ಗುತ್ತಿಗೆ ನೌಕರರ ಸಮಸ್ಯೆ: ಎಚ್‌ಡಿಕೆಗೆ ಪ್ರಕಾಶ್ ರೈ, ದೇವನೂರು ಪತ್ರ

7
ಹಿರೇಮಠ, ದೊರೆಸ್ವಾಮಿ, ಪ್ರಕಾಶ್ ರೈ, ದೇವನೂರು ಅವರಿಂದ ಮನವಿ

ಗುತ್ತಿಗೆ ನೌಕರರ ಸಮಸ್ಯೆ: ಎಚ್‌ಡಿಕೆಗೆ ಪ್ರಕಾಶ್ ರೈ, ದೇವನೂರು ಪತ್ರ

Published:
Updated:

ಬೆಂಗಳೂರು: ಗುತ್ತಿಗೆ ನೌಕರರ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿ ನಟ ಪ್ರಕಾಶ್ ರೈ, ಸಾಹಿತಿ ದೇವನೂರು ಮಹಾದೇವ, ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್‌.ಆರ್‌. ಹಿರೇಮಠ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಸಾವಿರಾರು ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುತ್ತಿರುವುದು ಮತ್ತು ಸುಮಾರು 30 ಸಾವಿರ ಗುತ್ತಿಗೆ ನೌಕರರಿಗೆ ಹಲವು ತಿಂಗಳುಗಳಿಂದ ವೇತನ ನೀಡದಿರುವುದರ ವಿರುದ್ಧ ಮಂಗಳವಾರ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲೇ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಬರೆಯಲಾಗಿದೆ.

ಪತ್ರದ ಪೂರ್ಣ ಪಾಠ

‘ನಾಡಿನ ಪ್ರಮುಖ ಸಮಸ್ಯೆಗಳಲ್ಲೊಂದಾದ ಉದ್ಯೋಗ ಸೃಷ್ಟಿಯ ಕೊರತೆ ಹಾಗೂ ದೀರ್ಘಕಾಲದಿಂದ ಲಕ್ಷಾಂತರ ಯುವಜನರನ್ನು ಕಾಡುತ್ತಿರುವ ಗುತ್ತಿಗೆ ಸಮಸ್ಯೆಯನ್ನು ಬಗೆಹರಿಸುವ ತಮ್ಮ ಕಾಳಜಿಯನ್ನು ಸ್ವಾಗತಿಸುತ್ತಾ, ಶಾಶ್ವತ ಪಡಿಹಾರದೆಡೆಗೆ ಸಾಗಲು ಬೇಕಾದ ಕ್ರಮ ತೆಗೆದುಕೊಳ್ಳಲು ಕೋರಿ ಮನವಿ ಮಾಡುತ್ತಿದ್ದೇವೆ.

ಯಾವುದೇ ನಾಡು ಅಭಿವೃದ್ಧಿಯೆಡೆಗೆ ಸಾಗಲು, ದುಡಿಯುವ ಕೈಗಳಿಗೆ ಸುಭದ್ರ ಉದ್ಯೋಗವನ್ನು ಕಲ್ಪಿಸುವುದೇ ಪ್ರಧಾನವಾದ ಮಾರ್ಗವೆಂಬುದು ನಿಮಗೆ ಗೊತ್ತಿದೆ. ಹೀಗಾಗಿಯೇ ಕೃಷಿ ಬಿಕ್ಕಟ್ಟಿನ ತಕ್ಷಣದ ಸಮಸ್ಯೆಯನ್ನು ಬಗೆಹರಿಸಲು ಸಾಲಮನ್ನಾದಂತಹ ಒಂದು ಕ್ರಮದ ಜೊತೆ ಜೊತೆಗೇ ಉದ್ಯೋಗ ಸೃಷ್ಟಿಯ ಕಡೆಗೂ ತಮ್ಮ ಗಮನ ಹರಿದಿದೆ. ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮಾತ್ರವಲ್ಲದೇ ಈ ಬಾರಿಯ ಬಜೆಟ್‌ನಲ್ಲೂ ಉದ್ಯೋಗ ಸೃಷ್ಟಿ ಮಾಡಬಲ್ಲ ಹಲವು ಕ್ರಮಗಳನ್ನು ಘೋಷಿಸಿರುವುದು ಸ್ವಾಗತಾರ್ಹವಾದ ಬೆಳವಣಿಗೆಯಾಗಿದೆ. ಅದೇ ರೀತಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಗುತ್ತಿಗೆ ಆಧಾರದಲ್ಲಿ (ಒಳಗುತ್ತಿಗೆ, ಹೊರಗುತ್ತಿಗೆ, ಅತಿಥಿ, ಗೌರವಧನ ಇತ್ಯಾದಿ ಹೆಸರುಗಳ ತಾತ್ಕಾಲಿಕ ಉದ್ಯೋಗಗಳಲ್ಲಿ) ಕೆಲಸ ಮಾಡುತ್ತಿರುವವರು ಅತೀವ ಸಮಸ್ಯೆಗೆ ಗುರಿಯಾಗಿದ್ದಾರೆ. ಇದರ ಕುರಿತೂ ತಾವು ಮಾತನಾಡಿರುವುದು ಮತ್ತು ಚುನಾವಣಾಪೂರ್ವದಲ್ಲಿ ನೀಡಿದ ಪ್ರಣಾಳಿಕೆ ಜಾಹೀರಾತುಗಳಲ್ಲಿ ಉಲ್ಲೇಖಿಸಿರುವುದನ್ನು ಗಮನಿಸಿದ್ದೇವೆ.

ಉದ್ಯೋಗ ಸೃಷ್ಟಿಯ ಕುರಿತು ಮತ್ತು ಗುತ್ತಿಗೆ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಮ್ಮ ಕಾಳಜಿಯನ್ನು ನಾವು ಅಭಿನಂದಿಸುತ್ತೇವೆ. ಅದೇ ಸಂದರ್ಭದಲ್ಲಿ ನಮ್ಮ ಕೆಲವು ಕಾಳಜಿ ಹಾಗೂ ಆತಂಕವನ್ನು ತಮ್ಮ ಮುಂದಿಡಲು ಬಯಸುತ್ತೇವೆ. ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಇದುವರೆಗೆ ವಿವಿಧ ಸರ್ಕಾರಗಳ ವತಿಯಿಂದ ತೆಗೆದುಕೊಂಡಿರುವ ಕ್ರಮಗಳು ಒಂದೋ ವಿಫಲವಾಗಿವೆ; ಇಲ್ಲವೇ ಪೂರ್ಣ ರೀತಿಯಲ್ಲಿ ಸಾಫಲ್ಯ ಕಂಡಿಲ್ಲ. ಕೇಂದ್ರ ಸರ್ಕಾರವೂ ಸಹ ಈ ನಿಟ್ಟಿನಲ್ಲಿ ಘೋಷಿಸಿರುವ ಹಲವಾರು ಯೋಜನೆಗಳು ವಿಫಲಗೊಂಡಿರುವುದನ್ನು ಹಲವಾರು ವರದಿಗಳು ಸಾಬೀತುಪಡಿಸಿವೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಸೃಷ್ಟಿಯ ಯೋಜನೆ, ಅನುಷ್ಠಾನದ ಉಸ್ತುವಾರಿ, ಆಡಿಟ್ ಮತ್ತು ಸಮೀಕ್ಷೆಯ ಜೊತೆಗೆ ಯೋಜನೆಗಳ ತಿದ್ದುಪಡಿ ಇವೆಲ್ಲವೂ ವ್ಯವಸ್ಥಿತವಾಗಿ ನಡೆಯಬೇಕಿದೆ.

ಅದೇ ರೀತಿ ಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ಕಲ್ಪಿಸುವ ವಿಚಾರದಲ್ಲೂ ಕೆಲವು ಕಾನೂನು ತೊಡಕುಗಳನ್ನು ಅಧಿಕಾರಸ್ಥರು ಮುಂದಿಡುತ್ತಾ ಬಂದಿದ್ದಾರೆ. ಆದರೆ, ಕಾನೂನಿನ ಚೌಕಟ್ಟಿನಲ್ಲೇ ಈ ಭದ್ರತೆಯನ್ನು ಕಲ್ಪಿಸಿದ ಕೆಲವು ನಿರ್ದಿಷ್ಟ ನಿದರ್ಶಗಳು ಇವೆ. ಇವೆರಡೂ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಾ ಬಂದಿರುವ ‘ಉದ್ಯೋಗಕ್ಕಾಗಿ ಯುವಜನರು’ ವೇದಿಕೆಯು, ಚುನಾವಣೆಗೆ ಮುಂಚೆ ‘ಉದ್ಯೋಗಕ್ಕೇ ಓಟು, ಉದ್ಯೋಗ ಭದ್ರತೆಗೇ ಓಟು’ ಎಂಬ ಆಂದೋಲನವನ್ನು ಹಮ್ಮಿಕೊಂಡಿತ್ತು. ತಾವೂ ಸಹ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದೀರಿ. ಆ ಆಂದೋಲನವು ಇವೆರಡೂ ವಿಚಾರಗಳ ಕುರಿತು ರಚನಾತ್ಮಕವಾದ ಕೆಲಸವನ್ನು ಮಾಡುತ್ತಿದ್ದು, ನಾವು ಆ ಆಂದೋಲನದ ಆಶಯಗಳ ಜೊತೆಗೆ ಇದ್ದೇವೆ.

ಉದ್ಯೋಗ ಸೃಷ್ಟಿಯ ಕೆಲಸವು ವ್ಯವಸ್ಥಿತವಾಗಿ ನಡೆಯಬೇಕೆಂದರೆ ಮತ್ತು ಗುತ್ತಿಗೆ ನೌಕರರ ಸಮಸ್ಯೆಗಳು ಈಡೇರಬೇಕೆಂದರೆ ಇಂತಹ ಆಂದೋಲನಗಳ ಸಲಹೆ, ಪ್ರಸ್ತಾಪಗಳನ್ನು ಪರಿಗಣಿಸಲು, ಅದರ ಪ್ರತಿನಿಧಿಗಳು ಹಾಗೂ ತಜ್ಞರ ಜೊತೆ ಸರ್ಕಾರವು ಸಂವಾದ ನಡೆಸಬೇಕೆಂದು ಕೋರುತ್ತೇವೆ. ನಿಜವಾದ ಅಭಿವೃದ್ಧಿಯ ಕಡೆಗೆ ನಾಡನ್ನು ಕೊಂಡೊಯ್ಯುವ ಮತ್ತು ಯುವ ಜನರಿಗೆ ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ಅವಕಾಶ ಕಲ್ಪಿಸುವ ಈ ಅಂಶಗಳನ್ನು ನಿಮ್ಮ ಸರ್ಕಾರದ ಪ್ರಧಾನ ಆದ್ಯತೆಗಳನ್ನಾಗಿ ತೆಗೆದುಕೊಳ್ಳಬೇಕೆಂದು ನಾವು ಕೋರುತ್ತೇವೆ.

ತಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ನಂತರವೂ ಕೆಲವು ಇಲಾಖೆಗಳಲ್ಲಿ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುತ್ತಿರುವುದು ಹಾಗೂ ಹಲವಾರು ತಿಂಗಳುಗಳಿಂದ ವೇತನ ಪಾವತಿಸದೇ ಗುತ್ತಿಗೆ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ನಿರುದ್ಯೋಗಿ ಪದವೀಧರರೊಬ್ಬರು ನಿಮಗೆ ಪತ್ರ ಬರೆದು, ವಿಡಿಯೋ ಸಂದೇಶ ಕಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವೆಲ್ಲವೂ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೆಕಾದ ತುರ್ತನ್ನು ತೋರುತ್ತಿವೆ. ಹಾಗಾಗಿ ತಾವು ಕೂಡಲೇ ಇದಕ್ಕೆ ಗಮನಹರಿಸಬೇಕೆಂದು ಮನವಿ ಮಾಡುತ್ತೇವೆ’.

ಬರಹ ಇಷ್ಟವಾಯಿತೆ?

 • 70

  Happy
 • 5

  Amused
 • 1

  Sad
 • 3

  Frustrated
 • 3

  Angry

Comments:

0 comments

Write the first review for this !