು ಮತ್ತು ಶೋಷಣೆಯ ವಿರುದ್ಧ ಅವರ ರಕ್ಷಣೆಗಾಗಿ ಇರುವ ಕಾಯ್ದೆಗಳು ಮೇಲ್ವರ್ಗದ ಕೆಂಗಣ್ಣಿಗೆ ಗುರಿಯಾಗಿರುವುದು. ಇದು ರಾಜಕೀಯ ಕಾರಣ. ಜಾತಿವ್ಯವಸ್ಥೆಯ ಕಾರಣದಿಂದ ಈ ಸಮುದಾಯಗಳು ಶತಮಾನಗಳಿಂದಲೂ ಕನಿಷ್ಠ ಮಾನವ ಹಕ್ಕುಗಳಿಂದ ವಂಚಿತವಾಗಿವೆ ಎಂಬುದು ನಮ್ಮ ಯುವ ಜನಾಂಗಕ್ಕೆ ಇನ್ನೂ ಮನವರಿಕೆಯಾಗಿಲ್ಲ. ಈಗಲೂ ಯಾವುದೇ ಕಾಲೇಜು ವಿದ್ಯಾರ್ಥಿಯನ್ನು ಮೀಸಲಾತಿಯ ಬಗ್ಗೆ ಪ್ರಶ್ನೆ ಮಾಡಿದರೆ, ‘ಕಡಿಮೆ ಅಂಕ ಗಳಿಸಿದವರಿಗೆ ಯಾಕೆ ಮೆಡಿಕಲ್, ಎಂಜಿನಿಯರಿಂಗ್ ಸೀಟು ದೊರಕುತ್ತದೆ’ ಎಂಬ ಪೂರ್ವಗ್ರಹವುಳ್ಳ ಬಾಲಿಶ ಉತ್ತರವೇ ಸಿದ್ಧವಾಗಿರುತ್ತದೆ.

ಮೂರನೆಯದಾಗಿ, ಧಾರ್ಮಿಕ ಅಸಹಿಷ್ಣುತೆ ಇನ್ನೂ ಅಪಾಯಕಾರಿಯಾಗಿ ಮುಂದುವರೆದಿರುವುದು. ಅಲ್ಪಸಂಖ್ಯಾತ ಧರ್ಮೀಯರು ನಮ್ಮವರಲ್ಲ, ಅನ್ಯರು ಎನ್ನುವ ಭಾವನೆ ಆಳವಾಗಿ ಬೇರೂರಿರುವುದು. ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಹೇಗೋ, ಯಾವಾಗಲೋ ಬಂದವು. ಅದಕ್ಕೆ ದಾಳಿಕೋರರಷ್ಟೇ ಕಾರಣರಲ್ಲ. ನಮ್ಮಲ್ಲಿರುವ ದೌರ್ಬಲ್ಯ, ಹುಳುಕುಗಳೂ ಕಾರಣವೆಂದು ತಿಳಿದುಕೊಳ್ಳುವ ಸೌಜನ್ಯವನ್ನು ನಾವು ಹೊಂದಿಲ್ಲ. ಜನಾಂಗೀಯವಾಗಿ ಬೇರೆಯಲ್ಲದ ಅವರು ಹಿಂದೆಂದೋ ನಮ್ಮ ಪೂರ್ವಿಕರ ಒಡಹುಟ್ಟೋ ಅಥವಾ ಸಂಬಂಧಿಕರೋ ಆಗಿದ್ದಿರಬಹುದು. ಹಸಿವಿನಿಂದಲೋ, ಅವಮಾನದಿಂದಲೋ ಹೊರಗೆ ಹೋಗಿರಬಹುದಾದ ಸಾಧ್ಯತೆಯೂ ಇದೆ ಎಂದು ತಿಳಿದುಕೊಂಡರೆ ನಮ್ಮ ಮನಸ್ಸಿನಲ್ಲಿ ಅವರಿಗೂ ಒಂದಿಷ್ಟು ಜಾಗ ಸಿಗುತ್ತದೆ. ಊರು ಮತ್ತು ರಸ್ತೆಗಳ ಹೆಸರು ಬದಲಾವಣೆಯಿಂದ ಇತಿಹಾಸದ ಚಕ್ರ ಹಿಂದಕ್ಕೆ ಉರುಳಲಾರದು.

ದುರದೃಷ್ಟವಶಾತ್ ಈ ದೇಶದಲ್ಲಿ ಗಾಂಧಿಯನ್ನು ದ್ವೇಷಿಸುವ ಒಂದು ವರ್ಗ ಮೊದಲಿನಿಂದಲೂ ಇದೆ. ಅಂಬೇಡ್ಕರ್ ಅವರನ್ನು ದ್ವೇಷಿಸುವ ಒಂದು ವರ್ಗ ಪ್ರಬಲವಾಗಿ ಬೆಳೆಯುತ್ತಿದೆ, ಸಂವಿಧಾನವನ್ನು ಸುಡುವ ಮೂಲಕ ಅದು ವ್ಯಕ್ತವಾಗಿದೆ. ಇವರಿಬ್ಬರನ್ನೂ ದ್ವೇಷಿಸುವ ಒಂದು ರಾಜಕೀಯ ಪಕ್ಷವೇ ಇದೆ. ಇದು ಬಹಳ ಅಪಾಯಕಾರಿಯಾದ ಬೆಳವಣಿಗೆ. ಇದರ ಪರಿಣಾಮವಾಗಿಯೇ ಧಾರ್ಮಿಕ ಉಗ್ರವಾದ ತನ್ನ ಕುರೂಪತೆಯನ್ನು ಮೆರೆಯುತ್ತಿದೆ. ಕೊಲ್ಲುವುದು ಮತ್ತು ಗಡಿಪಾರು ಮಾಡುವುದೇ ಅವರ ಅಸ್ತ್ರಗಳಾಗಿವೆ. ಗಾಂಧಿ ಮತ್ತು ಅಂಬೇಡ್ಕರ್ ಅವರ ಬೇರೆ ಕೊಡುಗೆಗಳು ಒತ್ತಟ್ಟಿಗಿರಲಿ, ಗಾಂಧಿಯಿಂದ ಕೋಮು ಸೌಹಾರ್ದವನ್ನು ಕಲಿಯದಿದ್ದರೆ, ಅಂಬೇಡ್ಕರ್ ನಿಖರವಾಗಿ ಹೇಳಿದಂತೆ ಜಾತಿ ವಿನಾಶದತ್ತ ಹೆಜ್ಜೆ ಇಡದಿದ್ದರೆ ಈ ದೇಶಕ್ಕೆ ನಷ್ಟವೇ ಹೆಚ್ಚು.

ಎರಡನೆಯ ಮಹಾಯುದ್ಧದ ನಂತರ ದೇಶವನ್ನು ಕಟ್ಟಲು ಶಿಲ್ಪಿಗಳು, ಗುತ್ತಿಗೆದಾರರಿಗಿಂತಲೂ ಸಹಿಷ್ಣುತೆಯ ಅಗತ್ಯವಿದೆ ಎಂದು ಇ.ಎಂ. ಫಾರ್ಸ್ಟರ್ ಒತ್ತಿ ಹೇಳುತ್ತಾನೆ. ಸಹಿಷ್ಣುತೆ ಒಂದು ನಕಾರಾತ್ಮಕ ಮೊದ್ದು ಗುಣ. ಸಹಿಸಿಕೊಳ್ಳುವುದು ಎಂದರೆ ಸುಮ್ಮನೆ ಇದ್ದುಬಿಡುವುದು. ತೊಂದರೆ ಕೊಡದೆ ಇರುವುದು, ಆದರೂ ಅದರ ಅಗತ್ಯವಿದೆ ಎಂದು ಹೇಳುತ್ತಾನೆ. ಯೇಸು ಹೇಳಿದಂತೆ ನೆರೆಯವರನ್ನು ಪ್ರೀತಿಸುವುದು ಕಷ್ಟಸಾಧ್ಯ. ಪ್ರೀತಿಯು ಖಾಸಗಿ ಬದುಕಿನಲ್ಲಿ ಅತ್ಯಂತ ಪ್ರಭಾವಿ ಚೋದಕ, ಸಾರ್ವಜನಿಕ ಬದುಕಿನಲ್ಲಿ ಅಲ್ಲ. ಸಾರ್ವಜನಿಕ ಬದುಕಿನ ಸ್ವಾಸ್ಥ್ಯಕ್ಕೆ ಸಹಿಷ್ಣುತೆಗಿಂತಲೂ ಉತ್ತಮ ಸಕಾರಾತ್ಮಕ ಪರಿಹಾರವನ್ನು ನೀಡಿದವನು ಬುದ್ಧ. ಅದು ಮೈತ್ರಿ. ಮೈತ್ರಿಯೆಂದರೆ ಸುಮ್ಮನಿರುವುದು, ಸಹಿಸಿಕೊಳ್ಳುವುದು ಅಲ್ಲ, ಪ್ರಯತ್ನಪೂರ್ವಕವಾಗಿ ಕರುಣೆ ತೋರುವುದು, ಸಹಾಯಹಸ್ತ ಚಾಚುವುದು, ಸ್ನೇಹದಿಂದಿರುವುದು. ಅಂತಹ ಮೈತ್ರಿಯನ್ನು (loving kindness) ಬೆಳೆಸಿಕೊಳ್ಳುವುದೇ ಉಳಿದಿರುವ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT