ಮಂಗಳವಾರ, ನವೆಂಬರ್ 24, 2020
19 °C
ಶೈಕ್ಷಣಿಕ ಕ್ಷೇತ್ರದ ಸುಧಾರಣೆಗೆ ದೆಹಲಿ ಅಳವಡಿಸಿಕೊಂಡಿರುವ ಹೊಸ ಬಗೆಯ ಉಪಕ್ರಮಗಳು ಇತರ ರಾಜ್ಯಗಳಿಗೆ ಮಾದರಿಯಾಗಿವೆ

ಸಂಗತ: ಪುಟ್ಟ ರಾಜ್ಯದ ದಿಟ್ಟ ಹೆಜ್ಜೆ

ಡಾ. ಎಚ್.ಬಿ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

Prajavani

ಸಾಮಾಜಿಕ, ಆರ್ಥಿಕ ಅಂಶಗಳ ಪ್ರಭಾವ ಹಾಗೂ ಅನೇಕ ಸಂಕೀರ್ಣ ಅಂಶಗಳುಳ್ಳ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಸವಾಲಿನ ಸಂಗತಿಯಾದರೂ ಅಸಾಧ್ಯವೇನಲ್ಲ. ಶಿಕ್ಷಣ ಕ್ಷೇತ್ರವನ್ನು ಇಡಿಯಾಗಿ ಗ್ರಹಿಸಿ, ಮೂಲ ಅಂಶಗಳಿಗೆ ಆದ್ಯತೆ ನೀಡಿ, ಹೂಡಿಕೆಯನ್ನು ಹೆಚ್ಚು ಮಾಡಿದಲ್ಲಿ ಕ್ಷೇತ್ರವು ಸುಧಾರಣೆಗೆ ತೆರೆದುಕೊಳ್ಳುತ್ತದೆ. ಸುಧಾರಣಾ ಕ್ರಮಗಳನ್ನು ಗಟ್ಟಿ ನೆಲೆಯಲ್ಲಿ ಅನುಷ್ಠಾನಗೊಳಿಸಲು ಇಂದು ಪ್ರಾರಂಭಿಸಿದಲ್ಲಿ, ಅದರ ಫಲ ಗಮನಕ್ಕೆ ಬರಲು ಕನಿಷ್ಠ ಐದು ವರ್ಷಗಳಾದರೂ ಬೇಕಾಗಬಹುದು. ಈ ದಿಸೆಯಲ್ಲಿ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ದೇಶದ ಪುಟ್ಟ ರಾಜ್ಯವಾದ ದೆಹಲಿಯಲ್ಲಿ ಕೈಗೊಳ್ಳುತ್ತಿರುವ ಉಪಕ್ರಮಗಳನ್ನು ಗಮನಿಸಬಹುದು.

ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಗುಜರಾತ್, ಮಹಾರಾಷ್ಟ್ರದಂತಹ ರಾಜ್ಯಗಳು ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಒಂದಲ್ಲ ಒಂದು ವಿಧದ ಸಾಧನೆಯನ್ನು ಮಾಡಿವೆ. ಪ್ರಾದೇಶಿಕ ವೈಶಿಷ್ಟ್ಯ ಹಾಗೂ ಸ್ಥಳೀಯ ಸನ್ನಿವೇಶಗಳ ಕಾರಣದಿಂದ, ಯಾವುದೇ ರಾಜ್ಯ ಅಥವಾ ಪ್ರದೇಶವನ್ನು ಇನ್ನೊಂದರೊಂದಿಗೆ ಹೋಲಿಸುವುದು ಸೂಕ್ತವಲ್ಲ. ಆದರೂ ಕೆಲವು ಸಾಮಾನ್ಯ ಮೂಲಭೂತ ಅಂಶಗಳ ನೆಲೆಯಲ್ಲಿ ಅನುಷ್ಠಾನ ಮಾಡಬಹುದಾದ ಪಾಠಗಳನ್ನು ದೆಹಲಿಯಿಂದ ಕಲಿತು ಸ್ಥಳೀಯ ಸನ್ನಿವೇಶಗಳಿಗೆ ಮಾರ್ಪಡಿಸಿ, ಅನುಷ್ಠಾನಗೊಳಿಸಬಹುದಾಗಿದೆ.

ಯಾವುದೇ ಗುಣಮಟ್ಟವು ಅಧಿಕ ಹೂಡಿಕೆಯನ್ನು ಅಪೇಕ್ಷಿಸುವಂತೆ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟವನ್ನು ಖಾತರಿಪಡಿಸಲು ಅಧಿಕ ಹೂಡಿಕೆ ಅನಿವಾರ್ಯವಾಗಿದೆ. ದೆಹಲಿಯು 2012-13ನೇ ಸಾಲಿನಲ್ಲಿ ಶಿಕ್ಷಣಕ್ಕಾಗಿ ಮಾಡಿದ ವೆಚ್ಚ ₹ 5,491 ಕೋಟಿ.
2017-18ನೇ ಸಾಲಿನಲ್ಲಿ ಈ ಮೊತ್ತ ₹ 11,300 ಕೋಟಿಗೆ ಹೆಚ್ಚಳವಾಗಿದೆ. 2017-18ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ತನ್ನ ಒಟ್ಟು ಆಯವ್ಯಯದ ಶೇ 23.54ರಷ್ಟು ಪಾಲನ್ನು ಒದಗಿಸಿದೆ. 2017ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ರಾಜ್ಯಗಳ ಆಯವ್ಯಯದ ವಿಶ್ಲೇಷಣಾ ವರದಿಯಂತೆ, ದೆಹಲಿ ತನ್ನ ಒಟ್ಟಾರೆ ಹೂಡಿಕೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ 22.8ರಷ್ಟು ಹೂಡಿಕೆ ಮಾಡಿದ್ದು, ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ಇದು ಅತ್ಯಧಿಕ ಎಂದು ದಾಖಲಿಸಿದೆ.

ದೆಹಲಿಯು ವಿದ್ಯಾರ್ಥಿಗಳಿಗಾಗಿ ಕೈಗೊಂಡ ಕೆಲವು ಉಪಕ್ರಮಗಳೆಂದರೆ ಮೊದಲನೆಯದಾಗಿ, 6, 7 ಮತ್ತು 8ನೇ ತರಗತಿ ಮಕ್ಕಳಲ್ಲಿರುವ ಕಲಿಕಾ ಕೊರತೆಯನ್ನು ನೀಗಿಸಲು ‘ಚುನೌತಿ’ ಎಂಬ ಕಾರ್ಯಕ್ರಮ ಜಾರಿಗೆ ತಂದದ್ದು. ಇದರಡಿ ಓದು, ಬರಹ, ಲೆಕ್ಕಾಚಾರದಂತಹ ಕೌಶಲಗಳಲ್ಲಿ ವಿದ್ಯಾರ್ಥಿಗಳು ಹೊಂದಿರುವ ಸಾಮರ್ಥ್ಯವನ್ನು ಆಧರಿಸಿ ಅವರನ್ನು ಗುಂಪುಗಳನ್ನಾಗಿ ಮಾಡಿ, ವಿಭಿನ್ನ ಬೋಧನಾ ಕ್ರಮ ಅನುಸರಿಸಿ ಕಲಿಸಲಾಗುತ್ತಿದೆ. ಇದರ ಜೊತೆ ಪಠ್ಯಪುಸ್ತಕ ಓದಲು ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿಸಲು ‘ಓದುವ ಆಂದೋಲನ’, ವಿವಿಧ ವಿಷಯಗಳಲ್ಲಿ ಪೂರಕ ಕಲಿಕಾ ಸಾಮಗ್ರಿಗಳನ್ನು ಪೂರೈಸುವ ಪ್ರಗತಿ ಸರಣಿಯ ಕಾರ್ಯಕ್ರಮ, ಸ್ವಲ್ಪ ಮೋಜು, ಸ್ವಲ್ಪ ಕಲಿಕೆ ತತ್ವದಡಿ ವಿದ್ಯಾರ್ಥಿಗಳು ಸಂತಸದಾಯಕವಾಗಿ ಶಾಲೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ಬೇಸಿಗೆ ಶಿಬಿರಗಳು, 3ರಿಂದ 9ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ
ಮೂಲಭೂತ ಓದು, ಬರಹ, ಲೆಕ್ಕಾಚಾರಗಳನ್ನು ಶೈಕ್ಷಣಿಕ ವರ್ಷದ ಆರಂಭದ ಮೂರು ತಿಂಗಳಲ್ಲಿ ಹೆಚ್ಚು ಗಮನಹರಿಸಿ ಕಲಿಸುವ ‘ಮಿಷನ್ ಬುನಿಯಾದ್’, ಇಂಗ್ಲಿಷ್‌ ಮಾತನಾಡುವ ಕೌಶಲ ಕಲಿಸುವುದು, 10ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಲು ಸಮಾಲೋಚಕರಿಂದ ಆಪ್ತ ಸಲಹೆ, ವಿದ್ಯಾರ್ಥಿಗಳಲ್ಲಿ ತನ್ಮಯತೆ ಅಭ್ಯಾಸ ಮಾಡಿಸುವ ಮೂಲಕ ಅವರಲ್ಲಿ ಅನುಭೂತಿ, ವಿಮರ್ಶಾತ್ಮಕ ಚಿಂತನೆ, ಸಂವಹನ, ಇತರರೊಂದಿಗೆ ತೊಡಗಿಸಿಕೊಳ್ಳುವ ಕೌಶಲಗಳನ್ನು ಕಲಿಸುವ ಸಂತಸದ ಪಠ್ಯಕ್ರಮ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಇದರ ಜೊತೆ ಅತ್ಯುತ್ತಮ ಮೂಲ ಸೌಲಭ್ಯಗಳುಳ್ಳ ಕೆಲವು ಉತ್ಕೃಷ್ಟ ಶಾಲೆಗಳನ್ನು ಮಾದರಿಯಾಗಿ ರೂಪಿಸಲಾಗಿದೆ.

ಮುಖ್ಯ ಶಿಕ್ಷಕರಿಗೆ ನಾಯಕತ್ವವನ್ನು ನೀಡಲಾಗಿದೆ. ಕೆಲವು ಅಧಿಕಾರಿಗಳು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರನ್ನು ಇಂಗ್ಲೆಂಡ್, ಸಿಂಗಪುರ, ಫಿನ್ಲೆಂಡ್‌ಗೆ ಶೈಕ್ಷಣಿಕ ಅಧ್ಯಯನ ಪ್ರವಾಸ ಕಳುಹಿಸಿ, ಅಲ್ಲಿಯ ಉತ್ತಮ ಅಂಶಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿ, ಅವನ್ನು ದೆಹಲಿಯ ಶಾಲೆಗಳಲ್ಲಿ ಅಳವಡಿಸಲಾಗುತ್ತಿದೆ. ಸರ್ಕಾರಿ ಶಾಲೆಗಳ ಆಸ್ತಿ ರಕ್ಷಿಸಲು ಶಾಲಾ ಹಂತದಲ್ಲಿ ಗುತ್ತಿಗೆ ಆಧಾರದಲ್ಲಿ ಎಸ್ಟೇಟ್ ಮ್ಯಾನೇಜರ್ ಅನ್ನು ನೇಮಿಸಿಕೊಂಡು, ಮುಖ್ಯ ಶಿಕ್ಷಕರಿಗೆ ಆಡಳಿತಾತ್ಮಕವಾಗಿನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಮುಖ್ಯ ಶಿಕ್ಷಕರು ಶೈಕ್ಷಣಿಕ ಕಾರ್ಯಗಳಿಗೆ ಗಮನ ನೀಡಲು ಅವಕಾಶವಾಗಿದೆ. ಶಿಕ್ಷಕರ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಪೋಷಕರು ಹಾಗೂ ಶಾಲಾ ಮೇಲ್ವಿಚಾರಣಾ ಸಮಿತಿಗಳನ್ನು ಬಲಪಡಿಸಿ, ಶೈಕ್ಷಣಿಕ ಕಾರ್ಯಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.

ಹೀಗೆ ಮೂಲಸೌಕರ್ಯ ಅಭಿವೃದ್ಧಿ, ಪ್ರಮುಖ ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಒತ್ತು, ಮುಖ್ಯ ಶಿಕ್ಷಕರು, ಶಿಕ್ಷಕರು, ಪೋಷಕರನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಂಡಲ್ಲಿ ಗುಣಮಟ್ಟ ಸುಧಾರಣೆ ಸರಾಗವಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.