ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಾಂಸ್ಕೃತಿಕ ಪ್ರಶಸ್ತಿ ಮಾರುಕಟ್ಟೆ ಸರಕಲ್ಲ

Published 29 ಜುಲೈ 2023, 1:08 IST
Last Updated 29 ಜುಲೈ 2023, 1:08 IST
ಅಕ್ಷರ ಗಾತ್ರ

ದೇಶದ ಬಹುತೇಕ ಅಕಾಡೆಮಿಗಳು ತಮ್ಮ ಮೂಲ ಅಂತಃಸತ್ವವನ್ನು ಕಳೆದುಕೊಂಡು ಬಹಳ ವರ್ಷಗಳೇ ಕಳೆದಿವೆ. ಸರ್ಕಾರಗಳ ಕೃಪಾಪೋಷಿತ ಸ್ಥಾವರಗಳಾಗಿ ಪರಿವರ್ತಿತವಾಗಿರುವ ಎಲ್ಲ ಸಾಂಸ್ಕೃತಿಕ, ಸಾಹಿತ್ಯಕ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನಷ್ಟೇ ಅಲ್ಲದೆ ಮೂಲ ಉದ್ದೇಶವನ್ನೇ ಮರೆತಿರುವುದು ದುರಂತ ವಾಸ್ತವ.

ಅವುಗಳ ಮೇಲೆ ಇನ್ನಷ್ಟು ನಿಯಂತ್ರಣ ಸಾಧಿಸುವ ರೀತಿಯಲ್ಲಿ ಸಾರಿಗೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಇತ್ತೀಚಿನ ವರದಿಯಲ್ಲಿ ಕೆಲವು ಶಿಫಾರಸುಗಳನ್ನು ಮಾಡಿದೆ. ‘ರಾಷ್ಟ್ರೀಯ ಅಕಾಡೆಮಿಗಳು ಮತ್ತು ಇತರ ಸಾಂಸ್ಕೃತಿಕ ಸಂಸ್ಥೆಗಳ ಕಾರ್ಯನಿರ್ವಹಣೆ’ ಶೀರ್ಷಿಕೆಯಡಿ ಕೆಲವು ಸಲಹೆಗಳನ್ನು ಮುಂದಿಟ್ಟಿದೆ. ಈ ವರದಿಯ ಶಿಫಾರಸುಗಳು ಇಡೀ ಸಾಂಸ್ಕೃತಿಕ ಕ್ಷೇತ್ರವನ್ನು ಸರ್ಕಾರದ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಉದ್ದೇಶವನ್ನು ಸ್ಪಷ್ಟವಾಗಿ ಸೂಚಿಸುವಂತಿವೆ. ಇನ್ನು ಮುಂದೆ ಪ್ರಶಸ್ತಿಗಳನ್ನು ಸ್ವೀಕರಿಸುವವರು ‘ಸಾಂಸ್ಕೃತಿಕ ಪ್ರಶಸ್ತಿಗಳನ್ನು ರಾಜಕೀಯ ಕಾರಣಕ್ಕಾಗಿ ಮರಳಿಸುವುದಿಲ್ಲ ಎಂದು ಪ್ರಶಸ್ತಿ ಸ್ವೀಕರಿಸುವುದಕ್ಕೂ ಮೊದಲೇ ಹೇಳಿಕೆ ನೀಡಬೇಕು’ ಎಂದು ಪ್ರಶಸ್ತಿ ಸ್ವೀಕರಿಸುವ ಸಾಂಸ್ಕೃತಿಕ ಚಿಂತಕರ ಮೇಲೆ ನಿರ್ಬಂಧ ಹೇರುವಂತೆ ಈ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇದು ಸಾಂಸ್ಕೃತಿಕ ನಿರಂಕುಶಾಧಿಕಾರಕ್ಕೆ ಎಡೆ ಮಾಡಿಕೊಡುವ ಒಂದು ಮಾದರಿಯಾಗಿದೆ.

ಪ್ರಶಸ್ತಿ ಭಾಜನರು ಯಾವುದೋ ಒಂದು ಸನ್ನಿವೇಶದಲ್ಲಿ ಪ್ರಭುತ್ವದ ನೀತಿಯನ್ನು, ನಿಷ್ಕ್ರಿಯತೆಯನ್ನು ವಿರೋಧಿಸಿ, ತಮಗೆ ನೀಡಲಾದ ಪ್ರಶಸ್ತಿಯನ್ನು ಹಿಂದಿರುಗಿಸುವುದು ಒಂದು ಪ್ರಜಾಸತ್ತಾತ್ಮಕ ಧೋರಣೆ. ಈ ಸಾಂಕೇತಿಕ ಪ್ರತಿರೋಧವನ್ನು ರಾಜಕೀಯ ಚೌಕಟ್ಟಿನೊಳಗಿಟ್ಟು ನೋಡದೆ, ಪ್ರಶಸ್ತಿ ಭಾಜನರು ಪ್ರತಿನಿಧಿಸುವ ಸಾಮಾನ್ಯ ಜನತೆಯ ನೆಲೆಯಲ್ಲಿ ಹಾಗೂ ಈ ಜನತೆಯ ಸಾಂವಿಧಾನಿಕ ಆಶೋತ್ತರಗಳ ಚೌಕಟ್ಟಿನೊಳಗಿಟ್ಟು ನೋಡಬೇಕೇ ವಿನಾ, ಆಡಳಿತಾರೂಢ ಸರ್ಕಾರದ ಅಧಿಕಾರ ವಲಯದಲ್ಲಿಟ್ಟು ನೋಡಕೂಡದು.

ಯಾವುದೇ ಒಂದು ಸಾಹಿತ್ಯ ಕೃತಿ ಪ್ರಶಸ್ತಿಗೆ ಅರ್ಹತೆ ಪಡೆಯುವುದು ಆ ಕೃತಿಯೊಳಗಿನ ಸಾಮಾಜಿಕ ಸಂವೇದನೆ, ಸೂಕ್ಷ್ಮತೆ ಮತ್ತು ಅಭಿವ್ಯಕ್ತಿಗಳಿಗಾಗಿಯೇ ವಿನಾ ಆಳುವವರನ್ನು ಸಂತೃಪ್ತಿಗೊಳಿಸುವ ಕಾರಣಕ್ಕಾಗಿ ಅಲ್ಲ. ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಅಕಾಡೆಮಿಗಳ ಸ್ವಾಯತ್ತತೆಯೂ ಈ ಕಾರಣಕ್ಕಾಗಿಯೇ ಮುಖ್ಯವಾಗುತ್ತದೆ. ಈ ಅಕಾಡೆಮಿಗಳು ನೀಡುವ ಪ್ರಶಸ್ತಿಗಳು ರಾಜಕೀಯಪ್ರೇರಿತವಾದಷ್ಟೂ ಪ್ರಶಸ್ತಿಗೆ ಭಾಜನವಾಗುವ ಸಾಹಿತ್ಯಕ ಕೃತಿಗಳ ಆಂತರಿಕ ಮೌಲ್ಯ ಕ್ಷೀಣಿಸುತ್ತಲೇ ಹೋಗುತ್ತದೆ. ಹಾಗೆಯೇ ಸಮಕಾಲೀನ ರಾಜಕೀಯ ಬೆಳವಣಿಗೆಗಳನ್ನು ವಿರೋಧಿಸುವ ಸಾಂವಿಧಾನಿಕ ಹಕ್ಕನ್ನು ಸಾಹಿತ್ಯಕ ವಲಯದಿಂದ ಕಸಿದುಕೊಳ್ಳುವ ಪ್ರಯತ್ನಗಳೂ ಈ ಮೌಲ್ಯ ನಾಶಕ್ಕೆ ಕಾರಣವಾಗುತ್ತವೆ.

ಸಂಸದೀಯ ಸಮಿತಿಯ ಶಿಫಾರಸುಗಳು ಈ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಒಂದು ಪ್ರಯತ್ನ. ಯಾವುದೋ ಒಂದು ಅಸಾಂವಿಧಾನಿಕ ಪ್ರಕರಣವನ್ನು ವಿರೋಧಿಸಿ, ಸಂವಿಧಾನವಿರೋಧಿ ಆಡಳಿತ ನೀತಿಗಳನ್ನು ವಿರೋಧಿಸಿ ತಮಗೆ ನೀಡಲಾದ ಸಾಂಸ್ಕೃತಿಕ ಪ್ರಶಸ್ತಿಯನ್ನು ಹಿಂದಿರುಗಿಸುವುದು ಸಹ ಪ್ರಶಸ್ತಿ ಭಾಜನ ಸಾಹಿತಿಯ ಅಥವಾ ಸಾಂಸ್ಕೃತಿಕ ಚಿಂತಕರ ಸಾಂವಿಧಾನಿಕ ಹಕ್ಕು, ಅಲ್ಲವೇ? ಪ್ರಶಸ್ತಿಗಳಿಗೆ ರಾಜಕೀಯ ಸಂಬಂಧ ಇರಕೂಡದು ಎಂದಾದರೆ, ಪ್ರಶಸ್ತಿಯನ್ನು ವಿರೋಧಿಸುವ ಸಾತ್ವಿಕ ಪ್ರತಿರೋಧಕ್ಕೂ ರಾಜಕೀಯ ನಂಟನ್ನು ಬೆರೆಸಕೂಡದು ಅಲ್ಲವೇ? ಪ್ರಶಸ್ತಿಗೆ ಅರ್ಹರಾದ ಅಥವಾ ಆಯ್ಕೆಯಾದ ಲೇಖಕರಿಂದ, ಸಾಹಿತಿಗಳಿಂದ ‘ಹಿಂದಿರುಗಿಸುವುದಿಲ್ಲ’ ಎಂದು  ಮುಚ್ಚಳಿಕೆ ಬರೆಸಿಕೊಂಡು ಪ್ರಶಸ್ತಿ ನೀಡುವುದು ರಾಜನಿಷ್ಠೆಯನ್ನು ಪ್ರತಿಪಾದಿಸುವ, ರಾಜಪ್ರಭುತ್ವದ ಕಾಲದಲ್ಲಿದ್ದ ಆಸ್ಥಾನ ಕವಿಗಳಿಗೆ ಅನ್ವಯಿಸಲಾಗುತ್ತಿದ್ದ ನಿಯಮ ಎನ್ನುವುದನ್ನು ನಾವು ಮರೆಯಕೂಡದು.

ಕಲೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪೋಷಿಸುವ ನೈತಿಕ ಜವಾಬ್ದಾರಿ ಇರುವ ಸರ್ಕಾರಗಳು ಈ ವಲಯಗಳನ್ನು ಸ್ವಾಯತ್ತ ಸಂಸ್ಥೆಗಳಂತೆ ಪರಿಗಣಿಸಿ ರಾಜಕೀಯ ಹಸ್ತಕ್ಷೇಪದಿಂದ ಹೊರತಾಗಿಸುವುದು ವರ್ತಮಾನದ ತುರ್ತು. ಹಾಗೆಯೇ ದೇಶದ ಸೃಜನಶೀಲ ಸಾಹಿತ್ಯ ಅಥವಾ ಕಲೆಯನ್ನು ಪೋಷಿಸಲು ಬಯಸುವ ಒಂದು ಸ್ವಸ್ಥ ಸಮಾಜವನ್ನು ಸಾಕಾರಗೊಳಿಸುವ ಜವಾಬ್ದಾರಿಯೂ ಸರ್ಕಾರಗಳ ಮೇಲಿರುತ್ತದೆ. ಸ್ವಾಯತ್ತತೆಗಾಗಿ ಹೋರಾಡಬೇಕಾದ ಜವಾಬ್ದಾರಿ ಸಾಹಿತ್ಯ ವಲಯದ ಮೇಲಿರುವುದನ್ನೂ ಅಲ್ಲಗಳೆಯಲಾಗುವುದಿಲ್ಲ. ಈ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸರ್ಕಾರಗಳ ವಿರುದ್ಧ ಅಥವಾ ದೇಶದ ಬಹುಸಾಂಸ್ಕೃತಿಕ ನೆಲೆಗಳನ್ನು ನಾಶಪಡಿಸುವ ಆಡಳಿತ ವ್ಯವಸ್ಥೆಯ ವಿರುದ್ಧ ತಮ್ಮ ಪ್ರತಿರೋಧ ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬ ಸೃಜನಶೀಲ ಸಾಹಿತಿ, ಕಲಾವಿದರಿಗೂ ಇರುತ್ತದೆ. ಪ್ರಶಸ್ತಿ ಹಿಂದಿರುಗಿಸುವುದೂ ಇದೇ ಪ್ರತಿರೋಧದ ಒಂದು ಸಾತ್ವಿಕ ಆಯಾಮವಾಗಿರುತ್ತದೆ.

ಈ ಸಾಹಿತ್ಯಕ ಅಭಿವ್ಯಕ್ತಿಯನ್ನೇ ಕಸಿದುಕೊಳ್ಳುವ ಪ್ರಯತ್ನಗಳನ್ನು ದೇಶದ ಸಮಸ್ತ ಸಾಹಿತ್ಯಕ, ಸಾಂಸ್ಕೃತಿಕ ವಲಯ ವಿರೋಧಿಸಬೇಕಿದೆ. ಈ ದಿಸೆಯಲ್ಲಿ ಸಂಸದೀಯ ಸಮಿತಿಯ ಶಿಫಾರಸುಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕಿದೆ. ಹಾಗೊಮ್ಮೆ ಇದೇ ನೀತಿ ಜಾರಿಯಾಗುವುದೇ ಆದರೆ ಸೃಜನಶೀಲತೆಗೆ, ಸಂವಿಧಾನಕ್ಕೆ ಬದ್ಧವಾಗಿರುವ ಸಾಹಿತಿ– ಕಲಾವಿದರು, ಸಾಂಸ್ಕೃತಿಕ ಚಿಂತಕರು ಪ್ರಶಸ್ತಿಗಳನ್ನೇ ನಿರಾಕರಿಸುವ ದೃಢ ನಿಶ್ಚಯ ಮಾಡಬೇಕಾಗುತ್ತದೆ. ಅಂತಿಮವಾಗಿ ಒಂದು ಸೃಜನಶೀಲ ಸಾಹಿತ್ಯ ಕೃತಿ- ಸಾಂಸ್ಕೃತಿಕ ಚಿಂತನೆಗೆ ಅತ್ಯುನ್ನತ ಪ್ರಶಸ್ತಿ ದೊರೆಯುವುದು ಅದು ತಳಮಟ್ಟದ ಶ್ರೀಸಾಮಾನ್ಯನ ಬದುಕಿನೊಳಗೆ ಹೊಕ್ಕು ಮನ್ವಂತರದ ದಿಕ್ಕನ್ನು ತೋರಿದಾಗ ಮಾತ್ರ. ಈ ಪ್ರಶಸ್ತಿ ಪಡೆಯಲು ಯಾವ ಪೂರ್ವ ಷರತ್ತುಗಳನ್ನೂ ಅನ್ವಯಿಸಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT