ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಭವನ ತೆರೆಯಲಿ ಬೆಳಕು ಹರಿಯಲಿ

ಬೇರೆ ಬೇರೆ ಹೆಸರಿನಲ್ಲಿರುವ ಸಮುದಾಯ ಭವನಗಳನ್ನು ಸರಿಯಾಗಿ ನಿರ್ವಹಿಸಿ, ಅವು ಸದ್ಬಳಕೆ ಆಗುವಂತೆ ನೋಡಿಕೊಳ್ಳುವ ಹ
Last Updated 11 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಳಕೆಯಾಗದೆ ಇರುವ ಸಾವಿರಕ್ಕೂ ಹೆಚ್ಚು ಅಂಬೇಡ್ಕರ್ ಭವನಗಳನ್ನು ಗ್ರಂಥಾಲಯಗಳನ್ನಾಗಿ ಪರಿವರ್ತಿಸುವುದಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನಸಭಾ ಅಧಿವೇಶನದಲ್ಲಿ ಹೇಳಿದ್ದಾರೆ.

ಬೇರೆ ಬೇರೆ ಸಮುದಾಯಗಳಿಗೆ ಪ್ರತ್ಯೇಕ ಭವನಗಳನ್ನು ನಿರ್ಮಿಸುವುದರ ಬದಲು ಎಲ್ಲ ಹಣವನ್ನು ಒಟ್ಟು ಸೇರಿಸಿ ಒಂದು ದೊಡ್ಡ ಭವನ ನಿರ್ಮಿಸುವುದು ಸೂಕ್ತ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಇದೇ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭವನಗಳ ನಿರ್ಮಾಣದ ಹಿಂದಿರುವ ಮಹತ್ವದ ಆಶಯ ಬೇರೆಯೇ ಇದೆ. ಅದನ್ನು ನಾವು ಮನಗಾಣಬೇಕಿದೆ.

ತಳ ಸಮುದಾಯಗಳ ಜನರು ಸಭೆ– ಸಮಾರಂಭ, ಕೌಟುಂಬಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಹಾಗೂ ನೈಸರ್ಗಿಕ ವಿಕೋಪಗಳಿಂದ ತೊಂದರೆ ಉಂಟಾದಾಗ ಆಶ್ರಯ ನೀಡಲು ಸೂರು ಬೇಕು ಎಂಬ ಉದ್ದೇಶದಿಂದ ಅಂಬೇಡ್ಕರ್ ಭವನದೊಂದಿಗೆ ವಾಲ್ಮೀಕಿ ಭವನ, ಆದಿ ಜಾಂಬವ ಸಮುದಾಯ ಭವನ, ಭಜಂತ್ರಿ ಸಮುದಾಯ ಭವನ, ಸವಿತಾ ಸಮುದಾಯ ಭವನ... ಹೀಗೆ ಬೇರೆ ಬೇರೆ ಹೆಸರಿನಲ್ಲಿ ಭವನಗಳನ್ನು ವಿವಿಧ ಇಲಾಖೆಗಳ ವತಿಯಿಂದ ನಿರ್ಮಿಸಲಾಗಿದೆ. ಈ ಕಟ್ಟಡಗಳು ಆ ಸಮುದಾಯದ ಜನರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುತ್ತವೆ.

ರಾಜ್ಯದಲ್ಲಿ 5,963 ಗ್ರಾಮ ಪಂಚಾಯಿತಿಗಳಿವೆ. ಇವುಗಳ ವ್ಯಾಪ್ತಿಯಲ್ಲಿ ಸುಮಾರು 3.60 ಲಕ್ಷ ಭವನಗಳನ್ನು ಕಟ್ಟಲಾಗಿದೆ. ಸಮರ್ಪಕ ಉಸ್ತುವಾರಿ ಇಲ್ಲದೆ ಇವುಗಳಲ್ಲಿ ಕೆಲವು ಬಾಗಿಲು ಮುಚ್ಚಿವೆ ಎನ್ನುವ ಕಾರಣಕ್ಕೆ ಅವುಗಳನ್ನು ಬೇರೆ ಉದ್ದೇಶಕ್ಕೆ ಹಸ್ತಾಂತರಿಸುವುದು ಸರಿಯಾದ ಕ್ರಮವಲ್ಲ. ಪಂಚಾಯಿತಿ ಮೂಲಕ ನಡೆಯುವ ಬಹಳಷ್ಟು ವಾಚನಾಲಯಗಳು ಬಾಗಿಲು ಮುಚ್ಚಿವೆ. ಇವುಗಳ ಆರಂಭಕ್ಕೆ ಸಚಿವರು ಮೊದಲು ಗಮನ ಕೊಡಬೇಕು.

ಒಂದು ನಿರ್ದಿಷ್ಟ ಸಮುದಾಯದ ಜನರು ಸೇರಿ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರಿ ತಮ್ಮ ಸಮುದಾಯದ ಬಳಕೆಗೆ ಭವನ ನಿರ್ಮಿಸಲು ಅನುಮತಿ ಪಡೆಯುತ್ತಾರೆ. ಆಸಕ್ತಿಯಿಂದ ಕಟ್ಟಡ ನಿರ್ಮಿಸುತ್ತಾರೆ. ಉದ್ಘಾಟನೆ ವೈಭವದಿಂದ ನಡೆಯುತ್ತದೆ. ಸಮುದಾಯದಲ್ಲಿ ಬಲಿಷ್ಠರಾದ ವ್ಯಕ್ತಿ ಅಥವಾ ಜನಪ್ರತಿನಿಧಿಗಳ ಆಪ್ತರು ಭವನಕ್ಕೆ ಕೀಲಿ ಜಡಿದು ಅಕ್ರಮವಾಗಿ ತಮ್ಮ ಸ್ವಾಧೀನದಲ್ಲಿ ಇಟ್ಟುಕೊಳ್ಳುವಂತಹ ನಿದರ್ಶನಗಳೂ ಇವೆ. ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲ್ಲೂಕು ವ್ಯಾಪ್ತಿಯ ಘಟಪ್ರಭಾ ನದಿಯಲ್ಲಿ ಪ್ರತಿವರ್ಷ ಪ್ರವಾಹದ ಆತಂಕ ಉಂಟಾಗುತ್ತದೆ. ನದಿಯ ದಂಡೆಗುಂಟ ವಾಸವಾಗಿರುವ ಹಿಂದುಳಿದ ಸಮುದಾಯದವರು ತಮ್ಮ ತಮ್ಮ ಸಮುದಾಯ ಭವನಗಳಲ್ಲಿ ಆಶ್ರಯ ಪಡೆಯುತ್ತಾರೆ. ಈ ಭವನಗಳು ಇಲ್ಲದಿದ್ದರೆ ತಮ್ಮ ಬದುಕು ಬೀದಿಪಾಲಾಗುತ್ತಿತ್ತು ಎಂದು ಪರಿಚಿತರೊಬ್ಬರು ಹೇಳಿದ ಮಾತು ಈಗ ನೆನಪಾಗುತ್ತದೆ.

ಸಮುದಾಯ ಭವನಗಳ ಉಸ್ತುವಾರಿಗೆ ಸರಿಯಾದ ವ್ಯವಸ್ಥೆ ಮಾಡುವ ಅಗತ್ಯವಿದೆ. ನೀರು, ಉತ್ತಮ ಆಸನ, ಫ್ಯಾನು ಮತ್ತು ಶೌಚಾಲಯ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಸಂಬಂಧಿಸಿದ ಇಲಾಖೆ ಗಮನಹರಿಸುವುದು ಅವಶ್ಯ. ಭವನ ಕಟ್ಟುವಾಗ ನಿವೇಶನಗಳ ಆಯ್ಕೆ ಕೂಡ ಮುಖ್ಯವಾದದ್ದು. ದೂರದ ಪ್ರದೇಶದಲ್ಲಿ ಜನರಿಗೆ ನಡೆದು ಹೋಗಲು ಕೂಡ ರಸ್ತೆ ಇಲ್ಲದ ಸ್ಥಳಗಳಲ್ಲಿ ಭವನಗಳನ್ನು ನಿರ್ಮಿಸಿದ ಉದಾಹರಣೆಗಳಿವೆ. ಭವನಗಳನ್ನು ನಿರ್ಮಿಸುವುದು ಜನಪ್ರತಿನಿಧಿಗಳಿಗೆ ಬಹಳ ಖುಷಿಯ ಸಂಗತಿ. ಕಟ್ಟಡ ನಿರ್ಮಾಣವಾದರೆ, ತಮ್ಮ ಅವಧಿಯಲ್ಲಿ ಮಾಡಿದ ಸಾಧನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅದರ ಸಮರ್ಪಕ ನಿರ್ವಹಣೆಗೆ ವ್ಯವಸ್ಥೆ ಮಾಡುವುದಿಲ್ಲ ಎಂಬ ಟೀಕೆಗಳಿವೆ.

ಕಾರ್ಪೊರೇಟ್ ಕಂಪನಿಗಳು ಕಟ್ಟಡ ಕಟ್ಟುವಾಗ ಅನುಸರಿಸುವ ಶಿಸ್ತನ್ನು ಸರ್ಕಾರ ಅಳವಡಿಸಿಕೊಳ್ಳುವುದು ಅವಶ್ಯವಿದೆ. ಕಾರ್ಪೊರೇಟ್ ಕಂಪನಿಯು ಒಂದು ಕಟ್ಟಡ ನಿರ್ಮಿಸುವ ಪೂರ್ವದಲ್ಲಿ ಅದರ ಅವಶ್ಯಕತೆ, ಸೂಕ್ತ ನಿವೇಶನ, ಕಟ್ಟಡದ ವಿನ್ಯಾಸ, ಬಜೆಟ್, ನಿರ್ಮಾಣದ ಕಾಲಾವಧಿ, ನಿರ್ಮಾಣದ ನಂತರ ಸಮರ್ಪಕ ಉಸ್ತುವಾರಿ ಮತ್ತು ಕಟ್ಟಡದಿಂದ ಪಡೆಯಬಹುದಾದ ಪ್ರಯೋಜನಗಳ ಬಗ್ಗೆ ವಿಸ್ತೃತ ವರದಿ ಸಿದ್ಧಪಡಿಸುತ್ತದೆ, ಸಂಸ್ಥೆಯ ಸಭೆಗಳಲ್ಲಿ ಚರ್ಚೆ ಮಾಡಲಾಗುತ್ತದೆ. ಗುತ್ತಿಗೆದಾರರ ಆಯ್ಕೆಯ ವಿಷಯದಲ್ಲಿಯೂ ಬಹಳಷ್ಟು ಕಾಳಜಿ ವಹಿಸಲಾಗುತ್ತದೆ.

ಕೋವಿಡ್ ಸಂಕಷ್ಟದ ದಿನಗಳಲ್ಲಿ ನಗರಗಳಿಂದ ಹುಟ್ಟೂರಿಗೆ ಮರಳಿ ಬಂದ ಹಿಂದುಳಿದ ಸಮುದಾಯದ ಕುಟುಂಬಗಳನ್ನು ಯಾರೂ ಮನೆಯೊಳಗೆ ಬಿಟ್ಟುಕೊಳ್ಳದಿದ್ದಾಗ ಅಂಬೇಡ್ಕರ್ ಭವನಗಳೇ ಆಶ್ರಯ ನೀಡಿ ಪೊರೆದದ್ದನ್ನು ಮರೆಯಲಿಕ್ಕಾಗದು.
ಇಂತಹ ಭವನಗಳನ್ನು ಸರಿಯಾಗಿ ನಿರ್ವಹಿಸಿ, ಈ ಜನರ ಆತ್ಮಗೌರವವನ್ನು ಸದಾ ಕಾಪಾಡುವಂತೆ ಅವುಗಳನ್ನು ರಕ್ಷಿಸಬೇಕು. ಬಾಗಿಲು ಮುಚ್ಚುವುದು ಆ ಸಮುದಾಯಕ್ಕೆ ಮಾಡುವ ಅಪಮಾನದಂತೆ ಕಾಣಿಸುತ್ತದೆ. ಭವನಗಳು ಬರೀ ಇಟ್ಟಿಗೆಗಳ ಕೊಠಡಿಗಳೆಂದು ಭಾವಿಸಬಾರದು. ಅವು ಆಯಾ ವರ್ಗದ ಜನರ ಕಷ್ಟಕ್ಕೆ ಸೂರಾಗುವ ಸೌಧಗಳು. ಮುಖ್ಯವಾಗಿ ಅವರ ಅಸ್ಮಿತೆಯ ಸಂಕೇತಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT